ಬೆಂಗಳೂರು, ಜು.21: ಚರಂಡಿಯ ಹಳ್ಳಕ್ಕೆ ಬಿದ್ದು ಗಾಯಗೊಂಡಿದ್ದ ಬಿಜೆಪಿ ಮುಖಂಡ ಬೇಲೂರು ರಾಘವೇಂದ್ರ ಶೆಟ್ಟಿ ಅವರ ಆರೋಗ್ಯವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ (CN Ashwath Narayan) ಮಂಗಳವಾರ ವಿಚಾರಿಸಿದರು.
ಈ ವೇಳೆ ಮಾತನಾಡಿರುವ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು, ಬಿಜೆಪಿ ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕ ಮತ್ತು ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಲೂರು ರಾಘವೇಂದ್ರ ಶೆಟ್ಟಿ ಅವರು ಜು.18ರಂದು ರಾತ್ರಿ ಡಾಲರ್ಸ್ ಕಾಲೊನಿ ಬಳಿ ತೆರಳಿದ್ದರು. ಅಲ್ಲಿ ಚರಂಡಿ ಸ್ಲ್ಯಾಬ್ ತೆರೆದು ಜಿಬಿಎಯವರು ಕಾಮಗಾರಿ ನಡೆಸುತ್ತಿದ್ದರು. ಸ್ಲ್ಯಾಬ್ ಇಲ್ಲದುದರಿಂದ ಚರಂಡಿಯ ಹಳ್ಳಕ್ಕೆ ಬಿದ್ದು ಬೇಲೂರು ರಾಘವೇಂದ್ರ ಶೆಟ್ಟಿ ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ಈ ಬಗ್ಗೆ ಉತ್ತರ ಮಹಾನಗರ ಪಾಲಿಕೆ ಅಧಿಕಾರಿ ವರ್ಗವು ಸರಿಯಾಗಿ ಸ್ಪಂದಿಸಿಲ್ಲ. ಪೊಲೀಸರು ಕೇಸು ದಾಖಲಿಸಲು ಹಿಂಜರಿದಿದ್ದಾರೆ. ಜವಾಬ್ದಾರಿ, ಸೂಕ್ಷ್ಮತೆ ಇಲ್ಲದೇ ಒಂದು ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದರು.
ಪೊಲೀಸರು ದೂರು ಸ್ವೀಕರಿಸದ ಕುರಿತು ರಾಘವೇಂದ್ರ ಶೆಟ್ಟಿ ಅವರು ನೋವನ್ನು ವ್ಯಕ್ತಪಡಿಸಿದ್ದಾಗಿ ಹೇಳಿದರು. ಆಂಧ್ರಪ್ರದೇಶದ ರಾಜ್ಯಪಾಲರಾದ ಜಸ್ಟಿಸ್ ನಜೀರ್ ಅವರು ರಾಘವೇಂದ್ರ ಶೆಟ್ಟಿ ಅವರನ್ನು ಭೇಟಿ ಮಾಡಿದ್ದರು. ಅವರು ಸೂಚನೆ ಕೊಟ್ಟ ತಕ್ಷಣ ಎಫ್‍ಐಆರ್ ಮಾಡಿದ್ದಾರೆ ಎಂದು ದೂರಿದರು. ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಒತ್ತಾಯಿಸಿದರು.