ಬೆಂಗಳೂರು, ಫೆಬ್ರವರಿ 28: ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು ಹಾಗೂ ಕೋಲ್ಕತಾದಿಂದ ಗಲ್ಫ್ ರಾಷ್ಟ್ರಗಳಿಗೆ ಶನಿವಾರ ತೆರಳಬೇಕಿದ್ದ ಹಲವು ವಿಮಾನಗಳ ಹಾರಾಟ ರದ್ದಾಗಿದೆ. ಇರಾನ್ ವಾಯುಮಾರ್ಗದಲ್ಲಿ ವಿಮಾನ ಹಾರಾಟ ನಿಷೇಧ ಹಿನ್ನೆಲೆಯಲ್ಲಿ ಬೆಂಗಳೂರು, ಕೋಲ್ಕತ್ತಾದ ವಿಮಾನ ನಿಲ್ದಾಣಗಳಿಂದ 13 ವಿಮಾನಗಳ ಹಾರಾಟ ರದ್ದಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರಿಗೆ ಅಬುಧಾಬಿ, ರಿಯಾದ್, ಜೆಡ್ಡಾ, ದಮ್ಮಾಮ್, ದುಬೈನಿಂದ ಆಗಮಿಸಿದ್ದ ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಎಮಿರೇಟ್ಸ್ ಸೇರಿ 9 ವಿಮಾನಗಳು ವಾಪಸ್ ತೆರಳಬೇಕಿತ್ತು. ಆದರೆ, ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆಯಲ್ಲಿ ಹಾರಾಟ ರದ್ದಾಗಿದೆ.
ಬೆಂಗಳೂರಿಗೆ ಅಬುಧಾಬಿಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 866, ದಮ್ಮಾಮ್‌ನಿಂದ ಬಂದ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 864, ರಿಯಾಧ್‌ನಿಂದ ಬಂದಿದ್ದ ಇಂಡಿಗೋ ವಿಮಾನ 6E 54, ಜೆಡ್ಡಾದಿಂದ ಬಂದಿದ್ದ ಇಂಡಿಗೋ ವಿಮಾನ 6E 78, ದುಬೈಯಿಂದ ಇಂಡಿಗೋ ವಿಮಾನ 6E 1486, ಅಬುಧಾಬಿಯಿಂದ ಇಂಡಿಗೋ ವಿಮಾನ 6E 1409, ದೋಹದಿಂದ ಇಂಡಿಗೋ ವಿಮಾನ 6E 1302, ದುಬೈಯಿಂದ ಎಮಿರೇಟ್ಸ್ ವಿಮಾನ EK 568, ಮತ್ತು ದುಬೈಯಿಂದ ಆಗಮಿಸಿದ್ದ ಎಮಿರೇಟ್ಸ್ ವಿಮಾನ EK 566 ರದ್ದಾಗಿವೆ.
ಇರಾನ್-ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆ ವಾಯುಮಾರ್ಗದಲ್ಲಿ ನಿರ್ಬಂಧ ವಿಧಿಸಿರುವುದರಿಂದ ಹಲವು ವಿಮಾನಗಳ ಹಾರಾಟ ರದ್ದಾಗಿದೆ ಎಂದು ಕೆಂಪೇಗೌಡ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕೋಲ್ಕತ್ತಾದಿಂದ ತೆರಳಬೇಕಿದ್ದ ನಾಲ್ಕು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಕೋಲ್ಕತಾದಿಂದ ದುಬೈಗೆ ಹೋಗಬೇಕಿದ್ದ ಎಮಿರೇಟ್ಸ್ ಫ್ಲೈಟ್ EK 573, ದೋಹಾಗೆ ತೆರಳಬೇಕಿದ್ದ ಕತಾರ್ ಏರ್‌ವೇಸ್ QR 541, ಅಬುದಾಬಿಗೆ ತೆರಳಬೇಕಿದ್ದ ಏರ್ ಅರೇಬಿಯಾ 3L 167 ಹಾಗೂ ಎತಿಹಾದ್ ಏರ್‌ವೇಸ್ EY 221 ವಿಮಾನ ಹಾರಾಟ ಕ್ಯಾನ್ಸಲ್ ಆಗಿದೆ.
ಇರಾನ್ ಮೇಲಿನ ದಾಳಿ ಬಳಿಕ ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳಿಗೆ ಬೆಂಬಲ ಸೂಚಿಸಿದ ಪಾಕಿಸ್ತಾನ
ಮಂಗಳೂರಿನಿಂದಲೂ ವಿಮಾನ ಹಾರಾಟ ಕ್ಯಾನ್ಸಲ್
ಅದೇ ರೀತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ- ನಿರ್ಗಮನ ವಿಮಾನಗಳಲ್ಲಿ ವ್ಯತ್ಯಯವಾಗಿದೆ. ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದ್ದರೆ, ಇನ್ನು ಕೆಲವು ವಿಳಂಬವಾಗಲಿವೆ. ಮಂಗಳೂರು- ದುಬೈ ವಿಮಾನ ಐಎಕ್ಸ್ 831 ಹಿಂದಕ್ಕೆ ಮರಳಿದೆ. ಮಂಗಳೂರು- ದೋಹಾ ವಿಮಾನ ಐಎಕ್ಸ್ 821 ಮುಂಬಯಿಗೆ ಹಾದಿ ಬದಲಾಯಿಸಿದೆ. ಮಂಗಳೂರು- ದುಬೈ ವಿಮಾನ ಐಎಕ್ಸ್ 831 ರದ್ದುಗೊಂಡಿದ್ದು, 174+6 ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಒಟ್ಟು ಎಂಟು ವಿಮಾನಗಳ ಹಾರಾಟ ರದ್ದುಗೊಂಡಿವೆ. ಗಲ್ಪ್ ರಾಷ್ಟ್ರಗಳಿಗೆ ತೆರಳುವ ಎಲ್ಲಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.