ಬೆಂಗಳೂರು: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್ (Blackmail Case) ಮಾಡಿ ಲಕ್ಷಾಂತರ ವಸೂಲಿ ಮಾಡಿದ ಇಬ್ಬರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೌಡಿ ಅರಸಯ್ಯನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಶೂಟ್ ಗಿರಿ ಹಾಗೂ ಸ್ವರೂಪ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
2022ರಲ್ಲಿ ಸ್ವರೂಪ್‌ಗೆ ಫೇಸ್‌ಬುಕ್‌ನಲ್ಲಿ ಮಹಿಳೆ ಪರಿಚಯವಾಗಿದ್ದಳು. ನಂತರ ಮಹಿಳೆ ಬಳಿ ಸ್ವರೂಪ್, ಕಷ್ಟ ಎಂದು ಹೇಳಿಕೊಂಡು 4.42 ಲಕ್ಷ ರೂ. ಹಣ ಪಡೆದಿದ್ದ. ಮಹಿಳೆ ಹಣ ವಾಪಸ್ ಕೇಳಿದಾಗ ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ನಿರಂತರ ಬೆದರಿಕೆ ಹಾಕಿದ್ದರಿಂದ ಮಹಿಳೆ ತನ್ನ ಚಿನ್ನಾಭರಣ ಮಾರಿ, ಮತ್ತೆ 4.2 ಲಕ್ಷ ರೂ. ಹೆಚ್ಚುವರಿ ಹಣ ನೀಡಿದ್ದರು. ಹೀಗೆ ಒಟ್ಟು 8.62 ಲಕ್ಷ ರೂ.ಗಳನ್ನು ಮಹಿಳೆಯಿಂದ ವಸೂಲಿ ಮಾಡಲಾಗಿದೆ.
ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದಾಗ ಶೂಟ್ ಗಿರಿ ಹಣ ಕೊಡುವುದಾಗಿ ಮಹಿಳೆಯನ್ನು ತಡೆದಿದ್ದ. ಬಳಿಕ ಹಣ ಕೊಡದೇ, ಸ್ವರೂಪ್ ನಮ್ಮ ಹುಡುಗ ಅವನ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ; ಇಬ್ಬರು ಅರೆಸ್ಟ್
ಮೈಸೂರು: ಋತುಮತಿಯಾದ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವೇಶ್ಯಾವಾಟಿಕೆ ದಂಧೆಗೆ (sexual exploitation) ತಳ್ಳುತ್ತಿದ್ದ ಗ್ಯಾಂಗ್ ಮೈಸೂರಿನಲ್ಲಿ ಸಿಕ್ಕಿಬಿದ್ದಿದೆ. ಮೈಸೂರಿನ ವಿಜಯನಗರ ಪೊಲೀಸರು ಮತ್ತು ಒಡನಾಡಿ ಸೇವಾ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಈ ದಂಧೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ದುಡ್ಡಿಗಾಗಿ ಈ ಗ್ಯಾಂಗ್ ಋತುಮತಿಯಾದ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿತ್ತು. ಒಡನಾಡಿ ಸಂಸ್ಥೆಯ ಪರಶು ಮತ್ತು ಸ್ಟಾನ್ಲಿ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಶೋಭಾ (35) ಮತ್ತು ತುಳಸಿಕುಮಾರ್ (42) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಜತೆಗೆ ಓರ್ವ ಬಾಲಕಿಯನ್ನು ರಕ್ಷಿಸಿದ್ದು, ಇವರ ಹಿಂದೆ ದೊಡ್ಡ ಜಾಲವಿದೆ ಎಂದು ಅನುಮಾನ ವ್ಯಕ್ತವಾಗಿದೆ. ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟಿ ಕುಳ ಹಾಗೂ ಲೈಂಗಿಕವಾಗಿ ಅತೀವ ಆಸಕ್ತಿ ಹೊಂದಿರುವವರನ್ನು ಬೆಂಗಳೂರು ಮೂಲದ ತುಳಸಿಕುಮಾರ್ ಹಾಗೂ ಶೋಭ ಗಾಳ ಹಾಕುತ್ತಿದ್ದರು. ಬಾಲಕಿಯರಿಗೆ ಲಕ್ಷಾಂತರ ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡುವುದು, ಅಲ್ಲದೇ ಬ್ರಾಂಡೆಡ್ ಬಟ್ಟೆಗಳಂದಿಗೆ ಐಷಾರಾಮಿ ಬದುಕಿನ ಆಸೆ ತೋರಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಸಾಲದಕ್ಕೆ ಖಾಸಗಿ ವಿಡಿಯೋವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಗಿರಾಕಿಗಳಿಗೆ ತೋರಿಸುತ್ತಿದ್ದರು.
ಈ ಬಗ್ಗೆ ಒಡನಾಡಿ ಸಂಸ್ಥೆಯ ಸ್ಥಾಪಕ ಸ್ಟಾನ್ಲಿ ಮಾತನಾಡಿ, "ಈ ಸಂಬಂಧ ನಮಗೆ ಮಾಹಿತಿ ದೊರೆತು, ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಶೋಭಾ ಮತ್ತು ತುಳಸಿಕುಮಾರ್ ಅವರನ್ನು ಬಂಧಿಸಿದ್ದೇವೆ. ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಇಳಿಸುವ ಪ್ರಯತ್ನ ನಡೆದಿತ್ತು. ಋತುಮತಿಯಾದ ಬಾಲಕಿಯರ ಜತೆ ಮೊದಲ ಲೈಂಗಿಕ ಸಂಪರ್ಕ ನಡೆಸಿದರೆ ಮಾನಸಿಕ ಮತ್ತು ಲೈಂಗಿಕ ಕಾಯಿಲೆಗಳು ದೂರ ಆಗುತ್ತವೆ ಎಂಬ ಮೂಢ ನಂಬಿಕೆಯನ್ನು ಬಳಸಿಕೊಂಡು ಬಾಲಕಿಯನ್ನು ಬಳಸಿ ದುಡ್ಡು ಮಾಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ |Crime News: ಅತ್ಯಾಚಾರದ ಆರೋಪ ಹೊರಿಸಿದ ಗೆಳತಿ- ಮನನೊಂದು ಯುವಕ ಆತ್ಮಹತ್ಯೆಗೆ ಶರಣು
ಪರಶುರಾಮ್ ಮಾತನಾಡಿ, "ಇದು ಬೇರೆ ದೇಶಗಳಲ್ಲಿ ನಡೆಯುತ್ತದೆ, ನಮ್ಮಲ್ಲಿ ಕೇಳಿದ್ವಿ ಅಷ್ಟೇ. 20 ಲಕ್ಷಕ್ಕೆ ಬಾಲಕಿಯನ್ನು ಏನು ಬೇಕಾದ್ರೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಈಗ ನಾವೇ ಕಣ್ಣಾರೆ ಕಂಡು ಬಾಲಕಿಯನ್ನು ರಕ್ಷಿಸಿದ್ದೇವೆ. ಇದರ ಹಿಂದೆ ದೊಡ್ಡ ಜಾಲ ಇದೆ ಅನಿಸುತ್ತದೆ" ಎಂದು ತಿಳಿಸಿದ್ದಾರೆ.