ಬೆಂಗಳೂರು: ನಗರದ ಪಬ್‌ವೊಂದರಲ್ಲಿ ತಡರಾತ್ರಿ ತಪಾಸಣೆ ನಡೆಸುತ್ತಿದ್ದಾಗ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ, ನಿಂದನೆ ಮತ್ತು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐಡಿ ಕಾರ್ಡ್ ಕೇಳಿದ್ದಕ್ಕೆ ಕೋಪಗೊಂಡ ಅಧಿಕಾರಿಯು ಪೊಲೀಸರ ಮೇಲೆ ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಮಧ್ಯರಾತ್ರಿ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ 'ಕವೋರ್' ಪಬ್‌ನಲ್ಲಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ಸ್ವಕ್ಷೇತ್ರ ಕುಪ್ಪಂನ 'ಕುಪ್ಪಂ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ'ದ ಮುಖ್ಯಸ್ಥ ಐಎಎಸ್ ವಿಕಾಸ್ ಮರ್ಮತ್ (Vikas Marmath) ಮತ್ತು ಅವರ ಸ್ನೇಹಿತರಾದ ಅಭಯ್ ಉದಯ್ ಸಿಂಗ್, ನಿತೀಶ್ ಮತ್ತು ರೋಷನ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು ನಗರ ಸಿಸಿಬಿ ವಿಶೇಷ ವಿಚಾರಣಾ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ ದೂರಿನ ಮೇರೆಗೆ, ಬಿಎನ್‌ಎಸ್- 2023ರ ಸೆಕ್ಷನ್ 115(2), 351(2), 352, 132 ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಕಬ್ಬನ್ ಪಾರ್ಕ್ ಮತ್ತು ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಮ್ಮ ತಂಡದೊಂದಿಗೆ ತಪಾಸಣೆ ನಡೆಸಲಾಗುತ್ತಿತ್ತು. ಬೆಳಗಿನ ಜಾವ 1.30 ರ ಸುಮಾರಿಗೆ ಕ್ಯಾವೋರ್ ಪಬ್‌ನಲ್ಲಿ ನಮ್ಮ ಸಿಬ್ಬಂದಿ ಭೇಟಿ ನೀಡಿ ಗ್ರಾಹಕರ ವಯಸ್ಸನ್ನು ಪರಿಶೀಲಿಸಲಾಯಿತು.
ಈ ವೇಳೆ ಅಲ್ಲಿದ್ದ ಕೆಲವರ ಗುರುತಿನ ಚೀಟಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದಾಗ, ಐಎಎಸ್ ಅಧಿಕಾರಿ ಹಾಗೂ ಅವರ ಸ್ನೇಹಿತರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದು, ಅಸಭ್ಯ ಭಾಷೆ ಬಳಸಿ, ಇನ್ಸ್‌ಪೆಕ್ಟರ್ ಮತ್ತು ಅವರ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.