ಬೆಂಗಳೂರು: 18 ವರ್ಷಗಳ ಬಳಿಕ ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ಐಪಿಎಲ್ ಕಪ್ ಗೆದ್ದುಕೊಂಡಿದ್ದು, ಸಂಭ್ರಮಾಚರಣೆ ವೇಳೆ ಘೋರ ದುರಂತ ಸಂಭವಿಸಿದೆ. ವಿಜಯೋತ್ಸವ ಆಯೋಜಿಸಿದ್ದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ (Bengaluru Stampede) 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ. ಈ ಮಧ್ಯೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಆರ್‌ಸಿಬಿ ಅಭಿಮಾನಿಗಳೊಂದಿಗೆ ದರ್ಪದಿಂದ ವರ್ತಿಸುವ ವಿಡಿಯೊ ಹೊರ ಬಂದಿದೆ. ಇದರಲ್ಲಿ ಡಿಕೆಶಿ ಅಭಿಮಾನಿಗಳನ್ನು ತಳ್ಳುತ್ತಿರುವುದು ಮತ್ತು ಹೊಡೆಯುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು, ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.
ಜೂ. 4ರಂದು ಆರ್‌ಸಿಬಿ ತಂಡ ಬೆಂಗಳೂರಿಗೆ ಬಂದಿಳಿದಿತ್ತು. ಚೊಚ್ಚಲ ಕಪ್ ಗೆದ್ದ ತಂಡಕ್ಕೆ ವಿಧಾನಸೌಧದ ಆವರಣದಲ್ಲಿ ಸನ್ಮಾನ ಆಯೊಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ಡಿಕೆಶಿ ಅಭಿಮಾನಿಯೊಬ್ಬನಿಗೆ ಹೊಡೆದಿದ್ದಾರೆ.
ವೈರಲ್ ವಿಡಿಯೊಗಳು ಇಲ್ಲಿವೆ:
ಈ ಸುದ್ದಿಯನ್ನೂ ಓದಿ: Bengaluru Stampede: ಬೆಂಗಳೂರು ಕಾಲ್ತುಳಿತಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ವಾಗ್ದಾಳಿ
ವಿಡಿಯೊದಲ್ಲಿ ಏನಿದೆ?
ವಿಧಾನಸೌಧದ ಆವರಣದಲ್ಲಿ ಆರ್‌ಸಿಬಿ ಆಟಗಾರರಿಗೆ ಸನ್ಮಾನ ನೆರವೇರಿಸಿದ ಬಳಿಕ ಮಳೆ ಹನಿಯತೊಡಗಿತ್ತು. ಈ ವೇಳೆ ಎಲ್ಲರೂ ಸ್ಥಳದಿಂದ ಹೊರಡುವ ಗಡಿಬಿಡಿಯಲ್ಲಿದ್ದರು. ಈ ವೇಳೆ ಡಿಕೆಶಿ ಅಡ್ಡ ಬಂದ ಅಭಿಯಾನಿಯೊಬ್ಬರ ಕತ್ತು ಹಿಡಿದು ದೂಡಿದ್ದಾರೆ. ಜತೆಗೆ ಕತ್ತಿಗೆ ಹೊಡೆದಿದ್ದಾರೆ. ಸದ್ಯ ಅವರ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ಟೀಕಿಸಿದ್ದಾರೆ.
ಹಿಂದೆಯೂ ನಡೆದಿತ್ತು
ಡಿಕೆಶಿ ಕಪಾಳ ಮೋಕ್ಷ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಡೆದಿದ್ದರು. ಕಳೆದ ವರ್ಷ ಹಾವೇರಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಡಿಕೆಶಿ ಅಸಮಾಧಾನಗೊಂಡು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಹೊಡೆದಿದ್ದರು. ಈ ವಿಡಿಯೊ ಹೊರ ಬಂದು ವೈರಲ್ ಆಗಿತ್ತು.
ಅದಕ್ಕೂ ಮೊದಲು ಕೋವಿಡ್-19 ಕಾಣಿಸಿಕೊಂಡಿದ್ದ ವೇಳೆ ತಮ್ಮ ಜತೆಗೆ ಹೆಜ್ಜೆ ಹಾಕಲು ಯತ್ನಿಸಿದ ವ್ಯಕ್ತಿಗೆ ಡಿಕೆಶಿ ಹೊಡೆದಿದ್ದರು. ಬಳಿಕ ವಿಡಿಯೊವನ್ನು ಡಿಲೀಟ್ ಮಾಡುವಂತೆ ಕ್ಯಾಮೆರಾ ಮ್ಯಾನ್‌ಗೆ ತಿಳಿಸಿದ್ದರು. ಮಂಡ್ಯದಲ್ಲಿ ಈ ಘಟನೆ ನಡೆದಿತ್ತು.
ಬೆಂಗಳೂರು ಕಾಲ್ತುಳಿತಕ್ಕೇನು ಕಾರಣ?
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತದಿಂದ ಇಡೀ ರಾಜ್ಯವೇ ಆಘಾತಕ್ಕೆ ಒಳಗಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು ಅಪಘಾತಕ್ಕೆ ಕಾರಣ. ಅಲ್ಲದೆ ಗೇಟ್ ಮುರಿದು ಫ್ಯಾನ್ಸ್ ಒಳ ನುಗ್ಗಲು ಯತ್ನಿಸಿದ್ದರು.
ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
ʼʼಕಾಲ್ತುಳಿತದಲ್ಲಿ ಸತ್ತವರು ನಮ್ಮ ಕುಟುಂಬದವರೇ, ನನಗೆ ಅತ್ಯಂತ ದುಃಖವಾಗುತ್ತಿದೆ. ಶಾಕ್ ಆಗಿದೆ. ಇಡೀ ಕರ್ನಾಟಕ ಇದಕ್ಕಾಗಿ ಶೋಕಿಸುತ್ತಿದೆʼʼ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಅವರು ಸಂತ್ರಸ್ತ ಕುಟುಂಬಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. "ಸಣ್ಣ ಮಕ್ಕಳು ಸಂಕಷ್ಟಕ್ಕೀಡಾದ ದೃಶ್ಯಗಳನ್ನು ನಾನು ನೋಡಿದೆ. ಯಾವ ಫ್ಯಾಮಿಲಿಯೂ ಇದನ್ನು ಅರಗಿಸಿಕೊಳ್ಳಲಾಗದು. ನಮ್ಮ ಸರಕಾರ ಇರುವಾಗಲೇ ಇದು ನಡೆದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು, ಒಪ್ಪಿಕೊಳ್ಳುತ್ತೇವೆʼʼ ಎಂದು ಅವರು ಹೇಳಿದ್ದಾರೆ.