ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sting operation case: ಸ್ಟಿಂಗ್ ಪ್ರಕರಣದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಗಿಸೋದಾಗಿ ಪಿಎಂ ಮೋದಿಗೆ ಕುಮಾರಸ್ವಾಮಿ ಆಶ್ವಾಸನೆ: ಎಂ. ಲಕ್ಷ್ಮಣ್

ಎಚ್‌.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸ್ಟಿಂಗ್ ವಿಚಾರವನ್ನು ಪ್ರಧಾನಿ ಮೋದಿ ಅವರಿಗೆ ಹೇಳಿದ್ದಾರೆ. ಇದೊಂದು ಸ್ಟಿಂಗ್ ಪ್ರಕರಣದಿಂದ 2028ರಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚಿಸುತ್ತೇವೆ ಎಂಬ ಆಶ್ವಾಸನೆ ನೀಡಿರುವುದಾಗಿ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಬೆಂಗಳೂರು, ನ.02: “ಸ್ಟಿಂಗ್ ಪ್ರಕರಣದಲ್ಲಿ (Sting operation case) ಕಥೆ, ಚಿತ್ರಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಕುಮಾರಸ್ವಾಮಿ ಅವರದ್ದೇ ಆಗಿದೆ. ಸ್ಟಿಂಗ್ ವಿಡಿಯೋ ಬಿಡುಗಡೆ ಮಾಡಿದವರು ಕುಮಾರಸ್ವಾಮಿ ಜತೆಗೆ ಕೆಲಸ ಮಾಡುವವರೇ ಆಗಿದ್ದಾರೆ” ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ತಿಳಿಸಿದ್ದಾರೆ.

ನಗರದ ಮೌರ್ಯ ಹೊಟೇಲ್‌ನಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿದ ಲಕ್ಷ್ಮಣ್ ಅವರು, “ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಳೆದ ಒಂದು ತಿಂಗಳಿನಿಂದ ಮಾಧ್ಯಮಗೋಷ್ಠಿಗಳ ಮೂಲಕ ಕರ್ನಾಟಕದ ಮಾನ ಮರ್ಯಾದೆಯನ್ನು ದೇಶದಲ್ಲಿ ಹರಾಜು ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವ ಏಕೈಕ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಮಾರಸ್ವಾಮಿ ಅವರಿಗೆ ಸುಪಾರಿ ನೀಡಿ ರಾಜ್ಯ ಸರ್ಕಾರದ ತೇಜೋವಧೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿಯನ್ನು ಬಳಸಿಕೊಂಡು ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯುವ ಪ್ರಯತ್ನ

“ಇದರ ಹಿಂದಿರುವ ಹುನ್ನಾರವನ್ನು ತನಿಖಾ ತಂಡ ಮಾಡಲಿದೆ. ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ತೇಜೋವಧೆ ಮೂಲಕ ಕಾಂಗ್ರೆಸ್ ವಿರುದ್ಧ ಅಹಿಂದ ಮತವನ್ನು ತಿರುಗಿಸುವುದು, ಡಿ.ಕೆ. ಶಿವಕುಮಾರ್ ಅವರ ಖ್ಯಾತಿ ಸಹಿಸಲಾಗದೇ 2028ರ ಚುನಾವಣೆ ಎದುರಿಸುವುದು. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತಂದು 2028ರಲ್ಲಿ ಮೈತ್ರಿ ಸರ್ಕಾರ ರಚಿಸುವುದು ಹಾಗೂ ಸುಳ್ಳಿನ ಮೂಲಕ ಜನರನ್ನು ನಂಬಿಸುವ ಪ್ರಯತ್ನ. ಈ ನಾಲ್ಕು ವಿಚಾರಗಳನ್ನು ಒಂದೇ ಸಮಯದಲ್ಲಿ ಮಾಡಲು ಹೊರಟಿದ್ದಾರೆ” ಎಂದು ಆರೋಪಿಸಿದರು.

ಸ್ಟಿಂಗ್ ಪ್ರಕರಣದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಗಿಸುವುದಾಗಿ ಮೋದಿ ಅವರಿಗೆ ಕುಮಾರಸ್ವಾಮಿ ಆಶ್ವಾಸನೆ

“ದಿನಾಂಕ 27.08.2026ರಂದು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸ್ಟಿಂಗ್ ವಿಚಾರವನ್ನು ಮೋದಿ ಅವರಿಗೆ ತೋರಿಸಿ, ಇದೊಂದು ಸ್ಟಿಂಗ್ ಪ್ರಕರಣದಿಂದ 2028ರಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿ ರಾಜ್ಯದಲ್ಲಿ ಎನ್ ಡಿಎ ಸರ್ಕಾರ ರಚಿಸುತ್ತೇವೆ. 2029ರಲ್ಲಿ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನಿಮ್ಮನ್ನು ಮತ್ತೊಮ್ಮೆ ಪ್ರಧಾನಿ ಮಾಡಲಾಗುವುದು ಎಂಬ ಆಶ್ವಾಸನೆ ನೀಡಿರುವುದಾಗಿ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಮೋದಿ ಅವರು ಈ ಅಪ್ಪ ಮಗನಿಗೆ ‘ಗೋ ಹೆಡ್’ ಎಂದು ಅನುಮತಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿರುವ ಕುರಿತ ಆಡಿಯೋವನ್ನು ಮುಂದಿನ ದಿನಗಳಲ್ಲಿ ತನಿಖೆ ಬಳಿಕ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.

ಕುಮಾರಸ್ವಾಮಿ ಸಿಬ್ಬಂದಿಯಿಂದಲೇ ವಿಡಿಯೋ ಅಪ್ ಲೋಡ್

“ನಿನ್ನೆ ಪೊಲೀಸ್ ಆಯುಕ್ತರು ತನಿಖೆಯ ವರದಿ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಜತೆ ಕೆಲಸ ಮಾಡುತ್ತಿರುವ ರಿತೇಶ್ ಪಾಂಡೆ, ವಿನೋದ್ ಶರ್ಮಾ, ಪಿಆರ್ ಒ ಪ್ರಜ್ವಲ್ ಪ್ರಸಾದ್ ಎಂಬುವವರು ಇದರ ಹಿಂದೆ ಇದ್ದಾರೆ. ಪ್ರಜ್ವಲ್ ಪ್ರಸಾದ್ ಈ ಹಿಂದೆ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಷ್ಠಿತ ಇಂಗ್ಲೀಷ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದವರು. ಈಗ ಆ ವಾಹಿನಿ ಇಲ್ಲ. ಅವರು ಸ್ಟಿಂಗ್ ಆಪರೇಷನ್ ಮಾಡುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರು ಸ್ಟಿಂಗ್ ಮಾಡುವುದರಲ್ಲಿ ನಿಪುಣರಾಗಿದ್ದರು” ಎಂದರು.

