ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಬಂಧಿತ ಆರೋಪಿ ಪವಿತ್ರಾ ಗೌಡಗೆ (Pavithra Gowda) ವಾರಕ್ಕೊಮ್ಕೆ ಮನೆಯೂಟ ನೀಡಲು ಕೋರ್ಟ್ ಅವಕಾಶ ನೀಡಿದೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಾರಕ್ಕೊಮ್ಮೆ ಮನೆಯೂಟ ನೀಡುವಂತೆ ಸೂಚಿಸಿದೆ. ಜತೆಗೆ ಆರೋಗ್ಯದಲ್ಲಿ ವ್ಯತ್ಯಾಸವಾದರೆ ವೈದ್ಯರ ಸಲಹೆ ಮೇರೆಗೆ ಊಟ ನೀಡಬೇಕು ಎಂದು ತಿಳಿಸಿದೆ.
ಆರೋಪಿ ಪವಿತ್ರಾ ಗೌಡ ಸೇರಿ ನಾಗರಾಜು, ಲಕ್ಷ್ಮಣ್ ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಇದರಿಂದ ಆರೋಗ್ಯ ಕೆಡುತ್ತಿದೆ. ಹೀಗಾಗಿ ಮನೆಯೂಟ ನೀಡಲು ಅವಕಾಶ ನೀಡಿ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿತ್ತು. ಆದರೆ ಕಾರಾಗೃಹ ಇಲಾಖೆ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ರೀತಿ ಕೇಳುತ್ತಾರೆ ಎಂದು ತಿಳಿಸಿತ್ತು.
ಅದಾದ ಬಳಿಕ ಆರೋಪಿ ಪವಿತ್ರಗೌಡ ಪರ ವಕೀಲ ನಾರಾಯಣಸ್ವಾಮಿ ನ್ಯಾಯಾಲಯಕ್ಕೆ ಪುನಃ ಅರ್ಜಿ ಸಲ್ಲಿಸಿ, ಪವಿತ್ರಾ ಗೌಡಗೆ ಜೈಲೂಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ. ಅದಕ್ಕಾಗಿಯೇ ನಾವು ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದು ಎಂದು ಹೇಳಿದ್ದರು. ಹೀಗಾಗಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆಯೂಟ ನೀಡಲು ಅವಕಾಶ ನೀಡಲಾಗಿದೆ.
Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್, ಇಬ್ಬರ ಬಂಧನ
ಇನ್ನು ಈ ಪ್ರಕರಣದ ಟ್ರಯಲ್ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಜೈಲಿನಿಂದ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿ 7 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದು, ಉಳಿದ 10 ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇ ವೇಳೆ ಆರೋಪಿ ಪ್ರದೂಷ್ ತನ್ನ ತಂದೆಯ ತಿಥಿ ಹಿನ್ನೆಲೆ ಜನವರಿ 17 ರಿಂದ 22 ರವರೆಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯೂ ನಾಳೆ ನಡೆಯಲಿದೆ.