ಬೆಂಗಳೂರು: ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಜೀವನಶೈಲಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರೋತ್ಸವ ಫೋರಂ, ಸುರಕ್ಷಾ ಎನ್ವಿರೋ ಸೊಲ್ಯೂಷನ್ಸ್ ಹಾಗೂ ಕರ್ನಾಟಕ ಜೆಸ್ಯೂಟ್ ಪ್ರಾಂತ್ಯ ಪರಿಸರ ಆಯೋಗದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಮೊದಲ ಸಂಪೂರ್ಣ ಪ್ಲಾಸ್ಟಿಕ್-ಮುಕ್ತ 'ಕ್ಲೈಮೇಟ್ ಆಕ್ಷನ್ ವಾಕ್ & ರನ್–2026' ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಭಾಗವಾಗಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಡಾ. ವಿಜಯಲಕ್ಷ್ಮಿ, ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಮಾಜಿ ಅಧ್ಯಕ್ಷೆ ಪ್ರೊ. ನಂದಿನಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ಸ್ ಸಂಸ್ಥಾಪಕ ಡಾ. ಬಾಲಗಂಗಾಧರ್, ಮೌಂಟ್ ಕಾರ್ಮೆಲ್ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆ ಡಾ. ಹೆಲೆನ್ ರೋಸೆಲೀನ್ ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ (SJU)ದ ಪರಿಸರ ವಿಜ್ಞಾನ ವಿಭಾಗ ಡಾ. ಲುಮ್ನೇಶ್ ಸ್ವರೂಪ್ ಕುಮಾರ್ ಜೋಸೆಫ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಹಿರಿಯ ಪರಿಸರ ಅಧಿಕಾರಿ ಡಾ. ವಿಜಯಲಕ್ಷ್ಮಿ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಸರ್ಕಾರದ ಕ್ರಮಗಳ ಜೊತೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಮಾಜಿ ಅಧ್ಯಕ್ಷೆ ಪ್ರೊ. ನಂದಿನಿ ಮಾತನಾಡಿ, ಪರಿಸರ ಶಿಕ್ಷಣವು ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಜೀವನದ ಭಾಗವಾಗಬೇಕು. ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದರು.
ಸುರಕ್ಷಾ ಎನ್ವಿರೋ ಸೊಲ್ಯೂಷನ್ಸ್ ಸಂಸ್ಥಾಪಕ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಬಾಲಗಂಗಾಧರ್ ಅವರು, ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮಗಳು ಅತ್ಯಗತ್ಯ. ಪ್ಲಾಸ್ಟಿಕ್-ಮುಕ್ತ ಕಾರ್ಯಕ್ರಮಗಳು ಸಮಾಜದಲ್ಲಿ ಸುಸ್ಥಿರ ಬದಲಾವಣೆಗೆ ದಾರಿ ಮಾಡಿಕೊಡಲಿವೆ ಎಂದು ಅಭಿಪ್ರಾಯಪಟ್ಟರು.