“ಈ ಮೂವರಲ್ಲಿ ಒಬ್ಬರಿಗೆ ಮಾಸಿಕ 2 ಲಕ್ಷ ಹಾಗೂ ಇತರೆ ಸೌಲಭ್ಯ, ಉಳಿದ ಇಬ್ಬರಿಗೆ ತಲಾ 1.50 ಲಕ್ಷ ಹಾಗೂ ಇತರೆ ಸೌಲಭ್ಯ ವೇತನ ನೀಡಲಾಗುತ್ತಿತ್ತು. ಬಾಗೇಪಲ್ಲಿ ಪ್ರಶಾಂತ್ ಎಂಬಾತ ಈ ಹಿಂದೆ ಪವರ್ ಟಿವಿಯ ರಾಕೇಶ್ ಶೆಟ್ಟಿ ಅವರ ಜತೆ ಕೆಲಸ ಮಾಡುತ್ತಿದ್ದ. ಈ ಸ್ಟಿಂಗ್ ವಿಡಿಯೋವನ್ನು 2023 ಫೆ.25ರಂದು ಸಿದ್ದರಾಮಯ್ಯ ಅವರ ಮನೆಯಲ್ಲಿ ಯಾವುದೇ ಮಹಿಳೆ ಕರೆದುಕೊಂಡು ಬಂದು ಮಾತನಾಡಿರುವುದು ಪ್ರಶಾಂತ್. ಆ ಸ್ಟಿಂಗ್ ವಿಡಿಯೋ ಕೆ.ಜೆ ಕೃಷ್ಣಾ ಎಂಬ ಮತ್ತೊಬ್ಬ ಪತ್ರಕರ್ತರು ಹಂಚಿಕೊಂಡಿದ್ದರು. ಈ ಪ್ರಶಾಂತ್ ಎಂಬಾತ ಕುಮಾರಸ್ವಾಮಿ ಅವರಿಗೆ ಆಪ್ತನಾಗಿದ್ದ. ಈತನೇ ಕುಮಾರಸ್ವಾಮಿ ಅವರಿಗೆ ಈ ಸ್ಟಿಂಗ್ ವಿಡಿಯೋ ನೀಡಿದ್ದಾನೆ. ಕುಮಾರಸ್ವಾಮಿ ಅವರಿಗೆ ನೇರವಾಗಿ ನೀಡದೇ ಇದ್ದರೂ ಪ್ರಜ್ವಲ್ ಪ್ರಸಾದ್ ಅವರ ಮೂಲಕ ನೀಡಿರುತ್ತಾರೆ. ಆನಂತರ ಕತೆ, ಚಿತ್ರಕತೆ, ನಿರ್ದೇಶನವನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಲಾಗಿದೆ” ಎಂದರು.

ಕುಮಾರಸ್ವಾಮಿ ಉಪಸ್ಥಿತಿಯಲ್ಲೇ ವಿಡಿಯೋ ಅಪ್ ಲೋಡ್ ಎಂದು ರಿತೀಶ್ ಪಾಂಡೆ ಹೇಳಿಕೆ

“ಪ್ರಜ್ವಲ್ ಪಾಂಡೆ ಅವರು ರಿತೇಶ್ ಪಾಂಡೆ ಹಾಗೂ ವಿನೋದ್ ಶರ್ಮಾ ಅವರಿಂದ ಎರಡು ಮೊಬೈಲ್ ಖರೀದಿಸಿ ಅದೇ ಅಂಗಡಿಯಲ್ಲಿ ಇಂಟರ್ ನೆಟ್ ಸಂಪರ್ಕ ಪಡೆದಿರುವಾಗ ಸಿಸಿಬಿ ಪೊಲೀಸರಿಗೆ ಐಎಂಎ ಸಂಖ್ಯೆ ಸಿಕ್ಕಿದೆ. ನಂತರ ಆ ಮೊಬೈಲ್ ಗಳನ್ನು ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ತೆಗೆದುಕೊಂಡು ಹೋಗಿ ಅಪ್ ಲೋಡ್ ಮಾಡಲಾಗಿದೆ. ಇದರ ಸಮಯ ಎಲ್ಲವೂ ಪೊಲೀಸ್ ತನಿಖಾಧಿಕಾರಿಗಳ ಬಳಿ ಇದೆ. ರಿತೇಶ್ ಪಾಂಡೆ ಅವರನ್ನು 7-8 ಬಾರಿ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದು, ಆತ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ. ವಿಡಿಯೋ ಅಪ್ ಲೋಡ್ ಮಾಡುವಾಗ ಕುಮಾರಸ್ವಾಮಿ ಅವರು ಅಲ್ಲೇ ಉಪಸ್ಥಿತರಿದ್ದರು ಎಂದು ಆತನ ಹೇಳಿಕೆಯಲ್ಲಿ ದಾಖಲಾಗಿದೆ” ಎಂದರು.

ಪ್ರಜ್ವಲ್ ಪ್ರಸಾದ್, ರಿತೀಶ್ ಪಾಂಡೆ, ವಿನೋದ್ ಶರ್ಮಾ ನಡುವೆ 29,30,000 ರೂ. ಹಣಕಾಸಿನ ವ್ಯವಹಾರ

“ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೊಬೈಲ್ ಖರೀದಿಗೆ ಬಳಸಲಾದ 50 ಸಾವಿರ ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಲಾಗಿದ್ದು, ಪ್ರಜ್ವಲ್ ಪ್ರಸಾದ್ ಹಾಗೂ ರಿತೇಶ್ ಪಾಂಡೆ, ವಿನೋದ್ ಶರ್ಮಾ ಅವರ ನಡುವೆ ನಂತರ 3 ದಿನಾಂಕಗಳಲ್ಲಿ 29,30,000 ಹಣಕಾಸಿನ ವ್ಯವಹಾರವಾಗಿದೆ. ಪ್ರಜ್ವಲ್ ಪ್ರಸಾದ್ ಅವರನ್ನು ಹಿಡಿದರೆ ಈ ಹಣ ಎಲ್ಲಿಂದ ಬಂತು, ಯಾಕೆ ಬಂತು ಎಂಬ ಮಾಹಿತಿ ಸಿಗುತ್ತದೆ. ಈ ಮೂವರು ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣದ ಕಂಟೆಟ್ ಕ್ರಿಯೇಟರ್ ಗಳಾಗಿ ಕೆಲಸ ಮಾಡುವವರು” ಎಂದರು.

