ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Silk Manju: ಉಪೇಂದ್ರ ನಟನೆಯ 'ಎ' ಸಿನಿಮಾದ ನಿರ್ಮಾಪಕ ಸಿಲ್ಕ್ ಮಂಜು ನಿಧನ

Sandalwood News: ನಟ ಉಪೇಂದ್ರ ನಟನೆಯ ಚಿತ್ರವನ್ನು ನಿರ್ಮಿಸುವ ಮೂಲಕ ಚಿರಪರಿಚಿತರಾಗಿದ್ದ ಸಿಲ್ಕ್‌ ಮಂಜು ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಂಗಳೂರು: ಕನ್ನಡದ ಖ್ಯಾತ ಸಿನಿಮಾ ನಿರ್ಮಾಪಕ ಬಿ.ಜಿ. ಮಂಜುನಾಥ್ (ಸಿಲ್ಕ್‌ ಮಂಜು) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 65 ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಕಳೆದ ಒಂದೂವರೆ ವರ್ಷದಿಂದ ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದಿತ್ತು. ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿದ್ದಾಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮಂಗಳವಾರ ಬೆಳಗ್ಗೆ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಿಲ್ಕ್‌ ಮಂಜು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ನಿರ್ಮಾಪಕನ ನಿಧನಕ್ಕೆ ಆಪ್ತರು, ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ʼಎʼ ಸಿನಿಮಾ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಪ್ರತ್ಯರ್ಥ, ಸೂರ್ಯಕಾಂತಿ, ಹಗಲು ವೇಷ, ಸೈಕಿಕ್‌, ಟೆರರ್‌ ಇವರ ನಿರ್ಮಾಣದ ಚಿತ್ರಗಳಾಗಿವೆ. ನಟ ಉಪೇಂದ್ರ ನಟನೆಯ ʼಎʼ ಚಿತ್ರವನ್ನು ನಿರ್ಮಿಸುವ ಮೂಲಕ ಚಿರಪರಿಚಿತರಾಗಿದ್ದ ಮಂಜು ಅವರ ಕೊನೆಯ ಚಿತ್ರವಾದ 'ಟೆರರ್' ಆರ್ಥಿಕ ತೊಂದರೆಯನ್ನು ಎದುರಿಸಿತ್ತು ಎನ್ನಲಾಗಿದೆ.

ಅನಾರೋಗ್ಯಕ್ಕೆ ತುತ್ತಾದ ನಂತರ ಸಿಲ್ಕ್‌ ಮಂಜು ಅವರು ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನೂ ಭರಿಸಲು ಸಾಧ್ಯವಾಗದೆ ಕಷ್ಟಪಡುತ್ತಿದ್ದರು. ಹೀಗಾಗಿ ಅವರ ಕುಟುಂಬಸ್ಥರು ಮತ್ತು ಆಪ್ತರು ಚಿತ್ರರಂಗ ಹಾಗೂ ಸಾರ್ವಜನಿಕರಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.