ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯದ ಪೆಟ್ರೋಲ್‌ ಬಂಕ್‌ಗಳಲ್ಲಿ ಮಿತಿಮೀರಿದ ಎಥನಾಲ್‌ ಮಿಶ್ರಣ; ಲ್ಯಾಬ್ ಪರೀಕ್ಷೆಯಿಂದ ಅಕ್ರಮ ಬಯಲು!

E20 Petrol Testing: ಎಥನಾಲ್ ಅಕ್ರಮ ಮಿಶ್ರಣದ ಕುರಿತು ನಿಖರ ಸಾಕ್ಷಾಧಾರಗಳು ದಾಖಲೆ ಸಮೇತ ಲಭ್ಯವಿದ್ದು, ಗ್ರಾಹಕರಿಗೆ ವಾಸ್ತವವಾಗಿ ಪೂರೈಕೆಯಾಗುತ್ತಿರುವ ಎಥೆನಾಲ್ ಮಿಶ್ರಣದ ನೈಜ ಪ್ರಮಾಣವನ್ನು ಕೇಂದ್ರ ಸರ್ಕಾರವು ಯಾವುದೇ ಮುಚ್ಚುಮರೆಯಿಲ್ಲದೆ ಜನತೆಯ ಮುಂದಿಡಬೇಕು ಎಂಧು ರಾಜ್ಯ ಸರಕಾರ ಆಗ್ರಹಿಸಿದೆ.

ಬೆಂಗಳೂರು: ರಾಜ್ಯದ ಪೆಟ್ರೋಲ್‌ ಬಂಕ್‌ಗಳಲ್ಲಿ ಎಥನಾಲ್‌ ಮಿಶ್ರಣ ಮಿತಿಮೀರಿದ್ದು, ಲ್ಯಾಬ್ ಪರೀಕ್ಷೆಗಳಿಂದ ಅಕ್ರಮ ಬಯಲಾಗಿದೆ. ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ, ಕರ್ನಾಟಕದಲ್ಲಿ ಲಭ್ಯವಿರುವ ಪ್ರಮುಖ ಬ್ರ್ಯಾಂಡ್‌ಗಳ ಪೆಟ್ರೋಲ್ ಗುಣಮಟ್ಟ ತಪಾಸಣೆಯನ್ನು ನಡೆಸಲಾಗಿದ್ದು, E20 ಪೆಟ್ರೋಲ್‌ನಲ್ಲಿ ಶೇಕಡಾ 31.2 ರವರೆಗೆ ಎಥನಾಲ್‌ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ರಾಜ್ಯ ಸರ್ಕಾರವು ಪತ್ರಿಕಾ ಪ್ರಕರಣೆಯ ಮೂಲಕ ಮಾಹಿತಿ ನೀಡಿದೆ. ಪೆಟ್ರೋಲ್ ಗುಣಮಟ್ಟ ತಪಾಸಣೆಗಾಗಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರಿನಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಎಲ್ಲಾ ಪ್ರಮುಖ ಇಂಧನ ಕಂಪನಿಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳಲ್ಲಿ ಶೇ. 20ಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣವಿರುವುದು ಕಂಡುಬಂದಿದೆ. ಇದರಲ್ಲಿ IOCL ಪೆಟ್ರೋಲ್‌ನಲ್ಲಿ ಶೇ. 31.2 ರಷ್ಟು ಮತ್ತು HPCL ಪೆಟ್ರೋಲ್‌ನಲ್ಲಿ ಶೇ. 30.5 ರಷ್ಟು ಎಥನಾಲ್ ಇರುವುದು ಕಂಡುಬಂದಿದೆ.