ಕುಮಾರಸ್ವಾಮಿ ಅವರಿಂದ ದಿನಕ್ಕೊಂದು ಹೇಳಿಕೆ

“ಕುಮಾರಸ್ವಾಮಿ ಅವರು ಸಿನಿಮಾ ರಂಗದಲ್ಲಿದ್ದವರು. ಕೆಟ್ಟ ಕಥೆಯನ್ನು ಜನರಿಗೆ ಒಪ್ಪುವಂತೆ ಬದಲಿಸುವ ಕಲೆ ಅವರಿಗಿದೆ. ಅವರ ಕಲೆ ಬೇರೆ ಸಿನಿಮಾ ನಿರ್ದೇಶಕರಿಗೂ ಇಲ್ಲ. ಹೀಗಾಗಿ ಅವರು ಈ ಪ್ರಕರಣದಲ್ಲಿ ನರೇಟಿವ್ ರಚಿಸಲು ಆರಂಭಿಸಿದರು. ಕುಮಾರಸ್ವಾಮಿ ಅವರು ಇದುವರೆಗೂ ಈ ಪ್ರಕರಣದಲ್ಲಿ ಒಂಬತ್ತು ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಮೊದಲ ಮಾಧ್ಯಮಗೋಷ್ಠಿಯಲ್ಲಿ ನೈಸ್ ಪ್ರಕರಣ ಮರೆಮಾಚಲು ಸ್ಟಿಂಗ್ ಪ್ರಕರಣ ತಂದಿದ್ದಾರೆ ಎಂದು ಹೇಳಿದರು. ನಂತರ ಡಿ ಕೆ ಶಿವಕುಮಾರ್ ಅವರು ಶಾಂಗ್ರಿಲಾ ಹೊಟೇಲ್‌ನಲ್ಲಿ ಸ್ಟಿಂಗ್ ಮಾಡುವವರನ್ನು ಭೇಟಿ ಮಾಡಿದ್ದರು ಎಂದು ನರೇಟಿವ್ ಸೆಟ್ ಮಾಡಿದರು. ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದವರ ವಿರುದ್ಧ ತನಿಖೆ ಆಗಬೇಕು, ಬಂಧಿಸಬೇಕು ಎಂದು ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದರು. ಆಮೂಲಕ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿ ಹರಿಸಿದರು. 2023ರ ನಂತರ ಸಿದ್ದರಾಮಯ್ಯ ಅವರು ಹಾಗೂ ಅವರ ಮಗನ ವಿರುದ್ಧ ಕುಮಾಸ್ವಾಮಿ ಅವರು ಇನ್ನಿಲ್ಲದ ಟೀಕೆ ಮಾಡಿದರು. ಈಗ ಏಕಾಏಕಿ ಪ್ರೀತಿ ತೋರಿದರು” ಎಂದು ವಿವರಿಸಿದರು.

“ನಂತರ ನೈಜ್ಯ ಅಪರಾಧಿ ಬಿಟ್ಟು ದಳದ ಕಾರ್ಯಕರ್ತರನ್ನು ಗುರಿ ಮಾಡುತ್ತಿದ್ದಾರೆ ಎಂದರು. ನಂತರ ಪ್ರಿಯಾಂಕ್ ಖರ್ಗೆ ವಿರುದ್ಧ ವೈಯಕ್ತಿಕ ದಾಳಿ ಮಾಡಿ ಬಲಿತ ದಲಿತ ಎಂದು ಟೀಕಿಸಿದರು. ತಮ್ಮ ವಿರುದ್ಧ ತಿಗುರುತ್ತದೆ ಎಂಬ ವಿಚಾರ ತಿಳಿದ ತಕ್ಷಣ ಡಿಜಿಪಿ ಕಚೇರಿಗೆ ಪಾದಯಾತ್ರೆ ಮಾಡಿ ಪೊಲೀಸರ ಮೇಲೆ ಒಥ್ತಡ ಹಾಕುವ ಪ್ರಯತ್ನ ಮಾಡಿದರು. ನಂತರ ಈ ಸ್ಟಿಂಗ್ ವಿಡಿಯೋ ಬಹಿರಂಗ ಮಾಡಿದ್ದು ಸಚಿವ ಜಮೀರ್ ಅಹ್ಮದ್ ಎಂದರು. ನಂತರ ಸಿದ್ದರಾಮಯ್ಯ ವಿರುದ್ಧ ಖರ್ಗೆ ಕುಟುಂಬ ಪಿತೂರಿ ಮಾಡಿದೆ ಎಂದರು. ನನ್ನ ಇನ್ನೊಂದು ಮುಖ ತೋರಿಸುತ್ತೇನೆ ಎಂದರು. ಕೊನೆಯದಾಗಿ ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 6 ಲಕ್ಷ ಹಣ ವರ್ಗಾವಣೆ ಮಾಡಿದರೆ ಐಟಿ ಇಡಿಯವರು ಬರುತ್ತಾರೆ. ಇನ್ನು 600 ಕೋಟಿ ವೆಚ್ಚ ಮಾಡಬೇಕು ಎಂದರೆ ಹೇಗೆ? ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಐಟಿಗೋ, ಇಡಿಗೋ ದೂರು ನೀಡಿದ್ದರೆ ತನಿಖೆ ಮಾಡುತ್ತಿದ್ದವು. ಹೀಗೆ ಸುಳ್ಳು ಹೇಳುವ ಪ್ರವೃತ್ತಿ ಹೊಂದಿರುವ ವ್ಯಕ್ತಿ ಕುಮಾರಸ್ವಾಮಿ” ಎಂದು ಕಿಡಿಕಾರಿದರು.

“ಪೊಲೀಸ್ ಆಯುಕ್ತರು ಪ್ರಕರಣದ ಪ್ರಾಥಮಿಕ ತನಿಖೆಯ ಕುರಿತು ತಾಂತ್ರಿಕ ಸಾಕ್ಷ್ಯಾಧಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ. ಅವರು ನಿಮ್ಮಂತೆ ಹಿಟ್ ಅಂಡ್ ರನ್ ಮಾಡುವುದಿಲ್ಲ. ಪ್ರಕರಣದ ಮಾಹಿತಿ ಕೊಟ್ಟ ಐಪಿಎಸ್ ಅಧಿಕಾರಿಯನ್ನು ಹೆಡ್ ಕ್ಲರ್ಕ್ ಎಂದು ನಿಂದಿಸಿದ್ದಾರೆ. ಜಾಗ ಉಳಿಸಿಕೊಳ್ಳಲು ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ವಿರುದ್ಧ ಯಾರು ಮಾತನಾಡಿದರೂ ನೀವು ಅವರ ವಿರುದ್ಧ ಏನು ಬೇಕಾದರೂ ಮಾತನಾಡುತ್ತೀರಿ. ನನ್ನ ಮುಟ್ಟಿ ನೋಡಿ ಎಂದು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತೀರಿ. ಒಂದು ವೇಳೆ ನಾಳೆ ಅವರು ನಿಮ್ಮನ್ನು ಮುಟ್ಟುತ್ತಾರೆ ಎಂದು ನಿಮಗೆ ಹೇಗೆ ಗೊತ್ತು? ಕಾನೂನು ಅಡಿಯಲ್ಲಿ ಯಾರೇ ಇದ್ದರೂ ಬಿಡುವುದಿಲ್ಲ. ಕುಮಾರಸ್ವಾಮಿ ಆಗಲಿ ಬೇರೆ ಯಾರೇ ಆಗಲಿ, ಬಿಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಂಕ ತರುವ ಪ್ರಯತ್ನ ಮಾಡಿದವರು ಯಾರೇ ಆಗಿರಲಿ, ಕಾಂಗ್ರೆಸ್ನವರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು ಎಂಬುದು ನಮ್ಮ ಆಗ್ರಹ” ಎಂದರು.

“ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ ಕರ್ನಾಟಕದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ದೇಶದ 12 ಅಧಿಕಾರಿಗಳಿಗೆ ನೀಡಿದ ಪ್ರಶಸ್ತಿಯಲ್ಲಿ ಕರ್ನಾಟಕದ ಮೂವರು ಅಧಿಕಾರಿಗಳಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ನಿರ್ಭೀತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಗುರುತಿಸಿ ಗೌರವಿಸಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಪೊಲೀಸರ ತನಿಖಾ ಸಾಮರ್ಥ್ಯವನ್ನು ಪ್ರಶ್ನಿಸುವುದು ಸರಿಯಲ್ಲ” ಎಂದು ಹೇಳಿದರು.

“ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಏನಾದರೂ ಒಂದು ರೂಪಾಯಿ ಅನುದಾನ ಅಥವಾ ನೆರವು ತರುವ ಕೆಲಸ ಮಾಡಿದ್ದಾರೆಯೇ? ರಾಜ್ಯದ ಅಭಿವೃದ್ಧಿ ವಿಚಾರವಾಗಿ ಮಾತನಾಡುವ ಬದಲು ಪ್ರತಿದಿನ ಡಿ ಕೆ ಶಿವಕುಮಾರ್ ಅವರನ್ನು ತೇಜೋವಧೆ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಅವರ ರಾಜಕೀಯ ವರ್ಚಸ್ಸು ಕುಗ್ಗಿಸುವುದೇ ನಿಮ್ಮ ಉದ್ದೇಶವೇ” ಎಂದು ಪ್ರಶ್ನಿಸಿದರು.

“ಹಿಂದೆ 30 ದಿನಗಳಲ್ಲಿ ಇಂಗ್ಲಿಷ್ ಕಲಿಯಿರಿ ಎಂಬ ಪುಸ್ತಕಗಳನ್ನು ಓದುತ್ತಿದ್ದೆವು. ಈಗ ಕುಮಾರಸ್ವಾಮಿ ಅವರು 30 ದಿನಗಳಲ್ಲಿ ಸುಳ್ಳು ಹೇಳುವುದು ಹೇಗೆ, ರಾಜ್ಯವನ್ನು ಆಳುವುದು ಹೇಗೆ, ಮನೆ ಮುರಿಯುವುದು ಹೇಗೆ ಎಂಬ ಪುಸ್ತಕ ಬರೆದಿದ್ದಾರೇನೋ ಎಂಬಂತಿದೆ. ಇಂತಹ ಪುಸ್ತಕ ಬಿಡುಗಡೆ ಮಾಡುವ ಬದಲು ರಾಜ್ಯದ ಜನರಿಗೆ ಉಪಯೋಗವಾಗುವ ವಿಚಾರಗಳ ಬಗ್ಗೆ ಮಾತನಾಡಲಿ. ದಿನ ಬೆಳಗಾದರೆ ಕುಮಾರಸ್ವಾಮಿ ಏನು ಹೇಳುತ್ತಾರೆ ಎಂದು ಮಾಧ್ಯಮಗಳಲ್ಲಿ ಗಮನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೊಂದು ದಿನ ಒಂದೊಂದು ಆರೋಪ ಮಾಡುತ್ತಾ, ಹೊಸ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಆರೋಪಗಳ ಮೂಲಕ ನಾಯಕರ ತೇಜೋವಧೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ತಿರುಗೇಟು ನೀಡಿದರು.

“ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ನವರೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಅವರು ಯಾವ ಸಂದರ್ಭದಲ್ಲಿ, ಯಾವ ಪ್ರಶ್ನೆಗೆ ಉತ್ತರವಾಗಿ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಮಾಧ್ಯಮದವರು ಕಾಂಗ್ರೆಸ್ನ ಮಹಿಳೆಯೊಬ್ಬರ ಹೆಸರು ಪ್ರಸ್ತಾಪಿಸಿದಾಗ, ಮಂಗಳೂರಿನ ಕೃಪಾ ಆಳ್ವಾ ಅವರ ಹೆಸರು ನಮಗೂ ಗೊತ್ತಿದೆ, ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಯತೀಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ಅವರೂ ಸ್ಟಿಂಗ್ ಆಪರೇಷನ್ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ನವರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪಕ್ಕೆ ಅರ್ಥವಿಲ್ಲ” ಎಂದು ಹೇಳಿದರು.

“ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 2011ರಲ್ಲಿ ಸ್ಟಿಂಗ್ ಆಪರೇಷನ್ ನಡೆದಿದ್ದರೆ, ಅದಕ್ಕೆ ಸಂಬಂಧಿಸಿದ ಮೂಲ ವಿಡಿಯೊವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಸಿದ್ದರಾಮಯ್ಯ ಅವರು ಅದರಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ವಿಡಿಯೊ ಅಥವಾ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ. ಸುಮ್ಮನೆ ಆರೋಪ ಮಾಡುವ ಬದಲು ದಾಖಲೆಗಳನ್ನು ಜನರ ಮುಂದಿಡಲಿ” ಎಂದರು.

“2028ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದೀರಾ? ಹೆಸರು ಬರೆದಿಟ್ಟುಕೊಂಡು ಅಧಿಕಾರಿವರ್ಗವನ್ನು ಆಚೆಗೆ ಕಳುಹಿಸುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಮೇಲೆ ಧಮಕಿ ಹಾಕುವ ಕೆಲಸ ಮಾಡಬೇಡಿ. ಇದರ ಆಧಾರದ ಮೇಲೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕು. ನಮ್ಮ ಸರ್ಕಾರ ಆ ಕೆಲಸ ಮಾಡುತ್ತಿಲ್ಲ. ಈ ವಿಚಾರವಾಗಿ ನಮ್ಮ ಕಾರ್ಯಕರ್ತರಿಗೆ ಬೇಸರವಿದೆ” ಎಂದರು.

14 ವರ್ಷದ ಬಾಲಕಿಯ ಇ-ಮೇಲ್ ದಾಖಲೆ ಎಲ್ಲಿದೆ?

