ಬೆಂಗಳೂರು, ಮಾ.14: "ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಲು ಮುಂದಾಗಿರುವ ಫ್ಲಿಪ್‌ಕಾರ್ಟ್ (Flipkart) ಸಂಸ್ಥೆ ವಿರುದ್ಧ ಸೆಕ್ಷನ್ 19/1 ಎ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ನವದೆಹಲಿಯ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಅವರಿಗೆ ದೂರು ನೀಡಲಾಗುತ್ತಿದೆ. ಜೊತೆಗೆ ಈ ವಿಚಾರವನ್ನು ಪ್ರಧಾನಿ ಮೋದಿಯವರಿಗೆ ಇ ಮೇಲ್ ಮುಖಾಂತರ ಕಳುಹಿಸುತ್ತಿದ್ದೇನೆ" ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ತಿಳಿಸಿದರು.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಅವರು ಶನಿವಾರ ಮಾತನಾಡಿದರು. "ಹಣ ಮಾಡುವ ಭರದಲ್ಲಿ ಫ್ಲಿಪ್ ಕಾರ್ಟ್ ಎನ್ನುವ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದೆ. ರೈತ ಸಮುದಾಯವನ್ನ ಧ್ವಂಸ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ದಂಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ" ಎಂದರು.
"ಮಾರುಕಟ್ಟೆಯನ್ನು ಆವರಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಸ್ಪರ್ಧೆಯಿಂದ ರೈತರಿಗೆ ಹೊಡೆತ ಬೀಳುತ್ತದೆ. ಇದಕ್ಕಾಗಿಯೇ ಸುಮಾರು 2 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ಶೇರಿನ ಹಣ ಬಳಸಿ ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಾ ಇರುವುದು ಸೂಕ್ತವಲ್ಲ"ಎಂದರು.
ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಣವಿಲ್ಲವೆಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರ: ಸಿಎಂ ಸಿದ್ದರಾಮಯ್ಯ
"ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಹಾಲು ಒಕ್ಕೂಟ ಸಂಸ್ಥೆಗಳನ್ನು ನಾಶ ಮಾಡುವ ಪ್ರಕ್ರಿಯೆ ಇದಾಗಿದೆ. ಎಂಎನ್‌ಸಿಗಳು ರೈತರ ಹಿತವನ್ನ ಹಾಳು ಮಾಡುವ ಕೆಲಸ ಮಾಡುತ್ತಿವೆ. ಕಡಿಮೆ ದರಕ್ಕೆ ಎಷ್ಟು ದಿನ ಹಾಲನ್ನು ನೀಡುತ್ತಾರೆ ಎಂದು ಜಾಹೀರಾತಿನಲ್ಲಿ ತಿಳಿಸಬೇಕು. ರೈತ ಸಂಕುಲವನ್ನ ಹಾಳು ಮಾಡುತ್ತಿರುವ ಈ ಕೆಲಸದಿಂದ ಫ್ಲಿಪ್ ಕಾರ್ಟ್ ಸಂಸ್ಥೆ ಹಿಂದೆ ಸರಿಯಬೇಕು" ಎಂದು ಆಗ್ರಹಿಸಿದರು.
14.5 ಲಕ್ಷ ಲೀ ಹಾಲು ಮಾರಾಟ
"ಈಗಾಗಲೇ 14.5 ಲಕ್ಷ ಲೀಟರ್ ಹಾಲು ಮಾರಾಟ ಆಗಿದೆ. ಈಗಾಗಲೇ ಎಲ್ಲಾ ಕಡೆ ಜಾಹೀರಾತು ನೀಡಿದೆ. ಸಾರ್ವಜನಿಕರ ಹಣವನ್ನ ಹೂಡಿಕೆ ಮಾಡಿ ಗ್ರಾಹಕರನ್ನ ಆಕರ್ಷಣೆ ಮಾಡಲಾಗುತ್ತಿದೆ. ಆ ಕಂಪನಿಯವರು ಎಷ್ಟು ದಿನ ಈ ರೀತಿ ಹಾಲು ಕೊಡುತ್ತಾರೆ ಎಂಬುದನ್ನು ಬಹಿರಂಗಗೊಳಿಸಬೇಕು" ಎಂದರು.
ನಂದಿನಿ ಹಾಲಿನ ಮಾರಾಟ ಪ್ರಮಾಣ ಕಡಿಮೆಯಾಗಿದೆಯೇ ಎಂದು ಕೇಳಿದಾಗ, "ಮಾರುಕಟ್ಟೆಯಲ್ಲಿ ನಂದಿನಿ ಹಾಲು ಮಾತ್ರ ಇಲ್ಲ. ಬಮುಲ್ ಒಕ್ಕೂಟಕ್ಕೂ 40- 50 ಸಾವಿರ ಲೀ ಹಾಲು ಮಾರಾಟ ಕಡಿಮೆಯಾಗಿದೆ. ಎಷ್ಟು ದಿನದಿಂದ ಇದು ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬೇಕು" ಎಂದರು.
