ಬೆಂಗಳೂರು, ಜ. 15, 2025: ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮೀ ಯೋಜನೆಯ ರೀತಿಯಲ್ಲಿಯೇ ಯುವ ನಿಧಿ ಯೋಜನೆಗೆ ಹೆಚ್ಚಿನ ಪ್ರಚಾರ ನೀಡಿ, ವಿದ್ಯಾವಂತ ಯುವಕರಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಗ್ಯಾರಂಟಿಗಳ ಅನುಷ್ಠಾನ ಸಮಿತಿಯವರು ಮುಂದಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಬೆಂಗಳೂರಿನ ತಮ್ಮ ಶಾಸಕರ ಕಚೇರಿಯಲ್ಲಿ ಗಾಂಧಿನಗರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಬಡವರ ಪಾಲಿಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ ಎಂದರು.
ಗಾಂಧಿನಗರ ಕ್ಷೇತ್ರದ ಸ್ಲಂ ನಿವಾಸಿ ಪ್ರದೇಶಗಳಲ್ಲಿ ಶೇ. 90ರಷ್ಟು ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದಿದ್ದಾರೆ. ಗ್ಯಾರಂಟಿ ಯೋಜನೆಗಳು ವೇಗವಾಗಿ ಜನರಿಗೆ ತಲುಪಿದ್ದು, ಯೋಜನೆಗಳ ಸದ್ಬಳಕೆ ಆಗುತ್ತಿದೆ. ಇದರಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಎಷ್ಟು ಜನರಿದ್ದಾರೆ ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೋಜನೆಗಳ ಅನುಷ್ಠಾನದಲ್ಲಿ ಸಣ್ಣಮಟ್ಟದ ಅಡೆ ತಡೆಗಳಿದ್ದರೂ ಅವುಗಳನ್ನು ನಿವಾರಿಸುವುದು ಮುಖ್ಯ. ಕುಂದುಕೊರತೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜನರಿಗೆ ಸುಲಲಿತವಾಗಿ ಗ್ಯಾರಂಟಿ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಆಹಾರ ಇಲಾಖೆಯಿಂದ ಬಡವರ ಮನೆಗಳಿಗೆ ಖುದ್ದಾಗಿ ಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಇದರಿಂದ ದುರುಪಯೋಗ ಕಡಿಮೆಯಾಗುತ್ತಿದೆ. ಹಸಿವಿನಿಂದ ಯಾರು ಮಲಗಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಬಡವರ ಪಾಲಿಗೆ ತಂದಿದೆ. ಯುವತಿಯರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮೀ ಯೋಜನೆಯಿಂದ ಸ್ವಾವಲಂಬಿ ಬದುಕು ಸಾಗಿಸಲು ಅನುಕೂಲವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಯುವ ನಿಧಿ ಯೋಜನೆಯ ನೊಂದಣಿ ಪ್ರಾರಂಭದ ಪೊಸ್ಟರ್ ಬಿಡುಗಡೆ
ಯುವನಿಧಿ ಯೋಜನೆಯ ನೊಂದಣಿ ಪ್ರಾರಂಭದ ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು, ಯುವನಿಧಿ ಯೋಜನೆಗೆ ನೊಂದಣಿಯಾದ 180 ದಿನಗಳ ಬಳಿಕ ಫಲಾನುಭವಿಗಳ ಅಕೌಂಟ್‌ಗೆ ಪ್ರೋತ್ಸಾಹ ಧನ ವರ್ಗಾವಣೆ ಆಗುತ್ತದೆ. ಈ ಬಗ್ಗೆ ಹಲವರಲ್ಲಿ ಗೊಂದಲವಿದೆ. ಯುವನಿಧಿ ಬಗ್ಗೆ ವಿವರವಾದ ಮಾಹಿತಿಯನ್ನು ತಲುಪಿಸುವುದರ ಮೂಲಕ ಹೆಚ್ಚಿನ ಪ್ರಚಾರದೊಂದಿಗೆ ವಿದ್ಯಾವಂತ ಯುವಕರಿಗೆ ಯುವನಿಧಿ ಯೋಜನೆಯ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಗ್ಯಾರಂಟಿಗಳ ಅನುಷ್ಠಾನ ಸಮಿತಿಯವರು ಸದಸ್ಯರು ಮುಂದಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ಸೂಚನೆ ನೀಡಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಗಾಂಧಿನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ, ಸರವಣನ್ ಸೇರಿದಂತೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.