ಬೆಂಗಳೂರು: ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಪ್ರತಿಭಟನಾ ಸಮಾವೇಶ (Congress Protest) ನಡೆಸಲಾಯಿತು. ಈ ವೇಳೆ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಿ, ಕೈ ಕಾರ್ಯಕರ್ತರು, ನಾಯಕರು ಆಕ್ರೋಶ ಹೊರಹಾಕಿದರು.
ಚುನಾವಣಾ ಆಯೋಗವನ್ನು ಬಿಜೆಪಿ ಕಚೇರಿ ಮಾಡಬೇಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ರನ್ನು ಪದಚ್ಯುತಗೊಳಿಸಿ ಗಡಿಪಾರು ಮಾಡಬೇಕು, ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂಬ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.

ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಪ್ರಜಾಪ್ರಭುತ್ವಕ್ಕೆ ಮತದಾನವೇ ಅಡಿಪಾಯ. ಇಡೀ ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಖ್ಯಾತಿ ಪಡೆದಿರುವ ಭಾರತದಲ್ಲಿ ಈಗ ಜನರಿಗೆ ಲೋಕತಂತ್ರದ ಮೇಲೆ ವಿಶ್ವಾಸ ಕುಸಿದುಹೋಗಿದೆ. ಕೇಂದ್ರ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ನಡೆಸುತ್ತಿರುವ ಏಕಾಧಿಪತ್ಯ ಮತ್ತು ದಬ್ಬಾಳಿಕೆ ಇಡೀ ದೇಶದ ಜನರ ಕಣ್ಮುಂದಿದೆ ಎಂದು ಹೇಳಿದರು.

ಚುನಾವಣೆಗಳಲ್ಲಿ ನಡೆದ ದೇಶದ್ರೋಹಿ ಕೃತ್ಯಗಳು, ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರಗಳು ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಮತದಾರರನ್ನು ಚುನಾವಣೆಯಿಂದ ಹೊರಗುಳಿಸಲು ಹೆಣೆದ ಸಂಚುಗಳು - ಇವೆಲ್ಲವೂ ಜ್ಞಾನೇಶ್ ಕುಮಾರ್ ಅವರ ಅಸ್ವೀಕಾರಾರ್ಹ ಕೃತ್ಯಗಳು ಎಂದು ಆಕ್ರೋಶ ಹೊರಹಾಕಿದರು.
ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದರೂ, ಜ್ಞಾನೇಶ್ ಕುಮಾರ್ ಅವರು ಕೇವಲ 'First among equals' ಆಗಿದ್ದಾರೆಯೇ ಹೊರತು ಅವರೇ ಸರ್ವೇ ಸರ್ವರೂ ಅಲ್ಲ. ಆದರೂ, ಇನ್ನುಳಿದ ಇಬ್ಬರು ಆಯುಕ್ತರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿ, ತಮಗೆ ಬೇಕಾದ ರೀತಿಯಲ್ಲಿ ನಿಯಮಗಳನ್ನು ತಿರುಚಿ ಇಡೀ ದೇಶಕ್ಕೆ ದೊಡ್ಡ ದ್ರೋಹ ಬಗೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆದು, ಬಂಧನ ಮಾಡಬೇಕು ಎಂದು ಆಗ್ರಹಿಸಿದರು.
ಜ್ಞಾನೇಶ್ ಕುಮಾರ್‌ರಿಂದ ಸರ್ವಾಧಿಕಾರದ ಧೋರಣೆ: ಸಿದ್ದರಾಮಯ್ಯ ಕಿಡಿ

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಚುನಾವಣಾ ಆಯೋಗದ ಇತ್ತೀಚಿನ ಬೆಳವಣಿಗೆಗಳು ಹಾಗೂ ಅದರ ಕಾರ್ಯವೈಖರಿ ಕುರಿತು ದೇಶದ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವವರಲ್ಲಿ ಆತಂಕ ಮೂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರದ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣಾ ಆಯೋಗದೊಳಗೇ ಈ ರೀತಿಯ ಆಕ್ಷೇಪಗಳು ವ್ಯಕ್ತವಾಗಿರುವುದು ಗಂಭೀರ ವಿಚಾರ. ಸಂವಿಧಾನಾತ್ಮಕ ಸಂಸ್ಥೆಯೊಳಗೆ ಇಂತಹ ಬೆಳವಣಿಗೆ ನಡೆಯಬಾರದು ಎಂದು ಹೇಳಿದರು.
ಚುನಾವಣಾ ಆಯೋಗವು ಯಾವುದೇ ಸರ್ಕಾರಕ್ಕೆ ಅಥವಾ ರಾಜಕೀಯ ಪಕ್ಷಕ್ಕೆ ನಿಷ್ಠವಾಗಿರಬೇಕಾದ ಸಂಸ್ಥೆಯಲ್ಲ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಮಾತ್ರ ಅದು ನಿಷ್ಠವಾಗಿರಬೇಕು. ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಸಂಸ್ಥೆಯಾಗಿ ಚುನಾವಣಾ ಆಯೋಗ ಇರಬಾರದು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೇನ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ನಿವೇದಿತ್ ಆಳ್ವಾ, ಎಂಎಲ್ಸಿ ಆರತಿ ಕೃಷ್ಣ, ನಾಗರಾಜ್ ಯಾದವ್, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ರಾಣಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.