ಕನ್ನಡಿಗರಿಗೆ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ; ಉದ್ಯಮಿ ಕಿರಣ್ ಮಜುಂದಾರ್ ಶಾ ವಿರೋಧ
Reservation for Kannadigas: ಡಾ. ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆ ಶಿಫಾರಸು ಮಾಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕನ್ನಡಿಗರಿಗೆ ಖಾಸಗಿ ಕಂಪನಿಗಳ ಆಡಳಿತಾತ್ಮಕ ಹುದ್ದೆಗಳ ಪೈಕಿ ಶೇ.50, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ. 75 ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮಸೂದೆ ರೂಪಿಸಿತ್ತು.
ಉದ್ಯಮಿ ಕಿರಣ್ ಮಜುಂದಾರ್ ಶಾ. -
ಬೆಂಗಳೂರು: ಖಾಸಗಿ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ (Reservation for Kannadigas) ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಉದ್ಯಮಿಗಳಿಂದ ಮತ್ತೆ ವಿರೋಧ ವ್ಯಕ್ತವಾಗಿದೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಅವರು, ಈ ಮಸೂದೆ ಉದ್ಯಮಗಳಿಗೆ ಮಾರಕ ಎಂದು ಆಕ್ಷೇಪ ಎತ್ತಿದ್ದು, ಇದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಲು ರಾಜ್ಯ ಸರ್ಕಾರ 2024ರಲ್ಲೇ ಮುಂದಾಗಿತ್ತು. ಆಗಲೂ ಸರ್ಕಾರದ ವಿರುದ್ಧ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಈ ಮಸೂದೆಯ ಬಗ್ಗೆ ಇನ್ನಷ್ಟು ವಿಸ್ಕೃತ ಚರ್ಚೆ ನಡೆಯಬೇಕಾಗಿದ್ದ ಕಾರಣ ತಡೆ ಹಿಡಿಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಇದ್ಯ ಕನ್ನಡಿಗರಿಗೆ ಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಹೇಶ್ ಬಿ.ಆರ್ ಎನ್ನುವವರು ಆಂಧ್ರಪ್ರದೇಶ ಸರ್ಕಾರವು ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ 75% ಮೀಸಲಾತಿಯನ್ನು ಅಧಿಕೃತವಾಗಿ ಕಡ್ಡಾಯಗೊಳಿಸಿದೆ. ಕರ್ನಾಟಕ ಮತ್ತು ಇತರ ರಾಜ್ಯಗಳು ಇದನ್ನು ಅನುಸರಿಸಬೇಕೇ ಎಂದು ಪ್ರಶ್ನಿಸಿ, ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು, ಸರ್ಕಾರದ ಈ ಆದೇಶವನ್ನು ನಾನು ಒಪ್ಪುವುದಿಲ್ಲ. ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿದ್ದರೆ ಕಂಪನಿಗಳು ಸ್ಥಳೀಯರಿಗೆ ಆದ್ಯತೆ ನೀಡುತ್ತವೆ ಎಂದು ನಂಬುತ್ತೇನೆ. ಇಲ್ಲದಿದ್ದರೆ, ಅಂತಹ ನೀತಿಗಳು ವ್ಯವಹಾರಗಳಿಗೆ ಹಾನಿಕಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಿರಣ್ ಮಜುಂದಾರ್ ಶಾ ಅವರ ಎಕ್ಸ್ ಪೋಸ್ಟ್
I do not agree with this mandate. I always believe that companies will give preference to locals if they have the required skills. If not, then such policies are detrimental to businesses https://t.co/zXRz3IMDB0
— Kiran Mazumdar-Shaw (@kiranshaw) January 7, 2026
ಈ ಪೋಸ್ಟ್ ಮೂಲಕ ಕಿರಣ್ ಮಜುಂದಾರ್ ಶಾ ಅವರು, ಕನ್ನಡಿಗರಿಗೆ ಮೀಸಲಾತಿ ಮಸೂದೆಗೂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಉದ್ಯಮಿಗೆ ಬಗ್ಗೆ ಕನ್ನಡಿಗರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನು ಇದೇ ವಿಚಾರದ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಎಂ ಅವರು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಕನ್ನಡಪರವಾದ ತೀರ್ಮಾನ ಮಾಡಲಾಗುವುದು. ಅಲ್ಲದೇ ಮಸೂದೆಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿದ್ದು, ಸದ್ಯವೇ ಸಚಿವ ಸಂಪುಟ ಸಭೆ ಒಪ್ಪಿಗೆಗೆ ಮಂಡಿಸಲಾಗುವುದು ಎಂದು ತಿಳಿದುಬಂದಿದೆ.
ಏನಿದು ಮಸೂದೆ?
ಡಾ. ಸರೋಜಿನಿ ಮಹಿಷಿ ವರದಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎನ್ನುವ ಬಗ್ಗೆ ಶಿಫಾರಸು ಮಾಡಲಾಗಿತ್ತು. ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯ ಸ್ವರೂಪ ಮತ್ತು ಪರಿಹಾರ ಮಾರ್ಗಗಳನ್ನು ಸೂಚಿಸಲು ಅಧ್ಯಯನ ನಡೆಸಿ, ಕಾರ್ಯಸಾದುವಾದ ವರದಿಯನ್ನು ಸಲ್ಲಿಸಲು ಸಂಸದೆ ಡಾ. ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರವು 1984ರ ಜನವರಿ 25ರಂದು ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು 1986ರ ಡಿಸೆಂಬರ್ 20ರಂದು ವರದಿ ಸಲ್ಲಿಸಿತ್ತು.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಘೋಷಣೆ
ಈ ಸಮಿತಿ ಶಿಫಾರಸುಗಳ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಯಾವುದೇ ಕಂಪನಿಯ ಆಡಳಿತಾತ್ಮಕ ಹುದ್ದೆಗಳ ಪೈಕಿ ಶೇ.50, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ. 75 ಮೀಸಲಾತಿ ನೀಡಲು ಈ ಮಸೂದೆ ರೂಪಿಸಲಾಗಿದೆ.