ಇದರ ಹಿಂದೆ ಬೇರೆ ಯಾವುದಾದರೂ ಸಂಸ್ಥೆಗಳು ಇವೆಯೇ ಎಂದು ಕೇಳಿದಾಗ, "ಇದರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದರ ಬಗ್ಗೆ ಒಂದೆರಡು ಜಾಹೀರಾತು ನೋಡಿದೆ. ಇದರ ಬಗ್ಗೆ ಅಧಿಕಾರಿಗಳ ಬಳಿಯೂ ಚರ್ಚೆ ನಡೆಸುವೆ. ವ್ಯಾಪಾರದ ಹೆಸರಿನಲ್ಲಿ ರೈತ ಸಂಕುಲಕ್ಕೆ ಬೆಂಕಿ ಇಡುವುದು ತರವಲ್ಲ. ದೇಶದ ಒಳಗೆ ಇರುವವರೇ ಹೀಗೆ ಮಾಡುವುದು ಎಷ್ಟು ಸರಿ" ಎಂದರು.
"ರೈತರಿಗೆ ನಾವು 38, 39, 40 ರೂಪಾಯಿ ಹಣವನ್ನು ಪಾವತಿ ಮಾಡುತ್ತಿದ್ದೇವೆ. ಇವರು ಒಂದು ರೂಪಾಯಿಗೆ ಕೊಡುವುದಕ್ಕೆ ಹೇಗೆ ಸಾಧ್ಯವಾಗುತ್ತದೆ. ಯಾರಿಂದ ಖರೀದಿ ಮಾಡುತ್ತಿದ್ದಾರೆ. ಎಲ್ಲಿಂದ ಹಾಲು ಬರುತ್ತಿದೆ ಎಂದು ತಿಳಿದುಕೊಳ್ಳಬೇಕಿದೆ"ಎಂದರು.
"ಮಾಧ್ಯಮಗಳು ಈ ವಿಚಾರವಾಗಿ ರಾಷ್ಟ್ರದ ಗಮನ ಸೆಳೆಯಬೇಕು. ರೈತರ ಪರವಾಗಿ ನಿಲ್ಲಬೇಕು. ರೈತರು ಹೋರಾಟಕ್ಕೆ ಇಳಿಬೇಕು ಎಂದು ಕರೆ ನೀಡುತ್ತಿದ್ದೇನೆ. ಸರ್ಕಾರ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ" ಎಂದರು.
ಇಂತಹ ಸಂಸ್ಥೆಗಳಿಗೆ ಹಾಲು ಮಾರಬೇಡಿ ಎಂದು ರೈತರಿಗೆ ತಿಳಿಸಬೇಕು ಎಂದಾಗ, "ರೈತರು ಯಾರಿಗೆ ಹಾಲು ಮಾರಾಟ ಮಾಡುತ್ತಾರೆ ಎಂಬುದು ತಿಳಿಯುವುದಿಲ್ಲ. ಬಲ್ಕ್ ಮಿಲ್ಕ್ ಉತ್ಪಾದಕರ ಬಳಿ ಸೇರಿದಂತೆ ಎಲ್ಲಿ ಅವರು ಹಾಲು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಅಥವಾ ಹಾಲಿನ ಪೌಡರ್ ಬೆರೆಸುತ್ತಿದ್ದಾರಾ ಎಂದು ತಿಳಿಯಲು ಸ್ಯಾಂಪಲ್ ಅನ್ನ ತರಿಸುತ್ತಿದ್ದೇನೆ. ಅದನ್ನು ಲ್ಯಾಬ್ ನಲ್ಲಿ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಸಹಕಾರಿ ಸಂಘಗಳು ಒಮ್ಮೆ ಮುಗ್ಗರಿಸಿದರೆ ಇದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತದೆ" ಎಂದರು.
ರಾಜ್ಯದಲ್ಲಿ 4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ; 14,525 ಉದ್ಯೋಗ ಸೃಷ್ಟಿ ನಿರೀಕ್ಷೆ
ಸಂಸದರು ನೀರಾವರಿ ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ, "ಶಾಸಕರು ಹಾಗೂ ಸಂಸತ್ ಸದಸ್ಯರು ಈ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಸಂಸದರು ಪ್ರತಿಭಟಿಸುತ್ತಿಲ್ಲ. ಲೋಕಸಭಾ ಅಧಿವೇಶನದಲ್ಲಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಬೇಕು. ಮೇಕೆದಾಟು, ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಬಗ್ಗೆ ಮಾತನಾಡಬೇಕು" ಎಂದರು.
