Brand Bengaluru: ಬೆಂಗಳೂರು ಪ್ರದಕ್ಷಿಣೆ ನಡೆಸಿದ ಡಿಸಿಎಂ ಡಿಕೆಶಿ; ಕಾಮಗಾರಿ ವೇಗ, ಗುಣಮಟ್ಟ ಪರಿಶೀಲನೆ
ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ʼʼಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರ ಯೋಜನೆ ಅಡಿಯಲ್ಲಿ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. 30 ವರ್ಷಗಳ ಬಾಳಿಕೆ ಬರುವ ಶಾಶ್ವತ ರಸ್ತೆ ನಿರ್ಮಿಸುವ ಈ ಯೋಜನೆಗೆ 1,700 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ" ಎಂದು ತಿಳಿಸಿದರು.

ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಆರ್‌ಟಿ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ವೀಕ್ಷಿಸಿದರು. ಸಚಿವ ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಜತೆಗಿದ್ದರು.

ಬೆಂಗಳೂರು: "ಬ್ರ್ಯಾಂಡ್ ಬೆಂಗಳೂರು (Brand Bengaluru) ಸುಗಮ ಸಂಚಾರ ಯೋಜನೆ ಅಡಿಯಲ್ಲಿ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. 30 ವರ್ಷಗಳ ಬಾಳಿಕೆ ಬರುವ ಶಾಶ್ವತ ರಸ್ತೆ ನಿರ್ಮಿಸುವ ಈ ಯೋಜನೆಗೆ 1,700 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ಈ ಯೋಜನೆಯಲ್ಲಿ 14 ಪ್ಯಾಕೇಜ್‌ಗಳ ಮೂಲಕ ಬೆಂಗಳೂರಿನ 150 ಕಿ.ಮೀ. ಉದ್ದದ 97 ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಬಿಡಬ್ಲ್ಯು ಎಸ್‌ಎಸ್‌ಬಿ, ಬಿಬಿಎಂಪಿ, ಬಿಡಿಎ, ಬೆಸ್ಕಾಂಗಳ ನಡುವೆ ಸಮನ್ವಯತೆ ಸಾಧಿಸಿ ಶಾಶ್ವತ ರಸ್ತೆ ನಿರ್ಮಿಸಲಾಗುತ್ತಿದೆ. ಕೇಬಲ್, ಪವರ್ ವೈರ್‌ಗಳಿಗೆ ಅವಕಾಶ ಕಲ್ಪಿಸಿ, ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಅವಕಾಶ ನೀಡದೆ, ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಈ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ" ಎಂದು ತಿಳಿಸಿದರು.
"ನಮಗೆ ಗುಣಮಟ್ಟದ ಕಾಮಗಾರಿ ಮುಖ್ಯ. ಕಾಮಗಾರಿ ಶೀಘ್ರಗತಿಯಲ್ಲಿ ಸಾಗಬೇಕು ಎಂದು ಇಂದು ಪರಿಶೀಲನೆ ಮಾಡಿದ್ದೇನೆ. ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯ 2ನೇ ಹಂತದಲ್ಲಿ 450 ಕಿ.ಮೀ. ಉದ್ದದ ರಸ್ತೆ ವೈಟ್ ಟ್ಯಾಪಿಂಗ್ ಮಾಡಲಾಗುವುದು. ಈ ಎಲ್ಲ ಹಂತಗಳ ಕಾಮಗಾರಿ ಮುಕ್ತಾಯವಾದರೆ ಬೆಂಗಳೂರಿನಲ್ಲಿ ಒಟ್ಟಾರೆ 1,700 ಕಿ.ಮೀ. ಉದ್ದದ ರಸ್ತೆ ವೈಟ್ ಟ್ಯಾಪಿಂಗ್ ಮುಕ್ತಾಯಗೊಳ್ಳಲಿದೆ" ಎಂದು ಅವರು ವಿವರಿಸಿದರು.
