ಬೆಂಗಳೂರು: ನಗರದ ಕಂಠೀರವ ಸ್ಟುಡಿಯೋ ಬಳಿ ಬಿಡಿಎ ನಡೆಸುತ್ತಿದ್ದ ಅಂಡರ್ ಪಾಸ್ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು (Bengaluru Tragedy), ಮೂವರನ್ನು ರಕ್ಷಣೆ ಮಾಡಲಾಗಿದೆ.
ಬೆಳಿಗ್ಗೆ 11:19 ರ ಸುಮಾರಿಗೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಮಗಾರಿ ಸ್ಥಳದಲ್ಲಿ ಸುಮಾರು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನೀರು ಹೊರ ಎತ್ತುವ ಕಾರ್ಯದಲ್ಲಿ ತೊಡಗಿದ್ದಾಗ, ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮೇಲ್ಭಾಗದಲ್ಲಿ ಶೇಖರಣೆಯಾಗಿದ್ದ ಕಟ್ಟಡ ತ್ಯಾಜ್ಯ ಭಾರಕ್ಕೆ ಏಕಾಏಕಿ ಮಣ್ಣು ರಭಸವಾಗಿ ಕುಸಿದುಬಿದ್ದಿದೆ. ಸ್ವಲ್ಪ ಸಮಯದ ಮುಂಚೆಯಷ್ಟೇ ಕೆಲವು ಕಾರ್ಮಿಕರು ತಿಂಡಿ ತಿನ್ನಲು ಹೊರಗೆ ಹೋಗಿದ್ದರು. ಆದಾಗ್ಯೂ, ತಳಭಾಗದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡು, ದುರಂತ ಸಂಭವಿಸಿದೆ.
ದುರಂತದಲ್ಲಿ ಒಡಿಶಾ ಮೂಲದ ಸೋನಾರಾಮ್ (26) ಹಾಗೂ ಜಾರ್ಖಂಡ್ ಮೂಲದ ಪರಿಮಳ್ (31) ಎಂಬುವವರು ಮಣ್ಣಿನಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗಾಯಗೊಂಡ ಸದಾನಂದ್, ಸುನೀಲ್ ಹಾಗೂ ಇರ್ಮಿಯಾಜ್ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದುಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೋನಾರಾಮ್ ಅವರ ಮೃತದೇಹವನ್ನು ತಕ್ಷಣವೇ ಹೊರತೆಗೆಯಲಾಗಿದೆ. ಆದರೆ ಪರಿಮಳ್ ಅವರ ಮೃತದೇಹವನ್ನು ಹೊರತೆಗೆಯುವಾಗ ಮತ್ತೆ ಮಣ್ಣು ಕುಸಿದು ಬಿದ್ದಿದ್ದರಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು. ಅಗ್ನಿಶಾಮಕ ಸಿಬ್ಬಂದಿ ಸತತ ಪರಿಶ್ರಮವಹಿಸಿ ಅಂತಿಮವಾಗಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಬಗ್ಗೆ ಬಿಡಿಎ ಆಯುಕ್ತ ಕ್ಯಾಪ್ಟನ್ ಮನಿವಣ್ಣನ್ ಮಾತನಾಡಿ, ಘಟನೆಯ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಲಾಗಿದೆ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, ಗುತ್ತಿಗೆದಾರರು 24 ಗಂಟೆಯೊಳಗೆ ಮೃತರ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
Bengaluru News: ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಘೋರ ಘಟನೆ; ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಯತ್ನ!
ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮೇಗೌಡ ಸ್ಥಳ ಪರಿಶೀಲನೆ ನಡೆಸಿದ್ದು, ಬಿಡಿಎ ಕಾಮಗಾರಿಯ ಸುರಕ್ಷತಾ ನಿಯಮಗಳ ಲೋಪದೋಷಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.