ಪೆಟ್ರೋಲ್ ಮಾದರಿಗಳನ್ನು ಮೊದಲು ತೈಲ ಕಂಪನಿಗಳ ಸ್ವಂತ ಲ್ಯಾಬ್‌ಗಳಿಗೆ (IOCL ಮತ್ತು BPCL) ಕಳುಹಿಸಿದಾಗ, ಎಥನಾಲ್ ಪ್ರಮಾಣವನ್ನು ಪರೀಕ್ಷಿಸುವುದು ಕಡ್ಡಾಯವಾಗಿದ್ದರೂ ಆ ಲ್ಯಾಬ್‌ಗಳು ವರದಿಯಲ್ಲಿ ಎಥನಾಲ್ ಶೇಕಡಾವಾರು ಎಷ್ಟಿದೆ ಎಂಬುದನ್ನು ನಮೂದಿಸದೆ ಮುಚ್ಚಿಟ್ಟವು. ಈ ಮುಖ್ಯ ಮಾಹಿತಿಯನ್ನು ಬಚ್ಚಿಟ್ಟಿರುವುದು ತೈಲ ಕಂಪನಿಗಳು ಗ್ರಾಹಕರಿಗೆ ಮೋಸ ಮಾಡುತ್ತಿವೆ ಮತ್ತು ಮಿತಿಮೀರಿದ ಎಥನಾಲ್ ಮಿಶ್ರಣವನ್ನು ಮರೆಮಾಚಲು ಪ್ರಯತ್ನಿಸುತ್ತಿವೆ ಎಂಬ ಬಲವಾದ ಅನುಮಾನಕ್ಕೆ ಕಾರಣವಾಯಿತು. ಆದ್ದರಿಂದ ಮತ್ತೊಮ್ಮೆ ಮಾದರಿಗಳನ್ನು ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ನಿಯಮಾನುಸಾರ ಸಂಗ್ರಹಿಸಿ ಎನ್ಎಬಿಎಲ್ (NABL) ಮಾನ್ಯತೆ ಪಡೆದ ಹಾಗೂ ಐಎಸ್‌ಒ(150) ಪ್ರಮಾಣೀಕೃತ ಪ್ರಯೋಗಾಲಯಗಳಿಗೆ ನೀಡಿ ಪರೀಕ್ಷೆಗೆ ಒಳಪಡಿಸಿದೆವು.

E20 Petrol Testing

ಇದಲ್ಲದೆ, ಪ್ರಸ್ತುತ ಪೆಟ್ರೋಲ್ ಬಂಕ್‌ಗಳಲ್ಲಿ ಬಳಕೆಯಲ್ಲಿರುವ ಹೆಚ್ಚಿನ ಇಂಧನ ಡಿಸ್ಪೆನ್ಸಿಂಗ್ ಯೂನಿಟ್‌ಗಳು ಕೇವಲ ಶೇ. 15 ರವರೆಗಿನ ಎಥನಾಲ್ ಮಿಶ್ರಣಕ್ಕೆ ಮಾತ್ರ ಸರಿಹೊಂದುವಂತೆ ವಿನ್ಯಾಸಗೊಂಡಿವೆ. ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣವನ್ನು ನಿರ್ವಹಿಸಲು ಅಗತ್ಯವಿರುವ ಮೂಲಸೌಕರ್ಯ ಹಾಗೂ ಸಂಬಂಧಿತ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮೇಲ್ದರ್ಜೆಗೇರಿಸದಿರುವುದು, ಎಥನಾಲ್ ಮಿಶ್ರಣ ನೀತಿಯ ಜಾರಿಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ; ಅಂತಿಮವಾಗಿ ಇದರ ಪರಿಣಾಮವನ್ನು ಗ್ರಾಹಕರೇ ಎದುರಿಸಬೇಕಾಗಿದೆ.

ನಮ್ಮ ಬೇಡಿಕೆಗಳು

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು ವಾಸ್ತವಾಂಶವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು: ಅಕ್ರಮ ಮಿಶ್ರಣದ ಕುರಿತು ನಿಖರ ಸಾಕ್ಷಾಧಾರಗಳು ದಾಖಲೆ ಸಮೇತ ಲಭ್ಯವಿದ್ದು, ಗ್ರಾಹಕರಿಗೆ ವಾಸ್ತವವಾಗಿ ಪೂರೈಕೆಯಾಗುತ್ತಿರುವ ಎಥೆನಾಲ್ ಮಿಶ್ರಣದ ನೈಜ ಪ್ರಮಾಣವನ್ನು ಕೇಂದ್ರ ಸರ್ಕಾರವು ಯಾವುದೇ ಮುಚ್ಚುಮರೆಯಿಲ್ಲದೆ ಜನತೆಯ ಮುಂದಿಡಬೇಕು.

ಮಿತಿಮೀರಿದ ಮಿಶ್ರಣಕ್ಕೆ ದಂಡ ವಿಧಿಸುವುದು: ಶೇಕಡ 20ರ ಕಾನೂನುಬದ್ಧ ಮಿಗಿಂತ ಹೆಚ್ಚಿನ ಎಥೆನಾಲ್ ಬೆರೆತ ಪೆಟ್ರೋಲ್ ಸರಬರಾಜು ಮಾಡುತ್ತಿರುವ IOCL, BPCL, HPCL ಮತ್ತು ಸಂಬಂಧಿತ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು; ಹಾಗೆಯೇ, ಕರ್ನಾಟಕಕ್ಕೆ ಪೂರೈಕೆಯಾಗುವ ಪ್ರತಿಯೊಂದು ಹನಿಯ ಇಂಧನದ ಮಿಶ್ರಣ ಮಟ್ಟವನ್ನು ಪಾರದರ್ಶಕವಾಗಿ ದಾಖಲಿಸಿ, ಪಂಪ್-ಮಟ್ಟದ ಸಮಗ್ರ ಲೆಕ್ಕಪರಿಶೋಧನಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

