ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ತನಿಖೆಯನ್ನು ಸಿಬಿಐಗೆ ವಹಿಸಿ: ಸಿಎಂ ಡಿಕೆಶಿಗೆ ಸಿ.ಟಿ.ರವಿ ಪತ್ರ

Dharmasthala Case: ಧರ್ಮಸ್ಥಳದಂತಹ ಪ್ರತಿಷ್ಠಿತ ಸಂಸ್ಥೆಯ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಅಭಿಯಾನ ನಡೆಸಲು ಹಣ ಎಲ್ಲಿಂದ ಬಂತು? ಇದರ ಹಿಂದೆ ಯಾರು ಇದ್ದರು? ಇದು ಕೆಲವರ ವೈಯಕ್ತಿಕ ಕೃತ್ಯವೋ ಅಥವಾ ಇದರ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆಯೋ? ಎಂಬುವ ಸತ್ಯ ಹೊರಬರಬೇಕಾಗಿದೆ ಎಂದು ಎಂಎಲ್‌ಸಿ ಸಿ.ಟಿ.ರವಿ ಅವರು ಒತ್ತಾಯಿಸಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಎಂಎಲ್‌ಸಿ ಸಿ.ಟಿ.ರವಿ.

ಬೆಂಗಳೂರು: ‘ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಮತ್ತು ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆದಿರುವ ಷಡ್ಯಂತ್ರದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಎಂಎಲ್‌ಸಿ ಸಿ.ಟಿ.ರವಿ (CT Ravi) ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಅವರು, ಸನ್ಮಾನ್ಯ ಮುಖ್ಯಮಂತ್ರಿಗಳೇ, ಧರ್ಮಸ್ಥಳದ ವಿಚಾರದಲ್ಲಿ ಇತ್ತೀಚೆಗೆ ಹೊರಬರುತ್ತಿರುವ ಬೆಳವಣಿಗೆಗಳು ನನ್ನನ್ನಷ್ಟೇ ಅಲ್ಲದೆ, ಕೋಟ್ಯಂತರ ಭಕ್ತರ ಮನಸ್ಸಿನಲ್ಲೂ ಆತಂಕ ಮತ್ತು ಅನುಮಾನಗಳನ್ನು ಹುಟ್ಟುಹಾಕಿವೆ. ಈ ಕಾರಣದಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ.

ಶ್ರೀ ಕ್ಷೇತ್ರ ಧರ್ಮಸ್ಥಳ ನಮ್ಮ ನಾಡಿನ ಒಂದು ಸಾಮಾನ್ಯ ಧಾರ್ಮಿಕ ಕ್ಷೇತ್ರವಲ್ಲ. ಕೋಟ್ಯಂತರ ಜನರ ನಂಬಿಕೆ, ಭಕ್ತಿ ಮತ್ತು ಧಾರ್ಮಿಕ ಭಾವನೆಗಳ ಕೇಂದ್ರವಾಗಿದೆ. ಸಮಾಜ ಸೇವೆ, ಶಿಕ್ಷಣ, ಆರೋಗ್ಯ, ಅನ್ನದಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಧರ್ಮಸ್ಥಳ ಸಲ್ಲಿಸಿರುವ ಸೇವೆ ದೇಶಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಆರೋಪಗಳು, ಅಪಪ್ರಚಾರಗಳು ಮತ್ತು ಅನುಮಾನಗಳ ವಾತಾವರಣ ಸೃಷ್ಟಿಮಾಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಆದಾಗ್ಯೂ ಇದೆಲ್ಲವೂ ತಮ್ಮ ಗಮನಕ್ಕೂ ಈಗಾಗಲೇ ತಿಳಿದಿದೆ ಎಂದು ನಾನು ಭಾವಿಸಿದ್ದೇನೆ.

