ನವ ದೆಹಲಿ: ಮತಗಳ್ಳತನ ವಿರೋಧಿಸಿ ನಾಳೆ ಕಾಂಗ್ರೆಸ್ ವತಿಯಿಂದ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶನಿವಾರ ರಾತ್ರಿ ನವದೆಹಲಿ ತಲುಪಿದ್ದಾರೆ. ದೆಹಲಿ ಪ್ರವಾಸದ ಬಗ್ಗೆ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೋಟ್ ಚೋರಿ ವಿರುದ್ಧ ನಾಳೆ ನಡೆಯುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಕರ್ನಾಟಕ ಸೇರಿ ದೇಶದ ವಿವಿಧೆಡೆಯಿಂದ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿದ್ದಾರೆ. ಹೀಗಾಗಿ ನಾನೂ ಬಂದಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ವೋಟ್ ಚೋರಿ ನಡೆದಿದೆ. ಈ ಕುರಿತು ನಮ್ಮ ನಾಯಕ ರಾಹುಲ್ ಗಾಂಧಿ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಇನ್ನೂ ಸಮರ್ಪಕ ಮಾಹಿತಿ ಕೊಟ್ಟಿಲ್ಲ. ಮೃತಪಟ್ಟಿದ್ದಾರೆ ಎಂದು ಮತಪಟ್ಟಿಯಿಂದ ಹೆಸರು ತೆಗೆದವರನ್ನೂ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಒಂದೇ ಮನೆಯಲ್ಲಿ 80 ವೋಟು ಇದ್ದದ್ದನ್ನು ನಾವು ನೋಡಿದ್ದೇವೆ. ವೋಟ್ ಚೋರಿ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ನಾಳೆ ರಾಮಲೀಲಾ ಮೈದಾನದಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾಳೆ ಸೋನಿಯಾ ಗಾಂಧಿ ಭೇಟಿಗೆ ಸಮಯ ನಿಗದಿಯಾಗಿದೆಯೇ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಮಧ್ಯಾಹ್ನ ಕಾಂಗ್ರೆಸ್ ಕಚೇರಿ ಇಂದಿರಾ ಭವನಕ್ಕೆ ಹೋಗುತ್ತಿದ್ದೇವೆ, ಅಲ್ಲಿ ನಮ್ಮ ನಾಯಕರ ಜತೆ ಚರ್ಚೆ ನಡೆಸುತ್ತೇವೆ. ಅಲ್ಲಿ ಎಲ್ಲರೂ ಸಿಗುತ್ತಾರೆ. ಇನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ತಮಗೆ ಬಂದಿರುವ ಸಮನ್ಸ್ ಬಗ್ಗೆ ವಿವರಗಳನ್ನು ಸಿದ್ಧಪಡಿಸಬೇಕಾಗಿದೆ. ತಮಗೆ ಸಮಯಾವಕಾಶ ಕಡಿಮೆಯಿದೆ ಎಂದು ತಿಳಿಸಿದರು.