"ಕರ್ನಾಟಕಕ್ಕೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಇದಕ್ಕೆ ದೊಡ್ಡ ದನಿ ಎತ್ತಬೇಕಿರುವುದು ಸಂಸತ್ ಸದಸ್ಯರ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಭಾವಿಸಿದ್ದೇನೆ" ಎಂದರು.
ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗ್ಗೆ ಪ್ರತಿಭಟನೆ ಮಾಡಿ ಎಂದು ರಾಜ್ಯ ಸರ್ಕಾರ ಪ್ರಚೋದನೆ ನೀಡುತ್ತಿದೆ ಎನ್ನುವ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಯುದ್ಧ ನಡೆಯುತ್ತಿರುವ ಕಾರಣಕ್ಕೆ ನಾವು ಅದರ ಭಾಗ ಅಲ್ಲದೆ ಇದ್ದರೂ ನಮ್ಮ ಮೇಲೆ ಪರಿಣಾಮ ಬಿದ್ದೇ ಬೀರುತ್ತದೆ. ಕೇಂದ್ರ ಸರ್ಕಾರ ಒಳ್ಳೆಯ ಬಾಂಧವ್ಯ ಇಟ್ಟುಕೊಂಡು ಮಿತ್ರ ರಾಷ್ಟ್ರಗಳ ಜೊತೆ ಮಾತನಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ವಿದೇಶಾಂಗ ನೀತಿ ವೈಫಲ್ಯ ಕಂಡಿದೆ. ಆದರೂ ಸರ್ಕಾರ ಎಚ್ಚರಿಕೆ ವಹಿಸಬೇಕು. ಅವಾಂತರಗಳು, ಬೆಲೆ ಏರಿಕೆ ಆಗದಂತೆ ತಡೆಯಬೇಕು. ಆಡಳಿತದಲ್ಲಿ ಇದ್ದಾಗ ರಾಷ್ಟ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಹೇಳಿಕೆಗಳಿಗೆ ಸೀಮಿತ ಆಗುವುದು ಬೇಡ. ಆರೋಪ ಪ್ರತ್ಯಾರೋಪ ಮಾಡುವುದು ಬೇಡ. ಪ್ರಧಾನಿಯವರಾಗಲಿ, ಜೋಶಿಯವರಾಗಲಿ 60 ಡಾಲರ್ ಇದ್ದಾಗ ಗ್ಯಾಸ್ ಬೆಲೆಯನ್ನು ಇಳಿಕೆ ಮಾಡಿ ನೀಡಲಿಲ್ಲ" ಎಂದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ರಾಜ್ಯ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಏನು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಮಾತನಾಡುತ್ತೇನೆ" ಎಂದು ತಿಳಿಸಿದರು.
ಪ್ರಧಾನಿ ಮೋದಿ, ಸಿಸಿಐಗೆ ಡಿ.ಕೆ.ಸುರೇಶ್ ಬರೆದ ಪತ್ರದಲ್ಲಿ ಏನಿದೆ?
ಕ್ವಿಕ್ ಕಾಮರ್ಸ್ ಕಂಪನಿಗಳಿಂದ ಕಡಿಮೆ ಬೆಲೆಗೆ ಹಾಲಿನ ಮಾರಾಟ ಮತ್ತು ಇದರಿಂದ ರೈತರು ಹಾಗೂ ಸಹಕಾರ ಸಂಘಗಳ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸ್ಪರ್ಧಾತ್ಮಕ ಆಯೋಗ (CCI) ಅಧ್ಯಕ್ಷ ರವ್‌ನೀತ್ ಕೌರ್ ಅವರಿಗೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪತ್ರ ಬರೆದಿದ್ದಾರೆ.
