ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಜಿಬಿಎ ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ಡಿ.ಕೆ. ಶಿವಕುಮಾರ್‌ ಸವಾಲು

Greater Bengaluru Authority: ಮೊದಲ ಸಭೆಯಲ್ಲಿ ಅಜೆಂಡಾ ಇರುವುದಿಲ್ಲ. ಜಿಬಿಎ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತೀರ್ಮಾನವನ್ನು ಮೊದಲ ಸಭೆಯಲ್ಲಿ ಮಾಡಲಾಗುವುದು. ಈ ಸಭೆಗೆ ಗೈರಾಗುವ ಮೂಲಕ ಬಿಜೆಪಿ ನಾಯಕರು ಬೆಂಗಳೂರು ನಗರದ ವಿರುದ್ಧವಾಗಿ ನಿಂತಿದ್ದಾರೆ. ಜನರು ಕೊಟ್ಟ ಅಧಿಕಾರಕ್ಕೆ ದ್ರೋಹ ಬಗೆದಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುವುದಕ್ಕಿಂತ ಅವರಿಗೆ ರಾಜಕಾರಣ ಮುಖ್ಯವಾಗಿದೆ. ಅವರ ಈ ನಡೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಜಿಬಿಎ ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ಡಿಕೆಶಿ

-

Profile Siddalinga Swamy Oct 10, 2025 10:51 PM

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (Greater Bengaluru Authority) ನಗರದ ಯೋಜನಾ ಪ್ರಾಧಿಕಾರದ ಜವಾಬ್ದಾರಿ, ಟಿಡಿಆರ್ ನೀಡುವ ಅಧಿಕಾರವನ್ನು ನೀಡಲಾಗಿದೆ. ಬಿಡಿಎಯಿಂದ (BDA) ಈ ಅಧಿಕಾರವನ್ನು ಜಿಬಿಎಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಹಾಗೂ ಸಭೆಯ ನಂತರ ಮಾತನಾಡಿದರು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜಿಬಿಎ ಸಮಿತಿಯ ಮೊದಲ ಸಭೆ ನಡೆದಿದ್ದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮೊದಲಿಗೆ ಜಿಬಿಎ ಜಾರಿಗೆ ತರುವಲ್ಲಿ ಶ್ರಮಿಸಿದ ಬಿ.ಎಸ್. ಪಾಟೀಲ್, ರವಿಚಂದ್ರನ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿಗೆ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳಾದ ತುಷಾರ್ ಗಿರಿನಾಥ್ ಹಾಗೂ ಮಹೇಶ್ವರ್ ರಾವ್ ಅವರ ತಂಡದ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸುವುದು ಹಾಗೂ ವಿರೋಧ ಪಕ್ಷಗಳ ಸಲಹೆ ಮೇರೆಗೆ ಜಂಟಿ ಸದನ ಸಮಿತಿ ಮಾಡಿದೆವು. ರಿಜ್ವಾನ್ ಅರ್ಷದ್ ಅವರ ನೇತೃತ್ವದ ಸಮಿತಿ ಜನರು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಇನ್ನು ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಇದಕ್ಕೆ ಸಹಕಾರ ನೀಡಿದ್ದು, ಎಲ್ಲ ಪಕ್ಷದ ಶಾಸಕರಿಗೆ ಅಭಿನಂದಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಉಳಿದಂತೆ ಐದು ಪಾಲಿಕೆಗಳ ಕಟ್ಟಡ ನಿರ್ಮಾಣಕ್ಕೆ ಜಾಗಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ಮುಖ್ಯ ಕಚೇರಿಯಾಗಿದ್ದ ಕಟ್ಟಡವು ಜಿಬಿಎ ಕಚೇರಿಯಾಗಿರುತ್ತದೆ. ಬೆಂಗಳೂರು ಕೇಂದ್ರ ಸೇರಿದಂತೆ ನೂತನ ಕಟ್ಟಡ ನಿರ್ಮಾಣ ಆಗುವವರೆಗೂ ಬೇರೆ ಪಾಲಿಕೆಗಳ ಸಭೆಗೆ ಇದೇ ಕಟ್ಟಡದಲ್ಲಿ ಅವಕಾಶ ಮಾಡಿಕೊಡಲಾಗುವುದು. ಇನ್ನು ಎಲ್ಲ ಐದು ಪಾಲಿಕೆಗಳ ಕಟ್ಟಡ ವಿನ್ಯಾಸ ಒಂದೇ ರೀತಿ ಇರಲಿದೆ ಎಂದರು.

