ಬೆಂಗಳೂರು, ಮಾ. 26: ಬೆಂಗಳೂರು ನಗರದ ಹಿತಕ್ಕೆ ನಾವು ಕೈಗೊಂಡಿರುವ ಅನೇಕ ತೀರ್ಮಾನಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಬಹುದು, ಮಾಡಲಿ. ಆದರೆ ಮುಂದಿನ ಐದು ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಉತ್ತಮ ನಿರ್ಧಾರ ಕೈಗೊಂಡರು ಎಂದು ಹೇಳುತ್ತಾರೆ. ನನಗೆ ಅಷ್ಟೇ ಸಾಕು. ಈಗ ನಾನು ಬೇರೆಯವರಿಗೆ ಒಪ್ಪಿಸಲು ಆಗದೇ ಇರಬಹುದು. ಆದರೆ ಸಮಯ ಬಂದಾಗ ಅವರು ಒಪ್ಪುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar), ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಚಾರವಾಗಿ ನಡೆದ ಚರ್ಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಉತ್ತರಿಸಿದರು.
ಜಿಬಿಎ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಅನೇಕ ಚರ್ಚೆ ನಡೆಸಿದ್ದಾರೆ. ಅರ್. ಅಶೋಕ್, ಅಶ್ವಥ್ ನಾರಾಯಣ್ ಅನೇಕ ಸಲಹೆ ನೀಡಿದ್ದಾರೆ. ಇವರ ಸಲಹೆಗಳನ್ನು ನಾನು ಒಪ್ಪುತ್ತೇನೆ. ಜತೆಗೆ ಟೀಕೆಯನ್ನೂ ಸಹ ಮಾಡಿದ್ದಾರೆ. ನಾನು ಟೀಕೆಯನ್ನು ಯಾವಾಗಲೂ ಸ್ವೀಕಾರ ಮಾಡುವವನು. ಟೀಕೆ ಇಲ್ಲದೇ ಹೋದರೆ ಯಾವುದೇ ಮನುಷ್ಯನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಚಿನ್ನ ಪರೀಕ್ಷೆ ಮಾಡುವಾಗ ಬೆಂಕಿಗೆ ಹಾಕುತ್ತಾರೆ. ಮನುಷ್ಯನನ್ನು ಪರೀಕ್ಷೆ ಮಾಡುವಾಗ ಟೀಕೆಗಳು, ಆಪಾದನೆ ಮಾಡುತ್ತಾರೆ. ಇದನ್ನು ನಾವು ಯಾವ ರೀತಿ ತಿದ್ದಿಕೊಳ್ಳಬೇಕು ಎಂಬುದು ಇಲ್ಲಿ ಮುಖ್ಯವಾದುದು. ಟೀಕೆ ಮಾಡಿದರು ಎಂದ ತಕ್ಷಣ ನಾನು ಸಿಟ್ಟು ಮಾಡಿಕೊಳ್ಳುವುದು ಮಾಡುವುದಿಲ್ಲ ಎಂದರು.
ಈ ಸದನದಲ್ಲಿ ಈ ಹಿಂದೆ ಇದ್ದ ನಾಯಕರಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಲಕ್ಕಪ್ಪ, ಮೇಲ್ಮನೆಯಲ್ಲಿ ನಾಣಯ್ಯ, ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ ಸೇರಿ ಅನೇಕರು ಚೆನ್ನಾಗಿ ಚರ್ಚೆ ಮಾಡುತ್ತಿದ್ದರು. ಆಗಿನ ಚರ್ಚೆ ಸಕಾರಾತ್ಮಕವಾಗಿ ನಡೆಯುತ್ತಿತ್ತು. ಚರ್ಚೆ ಈಗ ನಕರಾತ್ಮಕವಾಗಿ ಹೋಗುತ್ತಿದೆ. Positive thinkers always have a solution for every problem. Negative thinker always have problem for every solution. ಧನಾತ್ಮಕ ಎಂಬುದು ಯಾವಾಗಲೂ ಇರಬೇಕು. ಆಸಕ್ತಿ ಪಟ್ಟು ಬೆಂಗಳೂರು ಅಭಿವೃದ್ದಿ ಖಾತೆಯನ್ನು ವಹಿಸಿಕೊಂಡಿದ್ದೇನೆ. ನಾನು ಈ ಹಿಂದೆ ನಗರಾಭಿವೃದ್ದಿ ಸಚಿವನಾಗಿದ್ದೆ, ಇಂಧನ ಸಚಿವನಾಗಿದ್ದೆ, ನನಗೆ ಈಗ ಸಾಕಷ್ಟು ಅನುಭವ ಹೊಂದಿದ್ದು ಬೆಂಗಳೂರಿನಲ್ಲೂ ಬದಲಾವಣೆ ಮಾಡಬೇಕು ಎಂದು ಹೊರಟಿದ್ದೇನೆ. ಆದರೂ ಒಂದಷ್ಟು ಜನ ತಪ್ಪು ಕಂಡುಹಿಡಿದರು. ಇದು ವಿರೋಧ ಪಕ್ಷದ ಕರ್ತವ್ಯವೂ ಹೌದು ಎಂದರು.
ಜಿಬಿಎ ಪಾಲಿಕೆಗಳ ಬಜೆಟ್; ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ. ಶಿವಕುಮಾರ್
ನಾನು ಬೆಂಗಳೂರು ಅಭಿವೃದ್ಧಿ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ಮೇಲೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೇನೆ. ಆಗ 70 ಲಕ್ಷ ಇದ್ದ ಜನಸಂಖ್ಯೆ ಈಗ 1.40 ಕೋಟಿ ಆಗಿದೆ. 1.30 ಲಕ್ಷ ವಾಹನಗಳಿವೆ. ಬೇರೆ ನಗರಗಳಲ್ಲಿ ದೊಡ್ಡ ರಸ್ತೆಗಳು ಶೇ. 16ರಷ್ಟಿವೆ. ನಮ್ಮಲ್ಲಿ ಶೇ. 8ರಷ್ಟು ಮಾತ್ರ ಇದೆ. ಈ ಹಿಂದೆ ನೈಸ್ ರಸ್ತೆ ಮಾಡಿದರೂ ಪೂರ್ಣಗೊಳಿಸಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆ ಅಂದು ಮಾಡಿದ್ದರೆ 3 ಸಾವಿರ ಕೋಟಿ ರುಪಾಯಿಗೆ ಮುಗಿದು ಹೋಗುತ್ತಾ ಇತ್ತು. ಈ ಎಲ್ಲ ಕಾರಣಗಳಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದರು.