Guarantee schemes: ಮತ್ತೆ ಅರ್ಜಿ ಸಲ್ಲಿಸಲು ಹೇಳಿದ್ದೇವೆಯೇ ಹೊರತು ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಸ್ಪಷ್ಟನೆ

ಈಗ ಉಚ್ಚ ನ್ಯಾಯಾಲಯದ ಮುಂದೆ ಸಲ್ಲಿಕೆಯಾಗಿರುವ ಅರ್ಜಿಯು ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ಆಯಾಮವನ್ನು ನೀಡಿದ್ದು, ಮಾಧ್ಯಮ ವರದಿಗಳ ಪ್ರಕಾರ ಆ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಜಯಂತ್ ಹಾಗೂ ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.



ಇದರ ಜತೆಗೆ, ಧರ್ಮಸ್ಥಳ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸುಮಾರು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಂಘಟಿತ ಮತ್ತು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಅತ್ಯಂತ ಗಂಭೀರ ಆರೋಪವೂ ನ್ಯಾಯಾಲಯದ ಮುಂದೆ ಬಂದಿದೆ.

ಈ ಆರೋಪಗಳು ಸತ್ಯವೋ ಸುಳ್ಳೋ ಎಂಬುದನ್ನು ತನಿಖೆಯೇ ನಿರ್ಧರಿಸಬೇಕು. ಆದರೆ ಒಂದು ಪ್ರಶ್ನೆಗೆ ಉತ್ತರ ಸಿಗಲೇಬೇಕು. ಧರ್ಮಸ್ಥಳದಂತಹ ಪ್ರತಿಷ್ಠಿತ ಸಂಸ್ಥೆಯ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಅಭಿಯಾನ ನಡೆಸಲು ಹಣ ಎಲ್ಲಿಂದ ಬಂತು? ಇದರ ಹಿಂದೆ ಯಾರು ಇದ್ದರು? ಇದು ಕೆಲವರ ವೈಯಕ್ತಿಕ ಕೃತ್ಯವೋ ಅಥವಾ ಇದರ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆಯೋ? ಎಂಬುವ ಸತ್ಯ ಹೊರಬರಬೇಕಾಗಿದೆ.

ನಾನು ಈ ಹಿಂದೆಯೇ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವ ಅನುಮಾನ ವ್ಯಕ್ತಪಡಿಸಿದ್ದೆ. ಆಗ ಹಲವರು ಟೀಕೆ ಮಾಡಿದ್ದರು. ಆದರೆ ಈಗ ಹೊರಬರುತ್ತಿರುವ ಮಾಹಿತಿಗಳನ್ನು ನೋಡಿದಾಗ, ಆ ಅನುಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಧರ್ಮಸ್ಥಳದ ವಿರುದ್ಧದ ಆರೋಪಗಳ ತನಿಖೆ ನಡೆದಂತೆಯೇ, ಧರ್ಮಸ್ಥಳದ ವಿರುದ್ಧವೇ ಯಾವುದೇ ಸಂಚು ನಡೆದಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು.

ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಶ್ರದ್ಧಾಕೇಂದ್ರಗಳು, ಪುರಾತನ ದೇವಾಲಯಗಳು ಮತ್ತು ಸಮಾಜದಲ್ಲಿ ಅಪಾರ ಗೌರವ ಹೊಂದಿರುವ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅಪನಂಬಿಕೆ ಸೃಷ್ಟಿಸುವ ಯಾವುದೇ ದೊಡ್ಡ ಕಾರ್ಯತಂತ್ರದ ಭಾಗ ಇದಾಗಿತ್ತೇ? ಈ ಪ್ರಕ್ರಿಯೆಗೆ ಹೊರಗಿನಿಂದ ಹಣ ಹೂಡಿಕೆಯಾಗಿತ್ತೇ? ರಾಜ್ಯದ ಹೊರಗಿನ ಅಥವಾ ದೇಶದ ಹೊರಗಿನ ಯಾವುದೇ ಸಂಘಟಿತ ಶಕ್ತಿಗಳು ಇದರಲ್ಲಿ ಭಾಗಿಯಾಗಿದ್ದವೆಯೇ? ಎಂಬ ಅನುಮಾನ ಮೂಡುತ್ತಿದೆ.

