ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

LPG Gas Cylinder Shortage: ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆ ಬಗ್ಗೆ ದೂರು ಸಲ್ಲಿಕೆಗೆ ಆಹಾರ ಇಲಾಖೆಯಿಂದ ಸಹಾಯವಾಣಿ ಆರಂಭ

ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಲಿಂಡರ್‌ ಮಾರಾಟ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಏನಾದರೂ ತೊಂದರೆ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ ಕೊರತೆ (LPG Gas Cylinder Shortage) ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ವಿತರಣೆಗೆ ಸಂಬಂಧಿಸಿ ಯಾವುದೇ ದೂರುಗಳಿದ್ದಲ್ಲಿ ಸಂಪರ್ಕಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸಹಾಯವಾಣಿ (LPG Helpline) ಆರಂಭಿಸಲಾಗಿದೆ.

ಈ ಬಗ್ಗೆ ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪಾತರಾಜು ಮಾತನಾಡಿ, ಗ್ಯಾಸ್‌ ವಿತರಣೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ತೈಲ ಕಂಪನಿಗಳು ಅಗತ್ಯ ತಕ್ಕಂತೆ ಎಲ್‌ಪಿಜಿ ಸಿಲಿಂಡರ್‌ ದಾಸ್ತಾನು ಮಾಡಿಕೊಂಡಿವೆ. ಗ್ಯಾಸ್‌ ಏಜೆನ್ಸಿಗಳು ಬುಕಿಂಗ್‌ ಮಾಡಿದ ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಸಿಲಿಂಡರ್‌ ವಿತರಿಸಬೇಕು. ಕಾಳಸಂತೆಯಲ್ಲಿ ದುಪಟ್ಟು ಬೆಲೆಗೆ ಸಿಲಿಂಡರ್‌ ಮಾರಾಟ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಏನಾದರೂ ತೊಂದರೆ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಸಹಾಯವಾಣಿ ಸಂಖ್ಯೆ

ಎಲ್‌ಪಿಜಿ ಸಿಲಿಂಡರ್‌ ಸಂಬಂಧಿಸಿದಂತೆ ಆಹಾರ ಇಲಾಖೆ ಸಹಾಯವಾಣಿ ಸಂಖ್ಯೆ: 080 - 22264966 ಸಂಪರ್ಕಿಸಬಹುದು.

514 ಸಿಲಿಂಡರ್‌ ಜಪ್ತಿ

ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಎಲ್‌ಪಿಜಿ ಸಿಲಿಂಡರ್‌ ಮಾರಾಟ ಮಾಡುತ್ತಿರುವವರ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ ರಾಜ್ಯದ ನಾನಾ ಭಾಗಗಳಲ್ಲಿ5 ಎಫ್‌ಐಆರ್‌ ದಾಖಲಿಸಿ ಮತ್ತು 514 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 221, ಬೆಂಗಳೂರು ಗ್ರಾಮಾಂತರ 209 ಎಲ್‌ಪಿಜಿ ಸಿಲಿಂಡರ್‌ ಜಪ್ತಿ ಮಾಡಲಾಗಿದೆ. ಯಾದಗಿರಿ 46, ದಾವಣಗೆರೆ 13, ಬೆಳಗಾವಿ 12, ರಾಯಚೂರು 4, ಚಿಕ್ಕಮಗಳೂರು 3, ಧಾರವಾಡ 2, ಶಿವಮೊಗ್ಗ 3, ಕೋಲಾರ 1 ಸಿಲಿಂಡರ್‌ ಜಪ್ತಿ ಮಾಡಿಕೊಳ್ಳಲಾಗಿದೆ. ದಾವಣಗೆರೆ ಎಪಿಎಂಸಿ, ಬೆಂಗಳೂರಿನ ಪೀಣ್ಯ, ಚಿಕ್ಕಜಾಲ, ಕೆಂಗೇರಿ, ಕೋಲಾರದ ಕೆಜಿಎಫ್‌ನಲ್ಲಿಎಫ್‌ಐಆರ್‌ ದಾಖಲಾಗಿವೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಎಂ.ಕನಗವಲ್ಲಿ ತಿಳಿಸಿದ್ದಾರೆ.

LPG shortage: ಎಲ್‌ಪಿಜಿ ಸಿಲಿಂಡರ್ ಅಭಾವ ನೀಗಿಸಲು ಒತ್ತಾಯಿಸಿ ಕೇಂದ್ರಕ್ಕೆ ಪತ್ರ: ಸಿಎಂ ಸಿದ್ದರಾಮಯ್ಯ

ಗೃಹ ಬಳಕೆಯ 11,41,657 ಎಲ್‌ಪಿಜಿ ಸಿಲಿಂಡರ್‌ ವಿತರಣೆ

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಈವರೆಗೆ ಗೃಹ ಬಳಕೆಯ 11,41,657 ಎಲ್‌ಪಿಜಿ ಸಿಲಿಂಡರ್‌ ಹಾಗೂ ವಾಣಿಜ್ಯ ಬಳಕೆಯ 20,941 ಸಿಲಿಂಡರ್‌ಗಳನ್ನು ವಿತರಿಸಿದೆ.

ತೈಲ ಮತ್ತು ಅನಿಲ ಕಂಪನಿಗಳ ಜತೆ ಸಚಿವ ಮುನಿಯಪ್ಪ ಸಭೆ

ರಾಜ್ಯದಲ್ಲಿ ಎಲ್.ಪಿ.ಜಿ ಸಿಲಿಂಡರ್ ಸರಬರಾಜು ಸಂಬಂಧಿತ ಸಮಸ್ಯೆಗಳ ಕುರಿತು ಬೆಂಗಳೂರು ವಸಂತನಗರದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ನೇತೃತ್ವದಲ್ಲಿ IOC, HPC, BPC ಹಾಗೂ GAIL ಸಂಸ್ಥೆಗಳ ಅಧಿಕಾರಿಗಳ ಸಭೆ ಸೋಮವಾರ ನಡೆಯಿತು.

ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಎಚ್. ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂಧತಿ ಗೋಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿಕುಮಾರ್ ತಂಡಲ್ ಹಾಗೂ ಪ್ರಸೂನ್ ಉಪಸ್ಥಿತರಿದ್ದರು.