“2011ರಲ್ಲಿ 14 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದ್ದು, ಆಕೆ ಇ-ಮೇಲ್ ಮೂಲಕ ದೂರು ನೀಡಿದ್ದಾಳೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಾಗಿದ್ದರೆ ಆ ಇ-ಮೇಲ್ನ ಪ್ರತಿ ನೀಡಲಿ. ಯಾರಿಗೆ ಮೇಲ್ ಕಳುಹಿಸಲಾಗಿದೆ, ಯಾವಾಗ ಕಳುಹಿಸಲಾಗಿದೆ, ದೌರ್ಜನ್ಯ ಎಸಗಿದವರು ಯಾರು ಎಂಬ ವಿವರಗಳನ್ನು ಬಹಿರಂಗಪಡಿಸಲಿ. ಇ-ಮೇಲ್ ನ ದಾಖಲೆ ಇಲ್ಲದೆ ಕೇವಲ ಹೇಳಿಕೆಗಳ ಮೂಲಕ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಬಾರದು” ಎಂದು ಆಗ್ರಹಿಸಿದರು.

“ಕೇಂದ್ರದಲ್ಲಿ 12-13 ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಕುಮಾರಸ್ವಾಮಿ ಅವರೂ ಮೂರು ವರ್ಷಗಳಿಂದ ಕೇಂದ್ರ ಸಚಿವರಾಗಿದ್ದಾರೆ. ಇಂತಹ ಗಂಭೀರ ದೌರ್ಜನ್ಯದ ಬಗ್ಗೆ ಇ-ಮೇಲ್ ಬಂದಿದ್ದರೆ ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ? ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕ್ರಮಕ್ಕೆ ಒತ್ತಾಯಿಸಬಹುದಿತ್ತಲ್ಲವೇ? ಈಗ ರಾಜಕೀಯ ಉದ್ದೇಶಕ್ಕಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿರುವುದೇಕೆ. ಈ ಪ್ರಕರಣದಲ್ಲಿ ಸತ್ಯಾಂಶಗಳನ್ನು ಮರೆಮಾಚಲು ಸಾಧ್ಯವಿಲ್ಲ. ದಾಖಲೆಗಳೊಂದಿಗೆ ಆರೋಪ ಮಾಡಬೇಕು. ತನಿಖೆಯಲ್ಲಿ ಯಾರ ಪಾತ್ರವಿದ್ದರೂ ಹೊರಬರಲಿದೆ. ಕುಮಾರಸ್ವಾಮಿ ಅವರ ಪಾತ್ರ ಸಾಬೀತಾದರೆ ಅವರ ವಿರುದ್ಧವೂ ಕಾನೂನು ಕ್ರಮ ಖಚಿತ” ಎಂದು ಪ್ರಶ್ನಿಸಿದರು.

“ನಿಮ್ಮ ಅಂತಿಮ ಕಾಲ ಬಂದಿದೆ. ನೀವು ಈ ಪ್ರಕರಣದಲ್ಲಿ ಸಿಕ್ಕಿಬೀಳುವುದು ನೂರಕ್ಕೆ ನೂರರಷ್ಟು ಖಚಿತ. ಈ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರ ಕೈವಾಡ ಇದೆ. ಮೂರು ಜನರೂ ತಲೆಮರೆಸಿಕೊಳ್ಳುವಂತೆ ಮಾಡಿದ್ದೀರಿ. ಪ್ರಜ್ವಲ್ ಪ್ರಸಾದ್ ಎಲ್ಲಿದ್ದಾನೆ ಎಂದು ನಿಮಗೂ ಗೊತ್ತಿದೆ. ಕೃಪಾ ಆಳ್ವಾ ಅವರು ವಿದೇಶಕ್ಕೆ ಹೋಗಿದ್ದರೆ ಅವರನ್ನು ತಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಯಾಕೆ ಮಾಡಲಿಲ್ಲ? ಅವರ ಹಿಂದೆ ಬಿಜೆಪಿ ಸಂಸದರು ಇದ್ದಾರೆ ಎಂಬ ಮಾಹಿತಿ ನಮಗೆ ಇದೆ. ಕುಮಾರಸ್ವಾಮಿ ಅವರೇ ನೀವು ಬಿಟ್ಟ ಬಾಂಬ್ ಬೇರೆಯವರ ಮನೆ ಹಾಳು ಮಾಡಲು ಉದ್ದೇಶಿಸಿದ್ದೀರಿ. ಆದರೆ, ಆ ಬಾಂಬ್ ನಿಮ್ಮ ಮನೆಯನ್ನೇ ನಾಶ ಮಾಡುವ ಕಾಲ ಹತ್ತಿರದಲ್ಲಿದೆ. ನೀವು ಮಾಡಿರುವ ಎಲ್ಲ ಸಂಗತಿಗಳನ್ನೂ ಮುಂದಿನ ದಿನಗಳಲ್ಲಿ ಬಯಲಿಗೆಳೆಯುತ್ತೇವೆ. ಗುರುವಾರ ಅಥವಾ ಶುಕ್ರವಾರ ಪೊಲೀಸ್ ಕಮಿಷನರ್ ಎರಡನೇ ಹಂತದ ಮಾಹಿತಿಯನ್ನು ಬಹಿರಂಗಪಡಿಸಲಿದ್ದಾರೆ" ಎಂದು ಹೇಳಿದರು.

ಪ್ರಶ್ನೋತ್ತರ:

ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಸ್ಪಷ್ಟವಾದ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಕಾಟಾಚಾರಕ್ಕೆ ತನಿಖೆ ನಡೆಸಿದರೆ ನ್ಯಾಯಾಲಯದ ಮುಂದೆ ನಿಲ್ಲಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ. ಹೀಗಾಗಿ ಪೊಲೀಸರು ಸಾಕ್ಷ್ಯಾಧಾರಗಳೊಂದಿಗೆ ತನಿಖೆ ನಡೆಸುತ್ತಿದ್ದಾರೆ” ಎಂದರು.

“ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 200ರಿಂದ 300 ವಿಡಿಯೊಗಳನ್ನು ಚಿತ್ರೀಕರಿಸಿ ಇಟ್ಟುಕೊಂಡಿದ್ದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಸ್ವತಃ ಪ್ರಜ್ವಲ್ ರೇವಣ್ಣನೇ ಆ ವಿಡಿಯೊಗಳನ್ನು ಚಿತ್ರೀಕರಿಸಿದ್ದ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ವಿಡಿಯೊ ಹಂಚಿದವರ ವಿರುದ್ಧವೂ ನ್ಯಾಯಾಲಯದ ಸೂಚನೆಯಂತೆ ಕ್ರಮಕ್ಕೆ ಮುಂದಾಗಲಾಗಿದೆ. ಆದರೆ, ಈಗಿನ ಪ್ರಕರಣದಲ್ಲಿ 2011ರಲ್ಲಿ ಸ್ಟಿಂಗ್ ಆಪರೇಷನ್ ನಡೆದಿದೆ ಎನ್ನುವುದಕ್ಕೆ ಮೂಲ ವಿಡಿಯೊ ಎಲ್ಲಿದೆ? ಅದನ್ನು ತೋರಿಸಲಿ” ಎಂದು ಸವಾಲು ಹಾಕಿದರು.