ಹೈನುಗಾರರಿಗೆ ನ್ಯಾಯಯುತ ಮತ್ತು ಸ್ಥಿರವಾದ ಹಾಲಿನ ಖರೀದಿ ಬೆಲೆ ಖಚಿತಪಡಿಸುವ ಮತ್ತು ಗ್ರಾಹಕರಿಗೆ ಕೈಗೆಟುಕುವ, ಗುಣಮಟ್ಟದ ಡೈರಿ ಉತ್ಪನ್ನಗಳನ್ನು ಒದಗಿಸುವ ಸಹಕಾರಿ ಚೌಕಟ್ಟಿನೊಳಗೆ BAMUL ಕಾರ್ಯನಿರ್ವಹಿಸುತ್ತದೆ. ಆದರೆ, ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಕಾನೂನುಬಾಹಿರ ತಂತ್ರವಾಗಿದೆ. ಫ್ಲಿಪ್‌ಕಾರ್ಟ್ ತನ್ನ ಕ್ವಿಕ್ ಕಾಮರ್ಸ್ ಸೇವೆ ಫ್ಲಿಪ್‌ಕಾರ್ಟ್ ಮಿನಿಟ್ಸ್ ಮೂಲಕ ಗ್ರಾಹಕರ ಸೆಳೆಯಲು ಅರ್ಧ ಲೀಟರ್ ಹಾಲನ್ನು ಕೇವಲ 1 ರೂ. ಮಾರಾಟ ಮಾಡಲಾಗುತ್ತಿದೆ ಎಂಬ ಜಾಹೀರಾತು ಪ್ರಕಟಿಸಿದೆ.
ಈ ಜಾಹೀರಾತಿನಲ್ಲಿನ ಮಾರಾಟ ಬೆಲೆಯು ಹಾಲಿನ ಸಂಗ್ರಹಣೆ, ಸಂಸ್ಕರಣೆ, ಸಾಗಣೆ, ಕೋಲ್ಡ್-ಚೈನ್ ನಿರ್ವಹಣೆ ಮತ್ತು ಚಿಲ್ಲರೆ ವಿತರಣೆಯ ಆರ್ಥಿಕ ವೆಚ್ಚಕ್ಕಿಂತ ಕಡಿಮೆಯಾಗಿದೆ. ಅಂತಹ ಬೆಲೆ ನಿಗದಿಯು ಸಾಮಾನ್ಯ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಲ್ಲ. ಇದು ಪ್ರಬಲ ಸ್ಥಾನದ ದುರುಪಯೋಗವನ್ನು ನಿಷೇಧಿಸುವ ಸ್ಪರ್ಧಾತ್ಮಕ ಕಾಯ್ದೆ 2002ರ ಸೆಕ್ಷನ್ 4 ರ ಅಡಿಯಲ್ಲಿ ಕಳವಳ ಹುಟ್ಟುಹಾಕುತ್ತದೆ. ಸೆಕ್ಷನ್ 4 ರ ವಿವರಣೆ (ಎ) ಪ್ರಿಡೇಟರಿ ಬೆಲೆ ನಿಗದಿಯು ಸ್ಪರ್ಧೆಯನ್ನು ಕಡಿಮೆ ಮಾಡುವ ಅಥವಾ ನಂದಿನಿ, ಬಮುಲ್‌ನಂತಹ ಸ್ಪರ್ಧಿಗಳನ್ನು ಮಾರುಕಟ್ಟೆಯಿಂದ ತೊಲಗಿಸುವ ಉದ್ದೇಶದಿಂದ ವೆಚ್ಚಕ್ಕಿಂತ ಕಡಿಮೆ ಸರಕು ಅಥವಾ ಸೇವೆಗಳ ಮಾರಾಟ ಎಂದು ವ್ಯಾಖ್ಯಾನಿಸುತ್ತದೆ.
ಈ ಹಿನ್ನೆಲೆಯಲ್ಲಿ ಹಾಲು ಮತ್ತು ರೈತರ ಕೃಷಿ ಉತ್ಪನ್ನಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿರುವ ಕ್ವಿಕ್ ಕಾಮರ್ಸ್ ವೇದಿಕೆಗಳ ವಿರುದ್ಧ ತಕ್ಷಣದ ತನಿಖೆ ಪ್ರಾರಂಭಿಸಬೇಕು. ಹಾಗೆಯೇ ರೈತರು, ಸಹಕಾರಿ ಸಂಸ್ಥೆಗಳು ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳ ಮೇಲೆ ಇಂತಹ ಬೆಲೆ ನಿಗದಿ ತಂತ್ರಗಳ ಸಂಭಾವ್ಯ ಪರಿಣಾಮಗಳ ಬಗ್ಗೆ ಪರಿಶೀಲಿಸಬೇಕು. ಇನ್ನು ನ್ಯಾಯಯುತ ಮಾರುಕಟ್ಟೆ ಸ್ಪರ್ಧೆಯನ್ನು ವಿರೂಪಗೊಳಿಸುವ ಸಮರ್ಥನೀಯವಲ್ಲದ ಬೆಲೆ ನಿಗದಿ ತಂತ್ರಗಳಿಂದ ಅಗತ್ಯ ಕೃಷಿ ಸರಕುಗಳನ್ನು ಹೊರಗಿಡಲು ಸೂಕ್ತ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಮುಲ್ ಅಧ್ಯಕ್ಷರು ಮನವಿ ಮಾಡಿದ್ದಾರೆ.