ನವದೆಹಲಿ: ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ತಮಿಳುನಾಡಿಗೆ ಕಾವೇರಿ (Cauvery Water Dispute) ಜಲಾನಯನ ಪ್ರದೇಶದಿಂದ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದರಿಂದಾಗಿ ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ನವದೆಹಲಿಯಲ್ಲಿ ಬುಧವಾರ ನಡೆದ CWMA ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ನೀರು ಹರಿಸುವ ಕುರಿತಂತೆ ಯಾವುದೇ ಅಂತಿಮ ನಿರ್ದೇಶನ ನೀಡದ ಪ್ರಾಧಿಕಾರವು, ಮುಂದಿನ ಸಭೆಯನ್ನು ಇದೇ ತಿಂಗಳ 28ಕ್ಕೆ ಮುಂದೂಡಿದೆ.
ಸಭೆಯಲ್ಲಿ ತನ್ನ ಹಳೆಯ ನಿಲುವಿಗೇ ಬದ್ಧವಾಗಿದ್ದ ಕರ್ನಾಟಕ ಸರ್ಕಾರ, ರಾಜ್ಯದ ಜಲಾನಯನ ವ್ಯಾಪ್ತಿಯ ನಾಲ್ಕೂ ಜಲಾಶಯಗಳಲ್ಲಿರುವ ಪ್ರಸ್ತುತ ನೀರಿನ ವಾಸ್ತವಿಕ ಸ್ಥಿತಿಯನ್ನು ವಿವರಿಸಿದೆ.
ಮಳೆ ಕೊರತೆಯಿಂದ ಕೆಆರ್‌ಎಸ್, ಹಾರಂಗಿ, ಕಬಿನಿ ಹಾಗೂ ಹೇಮಾವತಿ ಅಣೆಕಟ್ಟುಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಜುಲೈ ಎರಡನೇ ವಾರ ಕಳೆದರೂ ನಿರೀಕ್ಷಿತ ಮಳೆಯಾಗಿಲ್ಲ. ಪ್ರಸ್ತುತ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಅಗತ್ಯಗಳಿಗೆ ಮಾತ್ರ ಬಳಸಲಾಗುತ್ತಿದ್ದು, ರೈತರ ಕೃಷಿ ಚಟುವಟಿಕೆಗೆ ನಾಲೆಗಳಿಗೆ ಒಂದೇ ಒಂದು ಹನಿ ನೀರನ್ನೂ ಹರಿಸಲು ಸಾಧ್ಯವಾಗಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಕರ್ನಾಟಕದ ವಾದವನ್ನು ತಮಿಳುನಾಡು ಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದರು. ಜುಲೈ ತಿಂಗಳು ಅರ್ಧ ಮುಗಿಯುತ್ತ ಬಂದರೂ ಕರ್ನಾಟಕ ತಮಗೆ ಬರಬೇಕಾದ ನಿಗದಿತ ನೀರನ್ನು ಹರಿಸಿಲ್ಲ, ತಕ್ಷಣವೇ ಬಾಕಿ ನೀರನ್ನು ಬಿಡುವಂತೆ ನಿರ್ದೇಶಿಸಬೇಕೆಂದು ಪ್ರಾಧಿಕಾರವನ್ನು ಒತ್ತಾಯಿಸಿದರು.
ಈ ವೇಳೆ ತಮಿಳುನಾಡು ಅಧಿಕಾರಿಗಳನ್ನು ಪ್ರಶ್ನಿಸಿದ ಪ್ರಾಧಿಕಾರ, "ಕರ್ನಾಟಕದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರಗಾಲ ಆವರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯೇ ವರದಿ ನೀಡಿದೆ. ಅಣೆಕಟ್ಟುಗಳಲ್ಲೇ ನೀರಿಲ್ಲದಿರುವಾಗ ಅವರು ಹೇಗೆ ನೀರು ಹರಿಸಲು ಸಾಧ್ಯ?" ಎಂದು ಸಮಾಧಾನಪಡಿಸಿತು.
ಕರಾವಳಿ ಸೇರಿ ಕರ್ನಾಟಕದ ಹಲವೆಡೆ ಇನ್ನೆರಡು ದಿನ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಅಂತಿಮವಾಗಿ ಉಭಯ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ತಕ್ಷಣಕ್ಕೆ ನೀರು ಹರಿಸುವಂತೆ ಯಾವುದೇ ಆದೇಶ ನೀಡದೆ ಜುಲೈ 28ಕ್ಕೆ ಮುಂದಿನ ಸಭೆಯನ್ನು ನಿಗದಿಪಡಿಸಿತು.