ಪಾಲಿಕೆ ಸಮಿತಿಯ ವೆಚ್ಚದ ಹಣಕಾಸಿನ ಮಿತಿ ಹೆಚ್ಚಿಸಲಾಗಿದೆ. ಪಾಲಿಕೆ ಆಯುಕ್ತರ ವೆಚ್ಚದ ಮಿತಿಯನ್ನು 1 ಕೋಟಿ ರೂಪಾಯಿಯಿಂದ 3 ಕೋಟಿ ರೂ. ಏರಿಸಲಾಗಿದೆ. ಆ ಮೂಲಕ ಐದು ಪಾಲಿಕೆಗಳ ಆಯುಕ್ತರಿಗೆ 15 ಕೋಟಿ ರೂ. ನೀಡಲಾಗುವುದು. ಸ್ಥಾಯಿ ಸಮಿತಿ ವೆಚ್ಚದ ಮಿತಿಯನ್ನು 3 ಕೋಟಿ ರೂಪಾಯಿಯಿಂದ 5 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಐದು ಪಾಲಿಕೆಗಳ ಸ್ಥಾಯಿ ಸಮಿತಿಗಾಗಿ 25 ಕೋಟಿ ರೂ. ನೀಡಲಾಗುವುದು. ಇನ್ನು ಪಾಲಿಕೆ ಮೇಯರ್ ಅವರ ವೆಚ್ಚದ ಮಿತಿಯನ್ನು 5 ಕೋಟಿ ರೂ.ಯಿಂದ 10 ಕೋಟಿ ರೂ.ಗೆ ಏರಿಸಲಾಗಿದ್ದು, ಐದು ಪಾಲಿಕೆಗಳಿಂದ 50 ಕೋಟಿ ರೂ. ಆಗಲಿದೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ತಿಳಿಸಿದರು.

ಬೆಂಗಳೂರಿಗೆ ಹೊಸ ರೂಪ ನೀಡಲು ಜಿಬಿಎ

ಬೆಂಗಳೂರಿಗೆ ಹೊಸ ರೂಪ ನೀಡಲು ನಮ್ಮ ಸರ್ಕಾರ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಶಾಸಕರು ಹಾಗೂ ಜನರ ಅಭಿಪ್ರಾಯ ಸಂಗ್ರಹಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯನ್ನು ರೂಪಿಸಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆಯಿತು. ಏ. 23ರಂದು ರಾಜ್ಯಪಾಲರು ಜಿಬಿಎ ಕಾಯ್ದೆಗೆ ಒಪ್ಪಿಗೆ ನೀಡಿದ್ದು, ಸರ್ಕಾರ ಹಾಗೂ ಬೆಂಗಳೂರಿನ ನಾಗರೀಕರ ಪರವಾಗಿ ರಾಜ್ಯಪಾಲರಿಗೆ ಧನ್ಯವಾದ ತಿಳಿಸುತ್ತೇನೆ. ಮೇ 15ರಂದು ಸರ್ಕಾರ ಜಿಬಿಎ ಕಾಯ್ದೆ ಜಾರಿಗೆ ತಂದು, ಜು. 25ರಂದು ಜಿಬಿಎ ಅಡಿಯಲ್ಲಿ ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲು ಅಧಿಸೂಚನೆ ಹೊರಡಿಸಲಾಯಿತು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಬೆಂಗಳೂರು ಜನರಿಗೆ ಸುಗಮ ಆಡಳಿತ, ಸಮರ್ಪಕ‌ ಅಭಿವೃದ್ಧಿಗಾಗಿ ಜಿಬಿಎ ಅಸ್ತಿತ್ವಕ್ಕೆ: ಸಿಎಂ ಸಿದ್ದರಾಮಯ್ಯ

