ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ (Milk and Bus ticket Price Hike) ಶಾಕ್ ತಗುಲುವ ಸಾಧ್ಯತೆಯಿದೆ. ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ರಾಜ್ಯ ಸರ್ಕಾರ ಮಟ್ಟದಲ್ಲಿ ಸಿದ್ಧತೆ ನಡೆದಿದ್ದು, ಸಿಎಂ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ (CabinetMeeting) ಈ ಪ್ರಸ್ತಾವನೆಗೆ ಬಹುತೇಕ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ, ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರವನ್ನು ತಕ್ಷಣವೇ ಪ್ರಕಟಿಸದೆ ಚುನಾವಣಾ ಆಯೋಗದ ಅನುಮತಿ ಪಡೆದ ಬಳಿಕ ಅಥವಾ ನೀತಿ ಸಂಹಿತೆ ಮುಕ್ತಾಯವಾಗುವ ಅಕ್ಟೋಬರ್ 27ರ ನಂತರ ಜಾರಿಗೊಳಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದೆ.
ಪಶು ಆಹಾರ, ಸಾಗಣೆ ವೆಚ್ಚ ಗಣನೀಯವಾಗಿ ಏರಿಕೆಯಾಗಿರುವುದರಿಂದ ಹಾಲಿನ ಖರೀದಿ ದರವನ್ನು ಹೆಚ್ಚಿಸಬೇಕೆಂದು ರೈತರು ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ನಿರಂತರವಾಗಿ ಕೆಎಂಎಫ್ ಮೇಲೆ ಒತ್ತಡ ಹೇರುತ್ತಿದ್ದವು. ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ಮಾರಾಟ ದರ ಅತ್ಯಂತ ಕಡಿಮೆಯಿದೆ ಎಂಬ ವಾದವನ್ನು ಕೆಎಂಎಫ್ ಮಂಡಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿ ಲೀಟರ್‌ಗೆ 8 ಹೆಚ್ಚಳ ಮಾಡಲು ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಹೆಚ್ಚಳವಾಗುವ ಈ ಮೊತ್ತದ ಬಹುಪಾಲು ನೇರವಾಗಿ ಹೈನುಗಾರರ (ರೈತರ) ಕೈಸೇರಲಿದೆ ಎಂಬ ಲೆಕ್ಕಾಚಾರದೊಂದಿಗೆ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಲಾಗಿದೆ.
ಬಸ್ ಟಿಕೆಟ್ ದರ ಏರಿಕೆಗೂ ನಿರ್ಧಾರ
ಇನ್ನು ಬಸ್ ಟಿಕೆಟ್ ದರ ಏರಿಕೆಗೂ ಸಚಿವ ಸಂಪುಟದಲ್ಲಿ ಸಹಮತ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಡೀಸೆಲ್ ಬೆಲೆ ಸೇರಿದಂತೆ ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿವೆ. ಈ ಹಿನ್ನೆಲೆ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯು ದರ ಪರಿಷ್ಕರಣೆಯ ಕುರಿತು ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ಸಚಿವ ಸಂಪುಟವು ಇದಕ್ಕೆ ಅನುಮೋದನೆ ನೀಡಿದರೆ, ಈ ತಿಂಗಳಲ್ಲೇ ದರ ಹೆಚ್ಚಳ ಜಾರಿಗೆ ಬರಬಹುದು. ಸ್ಥಳೀಯ ಸಂಸ್ಥೆಗಳ ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ದರ ಏರಿಕೆ ನಿರ್ಧಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.