“ರಾಕೇಶ್ ಶೆಟ್ಟಿ, ಕೃಪಾ ಆಳ್ವಾ ಮತ್ತಿತರರ ನಡುವಿನ ಸಂಭಾಷಣೆಯನ್ನೇ ಸ್ಟಿಂಗ್ ಆಪರೇಷನ್ ಎಂದು ಬಿಂಬಿಸಲಾಗುತ್ತಿದೆ. ಆ ಸಂಭಾಷಣೆಯಲ್ಲಿ ಸಿದ್ದರಾಮಯ್ಯ ಅವರು ದೌರ್ಜನ್ಯ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ದೃಶ್ಯ ಅಥವಾ ನೇರ ಸಾಕ್ಷ್ಯ ಇದೆಯೇ? ಕೇವಲ ಸಂಭಾಷಣೆಯನ್ನು ಇಟ್ಟುಕೊಂಡು ಅದನ್ನು ಸ್ಟಿಂಗ್ ಆಪರೇಷನ್ ಎಂದು ಕರೆಯಲು ಸಾಧ್ಯವೇ? ಸಿದ್ದರಾಮಯ್ಯ ಅವರೇ ಆರೋಪಿ ಆಗಿದ್ದರೆ, ಆ ಮಹಿಳೆಯನ್ನು ಅವರ ಮುಂದೆ ಏಕೆ ಕರೆದುಕೊಂಡು ಹೋಗಬೇಕು? ನ್ಯಾಯಾಲಯ ಅಥವಾ ನ್ಯಾಯಾಧೀಶರ ಮುಂದೆ ಕರೆದೊಯ್ಯಬೇಕಿತ್ತಲ್ಲವೇ” ಎಂದು ಪ್ರಶ್ನಿಸಿದರು.

ಕೃಪ ಆಳ್ವಾ ಅವರು ಕುಮಾರಸ್ವಾಮಿ ಅವರ ಜತೆಗೆ ಭಾಗಿಯಾಗಿದ್ದಾರಾ ಎಂದು ಕೇಳಿದಾಗ, “ಇರಬಹುದು, ಕೃಪಾ ಆಳ್ವಾ ಅವರ ಪಾತ್ರದ ಬಗ್ಗೆ ತನಿಖೆಯ ವೇಳೆ ಮಾಹಿತಿ ಹೊರಬಂದಿದೆ. ಮನೋಹರ್ ಅವರು ಈ ಸಂಬಂಧ ದೂರು ನೀಡಿದ್ದಾರೆ. ಕೃಪಾ ಆಳ್ವಾ ಅವರನ್ನು ಬಂಧಿಸಬೇಕು ಎಂಬ ಆಗ್ರಹವನ್ನೂ ದೂರಿನಲ್ಲಿ ಮಾಡಿದ್ದಾರೆ. ತನಿಖೆಯಲ್ಲಿ ಕಾಂಗ್ರೆಸ್ನವರ ಪಾತ್ರವಿದ್ದರೂ ಅದನ್ನು ಹೊರಗೆ ತರುವ ಕೆಲಸವಾಗಲಿದೆ” ಎಂದರು.

ತನಿಖೆ ಪ್ರಕ್ರಿಯೆ ಬಗ್ಗೆ ಕೇಳಿದಾಗ, “15 ದಿನಗಳಲ್ಲಿ ಪ್ರಾಥಮಿಕ ವರದಿ ನೀಡುತ್ತಿರುವ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕು. ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಸರಿಯಲ್ಲ. ಸಿಸಿಬಿ ಮತ್ತು ಕರ್ನಾಟಕ ಪೊಲೀಸರಿಗೆ ತನಿಖೆ ನಡೆಸುವ ಸಾಮರ್ಥ್ಯವಿದೆ. 15 ದಿನಗಳೊಳಗೆ ಪ್ರಾಥಮಿಕ ತನಿಖಾ ವರದಿಯಲ್ಲಿ ಏನು ಕಂಡುಬಂದಿದೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ. ಒಂದೇ ದಿನದಲ್ಲಿ ಎಲ್ಲವನ್ನೂ ಪತ್ತೆಹಚ್ಚಲು ಸಾಧ್ಯವೇ? ತನಿಖೆ ನಡೆಸುತ್ತಿರುವ ಪೊಲೀಸರ ಕಾರ್ಯವನ್ನು ಮೆಚ್ಚಬೇಕು. ಸಿಸಿಬಿ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು, ಸರ್ಕಾರ ಪೊಲೀಸರಿಗೆ ನಿರ್ದಿಷ್ಟವಾಗಿ ಇಂತಹವರನ್ನು ಬಂಧಿಸಿ ಎಂದು ನಿರ್ದೇಶನ ನೀಡುವುದಿಲ್ಲ. ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಈ ತನಿಖೆಯಲ್ಲಿ ಪ್ರಜ್ವಲ್ ಪ್ರಸಾದ್, ರಿತೇಶ್ ಪಾಂಡೆ, ವಿನೋದ್ ಶರ್ಮ ಸೇರಿದಂತೆ ಹಲವರ ಹೆಸರುಗಳು ಹೊರಬಂದಿವೆ. ಅವರ ಪಾತ್ರದ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ” ಎಂದರು.

“ಸಿದ್ದರಾಮಯ್ಯ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಮೂಲ ವಿಡಿಯೊ ಅಥವಾ ಮೂಲ ಸ್ಟಿಂಗ್ ಆಪರೇಷನ್ ಇಲ್ಲದಿದ್ದರೂ, ಬೇರೆ ಸಂಭಾಷಣೆಯನ್ನು ಆಧರಿಸಿ ಹೊಸ ಕಥನ ಸೃಷ್ಟಿಸಿ ಹಂಚುವ ಮೂಲಕ ಅವರ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆಯೇ ಎಂಬುದನ್ನು ತನಿಖೆ ಮಾಡಬೇಕಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪಗಳ ಹಿಂದಿನ ಉದ್ದೇಶವನ್ನೂ ಪರಿಶೀಲಿಸಬೇಕಿದೆ. ಈ ಬಗ್ಗೆ ತನಿಖೆ ಮಾಡಬಾರದೇ? ಖಂಡಿತ ಮಾಡಬೇಕು. ಅದಕ್ಕಾಗಿಯೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಮೊದಲ ಆದ್ಯತೆ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧದ ಆರೋಪವನ್ನು ಕಟ್ಟುಕಥೆ ಎಂದು ಬಿಂಬಿಸುವುದೇ ಕೆಲವರ ಆದ್ಯತೆಯಾಗಿದೆ. ವಿಡಿಯೊ ಮಾಡಿದವರು, ಹಂಚಿದವರು ಹಾಗೂ ಅದರ ಹಿಂದೆ ಇರುವವರ ಪಾತ್ರವನ್ನು ಪ್ರತ್ಯೇಕವಾಗಿ ತನಿಖೆ ಮಾಡಬೇಕು. ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುತ್ತದೆ” ಎಂದು ಹೇಳಿದರು.

