ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು (Cauvery water Dispute) ಹರಿಸದಂತೆ ಆಗ್ರಹಿಸಿ ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಬುಧವಾರ ಪ್ರತಿಭಟನೆಗಳು (Protest) ನಡೆದವು. ಅದೇ ರೀತಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ʼಕಾವೇರಿ ಉಳಿಸಿ, ಕರ್ನಾಟಕ ಉಳಿಸಿʼ ಎಂಬ ಘೋಷವಾಕ್ಯದಡಿ CWRCಯ ಅವೈಜ್ಞಾನಿಕ ಆದೇಶದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆ ವೇಳೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಪ್ರತಿಕ್ರಿಯಿಸಿ, ಕಾವೇರಿ ಜಲ ನಿಯಂತ್ರಣ ಸಮಿತಿ ತೀರ್ಪನ್ನು ಯಾವುದೇ ಕಾರಣಕ್ಕೂ ಸರ್ಕಾರ ಒಪ್ಪಿಕೊಳ್ಳಬಾರದು. 4 ಟಿಂಎಂಸಿ ನೀರು ನಾವು ಬಿಡೋದಕ್ಕೆ ಆಗಲ್ಲ. ರಾಜ್ಯದಲ್ಲಿ ಮೊದಲೇ ನೀರಿಲ್ಲ. ಅಷ್ಟೊಂದು ನೀರು ಎಲ್ಲಿಂದ ಬಿಡುವುದು. ಇವತ್ತು ಡ್ಯಾಂನಲ್ಲಿ ಇರೋದು ಕೇವಲ 12 ಟಿಂಎಂಸಿ ನೀರು ಮಾತ್ರ ಇದೆ. ಇದರಲ್ಲಿ ಬೆಂಗಳೂರಿಗೆ ತಿಂಗಳಿಗೆ 3 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ತಮಿಳುನಾಡಿನ ರಾಜಕೀಯ ನಾಯಕರು ಕೇಂದ್ರದ ಜತೆ ಲಾಬಿ ಮಾಡಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ನಮ್ಮ ಜಲಾಶಯಗಳ ಸ್ಥಿತಿಗತಿ ಬಗ್ಗೆ ಸರ್ಕಾರ ಮನವರಿಕೆ ಮಾಡಬೇಕು. ರಾಜ್ಯ ಸರ್ಕಾರ ಕರ್ನಾಟಕದ ರೈತರ ಹಿತ ಕಾಪಾಡಬೇಕು. ಕಾವೇರಿ ಅನ್ನೋದು ಕನ್ನಡಗರ ಭಾವನೆ, ಅದರ ಜೊತೆ ಹುಡುಗಾಟ ಆಡಬಾರದು. ಆವತ್ತು ಬಂಗಾರಪ್ಪನವರ ಹೇಗೆ ಆದೇಶ ತಿರಸ್ಕಾರ ಮಾಡಿದರೋ ಇವತ್ತು ಬಂಗಾರಪ್ಪನವರ ಶಿಷ್ಯ ಅಂತ ಹೇಳಿಕೊಳ್ಳುವ ಸಿಎಂ ಡಿ.ಕೆ ಶಿವಕುಮಾರ್ ಅವರು ಆದೇಶವನ್ನು ಧಿಕ್ಕರಿಸಬೇಕು. ನಾವು ನೀರು ಬಿಡೋಕೆ ಆಗಲ್ಲ ಅಂತ ಸ್ಪಷ್ಟವಾಗಿ ಹೇಳಬೇಕು ಎಂದು ಹೇಳಿದ್ದಾರೆ.