ಸೆ. 2ರಂದು ಈ ಪಾಲಿಕೆಗಳ ರಚನೆ ಆದೇಶ ಹೊರಡಿಸಲಾಗಿದ್ದು, ನಂತರ ಐದು ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 50, ಬೆಂಗಳೂರು ದಕ್ಷಿಣಕ್ಕೆ 72, ಬೆಂಗಳೂರು ಪೂರ್ವಕ್ಕೆ 63, ಬೆಂಗಳೂರು ಪಶ್ಚಿಮದಲ್ಲಿ 111, ಬೆಂಗಳೂರು ಉತ್ತರದಲ್ಲಿ 72 ವಾರ್ಡ್ ಸೇರಿ ಒಟ್ಟು 368 ವಾರ್ಡ್‌ಗಳನ್ನು ರಚಿಸಲಾಗಿದೆ. ಈ ಹಿಂದೆ 198 ವಾರ್ಡ್ ಇದ್ದವು, ಈಗ 368 ವಾರ್ಡ್ ಆಗಿವೆ. ಈ ವಾರ್ಡ್ ವಿಂಗಡಣೆ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

74ನೇ ತಿದ್ದುಪಡಿ ಉಲ್ಲಂಘನೆ ಆಗದಂತೆ ನಾವು ಈ ಪಾಲಿಕೆಗಳನ್ನು ರಚಿಸಿದ್ದೇವೆ. ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡಿ, ಸರ್ಕಾರವನ್ನು ಜನರ ಬಳಿಗೆ ತೆಗೆದು ಕೊಂಡುಹೋಗಬೇಕು. ಬೆಂಗಳೂರು ರಾಜ್ಯದ ಹೃದಯ ಭಾಗ. ಇಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಸಂಚಾರ ದಟ್ಟಣೆ ಸೇರಿದಂತೆ ಅನೇಕ ಸಮಸ್ಯೆ ಬಗೆಹರಿಸಲು ಈ ಜಿಬಿಎ ರಚಿಸಲಾಗಿದೆ ಮಾಡಲಾಗಿದೆ. ಸರ್ಕಾರದ ಸಹಕಾರ ಇಲ್ಲದೆ ಯಾವುದೇ ಪಾಲಿಕೆ ಯಶಸ್ವಿಯಾಗಿ ಆಡಳಿತ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ತೀರ್ಮಾನ ಮಾಡಿದ್ದೇವೆ. ಆಮೂಲಕ ಬೆಂಗಳೂರು ಹೊಸ ಇತಿಹಾಸ ಪುಟಕ್ಕೆ ಸೇರಿದೆ ಎಂದರು.

ಪಾಲಿಕೆಗಳಿಗೆ ಸರ್ಕಾರದ ಶ್ರೀರಕ್ಷೆಗಾಗಿ ಜಿಬಿಎ ಸಮಿತಿಗೆ ಸಿಎಂ ನೇತೃತ್ವ

ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಗೆದ್ದರೂ ಸರ್ಕಾರದ ಶ್ರೀರಕ್ಷೆ ಸದಾ ಪಾಲಿಕೆ ಮೇಲೆ ಇರಬೇಕು. ಎಲ್ಲ ಸಂದರ್ಭಗಳಲ್ಲಿ ಅನುದಾನದ ನೆರವು ಇರಬೇಕು ಎಂದು ಮುಖ್ಯಮಂತ್ರಿಯನ್ನು ಜಿಬಿಎ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಜಿಬಿಎ ಸಮಿತಿಯಲ್ಲಿ ಬಿಡಿಎ, ಬಿಎಂಆರ್‌ಡಿಎ, ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಸೇರಿದಂತೆ ಇನ್ನು ಅನೇಕ ಸಂಸ್ಥೆಗಳ ಕಮಿಷನರ್, ಪೊಲೀಸ್ ಆಯುಕ್ತರು, ಸಂಚಾರಿ ಪೊಲೀಸ್ ಕಮಿಷನರ್, ಎಲ್ಲ ಅಧಿಕಾರಿಗಳು ಸದಸ್ಯರಾಗಿ ಇರುತ್ತಾರೆ. ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಬೆಂಗಳೂರಿನಲ್ಲಿ ಮತದಾನದ ಹಕ್ಕು ಹೊಂದಿರುವ ಎಲ್ಲಾ ಜನಪ್ರತಿನಿಧಿಗಳ ಜತೆಗೆ ಬೆಂಗಳೂರಿನಲ್ಲಿ ವಾಸಿಸುವ ಲೋಕಸಭಾ ಸದಸ್ಯರು, ಮುಖ್ಯ ಕಾರ್ಯದರ್ಶಿ ಹಾಗೂ ಎಸಿಎಸ್ ಅಧಿಕಾರಿಗಳನ್ನು ಈ ಸಮಿತಿಯಲ್ಲಿ ಸೇರಿಸುವ ಬಗ್ಗೆ ಇಂದು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೊಸ ದಿಕ್ಕು ನೀಡಲು, ಈ ಸಭೆಯಲ್ಲಿ ಜಿಬಿಎ ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಬಹುದು. ಇಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನಿಮ್ಮ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ. ನಾವು ಎಲ್ಲ ಆಸ್ತಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸುಮಾರು 2 ಸಾವಿರ ಕೋಟಿ ರೂ. ಆದಾಯ ಹೆಚ್ಚಳದ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈ ವರ್ಷ 6,200 ಕೋಟಿ ಆದಾಯ ಬಂದಿದ್ದು, ದೆಹಲಿಯಲ್ಲಿ ಕೇವಲ 2 ಸಾವಿರ ಕೋಟಿ ರೂ. ಮಾತ್ರ ಆದಾಯವಿದೆ ಎಂದು ಹೇಳಿದರು.

ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಹಾಗೂ ಜಂಟಿ ಸದನ ಸಮಿತಿ ಮೂಲಕ ನಡೆದ 21 ಸಭೆಗಳಲ್ಲಿ ಎಲ್ಲ ಪಕ್ಷದವರ ಸಲಹೆ ಸ್ವೀಕರಿಸಿ ಈ ಜಿಬಿಎ ರಚಿಸಲಾಗಿದೆ. ವಿರೋಧ ಪಕ್ಷಗಳ ನಾಯಕರು ಆಂತರಿಕವಾಗಿ ಜಿಬಿಎ ವಿಚಾರವಾಗಿ ಸಂತೋಷವಾಗಿದ್ದಾರೆ. ಆದರೆ ರಾಜಕೀಯ ಉದ್ದೇಶದಿಂದ ಇದನ್ನು ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಶ್ನೋತ್ತರ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಬಿಎ ರದ್ದು ಮಾಡಲಾಗುವುದು, ಸಭೆಯ ಅಜೆಂಡಾವನ್ನೇ ತಿಳಿಸಿಲ್ಲ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಬಹಳ ಸಂತೋಷ. ಮೊದಲ ಸಭೆಯಲ್ಲಿ ಅಜೆಂಡಾ ಇರುವುದಿಲ್ಲ. ಜಿಬಿಎ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತೀರ್ಮಾನವನ್ನು ಮೊದಲ ಸಭೆಯಲ್ಲಿ ಮಾಡಲಾಗುವುದು. ಈ ಸಭೆಗೆ ಗೈರಾಗುವ ಮೂಲಕ ಬಿಜೆಪಿ ನಾಯಕರು ಬೆಂಗಳೂರು ನಗರದ ವಿರುದ್ಧವಾಗಿ ನಿಂತಿದ್ದಾರೆ. ಜನರು ಕೊಟ್ಟ ಅಧಿಕಾರಕ್ಕೆ ದ್ರೋಹ ಬಗೆದಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುವುದಕ್ಕಿಂತ ಅವರಿಗೆ ರಾಜಕಾರಣ ಮುಖ್ಯವಾಗಿದೆ. ಅವರ ಈ ನಡೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇನ್ನು ಜಿಬಿಎ ರದ್ದುಗೊಳಿಸುವ ವಿಚಾರವಾಗಿ ಹೇಳುವುದಾದರೆ, ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಯಾವುದೇ ಬೇರೆ ಸರ್ಕಾರ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಭೂ ಸುಧಾರಣಾ ಕಾಯ್ದೆಯಿಂದ ಬ್ಯಾಂಕುಗಳ ರಾಷ್ಟ್ರೀಕರಣ, ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಶೈಕ್ಷಣಿಕ ಹಕ್ಕು ಸೇರಿದಂತೆ ಗ್ಯಾರಂಟಿ ಯೋಜನೆಗಳವರೆಗೂ ಕಾಂಗ್ರೆಸ್ ಸರ್ಕಾರಗಳ ತೀರ್ಮಾನವನ್ನು ಬದಲಿಸಲು ಸಾಧ್ಯವಾಗಿಲ್ಲ. ಅವರು ಜಿಬಿಎ ವಿರುದ್ಧ ಪ್ರತಿಭಟಿಸುವುದೇ ಆದರೆ, ಅವರು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕರಿಸಲಿ. ಅವರು ಏನಾದರೂ ಟೀಕೆ ಮಾಡಲಿ ನಾವು ನಮ್ಮ ಜನಪರ ಕೆಲಸ ಮುಂದುವರಿಸುತ್ತೇವೆʼ ಎಂದು ತಿರುಗೇಟು ನೀಡಿದರು.