ಬೆಂಗಳೂರು ನಗರದ ಆಡಳಿತ ಸುಧಾರಣೆಗಾಗಿ 2025 ಮೇ 15ರಂದು ಹೊಸ ನೋಟಿಫಿಕೇಶನ್ ಮಾಡಿ ಪ್ರಸ್ತುತ ಇರುವ ಪ್ರದೇಶಗಳನ್ನು ಸೇರಿ ಐದು ಪಾಲಿಕೆಗಳನ್ನು ಮಾಡಲಾಯಿತು. ಸೆಪ್ಟೆಂಬರ್ 2ರಂದು 74ನೇ ತಿದ್ದುಪಡಿ ತರಬೇಕು ಎಂದು ಹೊರಡಲಾಯಿತು. ಏಕಾಏಕಿ ತೀರ್ಮಾನ ಮಾಡಲಿಲ್ಲ. ವಿರೋಧ ಪಕ್ಷದ ನಾಯಕರ ಮಾತಿನಂತೆ ಸದನ ಸಮಿತಿ ರಚನೆ ಮಾಡಿ ಅವರು ನೀಡಿದ ಸಲಹೆಗಳನ್ನು ತೆಗೆದುಕೊಳ್ಳಲಾಯಿತು. ಇದರಲ್ಲಿ ತಪ್ಪುಗಳಿದ್ದರೆ ಅದನ್ನೂ ಸಹ ತಿದ್ದುಪಡಿ ಮಾಡಲಾಗುವುದು. ಈಗ 369 ವಾರ್ಡ್‌ಗಳನ್ನು ಮಾಡಲಾಗಿದೆ. ಬೆಂಗಳೂರನ್ನು ಯಾವುದೇ ಕಾರಣಕ್ಕೂ ಒಡೆಯುತ್ತಿಲ್ಲ. ಇದು ಆಡಳಿತದ ವಿಕೇಂದ್ರಿಕರಣ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಅದಕ್ಕೆ ಸರ್ಕಾರ ಸಹಾಯ ಬೇಕಾಗುತ್ತದೆ ಅದಕ್ಕೆ ಜಿಬಿಎಗೆ ಮುಖ್ಯಮಂತ್ರಿಯವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಬೆಂಗಳೂರಿಗೆ ಪ್ಲಾನಿಂಗ್ ಅಥಾರಿಟಿ ಇರಲಿಲ್ಲ ಅದನ್ನು ಸಹ ಬಗೆಹರಿಸಲಾಗಿದೆ. ಜಿಬಿಎ ಇದರ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಮೋದಿಯವರು ಏಕೆ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಕರೆದರು. ಭವಿಷ್ಯದ ಎಲ್ಲಾ ಸವಾಲುಗಳಿಗೆ ಬೆಂಗಳೂರನ್ನು ಸಿದ್ದತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಹೇಳಿದ್ದರು. ಜಾಗತಿಕ ನಾಯಕರು ಮೊದಲು ದೆಹಲಿಗೆ ಬರುತ್ತಿದ್ದರು ಈಗ ಸಮಯ ಬದಲಾಗಿದೆ ಮೊದಲು ಬೆಂಗಳೂರಿಗೆ ಬರುತ್ತಾರೆ ಎಂದಿದ್ದರು. ಇದು ಕೇವಲ ನಮ್ಮಿಂದ ಮಾತ್ರವಲ್ಲ, ಪ್ರತಿಭಾವಂತ ಯುವಕರು, ನಾಗರೀಕರು ಎಲ್ಲಾ ಸರ್ಕಾರಗಳಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಬೆಂಗಳೂರು ನನಗೆ ಎಲ್ಲವನ್ನು ಕೊಟ್ಟಿದೆ ಇದೆ
ನಾನು ಬೆಂಗಳೂರಿನ ಶಾಸಕರಿಗೆ ಸಭೆಗಳಲ್ಲಿ ಒಂದು ಮಾತು ಹೇಳುತ್ತೇನೆ. ನಾನು ಬೇರೆ ಕಡೆಯಿಂದ ಬಂದವನು ಎಂದು ಭಾವಿಸಬೇಡಿ. ಬೆಂಗಳೂರು ಕರ್ನಾಟಕ ರಾಜ್ಯದ ಹೃದಯ ಎಂದು ಹೇಳಿದ್ದೇನೆ. ನಾನು ಬೆಂಗಳೂರಿನಲ್ಲಿ ಹುಟ್ಟಿಲ್ಲದಿರಬಹುದು. ಕನಕಪುರದಲ್ಲಿ ಹುಟ್ಟಿದರೂ ಅದು ಬೆಂಗಳೂರಿನ ಭಾಗ. ನನ್ನ 6ನೇ ವಯಸ್ಸಿಗೆ ಬೆಂಗಳೂರಿಗೆ ಬಂದವನು ಇಲ್ಲಿಯವರೆಗೂ ಇಲ್ಲೇ ನೆಲೆಸಿದ್ದೇನೆ. ಬೆಂಗಳೂರು ನನಗೆ ಎಲ್ಲವನ್ನು ಕೊಟ್ಟಿದ್ದು, ಬೆಂಗಳೂರಿಗೆ ನಾನು ಸ್ವಲ್ಪವಾದರೂ ಕೊಡುಗೆ ನೀಡಬೇಕು. ನಾನು ಇಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ನಾನು ಹೆಚ್ಚು 10-15 ವರ್ಷ ರಾಜಕೀಯ ಮಾಡಬಹುದು. ನಮಗೆ ಸಿಕ್ಕ ಅವಕಾಶದಲ್ಲಿ ಏನಾದರೂ ಕೊಡುಗೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ. ನಾನೊಬ್ಬನೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ನನ್ನ ಜತೆಗೆ ನೀವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ರಸ್ತೆ ವಿಸ್ತರಣೆ ಅಸಾಧ್ಯ