E20 ಹಾನಿ ಪರಿಹಾರ ನಿಧಿ ಸ್ಥಾಪನೆ: ಹಾನಿಗೊಳಗಾದ ವಾಹನಗಳಿಗೆ ಅಧಿಕೃತ ಸರ್ವೀಸ್ ಸೆಂಟರ್‌ಗಳಿಂದ ಹಾನಿಯ ವರದಿ ಪಡೆದು, ಕಾಲಮಿತಿಯೊಳಗೆ ಪರಿಹಾರ ವಿತರಿಸಲು ಸುಲಭ ಕ್ರೈಮ್ ವ್ಯವಸ್ಥೆ ರೂಪಿಸಬೇಕು; ತೈಲ ಕಂಪನಿಗಳ ಅಕ್ರಮದಿಂದ ಹಾನಿಗೊಳಗಾದ ಪ್ರತಿ ವಾಹನ ಮಾಲೀಕನಿಗೂ ಕಡ್ಡಾಯವಾಗಿ ನಷ್ಟಪರಿಹಾರ ದಕ್ಕಲೇಬೇಕು.

ಪೆಟ್ರೋಲ್‌ನಲ್ಲಿನ ಎಥನಾಲ್ ಮಿಶ್ರಣದ ಪ್ರಮಾಣ ಪ್ರದರ್ಶನ ಕಡ್ಡಾಯಗೊಳಿಸಿ ಮತ್ತು ಗ್ರಾಹಕರಿಗೆ ಇಂಧನ ಆಯ್ಕೆಯ ಅವಕಾಶ ನೀಡಿ: ದೇಶದ ಪ್ರತಿ ಪೆಟ್ರೋಲ್ ಪಂಪ್‌ ನಲ್ಲೂ ಎಷ್ಟು ಪ್ರಮಾಣದ ಎಥನಾಲ್ ಬೆರೆಸಲಾಗಿದೆ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು; ಇದರಿಂದ ಲಭ್ಯವಿರುವ ಆಯ್ಕೆಗಳಲ್ಲಿ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ಸಿಗುತ್ತದೆ.

ತಪಾಸಣೆಗಳನ್ನು ಮುಂದುವರಿಕೆ

ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಇಂತಹ ತಪಾಸಣೆಗಳನ್ನು ನಿರಂತರವಾಗಿ ಮುಂದುವರಿಸಲಿದ್ದು, ಪರೀಕ್ಷಾ ಫಲಿತಾಂಶಗಳನ್ನು ನಿಯಮಿತವಾಗಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿದೆ. 'ಮೋಟಾರು ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಸರಬರಾಜು, ವಿತರಣೆ ನಿಯಂತ್ರಣ ಹಾಗೂ ಅಕ್ರಮಗಳ ತಡೆಗಟ್ಟುವಿಕೆ) ಆದೇಶ, 2005ರ ಅನ್ವಯ, ಇಂಧನ ಸರಬರಾಜು ಮತ್ತು ವಿತರಣೆಯಲ್ಲಿನ ಲೋಪಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು; ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಡಿವೈಎಸ್‌ಪಿ ಶ್ರೇಣಿಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರವು ಕಾನೂನುಬದ್ಧ ಅಧಿಕಾರ ಪ್ರತ್ಯಾಯೋಜಿಸಿದೆ.

ಸಚಿವರಾದ ರಿಜ್ವಾನ್ ಅರ್ಷದ್ ಅವರು ಚಾಲನೆ ನೀಡಿರುವ ಮಿಷನ್ ನಿಖರದ ಅಡಿಯಲ್ಲಿ, ರಾಜ್ಯದ ಜನರು ಹಣ ಪಾವತಿಸುವ ಪ್ರತಿ ಲೀಟರ್ ಇಂಧನಕ್ಕೂ ನಿಖರವಾದ ಅಳತೆ ಮತ್ತು ಖಾತರಿಯ ಗುಣಮಟ್ಟ ದೊರೆಯುವುದನ್ನು ಕರ್ನಾಟಕ ಸರ್ಕಾರ ಖಚಿತಪಡಿಸಲಿದೆ. ಕರ್ನಾಟಕದ ವಾಹನ ಸವಾರರು ಪೆಟ್ರೋಲ್‌ಗೆ ಹಣ ಪಾವತಿಸಿ ಎಥನಾಲ್ ಪಡೆಯುವುದನ್ನು ಸಹಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ವಾರ್ಷಿಕ ಸುಮಾರು 62,000

