ಬೆಂಗಳೂರು: ಸಂಘಟಕ, ಸಾಹಿತಿ ಹಾಗೂ ಪತ್ರಕರ್ತರಾದ ಡಿ.ಎಸ್. ವೀರಯ್ಯ (D S Veeraiah's Book Release) ಅವರ ರಾಷ್ಟ್ರ ಚಿಕಿತ್ಸಕ - ಅಂಬೇಡ್ಕರ್ (ಕನ್ನಡ) ಮತ್ತು Nation's Healer- Ambedkar (ಆಂಗ್ಲ) ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಅಕ್ಟೋಬರ್ 5ರಂದು ಸಂಜೆ 4 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಿ.ಎಸ್.ವಿ. ಫೌಂಡೇಷನ್ ಮತ್ತು ಪಿತಾಮಹ ಪ್ರಕಾಶನ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಲಿದ್ದು, ತಮಿಳುನಾಡು ಹಾಗೂ ಕೇರಳ ರಾಜ್ಯಪಾಲ ವಿಶ್ವನಾಥ ರಾಜೇಂದ್ರ ಅರ್ಲೇಕರ್ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಭಾಗಿಯಾಗಲಿದ್ದಾರೆ. ಕೃತಿಗಳ ಲೇಖಕರಾದ ಡಿ.ಎಸ್.ವೀರಯ್ಯ ಅವರು ಉಪಸ್ಥಿತರಿರಲಿದ್ದು, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಡಿ.ಎಸ್. ವೀರಯ್ಯನವರ ಸಾಹಿತ್ಯಾವಲೋಕನ
ಸಂಜೆ 3 ರಿಂದ 4ರವರೆಗೆ ಡಿ.ಎಸ್. ವೀರಯ್ಯನವರ ಸಾಹಿತ್ಯಾವಲೋಕನ ಕಾರ್ಯಕ್ರಮ ನಡೆಯಲಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.ಎಸ್. ವೀರಯ್ಯ ಅವರ ಕಾವ್ಯಗಳ ಕುರಿತು ಕವಿ ಡಾ. ಸತ್ಯಮಂಗಲ ಮಹಾದೇವ, ಡಿ.ಎಸ್. ವೀರಯ್ಯನವರ ಕಥೆಗಳ ಕುರಿತು ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ. ಎಚ್.ಎನ್. ಸತೀಶ್ ಹಾಗೂ ಡಿ.ಎಸ್. ವೀರಯ್ಯನವರ ಅಂಕಣ ಬರಹಗಳು ಮತ್ತು ಸಮಾಜಮುಖಿ ಚಿಂತನೆ ಕುರಿತು ಹಂಪಿ ವಿವಿ ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಮಾತನಾಡಲಿದ್ದಾರೆ.