ಸಂಚಾರ ದಟ್ಟಣೆ ಬಗ್ಗೆ ನಮ್ಮ ಬಗ್ಗೆಯೇ ಹೆಚ್ಚು ಸುದ್ದಿ. ಮುಂಬೈ, ಹೈದರಾಬಾದ್, ದೆಹಲಿಯಲ್ಲಿ ನಮಗಿಂತ ಕೆಟ್ಟದಾಗಿ ಇದ್ದರೂ ನಮ್ಮ ಬಗ್ಗೆಯೇ ಹೆಚ್ಚು ಸುದ್ದಿ. ಟ್ರಾಫಿಕ್ ವಿಚಾರದಲ್ಲಿ ಅನೇಕ ಕ್ರಮ ಕೈಗೊಂಡಿದ್ದೇವೆ. ಬೆಂಗಳೂರಿನಲ್ಲಿ ಇರುವ ರಸ್ತೆ ಪ್ರಮಾಣ ಕೇವಲ 8% ಮಾತ್ರ. ರಸ್ತೆ ಅಗಲೀಕರಣ ಮಾಡಬೇಕು, 2013ರಲ್ಲಿ ಪರಿಹಾರ ವಿಚಾರವಾಗಿ ಬಂದ ಕಾಯ್ದೆ ಬಂದ ನಂತರ ಪರಿಹಾರ 2 ಪಟ್ಟು ನೀಡಬೇಕು. ಹೀಗಾಗಿ ರಸ್ತೆ ಅಗಲೀಕರಣ ಅಸಾಧ್ಯ. ಹೀಗಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೇವೆ. ಈ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಕೈಬಿಡಲು ಆಗುವುದಿಲ್ಲ. ಅಲ್ಲಿನ ಭೂ ಮಾಲೀಕರಿಗೆ 2013ರ ಕಾಯ್ದೆ ಅನ್ವಯ ಪರಿಹಾರ ನೀಡಿದ್ದೇವೆ. ಪರಿಹಾರಕ್ಕೆ 5 ಅವಕಾಶಗಳನ್ನು ನೀಡಿದ್ದೇವೆ. ಮೊದಲ ಹಂತದ ಯೋಜನೆ ಜಾರಿಗೆ 80% ಭೂಸ್ವಾಧೀನ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ. ಸಧ್ಯದಲ್ಲೇ ಟೆಂಡರ್ ಕರೆಯಲಾಗುವುದು. ಈ ರಸ್ತೆ ಆದರೆ ಬೆಂಗಳೂರಿನಲ್ಲಿ ಅರ್ಧ ಸಂಚಾರಿ ದಟ್ಟಣೆ ನಿವಾರಣೆಯಾಲಿದೆ. ಈ ಯೋಜನೆಗೆ ಒಂದೇ ದಿನದಲ್ಲಿ 26 ಸಾವಿರ ಕೋಟಿ ಸಾಲ ನೀಡಲು ಮುಂದಾದ ಹುಡ್ಕೋಗೆ ಧನ್ಯವಾದಗಳು ಎಂದು ತಿಳಿಸಿದರು.
"ಬೇಕಾದಷ್ಟು ನನ್ನ ಚಚ್ಚವ್ರೆ...": ಅಧಿವೇಶನದ ವೇಳೆ ಡಿ.ಕೆ. ಶಿವಕುಮಾರ್ ಬೇಸರ
ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ಉತ್ತಮ ಆಯ್ಕೆ
ನಗರದ ಒಳಗೆ ರಸ್ತೆ ಅಗಲೀಕರಣ ಅಸಾಧ್ಯವಾಗಿರುವುದರಿಂದ ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ, ಪ್ರಧಾನಮಂತ್ರಿಯನ್ನು ಭೇಟಿ ಮಾಡಿ, ಟನಲ್ ರಸ್ತೆ ಮಾಡಲು ಮುಂದಾಗಿದ್ದೇವೆ. ಮುಂಬೈಯಲ್ಲಿ 6-7 ಟನಲ್ ರಸ್ತೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಇದರ ಹೊರತಾಗಿ ಬೇರೆ ಆಯ್ಕೆಗಳಿಲ್ಲ. ಟನಲ್ ರಸ್ತೆಯಲ್ಲಿ ಕೆಲವು ಪಾಯಿಂಟ್‌ಗಳಲ್ಲಿ 2-3 ಸಾವಿರ ಕೋಟಿ ಭೂಸ್ವಾಧೀನಕ್ಕೆ ಬೇಕಾಗುತ್ತದೆ. ಅದರ ಹೊರತಾಗಿ 17 ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಬೇಕಾಗುತ್ತದೆ. ಬೇರೆ ರಾಜ್ಯಗಳಲ್ಲಿ ಟನಲ್ ರಸ್ತೆಗೆ ಆಗಿರುವ ಟೆಂಡರ್‌ಗೂ ನಮ್ಮ ಟೆಂಡರ್‌ಗೂ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿ 700-800 ಕೋಟಿ ರುಪಾಯಿ ಪ್ರತಿ ಕಿ.ಮೀ.ಗೆ ವೆಚ್ಚವಾಗಲಿದ್ದು, ಬೇರೆ ರಾಜ್ಯಗಳಲ್ಲಿ 1300-1400 ಕೋಟಿ ವೆಚ್ಚವಾಗಿದೆ ಎಂದು ವಿವರಿಸಿದರು.
ಆಸ್ತಿ ದಾಖಲೆ ಡಿಜಿಟಲಿಕರಣ, ಇ-ಖಾತಾ ಸೌಲಭ್ಯ
ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಭೂಮಿ ಯೋಜನೆ ತಂದು ಪಹಣಿಗಳನ್ನು ಸರಿಪಡಿಸುವ ಯೋಜನೆ ಮಾಡಿದೆವು. ನಗರ ಪ್ರದೇಶದಲ್ಲಿ ಇದನ್ನು ಮಾಡಲು ಆಗಿರಲಿಲ್ಲ. ನಾನು ಅಧಿಕಾರ ವಹಿಸಿಕೊಂಡ ಬಳಿಕ ನೋಡಿದಾಗ ಬಿಡಿಎ ಹಾಗೂ ಪಾಲಿಕೆಗಳಲ್ಲಿ ದಾಖಲೆ ತಿದ್ದುವುದೇ ಕೆಲಸವಾಗಿದೆ. ಇದರಲ್ಲಿ ರಾಜಕೀಯದವರು, ಅಧಿಕಾರಿಗಳು ಸೇರಿಕೊಂಡಿದ್ದಾರೆ. ಹೀಗಾಗಿ ಆಸ್ತಿ ದಾಖಲೆ ಡಿಜಿಟಲ್ ಗೊಳಿಸಲು ಕೋಟ್ಯಂತರ ಪುಟಗಳ ದಾಖಲೆಯನ್ನು ಸ್ಕ್ಯಾನ್ ಮಾಡಿಸಲಾಗಿದೆ. ಇದಕ್ಕಾಗಿ ಇ ಖಾತೆ ತಂದಿದ್ದೇವೆ. ತೆರಿಗೆ ಸೋರಿಕೆ ತಡೆಗಟ್ಟಲು, ವಂಚನೆ ತಪ್ಪಿಸಲು ನಾವು ಆಸ್ತಿ ದಾಖಲೆಗಳಿಗೆ ಆಧಾರ್ ಕಾರ್ಡ್ ಜೋಡಿಸುತ್ತಿದ್ದೇವೆ. ಈ ವಿಚಾರವಾಗಿ ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ಮಾಡಲಿ, ಟೀಕೆ ಮಾಡುವುದು ತಪ್ಪಲ್ಲ. ನಾವು ಕೈಗೊಂಡಿರುವ ಕ್ರಮ ನೋಡಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ ಎಂದು ತಿಳಿಸಿದ್ದಾರೆ.