“ರಾಕೇಶ್ ಶೆಟ್ಟಿ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬಳಿಕ ಅವರು ತಕ್ಷಣವೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಿರುವಾಗ ಅವರನ್ನು ಕೂಡಲೇ ಬಂಧಿಸುವುದು ಹೇಗೆ ಸಾಧ್ಯ? ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮನೆಯ ಮೇಲೂ ಪರಿಶೀಲನೆ ನಡೆಸಲಾಗಿದೆ. ಕೃಪಾ ಆಳ್ವಾ ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಕೃಪಾ ಆಳ್ವಾ ವಿದೇಶಕ್ಕೆ ತೆರಳಿದ್ದರೆ ಅವರನ್ನು ಪತ್ತೆಹಚ್ಚಿ ವಾಪಸ್ ಕರೆತರುವ ಕೆಲಸ ಮಾಡುತ್ತೇವೆ. ವಿದೇಶಕ್ಕೆ ತೆರಳಿರುವ ಬಗ್ಗೆ ನಮಗೆ ಖಚಿತ ಮಾಹಿತಿ ಇಲ್ಲ. ಆದರೆ, ಅಂತಹ ಮಾಹಿತಿ ಬಂದರೆ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುವುದು” ಎಂದರು.

ಕುಮಾರಸ್ವಾಮಿ ಅವರೇ ಈ ಸ್ಟಿಂಗ್ ಆರಪೇಷನ್ ಮಾಡಿಸಿದ್ದಾರಾ ಎಂದು ಕೇಳಿದಾಗ, “ನೂರಕ್ಕೆ ನೂರರಷ್ಟು ಹೌದು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ಟಿಂಗ್ ಆಪರೇಷನ್ ಮಾಡಿಸಿರುವ ಬಗ್ಗೆ ಮಾಹಿತಿ ಇದೆ. ಸ್ಟಿಂಗ್ ಆಪರೇಷನ್ ರೂಪಿಸಿ, ಅದನ್ನು ಅಪ್ಲೋಡ್ ಮಾಡಿದವರು ಯಾರು ಮತ್ತು ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಪೊಲೀಸರು ಬಹಿರಂಗಪಡಿಸಲಿದ್ದಾರೆ” ಎಂದು ಹೇಳಿದರು.

ಕೃಪಾ ಆಳ್ವಾ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಸ್ಟಿಂಗ್ ಆಪರೇಷನ್ ನಡೆದ ಸಂದರ್ಭದಲ್ಲಿ ಅವರು ಕಾಂಗ್ರೆಸ್ನಲ್ಲೇ ಇದ್ದರು. ಅವರ ಹಿಂದೆ ಇದ್ದ ಕಾಂಗ್ರೆಸ್ ನಾಯಕರು ಯಾರು ಎಂದು ಕೇಳಿದಾಗ, "ತನಿಖೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂದು ಹೇಗೆ ಹೇಳುತ್ತೀರಿ? ತನಿಖೆಯಿಂದ ಎಲ್ಲವೂ ಹೊರಬರಲಿದೆ. ಕಾಂಗ್ರೆಸ್ನವರೇ ಭಾಗಿಯಾಗಿದ್ದರೂ ಅವರ ಪಾತ್ರವನ್ನು ಬಹಿರಂಗಪಡಿಸುವ ಕೆಲಸ ಮಾಡುತ್ತೇವೆ. ಇದು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಪ್ರಕರಣ. ಇದನ್ನು ಕಾಂಗ್ರೆಸ್ ಪಕ್ಷ ಹಗುರವಾಗಿ ಪರಿಗಣಿಸುವುದಿಲ್ಲ. ಪ್ರಕರಣದಲ್ಲಿ ಒಳಗಿನಿಂದ ಅಥವಾ ಹೊರಗಿನಿಂದ ಯಾರೇ ಭಾಗಿಯಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವ ಕೆಲಸ ಮಾಡುತ್ತೇವೆ" ಎಂದು ಹೇಳಿದರು.

ಮೇಲ್ ಮೂಲಕ ಕೊಟ್ಟಿರುವ ದೂರಿನ ಬಗ್ಗೆ ತನಿಖೆ ಆಗಿಲ್ಲ ಎಂದು ಕೇಳಿದಾಗ, “ಮೇಲ್ ಬಂದಿಲ್ಲ ಎಂದ ಮೇಲೆ ತನಿಖೆ ಎಲ್ಲಿಂದ ಮಾಡಲು ಸಾಧ್ಯ? ಮೇಲ್ ಕಾಪಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಕುಮಾರಸ್ವಾಮಿ ಅವರು ಹೇಳಿದ್ದಕ್ಕೆಲ್ಲ ತನಿಖೆ ಮಾಡಿಸುವುದಕ್ಕೆ ಸಾಧ್ಯವಿಲ್ಲ. ಮೇಲ್ ಬಂದಿದೆ ಎನ್ನುವುದಕ್ಕೆ ಅದರ ಪ್ರತಿ ಇರಬೇಕು. ಅದನ್ನು ನಮಗೆ ಕೊಡಿ, ತನಿಖೆ ಮಾಡಿಸುತ್ತೇವೆ. 14 ವರ್ಷದ ಬಾಲಕಿ ಮೇಲ್ ಕಳುಹಿಸಿದ್ದಾಳೆ ಎಂದು ಈಗ ಹೇಳುತ್ತಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರೇ ಮೇಲ್ ಬಂದಿದೆ ಎಂದು ಹೇಳಿದ್ದರು. ಆದರೆ, ಮೇಲ್ ಎಲ್ಲಿದೆ? ಅದರ ದಾಖಲೆ ತೋರಿಸಲಿ. ಮೇಲ್ ಬಂದಿರುವ ಪ್ರತಿ ಇದ್ದರೆ ಖಂಡಿತ ತನಿಖೆ ನಡೆಸಬಹುದು. ಸರ್ಕಾರ ಈ ವಿಚಾರದಲ್ಲಿ ತನಿಖೆ ನಡೆಸಲು ಸಿದ್ಧವಿದೆ. ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ತನಿಖೆ ನಡೆಸುವುದಕ್ಕೂ ನಮ್ಮ ಆಕ್ಷೇಪವಿಲ್ಲ. ಯಾವುದನ್ನೂ ಮುಚ್ಚಿಡುವ ಉದ್ದೇಶವೂ ಇಲ್ಲ” ಎಂದರು.

ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆ ನಡೆಸುತ್ತೀರಾ ಎಂದು ಕೇಳಿದಾಗ, “ಖಂಡಿತಾ, ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆ ನಡೆಸಲು ಸಿದ್ಧವಿದ್ದೇವೆ. ಇಲ್ಲಿ ನಾವು ಮುಚ್ಚಿ ಹಾಕುವುದೇನು ಇಲ್ಲ. 2023ರಲ್ಲಿ ಕೃಪಾ ಆಳ್ವಾ ಅವರು ಇದ್ದದ್ದು ಬಿಟ್ಟರೆ ಇದರ ಹಿಂದೆ ಕಾಂಗ್ರೆಸ್ ಪಕ್ಷದ ಬೇರೆ ನಾಯಕರು ಇಲ್ಲ. ಹೀಗಿರುವಾಗ ನಾವು ಯಾಕೆ ಪ್ರಕರಣ ಮುಚ್ಚಿಹಾಕಬೇಕು? ಸ್ಟಿಂಗ್ ಆಗಿದ್ದು, ಅದರ ವಿಡಿಯೋ ಇದ್ದಿದ್ದರೆ ಕುಮಾರಸ್ವಾಮಿ ಇಷ್ಟು ದಿನ ಬಿಡದೇ ಸುಮ್ಮನೇ ಇರುತ್ತಿದ್ದರಾ?” ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದಾಗ, “ನಾನು ನಿಮ್ಮ ಮೇಲೆ ಸ್ಟಿಂಗ್ ಮಾಡಿದರೆ ನಿಮಗೆ ಗೊತ್ತಾಗುವುದು ಹೇಗೆ? ನಾನು ಅದನ್ನು ಪ್ರಕಟಿಸಿದಾಗಲೇ ಅಲ್ಲವೇ ತಿಳಿಯುವುದು. ಸಿದ್ದರಾಮಯ್ಯ ಅವರಿಗೆ ಈ ಸ್ಟಿಂಗ್ ವಿಚಾರ ಗೊತ್ತಾಗಿದ್ದೇ ಈಗ ಈ ವಿಡಿಯೋ ಹೊರಗೆ ಬಂದ ಮೇಲೆ. ಆಗಲೇ ಅವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ತನಿಖೆ ಸರಿಯಾಗಿ ಹೋಗುತ್ತಿದೆಯೇ ಎಂದು ಕೇಳಿದಾಗ, “ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಸ್ವಲ್ಪ ಕಾಯಿರಿ. ಸ್ಟೀಂಗ್ ಆರೋಪ ಕಟ್ಟುಕತೆಯಲ್ಲ ಎಂಬುದಕ್ಕೆ ಒಂದೇ ಒಂದು ಸಣ್ಣ ದಾಖಲೆಯನ್ನು ಕುಮಾರಸ್ವಾಮಿ ಅವರಿಂದ ಬಿಡುಗಡೆ ಮಾಡಿಸಿ. ಈ ವಿಚಾರದಲ್ಲಿ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ? ಯಾಕೆಂದರೆ ಇದರಲ್ಲಿ ಏನೂ ಇಲ್ಲ ಎಂದು ಬಿಜೆಪಿಯವರಿಗೂ ಗೊತ್ತು. ಕರ್ನಾಟಕದಲ್ಲಿ ತಾವು ಎನ್ಡಿಎ ಮೈತ್ರಿಯ ನೇತೃತ್ವ ವಹಿಸಬೇಕು ಎಂದು ಕುಮಾರಸ್ವಾಮಿ ಈ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೂ ಸ್ಪಷ್ಟವಾಗಿ ಗೊತ್ತಿದೆ. ಸಣ್ಣ ವಿಚಾರಕ್ಕೂ ಬಾಯಿ ಬಡಿದುಕೊಳ್ಲುವ ಆರ್ ಅಶೋಕ್, ಸಿಟಿ ರವಿ ಈಗ ಮೌನವಾಗಿರುವುದೇಕೆ” ಎಂದರು.

ಹೈಕಮಾಂಡ್ ಮೌನವಾಗಿರುವ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, “ಹೈಕಮಾಂಡ್ ನಾಯಕರು ಮಾಧ್ಯಮಗಳ ಮುಂದೆ ಬಂದು ಧ್ವನಿ ಎತ್ತಬೇಕೆ? ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳಬೇಕು ಎಂದೇನಿಲ್ಲ. ಹೈಕಮಾಂಡ್ ನಲ್ಲಿ ರಾಜ್ಯದ ಉಸ್ತುವಾರಿಯಾಗಿ ಸುರ್ಜೆವಾಲ ಇದ್ದಾರೆ. ಕೆ ಸಿ ವೇಣುಗೋಪಾಲ್ ಇದ್ದಾರೆ. ಅವರು ಏನು ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಇಲ್ಲಿ ತನಿಖೆ ನಡೆಯಬೇಕು. ಅಲ್ಲೇ ಡ್ರಾ ಅಲ್ಲೇ ಬಹುಮಾನ ವ್ಯವಸ್ಥೆ ಇಲ್ಲ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ಯಾವುದೇ ಸಂಶಯಬೇಡ. ಡಿ ಕೆ ಶಿವಕುಮಾರ್ ಅವರು ಸಿಎಂ ಆಗಿ 130 ದಿನಗಳಾಗಿದೆ, ಇಷ್ಟರಲ್ಲಿ ಕುಮಾರಸ್ವಾಮಿ ಅವರು 67 ಮಾಧ್ಯಮಗೋಷ್ಠಿ ಮಾಡಿದ್ದಾರೆ. ಎಲ್ಲ ಮಾಧ್ಯಮಗೋಷ್ಠಿಯಲ್ಲೂ ಡಿ ಕೆ ಶಿವಕುಮಾರ್ ಅವರ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಿಲ್ಲ. ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರು ಅವರು ತಮ್ಮ ಕ್ಷೇತ್ರಕ್ಕೆ ಒಂದು ಕಾರ್ಖಾನೆ ನೀಡಲು ಆಗಿಲ್ಲ. 100 ಎಕರೆ ಕೇಳುತ್ತಾರೆ. ಅದನ್ನು ಕೊಡಲು ಹೋದರೆ 500 ಎಕರೆ ಬೇಕು ಅಂತಾರೆ. ಇನ್ನೆರಡು ವರ್ಷ ತಳ್ಳಿದರೆ ಅವಧಿ ಮುಗಿಯುತ್ತದೆ. ಈಗ ಸಿಎಂ ಆಗುವತ್ತ ಗಮನಹರಿಸಿದ್ದಾರೆ” ಎಂದರು.