ಆದೇಶವನ್ನು ಖಂಡಿಸಿ ನಾವೆಲ್ಲ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ ಬಂದ್ ಮಾಡೋದರಲ್ಲಿ ನನಗೆ ವಿಶ್ವಾಸ ಇಲ್ಲ. ಪದೇ ಪದೇ ಕರ್ನಾಟಕ ಬಂದ್ ಮಾಡಿಕೊಂಡು ಕುಳಿತುಕೊಳ್ಳಲು ಆಗಲ್ಲ. ಇದರ ಹೊರತಾಗಿ ಹಲವು ಹೋರಾಟದ ಚಳವಳಿ ಮಾದರಿ ಇದೆ. ಆ ಪ್ರಕಾರ ನಾವು ಚಳವಳಿ ರೂಪಿಸುತ್ತೇವೆ, ನಮ್ಮ ಹೋರಾಟ ಮುಂದುವರೆಸುತ್ತೇವೆ. ಸರ್ಕಾರ ದೃಢ ನಿಲುವು ತಾಳಬೇಕು ಎಂದು ಹೇಳಿದ್ದಾರೆ.
ತಮಿಳುನಾಡು ಸಿಎಂ ವಿಜಯ್ ಅವರು ಸಿಎಂ ಡಿ.ಕೆ ಶಿವಕುಮಾರ್ ಜೊತೆ ಚರ್ಚೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಅವರು ಏನಾದರೂ ಮಾಡಲಿ, ನಾವು ಕಾವೇರಿ ನೀರು ಕೊಡುವುದಕ್ಕೆ ಆಗಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಬೇಕು. ತಮಿಳುನಾಡಿನ ಸಿಎಂ ಬರಲಿ ಕರ್ನಾಟಕಕ್ಕೆ, ನಮ್ಮ ಜಲಾಶಯಗಳ ಸ್ಥಿತಿ ನೋಡಲಿ, ಮಳೆ ಇಲ್ಲದ ಕಾರಣ ನಮ್ಮ ಜಲಾಶಯಗಳಲ್ಲೂ ನೀರಿಲ್ಲ. ಮಳೆ ಇಲ್ಲದ ಕಾರಣ ಕುಡಿಯುವ ನೀರಿಗೂ ಆಹಾಕಾರ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನೀರು ಕೊಡಲು ಆಗಲ್ಲ ಎಂದು ಟಿಎ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶದ ವಿರುದ್ಧ , ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು, ರಾಜ್ಯದಲ್ಲಿ ಈ ವೇಳೆಗಾಗಲೇ ಶೇಕಡಾ 70 ರಷ್ಟು ಮಳೆಯಾಗಬೇಕಿತ್ತು, ಬದಲಾಗಿ ಕೇವಲ ಶೇಕಡಾ 20 ರಷ್ಟು ಮಾತ್ರ ಮಳೆಯಾಗಿದೆ. ತೀವ್ರ ಮುಂಗಾರು ಮಳೆಯ ಕೊರತೆ ಇರುವುದರಿಂದ ತಮಿಳುನಾಡಿಗೆ ನೀರು ಬಿಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ನೀರು ಹರಿಸಲು ಮುಂದಾದರೆ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಡ್ಯದಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ

ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ರಸ್ತೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು, ಪ್ರಾಣ ಬಿಟ್ಟೇವು, ನೀರು ಬಿಡಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ ಕರವೇ ಜಿಲ್ಲಾಧ್ಯಕ್ಷ ವೇಣು ಡಿ.ಎಸ್. ನೇತೃತ್ವದಲ್ಲಿ ಹೋರಾಟ ನಡೆದಿದ್ದು, ನೀರು ಹರಿಸಲು ಆದೇಶ ನೀಡಿದ CWRC ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಲಾಗಿದೆ.
ನಮ್ಮಲ್ಲಿ ತಮಿಳುನಾಡಿಗೆ ಬಿಡುವಷ್ಟು ಕಾವೇರಿ ನೀರಿಲ್ಲ: ಸಚಿವ ಎಂ.ಬಿ. ಪಾಟೀಲ್
ಮೈಸೂರಿನಲ್ಲಿ ಕಾವೇರಿದ ಕಾವೇರಿ ಕಿಚ್ಚು

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ರೈತ ಸಂಘದಿಂದ ಮೈಸೂರಿನ ಹಳೇ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ. ರಾಜ್ಯದ ರೈತರ ಹಿತಾಸಕ್ತಿ ಕಾಪಾಡಬೇಕು, ಕರ್ನಾಟಕದ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.