25 ಲಕ್ಷ ಆಸ್ತಿಗಳು ಬೆಂಗಳೂರು ನಗರದಲ್ಲಿವೆ. ಅದರಲ್ಲಿ 9 ಲಕ್ಷ ಎ ಖಾತಾಗಳನ್ನು ನೀಡಿದ್ದೇವೆ. ಡ್ರೋನ್ ಸರ್ವೆ ಬಗ್ಗೆ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರ ಸಲಹೆಗಳನ್ನು ಸ್ವೀಕರಿಸಿ, ಡ್ರೋನ್ ಸರ್ವೆಯಲ್ಲಿ ತಪ್ಪಿದ್ದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತೇವೆ. ನಾವು ಆಸ್ತಿ ದಾಖಲೆಗಳನ್ನು ಹಾಗೂ ಆ ಜಾಗವನ್ನು ಮಾತ್ರ ಸರಿಪಡಿಸುತ್ತಿದ್ದು, ಅದರಲ್ಲಿ ಕಟ್ಟಿರುವ ಕಟ್ಟಡವನ್ನು ರೆಗ್ಯುಲರೈಸ್ ಮಾಡುತ್ತಿಲ್ಲ. ಇನ್ನು ಈ ಹಿಂದೆ ಮಾಡಿದ ಬಡಾವಣೆಗಳಲ್ಲಿ ರಸ್ತೆ ಜಾಗದ ಪಹಣಿಯಲ್ಲಿ ಹಳೇ ಮಾಲೀಕರ ಹೆಸರು ಇದ್ದವು. ಇದಕ್ಕೆ ಕಾನೂನು ತಂದು ನಗರದ ಎಲ್ಲಾ ರಸ್ತೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರಲಾಗಿದೆ. 1.20 ಲಕ್ಷ ಅರ್ಜಿಗಳು ಬಿಯಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಬಂದಿದ್ದು, 60 ಸಾವಿರ ಅರ್ಜಿಗಳು ವಿಲೇವಾರಿಯಾಗಿವೆ. 45 ಸಾವಿರ ವಜಾಗೊಂಡಿದ್ದು, 15 ಸಾವಿರ ಅರ್ಜಿಗಳು ವಿಲೇವಾರಿ ಪ್ರಕ್ರಿಯೆಯಲ್ಲಿವೆ. ಇನ್ನು ವಿರೋಧ ಪಕ್ಷದ ನಾಯಕ ಅಶೋಕ್ ಅವರು ಹೇಳಿದಂತೆ ಕೆಲವು ಅಧಿಕಾರಿಗಳು ಲಂಚ ಪಡೆಯುತ್ತಿರಬಹುದು. ಈ ಬಗ್ಗೆ ಅವರು ಗಮನ ಸೆಳೆದ ತಕ್ಷಣವೇ ನಮ್ಮ ಅಧಿಕಾರಿಗಳು ಪರಿಶೀಲಿಸಲಾಗಿದ್ದು, ಲಂಚ ಪಡೆದ ಅಧಿಕಾರಿಗಳನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದರು.
ನಂಬಿಕೆ ನಕ್ಷೆ, ಒಟಿಎಸ್ ಮೂಲಕ ಲಕ್ಷಾಂತರ ನಾಗರಿಕರಿಗೆ ಪ್ರಯೋಜನ
ಇನ್ನು ಕಟ್ಟಡ ನಕ್ಷೆ ಅನುಮೋದನೆ ವಿಚಾರದಲ್ಲೂ ಸಾರ್ವಜನಿಕರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿತ್ತು. ಹೀಗಾಗಿ 50X80 ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಲಾಗುವ ಕಟ್ಟಡ ನಕ್ಷೆಗಳನ್ನು ನಂಬಿಕೆ ನಕ್ಷೆ ಯೋಜನೆ ಮೂಲಕ ಅಧಿಕೃತ ವಾಸ್ತುಶಿಲ್ಪಿ ಹಾಗೂ ಇಂಜಿನಿಯರ್‌ಗಳಿಂದ ಅನುಮತಿ ನೀಡುವ ವ್ಯವಸ್ಥೆ ತರಲಾಗಿದೆ. ಇದರಿಂದ ಜನರಿಗೆ ವೇಗವಾಗಿ ನಕ್ಷೆ ಅನುಮೋದನೆ ದೊರೆಯುತ್ತಿದೆ. ಇನ್ನು ತೆರಿಗೆ ಬಾಕಿ ಉಳಿಸಿಕೊಂಡಿದ್ದವರಿಗೆ ಒಟಿಎಸ್ ಜಾರಿ ಮಾಡಿ ಅವಕಾಶ ನೀಡಿ ಅವರಿಗೆ ಬಡ್ಡಿ ಮನ್ನಾ ಮಾಡಲಾಗಿದೆ. ಇದರಿಂದ ಬೆಂಗಳೂರಿನಲ್ಲಿ 2.60 ಲಕ್ಷ ಆಸ್ತಿ ಮಾಲೀಕರಿಗೆ ಇದರಿಂದ ಪ್ರಯೋಜನವಾಗಿದೆ. ಟಿಡಿಆರ್ ವಿಚಾರದಲ್ಲೂ ಐತಿಹಾಸಿಕ ನಿರ್ಧಾರ ಮಾಡಿ ನಾವು ಏಕರೂಪತೆ ತಂದಿದ್ದೇವೆ. ಸರ್ಕಾರವೇ ಈ ಟಿಡಿಆರ್ ವಿನಿಮಯ ಮಾಡಿಕೊಳ್ಳಲು ನಾವು ಆಲೋಚಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ಬೆಂಗಳೂರಿನ ಮೇಲೆ ಒತ್ತಡ ಇಳಿಸಲು ಬಿಡದಿ ಟೌನ್ ಶಿಪ್
ಈ ಮಧ್ಯೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬೆಂಗಳೂರು ಬೆಳವಣಿಗೆ ಉತ್ತುಂಗ ತಲುಪಿದ್ದು, ಈಗ ಬೆಂಗಳೂರಿನ ಹೊರವಲಯದಲ್ಲಿ ಪರ್ಯಾಯ ನಗರ ನಿರ್ಮಿಸಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ʼಈ ಹಿಂದೆ ಕುಮಾರಸ್ವಾಮಿ ಅವರು ನಂದಗುಡಿ, ಸೋಲೂರು, ಬಿಡದಿಯಲ್ಲಿ ಟೌನ್ ಶಿಪ್ ಮಾಡಲು ಹೋಗಿ, ನಂತರ ಬಿಟ್ಟುಬಿಟ್ಟರು. ಈಗ ನಾವು ಅದನ್ನು ಮಾಡಲು ಮುಂದಾಗಿದ್ದೇವೆ. ಇದರ ವಿರುದ್ಧ ನಿಮ್ಮನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಈ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಡಿನೋಟಿಫಿಕೇಶನ್ ಮಾಡಲು ಹೇಗೆ ಸಾಧ್ಯ. ಡಿನೋಟಿಫಿಕೇಶನ್ ಮಾಡಿದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ ನಿಮಗೆ ಗೊತ್ತಿದೆ. ಬಿಡದಿಯಲ್ಲಿ ನೀರಿನ ಸೌಲಭ್ಯ ಇರುವುದರಿಂದ ಅಲ್ಲೇ ಟೌನ್ ಶಿಪ್ ಮಾಡಬೇಕಾಗಿದೆ. ಅಲ್ಲಿ ನೋಟಿಫಿಕೇಶನ್ ಆಗಿರುವ 8 ಸಾವಿರ ಎಕರೆಯಲ್ಲಿ ಎಐ ಸಿಟಿ ನಿರ್ಮಿಸುವ ವಿಚಾರವಾಗಿ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಇನ್ನು ಎರಡನೇ ವಿಮಾನ ನಿಲ್ದಾಣವನ್ನು ದಕ್ಷಿಣ ಭಾಗದಲ್ಲೇ ಮಾಡಬೇಕು. ಬೇರೆ ವಿಧಿ ಇಲ್ಲ ಎಂದರು.
ಹೊಸ ರಸ್ತೆ ನಿರ್ಮಾಣಕ್ಕಾಗಿ ಬಫರ್ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್
ನಾವು ಎಲಿವೇಟೆಡ್ ಕಾರಿಡಾರ್ ಮಾಡಲು ತೀರ್ಮಾನಿಸಿದ್ದೇವೆ. 109 ಕಿ.ಮೀ ಎಲಿವೇಟೆಡ್ ಕಾರಿಡಾರ್‌ಗೆ ಮುಂದಾಗಿದ್ದು, ಶೀಘ್ರವೇ ಆರಂಭವಾಗಲಿದೆ. ಇನ್ನು ಬೆಂಗಳೂರಿನಲ್ಲಿ ಹೊಸ ರಸ್ತೆ ಸೃಷ್ಟಿಸಬೇಕು. ಹೇಗೆ ಸಾಧ್ಯ? ರಾಜಕಾಲುವೆ ಪಕ್ಕದ ಜಾಗದಲ್ಲಿ 300 ಕಿ.ಮೀ ರಸ್ತೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ವಿಚಾರದಲ್ಲಿ ನಾವು ರಕ್ಷಣಾ ಇಲಾಖೆಯಿಂದ ಸೇನೆಯವರು ಸ್ವಲ್ಪ ಜಾಗ ಬಿಟ್ಟುಕೊಟ್ಟಿದ್ದಾರೆ. ಇದಕ್ಕಾಗಿ 3 ಸಾವಿರ ಕೋಟಿ ಯೋಜನೆ ರೂಪಿಸಿದ್ದು, 300 ಕೋಟಿ ನೀಡಿದ್ದೇವೆ. ಜಯನಗರದಲ್ಲಿ ನಿರ್ಮಿಸಿರುವ ಡಬಲ್ ಡೆಕ್ಕರ್ ರಸ್ತೆಯನ್ನು ಪ್ರಧಾನಮಂತ್ರಿಗಳಿಗೂ ತೋರಿಸಿದೆ. ನಾವು ಈ ಹಿಂದೆಯೇ ಬೆಂಗಳೂರು ತುಂಬಾ ಇದೇ ಮಾದರಿ ಅನುಸರಿಸಬೇಕಾಗಿತ್ತು. ಪ್ರಧಾನಮಂತ್ರಿಗಳು ಈ ಮಾದರಿಯನ್ನು ಒಪ್ಪಿದರು. ಈಗ ನಾವು 40 ಕಿ.ಮೀ ಉದ್ದದ ಡಬಲ್ ಡೆಕ್ಕರ್ ನಿರ್ಮಿಸಲು ಮುಂದಾಗಿದ್ದು, ತಾಂತ್ರಿಕ ವರದಿಗಾಗಿ ಕಾಯಲಾಗುತ್ತಿದೆ. ಇದನ್ನು ಬಿಎಂಆರ್‌ಸಿಎಲ್ ಹಾಗೂ ಪಾಲಿಕೆಯವರು ವೆಚ್ಚವನ್ನು 50-50 ಭರಿಸಲಿದ್ದಾರೆ. ಬೆಂಗಳೂರು ನಗರವನ್ನು ವಿಶ್ವದರ್ಜೆಗೆ ಏರಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಒಂದೂವರೆ ಲಕ್ಷ ಕೋಟಿಯಷ್ಟು ಮೊತ್ತದ ಯೋಜನೆಗಳಿಗೆ ಮುಂದಾಗಿದ್ದೇವೆ. ಮುಂದಿನ ಕೆಲ ವರ್ಷಗಳಲ್ಲಿ 350 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸಂಪುಟದಲ್ಲಿ ಅನುಮೋದನೆ
ಇನ್ನು ನೀರಿನ ವಿಚಾರ ಬೆಂಗಳೂರಿನ ಸಮಸ್ಯೆಗಳಲ್ಲಿ ಒಂದು. ದೇಶದ ಬೇರೆ ನಗರಗಳು ಸಮುದ್ರದ ಪಕ್ಕ ಅಥವಾ ಸಮುದ್ರದ ಪಕ್ಕದಲ್ಲಿವೆ. ನಮ್ಮ ಬೆಂಗಳೂರಿಗೆ ಕಾವೇರಿ ಹೊರತಾಗಿ ಬೇರೆ ನೀರಿನ ಮೂಲವಿಲ್ಲ. ಬೆಂಗಳೂರಿನ ಕುಡಿಯುವ ನೀರಿನ 5ನೇ ಹಂತದ ಯೋಜನೆ ಅರ್ಧಕ್ಕೆ ನಿಂತಿತ್ತು. ನಂತರ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿ ಯೋಜನೆ ಪೂರ್ಣಗೊಳಿಸಿದೆವು. ಎತ್ತಿನಹೊಳೆ ಯೋಜನೆಗೂ ಅರಣ್ಯ ಪ್ರದೇಶದಿಂದ ಸಮಸ್ಯೆ ಎದುರಾಗಿತ್ತು, ಈಗ ಅನುಮತಿ ನೀಡಿದ್ದಾರೆ. ಆ ಯೋಜನೆ ಮುಂದುವರಿಯಲಿದೆ. ಬೆಂಗಳೂರು ನಗರಕ್ಕೆ 2,250 ಎಂಎಲ್‌ಡಿ ಸಾಮರ್ಥ್ಯದ ನೀರಿನ ಸಂಪರ್ಕ ನೀಡಲಾಗಿತ್ತು, ನಾವು 1,850 ಎಂಎಲ್‌ಡಿ ನೀರು ಸಂಪರ್ಕ ಸೇರಿಸಿದ್ದು, ಇನ್ನು 400 ಎಂಎಲ್‌ಡಿ ಸಾಮರ್ಥ್ಯದ ನೀರು ಬಾಕಿ ಇದೆ. ಜನರಿಗೆ ಕಂತಿನ ಮೂಲಕ ಪಾವತಿಗೆ ಅವಕಾಶ ನೀಡಿ ನೀರಿನ ಸಂಪರ್ಕ ಪಡೆಯಲು ಹೇಳಿದ್ದೇವೆ. ಇನ್ನು ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ 6 ಸಾವಿರ ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ಜೈಕಾ ಸಂಸ್ಥೆ ಹಣಕಾಸು ನೆರವು ನೀಡಲು ಮುಂದಾಗಿದೆ. ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿದ್ದು, ಕಳೆದ 2 ವರ್ಷ ಸುಮಾರು ಏಳೂವರೆ ಸಾವಿರ ಕೊಳವೆ ಬಾವಿ ಬತ್ತಿದವು. ಟ್ಯಾಂಕರ್ ಮಾಫಿಯಾ ನಿಯಂತ್ರಿಸಿ ಒಂದು ಹಂತಕ್ಕೆ ನಿಯಂತ್ರಿಸಿದ್ದೇವೆ. ಇನ್ನು ಬೆಂಗಳೂರಿನಲ್ಲಿ 15 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ನಾವು ಅದನ್ನು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಬಿಡಬ್ಲ್ಯೂಎಸ್ಎಸ್‌ಬಿ ನಷ್ಟ ಎದುರಿಸುವುದಿಲ್ಲ. ಇನ್ನು ನಗರದಲ್ಲಿ ಸರಳ ಕಾವೇರಿ, ಸಂಚಾರಿ ಕಾವೇರಿ ಮೂಲಕ ನೀರನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
2 ವರ್ಷದಲ್ಲಿ ಮೇಕೆದಾಟುವಿಗೆ ಶಂಕುಸ್ಥಾಪನೆ ಮಾಡುವ ಆತ್ಮವಿಶ್ವಾಸವಿದೆ, ಸಹಕರಿಸಿ
ಇನ್ನು ಮೇಕೆದಾಟು ಸಮತೋಲನ ಅಣೆಕಟ್ಟು ನಿರ್ಮಾಣದ ವಿಚಾರವಾಗಿ ಸುಪ್ರೀಂ ಕೋರ್ಟ್ ರಾಜ್ಯದ ಪರವಾಗಿ ಐತಿಹಾಸಿಕ ತೀರ್ಪು ನೀಡಿದ್ದು, ಆ ಪೀಠಕ್ಕೆ ಈ ಸದನದ ಮೂಲಕ ದೊಡ್ಡ ಧನ್ಯವಾದ ಅರ್ಪಿಸುತ್ತೇನೆ. ಅವರ ಜಾಗದಲ್ಲಿ ಅವರ ಯೋಜನೆ ಮಾಡಿಕೊಳ್ಳಲು ನಿಮ್ಮ ತಕರಾರು ಏಕೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಬಳಸಿಕೊಂಡು ನಾವು ನ್ಯಾಯಾಲಯದ ಮುಂದೆ ವಾದ ಮಂಡಿಸಿದೆವು. ಪರಿಣಾಮ ಕೋರ್ಟ್ ತಮಿಳುನಾಡಿನ ಅರ್ಜಿ ವಜಾಗೊಳಿಸಿತು. ಈ ಯೋಜನೆ ವಿಚಾರವಾಗಿ ನಾವುಂಟು ಹಾಗೂ ಕೇಂದ್ರ ಜಲ ಆಯೋಗವುಂಟು. ನಾವು ಪರಿಷ್ಕೃತ ಡಿಪಿಆರ್ ತಯಾರಿಸುತ್ತಿದ್ದು, ಮೇಕೆದಾಟು ಯೋಜನೆ ಆಗುತ್ತಿದ್ದಂತೆ ಬೆಂಗಳೂರಿಗೆ ಮುಂದಿನ 25-30 ವರ್ಷ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗುವುದಿಲ್ಲ.
ಈ ಯೋಜನೆ ಅತ್ಯಂತ ಕಡಿಮೆ ವೆಚ್ಚದ ಯೋಜನೆಯಾಗಿದೆ. ಸುಮಾರು 600 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಿದ್ದು, ಉಳಿದಂತೆ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿ ನೀಡಲಾಗುವುದು. ಈ ಯೋಜನೆಯಲ್ಲಿ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಈ ಯೋಜನೆಗೆ ನಮ್ಮ ಕ್ಷೇತ್ರದಲ್ಲಿ ನನ್ನ ಜಮೀನು ಮುಳುಗಡೆಯಾಗುತ್ತದೆ. ಏನು ಮಾಡಲು ಆಗುವುದಿಲ್ಲ. ಮುಂದಿನ 2 ವರ್ಷಗಳಲ್ಲಿ ಮೇಕೆದಾಟು ಯೋಜನೆಗೆ ಭೂಮಿ ಪೂಜೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ಇದಕ್ಕೆ ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಹೇಳಿದರು.
ಜಕ್ಕೂರು ತರಬೇತಿ ಕೇಂದ್ರ ಸ್ಥಳಾಂತರ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ
ಜಕ್ಕೂರು ವಿಮಾನ ಹಾರಾಟ ತರಬೇತಿ ಕೇಂದ್ರದಲ್ಲಿ ಕ್ಲಬ್ ನಿರ್ಮಾಣ ಮಾಡುವ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದೆ ಬಂದಿದ್ದು ನಿಜ. ಆದರೆ ಮುಖ್ಯಮಂತ್ರಿಗಳು ಈಗ ಈ ಬಗ್ಗೆ ತೀರ್ಮಾನ ಮಾಡುವುದು ಬೇಡ ಎಂದರು. ಇಲ್ಲಿ ಭಾರತ ಮಂಟಪ, ಯಶೋಭೂಮಿ ಮಾದರಿಯಲ್ಲಿ ನಿರ್ಮಾಣ ಮಾಡಲು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಸೇರಿದಂತೆ ಅನೇಕರು ಸಲಹೆ ನೀಡಿದರು. ಇದಕ್ಕೆ ಅನುದಾನ ನೀಡುವುದಾಗಿಯೂ ಹೇಳಿದರು. ಈಗ ಸಧ್ಯಕ್ಕೆ ಜಕ್ಕೂರು ವಿಮಾನ ಹಾರಾಟ ತರಬೇತಿ ಕೇಂದ್ರವನ್ನು ಸ್ಥಳಾಂತರ ಮಾಡಲು ಮುಂದಾಗಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಅಪಾರ್ಟ್‌ಮೆಂಟ್ ಕಾಯ್ದೆಗೆ ಸರ್ಕಾರ ಬದ್ಧ
ಇನ್ನು ಅಪಾರ್ಟ್‌ಮೆಂಟ್ ಕಾಯ್ದೆ ವಿಚಾರವಾಗಿ ಪ್ರಸ್ತಾಪ ಮಾಡಿದ್ದು, ಇದನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದ್ದೇವೆ. ಈ ವಿಚಾರವಾಗಿ ವಿರೋಧ ಪಕ್ಷಗಳ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ನಿಮ್ಮ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಸುಗ್ರೀವಾಜ್ಞೆ ಮೂಲಕವಾದರೂ ಇದನ್ನು ಜಾರಿಗೆ ತರಲಾಗುವುದು. ಇನ್ನು ವಾಹನ ನಿಲುಗಡೆ ನೀತಿ ಅಗತ್ಯವಿದ್ದು, ಇದಕ್ಕೆ ನೀತಿ ರೂಪಿಸಲಾಗುವುದು. ಎಲ್ಲೆಂದರಲ್ಲಿ ವಾಹನ ನಿಲುಡಗಡೆ ಮಾಡಲಾಗುತ್ತಿದ್ದು, ಪಿಪಿಪಿ ಮಾದರಿಯಲ್ಲಿ ಹಾಗೂ ಖಾಸಗಿ ಜಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಿಮ್ಮ ಸಲಹೆಗಳೇನೆ ಇದ್ದರೂ ನನಗೆ ಲಿಖಿತ ರೂಪದಲ್ಲಿ ನೀಡಿ ಎಂದು ಹೇಳಿದರು.
ಇನ್ನು ರಸ್ತೆ ಗುಂಡಿ ಎಲ್ಲಾ ಕಡೆಯೂ ಇದೆ. ನಾವು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಬಹುತೇಕ ಮುಚ್ಚಿದ್ದೇವೆ. 150 ಕಿ.ಮೀ ಹೊಸ ರಸ್ತೆಗೆ 1700 ಕೋಟಿ ವೆಚ್ಚ ಮಾಡಲಾಗಿದೆ. ಇಡೀ ದೇಶದಲ್ಲಿ ರಸ್ತೆ ಗುಂಡಿ ಕಂಡುಬಂದರೆ ಪಾಲಿಕೆಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು ನಾವೇ ಮೊದಲು. ರಸ್ತೆ ಗುಂಡಿ ಮುಚ್ಚುವದು ನಿರಂತರ ಪ್ರಕ್ರಿಯೆಯಾಗಿದ್ದು, ನಾವು ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ಸ್ಕೈಡೆಕ್ ಯೋಜನೆಗೆ ಶೀಘ್ರ ಟೆಂಡರ್
ಇನ್ನು ಬೆಂಗಳೂರಿನಲ್ಲಿ ಸ್ಕೈಡೆಕ್ ಮಾಡಲು ಮುಂದಾಗಿದ್ದೇವೆ. ಹೆಮ್ಮಿಗೆಪುರದ ಬಳಿ ನಿರ್ಮಾಣ ಮಾಡಲು ಎಲ್ಲರೂ ಒಪ್ಪಿದ್ದರು. ಆದರೆ ನೈಸ್ ಸಂಸ್ಥೆಯವರು ಅವಕಾಶ ನೀಡಲಿಲ್ಲ. ಅವರು ಎನ್ಒಸಿ ನೀಡಲು ನಿರಾಕರಿಸಿದರು. ನನಗೂ ಅವರಿಗೂ ತಿಕ್ಕಾಟವಾಯಿತು. ವಿಮಾನ ನಿಲ್ದಾಣದ ಸುತ್ತಮುತ್ತ ನಿರ್ದಿಷ್ಟ ದೂರದವರೆಗೆ ಎತ್ತರದ ಕಟ್ಟಡಗಳಿಗೆ ನಿರ್ಬಂಧ ಇರುವ ಕಾರಣ ಎನ್‌ಜಿಎಫ್ ಬಳಿ ನಿರ್ಮಾಣ ಮಾಡುವ ಯೋಜನೆ ಕೈಬಿಡಲಾಯಿತು. ಇನ್ನು ಬೆಂಗಳೂರು ವಿವಿ ಆವರಣದಲ್ಲಿ ನಿರ್ಮಾಣ ಮಾಡಿದರೆ ಗಲಾಟೆಗಳು ಆಗುತ್ತವೆ ಎಂದು ಶಿಕ್ಷಣ ಸಚಿವರು ಹೇಳಿದರು. ಹೀಗಾಗಿ ಈಗ ಅದನ್ನು ಕೆಂಪೇಗೌಡ ಬಡಾವಣೆಯಲ್ಲಿ ಮಾಡಲು ನಿರ್ಧರಿಸಿದ್ದು ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ಆದಷ್ಟು ಬೇಗ ಇದನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ನೆಲಮಂಗಲದಿಂದ ಬಿಡದಿವರೆಗೆ ಪರ್ಯಾಯ ರಸ್ತೆ
ಈ ವೇಳೆ ಶಾಸಕರುಗಳು ವಾರಾಂತ್ಯದಲ್ಲಿ ನೆಲಮಂಗಲ ಕ್ರಾಸ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚುವ ಬಗ್ಗೆ ಕೇಳಿದಾಗ, ʼನಮ್ಮ ಸರ್ಕಾರ ಈ ವರ್ಷ 2006ರಲ್ಲಿ ಅಧಿಸೂಚನೆ ಹೊರಡಿಸಿರುವಂತೆ ನೆಲಮಂಗಲ, ಸೊಂಡೆಕೊಪ್ಪ, ತಾವರೆಕೆರೆ, ಬಿಡದಿ ಮಾರ್ಗವಾಗಿ ಒಂದು ಪರ್ಯಾಯ ರಸ್ತೆ ನಿರ್ಮಿಸಿ ದಟ್ಟಣೆ ಕಡಿಮೆ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಶೋಭಾ ಕರಂದ್ಲಾಜೆ ಹಾಗೂ ಸೋಮಶೇಖರ್ ಅವರು ತಾವರೆಕೆರೆವರೆಗೂ ಮೆಟ್ರೋ ವಿಸ್ತರಣೆಗೆ ಮನವಿ ಮಾಡಿದ್ದು, ಡಬಲ್ ಡೆಕ್ಕರ್ ಮಾಡಲು ಆಲೋಚನೆ ಮಾಡಲಾಗುತ್ತಿದೆ. ಬನಶಂಕರಿಯಲ್ಲಿ ಸ್ಕೈವಾಕ್ ನಿರ್ಮಾಣದ ವಿಚಾರವಾಗಿ ಶೀಘ್ರ ತೀರ್ಮಾನ ಮಾಡಲಾಗುವುದು. ಜಿ.ಟಿ. ದೇವೇಗೌಡ ಅವರು ಕೆ.ಆರ್ ಮಾರುಕಟ್ಟೆ ಮೇಲೇತುವೆಯನ್ನು ಮುಂದುವರಿಸಿ ಕೆಂಗೇರಿವರೆಗೂ ವಿಸ್ತರಿಸಿ ಎಂದು ಸಲಹೆ ನೀಡಿದ್ದು ಅವರ ಸಲಹೆ ಪರಿಗಣಿಸುತ್ತೇವೆʼ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ಬರುತ್ತಿಲ್ಲ
ಇಡೀ ದೇಶ ಬೆಂಗಳೂರನ್ನು ನೋಡುತ್ತಿದೆ. ಇಲ್ಲಿ ನಾವು ನಾವುಗಳು ಕೂತು ದಿನಬೆಳಗಾದರೆ ಟೀಕೆ ಮಾಡುವುದಲ್ಲ. ನಾನು ದಾವೋಸ್ ಸಮಿಟ್‌ಗೆ ಹೋದಾಗ ಅಲ್ಲಿ ಬೆಂಗಳೂರಿಗೆ ನೀಡಲಾಗುತ್ತಿದ್ದ ಅದ್ಯತೆ ನೋಡಿದೆ. ಅಮೆರಿಕ ಹಾಗೂ ಯೂರೋಪ್ ರಾಷ್ಟ್ರಗಳಿಂದ ಅನೇಕ ಕಂಪನಿಗಳು ಹೂಡಿಕೆ ವಿಚಾರವಾಗಿ ಚರ್ಚೆ ಮಾಡಲು ಕಾಲಾವಕಾಶ ಕೇಳುತ್ತಿದ್ದು, ಈ ಅಧಿವೇಶನ ಮುಗಿದ ಬಳಿಕ ಚರ್ಚೆ ಮಾಡಲಾಗುವುದು. ಬೆಂಗಳೂರು ಬೇರೆ ನಗರಗಳಿಗೆ ಮಾದರಿಯಾಗಿದೆ. ಬೆಂಗಳೂರಿನಲ್ಲಿ ನೆಲಮಂಗಲ ಮೇಲ್ಸೇತುವೆ, ವಿಮಾನ ನಿಲ್ದಾಣ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಆಗಿದ್ದರೆ ಅದಕ್ಕೆ ಮನಮೋಹನ್ ಸಿಂಗ್ ಅವರ ಸರ್ಕಾರ ಕಾರಣ. ಆಗ ನರ್ಮ್ ಯೋಜನೆ ಮೂಲಕ ಸಾಕಷ್ಟು ಅನುದಾನ ಬರುತ್ತಿತ್ತು. ಈಗ ಬೆಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರದಿಂದ ಯಾವುದೇ ಅನುದಾನ ಬರುತ್ತಿಲ್ಲ. ನಾನು ಈ ವಿಚಾರವಾಗಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೆ, ನಿರ್ಮಲ ಸೀತರಾಮನ್ ಅವರು ಸಹಾಯ ಮಾಡುತ್ತಾರೆ ಎಂದು ಭಾವಿಸಿದ್ದೆ ಆದರೆ ಅವರು ಮಾಡಲಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದರು.