ಬೆಂಗಳೂರು: ಎಂಜಿನಿಯರಿಂಗ್ ಸೇರಿ ಇತರ ಸಿಇಟಿ ಕೋರ್ಸ್‌ಗಳ (KCET-2026) ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಚಾಯ್ಸ್ -1 ಆಯ್ಕೆ ಮಾಡದೆ, 3ನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಆನ್‌ಲೈನ್ ಮೂಲಕವೇ ರದ್ದುಪಡಿಸಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಯಿಂದ ಆ.29ರಂದು ಮಧ್ಯಾಹ್ನ 3 ಗಂಟೆಯೊಳಗೆ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ₹5,000 ದಂಡ ಪಾವತಿಸಿ ತಮ್ಮ ಸೀಟು ರದ್ದುಪಡಿಸಿಕೊಳ್ಳಬಹುದು. ಸೀಟು ರದ್ದುಪಡಿಸಿಕೊಳ್ಳಲು ಖುದ್ದು ಯಾರೂ ಕೆಇಒ ಕಚೇರಿಗೆ ಬರುವ ಅಗತ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಮೂಲಕ ಸೀಟು ರದ್ದು ಪಡಿಸಲು ಪೋರ್ಟಲ್
ಯುಜಿಸಿಇಟಿ-2026ರ ಕೋರ್ಸುಗಳ ಪ್ರವೇಶಾತಿಗೆ ಪ್ರಾಧಿಕಾರವು ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಆ. 24ರಂದು ಪ್ರಕಟಿಸಿದೆ. ಎಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್‌ಸಿ (ನರ್ಸಿಂಗ್) ಬಿ-ಫಾರ್ಮ, ಫಾರ್ಮ್-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಈಗಾಗಲೇ ಸೂಚಿಸಿರುವಂತೆ ಚಾಯ್ಸ್-1 ಅಥವಾ ಚಾಯ್ಸ್-4 ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಆ. 25 ರಿಂದ 27ರ ವರೆಗೆ ಚಾಯ್ಸ್‌ಗಳ ಆಯ್ಕೆ ಮಾಡಿ, ಶುಲ್ಕ ಪಾವತಿಸಿ ಆ. 28ರೊಳಗೆ ಸಂಬಂಧಿಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ.
a) ಚಾಯ್ಸ್-1 ಆಯ್ಕೆ ಮಾಡುವ ಅಭ್ಯರ್ಥಿಗಳು ಹಂಚಿಕೆಯಾದ ಸೀಟಿಗೆ ಪ್ರವೇಶವನ್ನು ಕಡ್ಡಾಯವಾಗಿ ಪಡೆಯಬೇಕು, ಆದರೆ ಸೀಟುಗಳ Upgradation ಮಾಡಿಕೊಳ್ಳಲು ಆಸಕ್ತಿ ಇದ್ದಲ್ಲಿ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಲಾಗಿನ್ ಮಾಡುವ ಮೂಲಕ ಭಾಗವಹಿಸಬಹುದು. (ಮೂರನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ)
b) ಒಂದು ವೇಳೆ ಅಭ್ಯರ್ಥಿಯು ಚಾಯ್ಸ್-1 ತೆಗೆದುಕೊಳ್ಳದೆ ಮೂರನೆ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು 5,000 ರೂ. ದಂಡ ಪಾವತಿ ಮಾಡಿ, ರದ್ದುಪಡಿಸಿಕೊಂಡು ಮೂರನೇ ಸುತ್ತಿನಲ್ಲಿ ಲಾಗಿನ್ ಮಾಡಿ ಹೊಸದಾಗಿ ನೋಂದಣಿ ಶುಲ್ಕವನ್ನು ಪಾವತಿಸಿ ಭಾಗವಹಿಸಬಹುದು. ಇಂತಹ ಅಭ್ಯರ್ಥಿಗಳು ಆ.27ರ ಮಧ್ಯಾಹ್ನ 3ರಿಂದ ಆ. 29ರ ಮಧ್ಯಾಹ್ನ 3ರೊಳಗೆ ಅವರ ಲಾಗಿನ್ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿಕೊಂಡು ಆನ್‌ಲೈನ್ ಮೂಲಕ ಸೀಟನ್ನು ರದ್ದುಪಡಿಸಿಕೊಳ್ಳಬಹುದಾಗಿದೆ. (ಪ್ರಾಧಿಕಾರದಲ್ಲಿ ಆಫ್‌ಲೈನ್ ರದ್ದುಪಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.) ಹಾಗೂ ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ.
ಅಂಚೆ ಇಲಾಖೆಯಲ್ಲಿ 25,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಕರ್ನಾಟಕದ ವಿಭಾಗವಾರು ಖಾಲಿ ಹುದ್ದೆಗಳ ವಿವರ ಇಲ್ಲಿದೆ
ಗಮನಿಸಿ: ಮೆಡಿಕಲ್ ಮತ್ತು ಡೆಂಟಲ್ Options Entry ಮಾಡಿ ಅವರಿಗೆ ಈ ಸೀಟುಗಳು ಹಂಚಿಕೆಯಾಗದೆ ಇತರೆ ಸೀಟುಗಳು ಹಂಚಿಕೆಯಾಗಿದ್ದು, ಅವರಿಗೆ ಹಂಚಿಕೆಯಾಗಿರುವ ಸೀಟುಗಳು ಇಷ್ಟವಿಲ್ಲದಿದ್ದರೆ ಚಾಯ್ಸ್-4 ಹಾಕುವುದು ಸೂಕ್ತ. ಚಾಯ್ಸ್ -4 ಹಾಕಿದರೂ ಮೆಡಿಕಲ್ / ಡೆಂಟಲ್ Options Entry ಮಾಡಿರುವುದರಿಂದ ಅವರು ಮೆಡಿಕಲ್ /ಡೆಂಟಲ್ 2ನೇ ಸುತ್ತಿನಲ್ಲಿ ಭಾಗವಹಿಸಬಹುದಾಗಿರುತ್ತದೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.