ಜಿಬಿಎ ಸದಸ್ಯರೇ ಸಭೆಗೆ ಬಂದಿಲ್ಲ ಎಂದು ಕೇಳಿದಾಗ, ʼಸಚಿವ ಕೃಷ್ಣ ಭೈರೇಗೌಡರು ಹಾಸನದಲ್ಲಿ ಹಾಸನಾಂಬ ದೇವರ ದರ್ಶನ ಕಾರ್ಯಕ್ರಮದ ಉಸ್ತುವಾರಿಯಲ್ಲಿ ನಿರತರಾಗಿದ್ದಾರೆ. ಬೈರತಿ ಸುರೇಶ್ ಅವರಿಗೆ ಶಸ್ತ್ರಚಿಕಿತ್ಸೆಯಾಗಿದೆ. ಇನ್ನು ಕೆಲವರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಉಳಿದಂತೆ ವಿರೋಧ ಪಕ್ಷದವರು ಎಲ್ಲರೂ ಗೈರಾಗಿದ್ದಾರೆʼ ಎಂದು ತಿಳಿಸಿದರು.

ವಾರ್ಡ್ ಮರುವಿಂಗಡಣೆ ವಿಚಾರವಾಗಿ ಕೇಳಿದಾಗ, ʼವಾರ್ಡ್ ಮರುವಿಂಗಡಣೆ ನಮ್ಮ ಜವಾಬ್ದಾರಿ ಅಲ್ಲ. ಅದಕ್ಕಾಗಿಯೇ ಸಮಿತಿ ಇದೆ. ಅದು ಸಮಿತಿಯ ಜವಾಬ್ದಾರಿ. ಅದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲʼ ಎಂದು ತಿಳಿಸಿದರು.

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಹೀಗಾಗಿ ಐದು ಪಾಲಿಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ʼನಮಗೆ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯ ಅಲ್ಲ. ಹೊಸ ನಾಯಕರನ್ನು ಹುಟ್ಟುಹಾಕಬೇಕು. ಮುಂದಿನ ಚುನಾವಣೆ ನಂತರ ಪಾಲಿಕೆಗಳಲ್ಲಿ ಶೇ. 50ರಷ್ಟು ಮಹಿಳಾ ಜನಪ್ರತಿನಿಧಿಗಳು ಇರಲಿದ್ದಾರೆʼ ಎಂದು ತಿಳಿಸಿದರು. ‌

ಈ ಸುದ್ದಿಯನ್ನೂ ಓದಿ | CM Siddaramaiah: ಬೆಂಗಳೂರಿಗರಿಗೆ ಗುಡ್‌ನ್ಯೂಸ್‌; ಟ್ರಾಫಿಕ್‌ ಕಿರಿಕಿರಿಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ

ಓಸಿ ಮತ್ತು ಸಿಸಿ ವಿನಾಯಿತಿ ವಿಚಾರವಾಗಿ ಕೇಳಿದಾಗ, ʼಸದ್ಯಕ್ಕೆ 30x40 ವರೆಗಿನ ವಿಸ್ತೀರ್ಣದ ಕಟ್ಟಡಗಳಿಗೆ ವಿನಾಯಿತಿ ನೀಡಿದ್ದೇವೆ. ಉಳಿದಂತೆ ಕಾನೂನು ತಂಡಕ್ಕೆ ಸಿಎಂ ಸೂಚನೆ ನೀಡಿದ್ದು, ಅವರ ಸಲಹೆ ಮೇರೆಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.