ಬೆಂಗಳೂರು, ಡಿ.26: ಮದುವೆಯಾಗಿ ಒಂದೂವರೆ ತಿಂಗಳಿಗೇ ನವವಧು ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ (Ganavi Suicide Case) ಸಂಬಂಧಿಸಿ ಗಂಡ ಸೂರಜ್ ಹಾಗೂ ಕುಟುಂಬಸ್ಥರನ್ನು ಬಂಧಿಸಬೇಕು ಎಂದು ಮೃತ ಯುವತಿಯ ಪೋಷಕರು ಆಗ್ರಹಿಸುತ್ತಿದ್ದಾರೆ. 40 ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರೂ ವರದಕ್ಷಿಣೆಗಾಗಿ ಗಾನವಿಗೆ ಕಿರುಕುಳ ನೀಡಲಾಗಿದೆ. ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ, ಬಂದಿದ್ದಾನೆ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 26 ವರ್ಷದ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಯುವತಿ ಅಕ್ಟೋಬರ್ 29ರಂದು ಸೂರಜ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಆದರೆ, ಅಲ್ಲಿ ಅದೇನಾಯ್ತೋ ಅರ್ಧಕ್ಕೆ ವಾಪಸ್ಸಾಗಿದ್ದರು. ಬಳಿಕ ನೇಣಿಗೆ ಹಾಕಿಕೊಳ್ಳಲು ಯುವತಿ ಯತ್ನಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಪ್ರಸ್ತುತ ಗಾನವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾನವಿಯ ಪತಿ ಸೂರಜ್, ಆತನ ಅಣ್ಣ ಸಂಜಯ್ ಹಾಗೂ ತಾಯಿ ಜಯಂತಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಸ್ಪತ್ರೆ ಬಳಿ ಕುಟುಂಬಸ್ಥರು, ಸಂಬಂಧಿಕರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಗಾನವಿಯ ದೊಡ್ಡಮ್ಮ ಮಾತನಾಡಿದ್ದು, ಒಳ್ಳೆಯ ಸಂಬಂಧ ಎಂದು ನಾನೇ ಮದುವೆ ಮಾಡಿಸಲು ಮುಂದಾದೆ. ಅವರು ಹೇಳಿದಂತೆ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಟ್ಟೆವು. ವರದಕ್ಷಿಣೆ, ಒಡವೆಗಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮದುವೆ ಆಗಿ ಒಂದೂವರೆ ತಿಂಗಳಾದರೂ ನಮ್ಮ ಹುಡುಗಿಯನ್ನು ಆತ ಟಚ್ ಕೂಡ ಮಾಡಿಲ್ಲ. ಶ್ರೀಲಂಕಾಗೆ ಹನಿಮೂನ್‌ಗೆ ಹೋಗಿ ಅರ್ಧದಲ್ಲೇ ಮೊಟಕುಗೊಳಿಸಿ ಬಂದಿದ್ದಾನೆ. ಗಾನವಿಯ ಪತಿ ನಪುಂಸಕ, ಅವನು ಗಂಡಸೇ ಅಲ್ಲ ಎಂದು ಆಕೆಗೆ ಫಸ್ಟ್ ನೈಟ್ ದಿನವೇ ಗೊತ್ತಾಗಿತ್ತು. ಆತನ ಸಮಸ್ಯೆ ಮುಚ್ಚಿಡಲು ಗಾನವಿಗೆ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಲಕ್ಷ ಲಕ್ಷ ಸುರಿದು ಅದ್ಧೂರಿ ವಿವಾಹ; ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ!
ಗಾನವಿ ಚಿಕ್ಕಪ್ಪ ಕಾರ್ತಿಕ್ ಪ್ರತಿಕ್ರಿಯಿಸಿ, ಗಾನವಿ ಪತಿ ಸೂರಜ್, ಆತನ ತಾಯಿ ಜಯಂತಿ, ಅಣ್ಣ ಸಂಜಯ್ ವಿರುದ್ಧ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದೇವೆ, ವರದಕ್ಷಿಣೆ ಕಿರುಕುಳ ಆರೋಪದಡಿ ರಾಮಮೂರ್ತಿನಗರ ನಗರ ಠಾಣೆಗೆ ದೂರು ನೀಡಲಾಗಿದೆ. ಮದುವೆ ಬಳಿಕ ಆಭರಣಕ್ಕಾಗಿ ಸಾಕಷ್ಟು ಕಿರುಕುಳ ನೀಡಿದ್ದಾರೆ. ಇನ್ನೋವಾ ಕಾರು ಯಾವಾಗ ಕೊಡ್ತಾರೆ ಅಂತ ಕಾಟ ಕೊಡುತ್ತಿದ್ದ. ಮದುವೆ ನಂತರ ಸಂಸಾರದ ಬಗ್ಗೆ ಆತನಿಗೆ ಆಸಕ್ತಿ ಇರಲಿಲ್ಲ. ಅದನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಪೊಲೀಸರು ದೂರು ತಗೊಂಡು ತನಿಖೆ ಮಾಡುತ್ತಿದ್ದಾರೆ. ಮೂವರ ಪೋನ್ ಸ್ವಿಚ್ ಆಫ್ ಆಗಿದೆ. ಅವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ.