DK Shivakumar: ನೀವೆಲ್ಲಾ ಎಂತಹ ನರಕದಲ್ಲಿ ಇದ್ದೀರಿ: ಆರ್‌ಆರ್ ನಗರ ಕ್ಷೇತ್ರದ ಜನರ ಬಗ್ಗೆ ಡಿಕೆಶಿ ಅನುಕಂಪ
RR Nagar constituency: ಸಾರ್ವಜನಿಕರ ಜತೆ ತಾವು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಕ್ಕೆ ಮುನಿರತ್ನಂ ನಾಯ್ಡು ಮತ್ತವರ ಬೆಂಬಲಿಗರು ಅಡ್ಡಿಪಡಿಸಿದ ಬಗ್ಗೆ ಡಿಸಿಎಂ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

-

ಬೆಂಗಳೂರು, ಅ.12: "ಇಲ್ಲಿನ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ" ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು. ಮತ್ತಿಕೆರೆಯ ಜೆ.ಪಿ. ಪಾರ್ಕ್‌ನಲ್ಲಿ ಶನಿವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಂವಾದ ವೇಳೆ ಶಿವಕುಮಾರ್ ಅವರು ಮಾತನಾಡಿದರು.
ಸಾರ್ವಜನಿಕರ ಜತೆ ತಾವು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಕ್ಕೆ ಮುನಿರತ್ನಂ ನಾಯ್ಡು ಮತ್ತವರ ಬೆಂಬಲಿಗರು ಅಡ್ಡಿಪಡಿಸಿದ ಬಗ್ಗೆ ಡಿಸಿಎಂ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
"ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ" ಎಂದು ಹೇಳಿದರು.
"ಇಂತಹ ಪ್ರತಿನಿಧಿಯನ್ನು (ಮುನಿರತ್ನಂ ನಾಯ್ಡು) ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ" ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಲಾಲ್ ಬಾಗ್ ಅಭಿವೃದ್ಧಿಗೆ ₹10 ಕೋಟಿ ರೂ., ಟನೆಲ್ ಯೋಜನೆಗೆ ಲಾಲ್ ಬಾಗ್ 6 ಎಕರೆ ವಶ ಎಂಬುದು ಸುಳ್ಳು: ಡಿಸಿಎಂ ಡಿ.ಕೆ. ಶಿವಕುಮಾರ್
ಡಿಕೆಶಿ ಎದುರು ಮುನಿರತ್ನ ಹೈಡ್ರಾಮಾ
ಬೆಂಗಳೂರು ನಡಿಗೆ ಪಾರ್ಕ್ಗಳಲ್ಲಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ (DK Shivakumar) ಇಂದು ಮತ್ತಿಕೆರೆ ಬಳಿಯ ಜೆಪಿ ಪಾರ್ಕ್‌ನಲ್ಲಿ ವಾಕಿಂಗ್ ಮಾಡಿದರು. ಈ ವೇಳೆ ಜೆಪಿ ಪಾರ್ಕ್‌ನಲ್ಲಿ ಹೈಡ್ರಾಮಾ ನಡೆದಿದೆ. ಆರ್ಎಸ್ಎಸ್ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್ಗೆ ಬಂದ ಬಿಜೆಪಿ ಶಾಸಕ ಮುನಿರತ್ನ (muniratna) ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು. ಡಿಕೆಶಿ ವೇದಿಕೆಯಲ್ಲಿ ಕುಳಿತಾಗಲೂ ಶಾಸಕ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್ಎ ಬಾರಯ್ಯ’ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ‘ನಾನು ಜನರ ಮಧ್ಯದಲ್ಲೇ ಕೂರುತ್ತೇನೆ’ ಎಂದು ಹೇಳಿದರು. ಇದಾದ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಡಿಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು.
ವೇದಿಕೆ ಮೇಲೆ ಡಿಕೆಶಿ ಮುನಿರತ್ನ ಕಿತ್ತಾಡಿದ್ದಾರೆ. ಮುನಿರತ್ನ ಡಿಕೆಶಿ ಕರೀತಿಂದಂತೆ ವೇದಿಕೆಗೆ ಬಂದ ಮುನಿರತ್ನ, ಡಿಸಿಎಂ ಕೈಯಲ್ಲಿ ಮೈಕ್ ಕೇಳಿದ್ದಾರೆ. ಇಲ್ಲ ಆಗಲ್ಲ ಆಮೇಲೆ ಕೊಡ್ತೀನಿ ಎಂದು ಡಿಕೆಶಿ ಪಟ್ಟು ಹಿಡಿದ್ರು. ಈ ವೇಳೆ ಮುನಿರತ್ನ ಡಿಕೆ ಶಿವಕುಮಾರ್ ಕೈಯಲ್ಲಿದ್ದ ಮೈಕ್ನನ್ನೇ ಕಿತ್ತುಕೊಳ್ಳಲು ಮುಂದಾದರು. ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ. ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ’ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೈಕ್ ಕಿತ್ತುಕೊಂಡು ಅವನನ್ನ ಹೊರಗೆ ಕಳಿಸ್ರಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಂಘದ ಗಣವೇಷದಲ್ಲೇ ವೇದಿಕೆ ಮೇಲೆ ಬಂದು ಮುನಿರತ್ನ ಗಲಾಟೆ ಮಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಎಂದು ಜೋರಾಗಿ ಕೂಗಿದ್ದಾರೆ. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ವೇದಿಕೆ ಮೇಲೆಯೇ ಕೂತು ಹೈಡ್ರಾಮಾ ಮಾಡಿದ ಮುನಿರತ್ನ ಅವರನ್ನ ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ.
ಈ ಸುದ್ದಿಯನ್ನೂ ಓದಿ: MLA Munirathna: ಶಾಸಕ ಮುನಿರತ್ನಗೆ ಬಿಗ್ ರಿಲೀಫ್; ಸಾಮೂಹಿಕ ಅತ್ಯಾಚಾರ ಕೇಸ್ ರದ್ದು ಮಾಡಿದ ಹೈಕೋರ್ಟ್
ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರೇಪಿಸ್ಟ್ ಮುನಿ ಎಂದು ಕೂಗಿದ್ದಾರೆ. ಇದೇ ವೇಳೆ ಮಾತಾಡಿದ ಡಿಕೆ ಶಿವಕುಮಾರ್, ಇವರದ್ದು ಬರೀ ರಾಜಕೀಯನೇ ಆಯ್ತು ಬಿಡಿ ಎಂದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದೊಯ್ದರು.