ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಒಂದು ವಾರಗಳ ಕಾಲ ʼನಾಡಹಬ್ಬ ದಸರಾʼವನ್ನು ಅದ್ಧೂರಿಯಾಗಿ ಆಚರಿಸಿ, ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಲಾಯಿತು. ದೇಶ-ವಿದೇಶಗಳ ಪ್ರಯಾಣಿಕರಿಗೆ ಕರ್ನಾಟಕದ ಅನನ್ಯ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ಈ ಮೂಲಕ ಲಭ್ಯವಾಯಿತು.
ಟರ್ಮಿನಲ್‌ಗಳಲ್ಲಿ ಕರ್ನಾಟಕದ ಕಲಾ ವೈಭವ
ಸೆಪ್ಟೆಂಬರ್ 22ರಿಂದ ಸೆಪ್ಟೆಂಬರ್ 29ರವರೆಗೆ, ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲೂ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿತ್ತು. ಟರ್ಮಿನಲ್‌ಗಳಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಮೂಲಕ ಈ ಆಚರಣೆಯು ಅಪ್ಪಟ ಕರ್ನಾಟಕದ ಕಲೆ, ಸಂಸ್ಕೃತಿಗಳನ್ನು ಸಾರುವ ವೇದಿಕೆಯಾಯಿತು. ಜತೆಗೆ, ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಯಾಣಿಕರಿಗಷ್ಟೇ ಅಲ್ಲದೆ, ಬೆಂಗಳೂರು ನಗರದ ನಾಗರಿಕರಿಗೂ ಮುಕ್ತ ಮತ್ತು ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರು ನಗರದಿಂದ ಆಗಮಿಸಿದ್ದ ನಾಗರಿಕರು ವಿಮಾನ ಟಿಕೆಟ್ ಇಲ್ಲದೆಯೂ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಸ್ವಾದಿಸಿ ಸಂಭ್ರಮಿಸಿದರು.

ಕಲಾ ಪ್ರದರ್ಶನಗಳ ಮೂಲಕ ಭವ್ಯ ಪ್ರಾರಂಭ
ನಾಡಹಬ್ಬ ದಸರಾ ಆಚರಣೆಯು ಕಣ್ಮನ ಸೆಳೆಯುವ ಜಾನಪದ ಕಲಾ ಪ್ರದರ್ಶನಗಳ ಮೂಲಕ ಭವ್ಯವಾಗಿ ಪ್ರಾರಂಭಗೊಂಡಿತು. ವೀರಾವೇಶಭರಿತ ಡೊಳ್ಳು ಕುಣಿತದ ಲಯಬದ್ಧ ಸದ್ದು ಮತ್ತು ಕಲಾವಿದರ ಶಕ್ತಿಪೂರ್ಣ ಹೆಜ್ಜೆಗಳು ವೀಕ್ಷಕರನ್ನು ರೋಮಾಂಚನಗೊಳಿಸಿದರೆ, ಬೃಹತ್ ಗಾತ್ರದ ಗಾರುಡಿ ಗೊಂಬೆಗಳ ನೃತ್ಯವು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಗಮನ ಸೆಳೆಯಿತು. ಇದರ ಜತೆಗೆ, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ಬೇಡರ ನೃತ್ಯ ಮತ್ತು ತಮಟೆ ವಾದ್ಯಗಳ ಪ್ರದರ್ಶನಗಳು ನಡೆದವು.
ಕೆಐಎಎಫ್ ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ
ಅಷ್ಟೇ ಅಲ್ಲದೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (ಕೆಐಎಎಫ್) ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ, ನೃತ್ಯಗಂಗಾ ಪ್ರದರ್ಶಕ ಕಲಾ ಕೇಂದ್ರದಿಂದ ದಸರಾ ವೈಭವ ಪ್ರದರ್ಶನಗಳು ದಸರಾ ಸಂಭ್ರಮವನ್ನು ಹೆಚ್ಚಿಸಿದವು. ಶಾಸ್ತ್ರೀಯ ಸಂಯೋಜನೆಯ ಮೂಲಕ ನವರಾತ್ರಿಯ ಕಥಾ ವರ್ಣನೆ, ಸುಗಮ ಸಂಗೀತ, ಕಂಸವಧೆ ಯಕ್ಷಗಾನ ಪ್ರಸಂಗ, ವಾದ್ಯಗೋಷ್ಠಿ ಹಾಗೂ ಭರತನಾಟ್ಯ ನೃತ್ಯರೂಪಕದಂತಹ ವೈವಿಧ್ಯಮಯ ಕಾರ್ಯಕ್ರಮಗಳು ವೀಕ್ಷಕರಿಗೆ ಕರ್ನಾಟಕದ ಸಾಂಸ್ಕೃತಿಕ ಸೊಬಗನ್ನು ತಲುಪಿಸಲು ಯಶಸ್ವಿಯಾದವು.