ಸುಮಾರು 200 ಕೋಟಿ ರೂಪಾಯಿಗಳ ಷಡ್ಯಂತ್ರದ ಆರೋಪ ಸಾಮಾನ್ಯ ವಿಷಯವಲ್ಲ. ಈ ಆರೋಪದಲ್ಲಿ ಯಾವುದೇ ಸತ್ಯಾಂಶವಿದ್ದರೆ ಅದು ರಾಜ್ಯದ ಜನತೆ ತಿಳಿದುಕೊಳ್ಳಲೇಬೇಕಾದ ಸಂಗತಿ. ಹಣದ ಮೂಲ, ಹಣದ ಹರಿವು, ಈ ಪ್ರಕರಣದಲ್ಲಿ ಹೆಸರು ಕೇಳಿ ಬರುತ್ತಿರುವ ವ್ಯಕ್ತಿಗಳ ಪಾತ್ರ, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿರುವ ಪ್ರಚಾರ ಹಾಗೂ ಇದರ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಬೇಕಾಗಿದೆ.

ಪ್ರಸ್ತುತ ಪ್ರಕರಣದಲ್ಲಿ, ಕರ್ನಾಟಕ ಮಾತ್ರವಲ್ಲದೆ, ವಿವಿಧ ರಾಜ್ಯಗಳ ಜನರೂ ಸಂಚಿನ ಭಾಗವಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೋಟ್ಯಾಂತರ ಭಕ್ತರ ಶ್ರದ್ಧಾಕೇಂದ್ರದ ವಿರುದ್ಧ ನಡೆದಿರುವ ಹುನ್ನಾರವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪ್ರಸ್ತುತ ಪ್ರಕರಣದ ವ್ಯಾಪ್ತಿ ಕರ್ನಾಟಕವನ್ನೂ ಮೀರಿ ಹಬ್ಬಿರುವುದರಿಂದ, ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಿದರೆ ಸಾಕಾಗುವುದಿಲ್ಲ. ಆದ್ದರಿಂದ, ಕೇಂದ್ರ ಮಟ್ಟದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿದರೆ ಮಾತ್ರವೇ ವಿಸ್ತೃತ ವಿಚಾರಣೆ ನಡೆದು, ಷಡ್ಯಂತ್ರದ ಹಿಂದಿರುವವರು ಯಾರು, ಅವರ ಉದ್ದೇಶವೇನು ಎನ್ನುವುದು ಬೆಳಕಿಗೆ ಬರಲು ಸಾಧ್ಯ.

ಈ ಕಾರಣಕ್ಕಾಗಿ ಈ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ಗೆ ವಹಿಸಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ನಾನು ಆಗ್ರಹಿಸುತ್ತೇನೆ. ಸತ್ಯ ಏನೇ ಇರಲಿ ಅದು ಹೊರಬರಬೇಕು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದ್ದರೆ ಅದರ ಹಿಂದಿರುವವರು ಬಯಲಾಗಬೇಕು. ಆರೋಪಗಳಲ್ಲಿ ಸತ್ಯವಿದ್ದರೆ ಅದೂ ಕಾನೂನಿನ ಮುಂದೆ ಸಾಬೀತಾಗಬೇಕು.

Bidadi Township: ಬಿಡದಿ ಟೌನ್‌ಶಿಪ್ ಸರ್ಕಾರಿ ರಿಯಲ್ ಎಸ್ಟೇಟ್ ಯೋಜನೆ: ಎಚ್.ಡಿ. ಕುಮಾರಸ್ವಾಮಿ ಕಿಡಿ

ಕೋಟ್ಯಾಂತರ ಭಕ್ತರ ನಂಬಿಕೆ, ಧಾರ್ಮಿಕ ಭಾವನೆ ಮತ್ತು ಸಮಾಜದ ವಿಶ್ವಾಸದ ಪ್ರಶ್ನೆಯಾಗಿರುವ ಕಾರಣ, ಸರ್ಕಾರ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿ.ಟಿ.ರವಿ ಅವರು ಪತ್ರದ ಮೂಲಕ ಕೋರಿದ್ದಾರೆ.