ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

LPG Cylinder Theft: ಎಲ್‌ಪಿಜಿ ಕೊರತೆ ನಡುವೆ ಹೆಚ್ಚಾಯ್ತು ಸಿಲಿಂಡರ್ ಕಳ್ಳರ ಹಾವಳಿ; ಬೆಂಗಳೂರು ಸೇರಿ 2 ಕಡೆ ಸಿಲಿಂಡರ್ ಕಳವು, ವಿಡಿಯೊ ವೈರಲ್‌!

LPG Cylinder Shortage: ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಅಡುಗೆ ಸಿದ್ಧಪಡಿಸಲು ಸಮಸ್ಯೆಯಾಗಿದೆ. ದರ ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ. ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಸಿಲಿಂಡರ್‌ ಕಳ್ಳತನ ಪ್ರಕರಣ ನಡೆದಿವೆ.

ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಸಿಲಿಂಡರ್‌ ಕಳ್ಳತನ ಮಾಡಿರುವುದು.

ಬೆಂಗಳೂರು: ಎಲ್‌ಪಿಜಿ ಕೊರತೆ ನಡುವೆ ರಾಜ್ಯದಲ್ಲಿ ಸಿಲಿಂಡರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಲವೆಡೆ ಗ್ಯಾಸ್‌ ಸಿಲಿಂಡರ್‌ಗಳ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ಮನೆ ಕಾಂಪೌಂಡ್‌ನೊಳಗೆ ಇಟ್ಟಿದ್ದ ಸಿಲಿಂಡರ್‌ ಕಳ್ಳತನ (LPG Cylinder Theft) ಮಾಡಿರುವುದು ಕಂಡುಬಂದಿದ್ದು, ಕಳ್ಳರ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಎರಡು ಪ್ರತ್ಯೇಕ ಘಟನೆಗಳ ಪೈಕಿ ಒಂದು ಚನ್ನಪಟ್ಟಣದಲ್ಲಿ ನಡೆದಿದ್ದು, ನಗರದಲ್ಲಿನ ಮನೆಯೊಂದರ ಬಳಿ ಇಟ್ಟಿದ್ದ ಗೃಹ ಬಳಕೆಯ ಸಿಲಿಂಡ‌ರ್ ಅನ್ನು ಯುವಕನೊಬ್ಬ ಗೇಟ್ ತೆಗೆದು ಒಳಬಂದು ಹೊತ್ತೊಯ್ದಿದ್ದಾನೆ. ಹಾಡಹಗಲೇ ಯುವಕ ಮನೆ ಆವರಣದಲ್ಲಿ ಸಿಲಿಂಡರ್‌ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.



ಮತ್ತೊಂದು ಇಂತಹುದೇ ಪ್ರಕರಣ ಬೆಂಗಳೂರಿನ ಕಲ್ಯಾಣನಗರದಲ್ಲಿ ವರದಿಯಾಗಿದೆ. ರಾತ್ರಿ ವೇಳೆ ಮನೆಯೊಂದರ ಬಳಿ ಬಂದ ವ್ಯಕ್ತಿ, ಸಾಮಾನ್ಯರಂತೆ ಬೈಕ್ ನಿಲ್ಲಿಸುತ್ತಾನೆ. ಬಳಿಕ ಸುತ್ತಮುತ್ತ ಯಾರು ಇಲ್ಲದ್ದನ್ನು ಗಮನಿಸಿ ಚೀಲವೊಂದರಲ್ಲಿ ಸಿಲಿಂಡ‌ರ್ ಹಾಕಿಕೊಂಡು ಅಲ್ಲಿಂದ ಪಾರಾರಿಯಾಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಅಡುಗೆ ಮಾಡಲು ಸಮಸ್ಯೆಯಾಗಿದೆ. ದರ ಹೆಚ್ಚಳದಿಂದ ಗ್ರಾಹಕರು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಗ್ಯಾಸ್ ಖರೀದಿಸುತ್ತಿರುವುದೂ ಕಂಡುಬಂದಿದೆ. ಇದೆಲ್ಲದರ ಮಧ್ಯೆ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರ ನಿದ್ದೆಗಡಿಸಿದೆ.

ಬಿಡದಿಯಲ್ಲಿ 8 ಗ್ಯಾಸ್‌ ಸಿಲಿಂಡರ್ ಕದ್ದಿದ್ದ ಆರೋಪಿಗಳ ಬಂಧನ

ರಾಮನಗರ: ಎಲ್‌ಪಿಜಿ ಕೊರತೆ ನಡುವೆ ರಾಜ್ಯದಲ್ಲಿ ಸಿಲಿಂಡರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಲವೆಡೆ ಗ್ಯಾಸ್‌ ಸಿಲಿಂಡರ್‌ಗಳ ಕಳ್ಳತನ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಬಿಡದಿಯಲ್ಲಿ 8 ಸಿಲಿಂಡರ್ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಸುಮಾರು 58 ಸಾವಿರ ರೂ. ಮೌಲ್ಯದ 8 ಗ್ಯಾಸ್‌ ಸಿಲಿಂಡರ್ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಜನವರಿ 23ರಂದು ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಿಕುಪ್ಪೆ ಗ್ರಾಮದ ಮನೆಯೊಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನದಲ್ಲಿದ್ದ 8 ಗ್ಯಾಸ್‌ ಸಿಲಿಂಡರ್‌ಗಳನ್ನು ಕಳ್ಳರು ಕಳ್ಳತನ ಮಾಡಿರುವ ಕುರಿತು ದೂರುದಾರರು ನೀಡಿದ ದೂರಿನ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮೊ. ಸಂ :76/2026, ಕಲಂ: 303(2) BNS ರೀತಿಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಗ್ಯಾಸ್‌ ಸಿಲಿಂಡರ್‌ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 58 ಸಾವಿರ ರೂ. ಮೌಲ್ಯದ, 8 ಗ್ಯಾಸ್‌ ಸಿಲಿಂಡರ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.