ಟರ್ಮಿನಲ್ 2 ರ ಕಲಾ ಕಾರ್ಯಕ್ರಮದ ಭಾಗವಾಗಿರುವ ಹೂವಿನಹಳ್ಳಿ ಗ್ರಾಮದ 9ನೇ ತಲೆಮಾರಿನ ಗೊಂಬೆಯಾಟದ ಕಲಾವಿದರಾದ ಶ್ರೀ ಗುಂಡುರಾಜು ಅವರು ಸಾಂಪ್ರದಾಯಿಕ ತೊಗಲು ಗೊಂಬೆಯಾಟವನ್ನು ಪ್ರಸ್ತುತಪಡಿಸುವ ಮೂಲಕ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಅಮರ ಕಥೆಗಳು ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಪ್ರತಿಯೊಂದು ಪ್ರದರ್ಶನಗಳು ಮನರಂಜನೆಯ ಜತೆಗೆ, ನಮ್ಮ ನಾಡಿನ ಸಾಂಸ್ಕೃತಿಕ ಬೇರುಗಳ ಪರಿಚಯವನ್ನೂ ಮಾಡಿಕೊಟ್ಟವು. ಈ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕೇವಲ ಪ್ರಯಾಣದ ಕೇಂದ್ರವಾಗಷ್ಟೇ ಆಗಿರದೇ, ಕಲೆ ಮತ್ತು ಸಂಸ್ಕೃತಿಯ ಹೆಬ್ಬಾಗಿಲು ಎಂಬುದನ್ನು ನಿರೂಪಿಸಿತು. ಜೊತೆಗೆ, ಅಂತಾರಾಷ್ಟ್ರೀಯ ಸಂಜ್ಞಾ ಭಾಷಾ ದಿನ ಮತ್ತು ಶ್ರವಣದೋಷವುಳ್ಳವರ ವಾರಗಳಿಗೆ ದಸರಾ ಶುಭಕೋರುವ ಮೂಲಕ ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರತಿಬಿಂಬಿಸಿತು.
ಈ ಸುದ್ದಿಯನ್ನೂ ಓದಿ | Mysuru Dasara 2025: ಮೈಸೂರು ಅರಮನೆಯಲ್ಲಿ ‘ಆಯುಧ ಪೂಜೆ’ ನೆರವೇರಿಸಿದ ಯದುವೀರ್ ಒಡೆಯರ್
ಪ್ರಯಾಣಿಕರಿಗೆ ಸಾಂಸ್ಕೃತಿಕ ಸ್ವಾಗತ ಮತ್ತು ಅನುಭವ
ವಿವಿಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ಗಳಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತ ಸ್ವಾಗತ ನೀಡಿದವು. ಈ ಮೂಲಕ, ವಿಮಾನ ನಿಲ್ದಾಣವು ಕೇವಲ ಪ್ರಯಾಣದ ಕೇಂದ್ರವಾಗದೆ, ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿತು. ವಿವಿಧ ರಾಜ್ಯ ಮತ್ತು ದೇಶಗಳ ಪ್ರಯಾಣಿಕರಿಗೆ ಕರ್ನಾಟಕದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಭ್ರಮದಲ್ಲಿ ಭಾಗಿಯಾಗಲು ಇದೊಂದು ವಿಶಿಷ್ಟ ಅವಕಾಶವಾಗಿತ್ತು. ಬಿಡುವಿಲ್ಲದ ಪ್ರಯಾಣದ ನಡುವೆ ಸಿಕ್ಕ ಈ ಹಬ್ಬದ ವಾತಾವರಣವು, ಪ್ರಯಾಣಿಕರಿಗೆ ಹೊಸ ಉತ್ಸಾಹವನ್ನು ತುಂಬಿತು.