ಭಾರತದಲ್ಲಿ ಪ್ರತಿವರ್ಷ 6,200 ಕೋಟಿ ಲೀಟರ್ ಇಂಧನ ಬಳಕೆಯಾಗುತ್ತದೆ. ಲೀಟರ್‌ಗೆ 100 ರೂ. ರಂತೆ ಶೇ. 10 ರಷ್ಟು ಮೈಲೇಜ್ ಕಡಿಮೆಯಾದರೆ, ಈ ಮಿತಿಮೀರಿದ ಮಿಶ್ರಣದಿಂದ ಗ್ರಾಹಕರ ಮೇಲೆ ವಾರ್ಷಿಕ ₹62,000 ಕೋಟಿ ಆರ್ಥಿಕ ಹೊರೆ ಬೀಳುತ್ತದೆ

ವಾರ್ಷಿಕ ಸುಮಾರು 39,000

ಇಂತಹ ಇಂಧನ ಬಳಕೆಗೆ ಹೊಂದಿಕೊಳ್ಳದ ವಾಹನಗಳ ಫಿಲ್ಟರ್, ಫ್ಯೂಯಲ್ ಪಂಪ್, ಇಂಜೆಕ್ಟರ್, ಪೈಪ್ (ಹೋಸ್) ಹಾಗೂ ಸೀಲ್‌ಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ವಾಹನಗಳ ರಿಪೇರಿಗಾಗಿ ಹೆಚ್ಚುವರಿಯಾಗಿ ₹39,000 ಕೋಟಿ ವೆಚ್ಚವಾಗುತ್ತದೆ.

ಕನಿಷ್ಠ ಲೆಕ್ಕಾಚಾರ ಹಾಕಿದ್ರೂ ಸಾಕು, ಒಟ್ಟಾರೆ ಪ್ರತಿಯೊಬ್ಬ ಗ್ರಾಹಕರ ಮೇಲೆ ಪರೋಕ್ಷವಾಗಿ ವರ್ಷಕ್ಕೆ ಬರೋಬ್ಬರಿ ₹1.01 ಲಕ್ಷ ಕೋಟಿಯಷ್ಟು ಹೊರೆ ಬೀಳುತ್ತಿದೆ. ಈ ಅಪಾಯ ಕೇವಲ ಹಳೆಯ ವಾಹನಗಳಿಗೆ ಮಾತ್ರ ಸೀಮಿತವಲ್ಲ. ದೇಶದಲ್ಲಿರುವ 35 ಕೋಟಿ ವಾಹನಗಳ ಪೈಕಿ ಶೇಕಡ 99ರಷ್ಟು ವಾಹನಗಳು E20 ಗಿಂತ ಹೆಚ್ಚಿನ ಇಂಧನ ಸಂಯೋಜನೆಗೆ ತಕ್ಕಂತೆ ಸಿದ್ಧಗೊಂಡಿಲ್ಲ.

ಏಪ್ರಿಲ್ 2023ರ ನಂತರ ಮಾರುಕಟ್ಟೆಗೆ ಬಂದ ವಾಹನಗಳೂ ಗರಿಷ್ಠ E20 ಮಿವರೆಗೆ ಮಾತ್ರ ಪ್ರಮಾಣೀಕರಿಸಲ್ಪಟ್ಟಿವೆ. ದೇಶದ ಸುಮಾರು 1 ಲಕ್ಷ ಇಂಧನ ಕೇಂದ್ರಗಳಿಂದ ಕಡಿಮೆ ಎಥೆನಾಲ್ ಮಿಶ್ರಣದ ಪೆಟ್ರೋಲ್ ಅನ್ನು ಸಂಪೂರ್ಣವಾಗಿ ಹಿಂಪಡೆದಿರುವುದರಿಂದ, ಸಾರ್ವಜನಿಕರಿಗೆ ಯಾವುದೇ ಪರ್ಯಾಯ ಇಂಧನದ ಆಯ್ಕೆಯೂ ಉಳಿದಿಲ್ಲ. ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ, ಅದರ ಲಾಭ ಗ್ರಾಹಕರಿಗೆ ತಲುಪಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.