ಪ್ಲಾಸ್ಟಿಕ್‌ಗೆ ಸಂಪೂರ್ಣ ವಿದಾಯ
ಕಾರ್ಯಕ್ರಮವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್-ಮುಕ್ತವಾಗಿ ಆಯೋಜಿಸಲಾಗಿತ್ತು. ಏಕಬಳಕೆ ಪ್ಲಾಸ್ಟಿಕ್ ಬಳಸದೆ, ಭಾಗವಹಿಸಿದವರಿಗೆ ಮರುಬಳಕೆ ಮಾಡಬಹುದಾದ ಗ್ಲಾಸ್ ಹಾಗೂ ಸ್ಟೀಲ್ ಪಾತ್ರೆಗಳಲ್ಲಿ ಉಪಾಹಾರ ವಿತರಿಸಲಾಯಿತು. ಓಟಗಾರರಿಗೆ ನೀಡಿದ ರೇಸ್ ಬಿಬ್ ಹಾಗೂ ಕೈಪಟ್ಟಿಗಳು 'ಬೀಜದ ಕಾಗದ' (Seed Paper) ಬಳಸಿ ತಯಾರಿಸಲಾಗಿದ್ದು, ಅವುಗಳನ್ನು ಬಳಕೆ ನಂತರ ಮಣ್ಣಿನಲ್ಲಿ ನೆಟ್ಟರೆ ಸಸ್ಯಗಳು ಅಥವಾ ಹೂವಿನ ಗಿಡಗಳು ಬೆಳೆಯುವಂತೆ ತಯಾರಿಸಲಾಗಿದೆ. ಕುಡಿಯುವ ನೀರಿಗಾಗಿ ಸಂಪೂರ್ಣವಾಗಿ ಬಯೋಡಿಗ್ರೇಡಬಲ್ (Biodegradable) ಗ್ಲಾಸ್‌ಗಳನ್ನು ಬಳಸಲಾಗಿತ್ತು. ಸಾಮಾನ್ಯವಾಗಿ ಈ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಟಿ ಶರ್ಟ್ ನೀಡಲಾಗುವುದು. ಆದ್ರೆ ಸಂಘಟಕರು ಬಟ್ಟೆ ತ್ಯಾಜ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಭಾಗವಹಿಸಿದವರಿಗೆ ಟಿ-ಶರ್ಟ್‌ಗಳನ್ನುಗಳನ್ನು ವಿತರಿಸಲಿಲ್ಲ. ಅದರ ಬದಲು ಭಾಗವಹಿಸಿದ ಪ್ರತಿಯೊಬ್ಬರಿಗೂ ಸಸಿಗಳನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು.
'ಹಸಿರೇ ಉಸಿರು – ನಮ್ಮ ಜವಾಬ್ದಾರಿ'
ಹಸಿರೋತ್ಸವ ಫೋರಂನ ಸಹ-ಸಂಸ್ಥಾಪಕಿ ಹಾಗೂ ನಿರ್ದೇಶಕಿ ಆರತಿ ಆರ್. ಮಾತನಾಡಿ, ಪರಿಸರ ಜವಾಬ್ದಾರಿಯನ್ನು ಕಾಪಾಡುತ್ತಲೇ ದೊಡ್ಡ ಪ್ರಮಾಣದ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಯಶಸ್ವಿಯಾಗಿ ಆಯೋಜಿಸಬಹುದು ಎಂಬುದನ್ನು ಈ ಕಾರ್ಯಕ್ರಮ ತೋರಿಸಿದೆ. "ಹಸಿರೇ ಉಸಿರು – ನಮ್ಮ ಜವಾಬ್ದಾರಿ" ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇಂತಹ ಸಣ್ಣ ಪ್ರಯತ್ನಗಳೇ ಭವಿಷ್ಯದಲ್ಲಿ ದೊಡ್ಡ ಪರಿಸರ ಬದಲಾವಣೆಗೆ ಕಾರಣವಾಗಲಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು, ವೃತ್ತಿಪರ ಓಟಗಾರರು, ಕಾರ್ಪೊರೇಟ್ ವಲಯದ ಪ್ರತಿನಿಧಿಗಳು, ಹಿರಿಯ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸೇರಿದಂತೆ 1,000ಕ್ಕೂ ಹೆಚ್ಚು ಆಸಕ್ತರು ಭಾಗವಹಿಸಿದ್ದರು. 4 ವರ್ಷದ ಮಗುವಿನಿಂದ 95 ವರ್ಷದ ಹಿರಿಯ ನಾಗರಿಕರವರೆಗೆ ವಿವಿಧ ವಯೋಮಾನದ ಜನರು ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಹಸಿರೋತ್ಸವ ತಂಡ, ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ‘ಬೆಂಬಲ’ ತಂಡ ಹಾಗೂ ಮೌಂಟ್ ಕಾರ್ಮೆಲ್ ವಿಶ್ವವಿದ್ಯಾಲಯದ ‘ಇಕೋ ವಾರಿಯರ್ಸ್’ ತಂಡದ ಸ್ವಯಂಸೇವಕರು ‘ವಾಕ್ & ರನ್’ ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.