ಬೆಂಗಳೂರು, ನ.17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ (Parvathi Siddaramaiah) ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶದ ಸಮಸ್ಯೆ ಹಿನ್ನೆಲೆಯಲ್ಲಿ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಪಾರ್ವತಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ಈಗಾಗಲೇ ಮೋದಿ ಮತ್ತು ಖರ್ಗೆಯವರನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಅವರು, ಪತ್ನಿಯ ಅನಾರೋಗ್ಯ ವಿಚಾರ ತಿಳಿದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸದ್ಯ ಆಸ್ಪತ್ರೆಯಲ್ಲಿ ಇದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಕಳೆದ ತಿಂಗಳು ಹಾಸನಾಂಬ ಉತ್ಸವದ ವೇಳೆ ದೇವಿ ದರ್ಶನ ಪಡೆದಿದ್ದರು. ಆಪ್ತರ ಜತೆ ತೆರಳಿ ಮೊದಲ ಬಾರಿಗೆ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ದರ್ಶನ ಪಡೆದಿದ್ದರು.
ಈ ಸುದ್ದಿಯನ್ನೂ ಓದಿ | ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ರಾಯಚೂರಿನಲ್ಲಿ ಏಮ್ಸ್, ಕಬ್ಬು ದರ ಹೆಚ್ಚಳಕ್ಕೆ ಮನವಿ
ಇನ್ನು 2023ರ ಜೂನ್‌ನಲ್ಲಿ ಕೂಡ ಸಿಎಂ ದೆಹಲಿ ಪ್ರವಾಸಕ್ಕೆ ತೆರಳುವ ಸಮಯದಲ್ಲಿ ಪಾರ್ವತಿ ಸಿದ್ದರಾಮಯ್ಯ ತೀವ್ರ ಜ್ವರದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸದ ಸಮಯದಲ್ಲಿ ಬದಲಾವಣೆ ಮಾಡಿಕೊಂಡಿದ್ದರು.