ಬೆಂಗಳೂರು: ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ಜವಾಬ್ದಾರಿ ಹೊಂದಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲೇ (ಡಿಸಿಆರ್‌ಇ) ಈಗ ಜಾತಿ ನಿಂದನೆ ಮತ್ತು ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಮೇಲ್ಜಾತಿ ಅಧಿಕಾರಿಗಳು ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪಶ್ಚಿಮ ವಲಯದ ಡಿಸಿಆರ್‌ಇ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಅವರು ಇಲಾಖೆಯ ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಕೇಂದ್ರ ಕಚೇರಿಯ ಎಸ್‌ಪಿ ಕರಿಬಸನಗೌಡ ಹಾಗೂ ಡಿವೈಎಸ್‌ಪಿ ಮಹೇಶ್ವರಗೌಡ ವಿರುದ್ಧ ಇನ್ಸ್‌ಪೆಕ್ಟರ್ ಶ್ರೀನಿವಾಸ್ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋ ಒಂದನ್ನು ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಡಿಸಿಆರ್‌ಇ ಡಿಜಿ - ಐಜಿಪಿ ಉಮೇಶ್ ಅವರನ್ನು ಉಲ್ಲೇಖಿಸಿ ವಿಡಿಯೊದಲ್ಲಿ ಮಾತನಾಡಿರುವ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಸರ್... ಪೊಲೀಸ್ ಇಲಾಖೆಯಲ್ಲಿ ದಲಿತರ ಪರ ಕೆಲಸ ಮಾಡುವುದು ದೊಡ್ಡ ತಪ್ಪು ಅಂತ ಅನಿಸುತ್ತದೆ. ಮೊನ್ನೆ ತಾವೇ ಆದೇಶ ಮಾಡಿ ಮಾ.24 ಕ್ಕೆ ಉಡುಪಿಗೆ ವರ್ಗಾವಣೆ ಮಾಡಿದ್ದಿರಿ. ಅದರ ವಿರುದ್ಧ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೂಲಕ ಸ್ಟೇ ತಂದಿದ್ದೇನೆ. ನನಗೆ ಅಧಿಕೃತವಾಗಿ ಡಿಸಿಆರ್‌ಇನಿಂದ ಯಾರೂ ಬಿಡುಗಡೆ ಮಾಡಿಲ್ಲ. ಆದರೆ ಎಸ್‌ಪಿ ಕರಿಬಸವನಗೌಡರು ಹಾಗೂ ಡಿವೈಎಸ್‌ಪಿ ಮಹೇಶ್ವರ ಗೌಡ ಅವರು, ಕೆಇಟಿ ಆದೇಶಕ್ಕೆ ವಿರುದ್ಧವಾಗಿ ಬಿಡುಗಡೆ ಮಾಡಿದ್ದೇವೆಂದು ನಕಲಿ ದಾಖಲೆ ಸೃಷ್ಟಿಸಿ ಕಳುಹಿಸಿದ್ದಾರೆ. ತಾವು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಕೋರಿದ್ದಾರೆ.
ಎಸ್‌ಸಿ ಎಸ್‌ಟಿ ಆಯೋಗ, ಸದನ ಸಮಿತಿಗೂ ಪತ್ರ ಕೊಟ್ಟಿದ್ದೇನೆ. ಕುಂದು ಕೊರತೆ ಬಗ್ಗೆ ತನಿಖೆ ಆಗಲಿ ಅಂತ 18 ಅಂಶಗಳ ಮನವಿ ಮಾಡಿದ್ದೇನೆ. ಇದಕ್ಕೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ದಲಿತ ಅಧಿಕಾರಿಗೆ ಕರ್ನಾಟಕ ಸರ್ಕಾರದಲ್ಲಿ ರಕ್ಷಣೆ ಇಲ್ಲದ ಹಾಗಾಗಿದೆ. ನಮ್ಮಲ್ಲಿ ಎಲ್ಲ ಕರಿಬಸವನಗೌಡ, ಮಹೇಶ್ವರ ಗೌಡ ಇವರದ್ದೇ ನಡೆಯುತ್ತಾ ಇದೆ. ಪಾರದರ್ಶಕವಾಗಿ ನಾನು ಕೆಲಸ ಮಾಡಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅವಘಡ ಆಗುವುದಕ್ಕೆ ಕಾರಣ ಮಾಡಿಕೊಡಬೇಡಿ ಎಂದು ಫ್ಯಾನ್ ಕಡೆ ಕೈ ತೋರಿಸಿದ್ದಾರೆ. ಏನಾದರೂ ಒಳಸಂಚು ಮಾಡಿ, ನನ್ನ ವಿರುದ್ಧ ಷಡ್ಯಂತ್ರ ಮಾಡಿದರೆ ಅದು ತೀವ್ರ ಪರಿಣಾಮಕ್ಕೆ ಕಾರಣ ಆಗುತ್ತೆ ಎಂದು ನೊಂದ ಧ್ವನಿಯಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
Mangaluru commissioner: ಮಂಗಳೂರು ಕಮಿಷನರ್ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಗಂಭೀರ ಆರೋಪ, ಡಿಜಿಪಿಗೆ ಪತ್ರ
ಕೆಎಟಿ ಆದೇಶ ಬರುವವರೆಗೂ ದಯವಿಟ್ಟು ಸುಮ್ಮನಿರಿ, ಆಮೇಲೆ ಅದರಂತೆ ಕಾನೂನಿಗೆ ನಾನೂ ತಲೆಬಾಗುತ್ತೇನೆ ಎಂದು ಡಿಜಿ ಹಾಗೂ ಐಜಿಪಿ ಆಗಿರುವ ಉಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ. ಯಾವುದೇ ಅವಘಡಕ್ಕೂ ತಾವೇ ನೇರ ಹೊಣೆಗಾರರು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.