"ರಸ್ತೆ ಗುಣಮಟ್ಟ ಪರೀಕ್ಷೆಗೆ ನಾನು ಇಂದು ಭೇಟಿ ನೀಡಿದ್ದೇನೆ. ಪಾದಚಾರಿ ಮಾರ್ಗಗಳನ್ನು ನೋಡಿದ್ದೇನೆ. ಭಾನುವಾರ ವಾಹನ ದಟ್ಟಣೆ ಕಡಿಮೆ ಇರುವ ಕಾರಣ ಇಂದು ಕಾಮಗಾರಿ ಪರಿಶೀಲನೆ ಮಾಡುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಎಲ್ಲ ಭಾಗಗಳಿಗೆ ಭೇಟಿ ನೀಡುತ್ತಿದ್ದೇನೆ" ಎಂದು ತಿಳಿಸಿದರು.
"ಇದರ ಜತೆಗೆ ಬೆಂಗಳೂರಿನಾದ್ಯಂತ ಸಂಪೂರ್ಣವಾಗಿ ಮಳೆ ನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದೇವೆ. ನಾವು ಒಂದೇ ದಿನದಲ್ಲಿ ಎಲ್ಲಾ ಬದಲಾವಣೆ ಮಾಡುತ್ತೇವೆ ಎಂದು ಹೇಳುವುದಿಲ್ಲ. ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಯೋಜನೆ ಮಾಡುತ್ತಿದ್ದೇವೆ" ಎಂದರು.
ನೀವೇ ಗುಣಮಟ್ಟ ಪರಿಶೀಲನೆ ಮಾಡಿದ್ದೀರಿ ಎಂದು ಕೇಳಿದಾಗ, "ಈ ಯೋಜನೆಗೆ ಮೀಸಲಿಟ್ಟಿರುವ 1.700 ಕೋಟಿ ರೂ. ರಸ್ತೆಗೆ ವೆಚ್ಚವಾಗಬೇಕಲ್ಲವೇ? ಈ ರಸ್ತೆ ನಿರ್ದಿಷ್ಟ ಪ್ರಮಾಣದಲ್ಲಿ ದಪ್ಪ ಇರಬೇಕು, ಈ ರಸ್ತೆಗಳಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಕೆಲಸಗಳು ಒಟ್ಟಿಗೆ ಮುಗಿಯಬೇಕು. ಹೀಗಾಗಿ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ಮುಗಿದ ನಂತರವೂ ಗುಣಮಟ್ಟ ಪರಿಶೀಲನೆ ಮಾಡಲಾಗುವುದು. ಎಲ್ಲ ಕಡೆಗಳಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ನನಗೆ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ತಾಂತ್ರಿಕ ತಂಡವನ್ನು ಅಲ್ಲಿಗೆ ಕಳುಹಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ" ಎಂದು ಹೇಳಿದರು.
ಟನಲ್ ರಸ್ತೆ ಸರಿಯಿಲ್ಲ ಎಂಬ ಕೇಂದ್ರ ರೈಲ್ವೆ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, "ಹಾಗಿದ್ದರೆ ಅವರು ಮಹಾರಾಷ್ಟ್ರದಲ್ಲಿ ಯಾಕೆ ಟನಲ್ ರಸ್ತೆ ಮಾಡಿಸುತ್ತಿದ್ದಾರೆ? ಅವರಿಗೂ ಇದಕ್ಕೂ ಏನು ಸಂಬಂಧ? ಅವರ ಇಲಾಖೆ ಕೆಲಸ ಅವರು ಮಾಡಲಿ" ಎಂದು ತಿಳಿಸಿದರು.
ಬೇಸಗೆ ಆರಂಭವಾಗುತ್ತಿದ್ದು, ನೀರಿನ ಅಭಾವ ಎದುರಾಗದಂತೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದಾಗ, "ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗಬಾರದು ಎಂಬ ಕಾರಣಕ್ಕೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಜನರು ಮುಂದೆ ಬಂದು ನೀರಿನ ಸಂಪರ್ಕ ಪಡೆಯಬೇಕು" ಎಂದು ಪ್ರತಿಕ್ರಿಯಿಸಿದರು.
ಪಾಲಿಕೆಯ ಆರ್‌ಒ ಘಟಕಗಳು ದುರಸ್ತಿಗೆ ಬಂದಿವೆ ಎಂದು ಕೇಳಿದಾಗ, "ಎಲ್ಲ ಘಟಕಗಳ ಪರಿಶೀಲನೆ ಮಾಡಲಾಗುವುದು" ಎಂದು ಡಿಕೆಶಿ ಭರವಸೆ ನೀಡಿದರು.