ಬೆಂಗಳೂರು, ಸೆ. 3: ರಂಗಸೌರಭ ವತಿಯಿಂದ ಸೆಪ್ಟೆಂಬರ್ 6ರಂದು ಬೆಂಗಳೂರಿನ (Bengaluru News) ಜೆಪಿ ನಗರದ ರಂಗಶಂಕರದಲ್ಲಿ ವರಕವಿ ಡಾ. ದ.ರಾ. ಬೇಂದ್ರೆ ಅವರ ಬದುಕು ಮತ್ತು ಬರಹಗಳ ಸಮಗ್ರ ಚಿತ್ರಣವುಳ್ಳ 'ಗಂಗಾವತರಣ' ನಾಟಕದ 2 ಪ್ರದರ್ಶನ ಏರ್ಪಡಿಸಲಾಗಿದೆ. ರಾಜೇಂದ್ರ ಕಾರಂತ್ ಅವರ ರಚನೆ, ವಿನ್ಯಾಸ ಮತ್ತು ನಿರ್ದೇಶನದ 'ಗಂಗಾವತರಣ' ನಾಟಕದ 96 ಹಾಗೂ 97ನೇ ಪ್ರದರ್ಶನ ಇದಾಗಿದೆ.
ವರಕವಿ ಡಾ. ದ.ರಾ. ಬೇಂದ್ರೆ ಅವರ ಬದುಕು ಮತ್ತು ಬರಹಗಳ ಸಮಗ್ರ ಚಿತ್ರಣವುಳ್ಳ 'ಗಂಗಾವತರಣ' ನಾಟಕ ಪ್ರದರ್ಶನವು ಅಪರಾಹ್ನ 3:30 ಹಾಗೂ ಸಂಜೆ 7.30ಕ್ಕೆ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜ್ಞಾನಪೀಠ ಪುರಸ್ಕೃತರು
ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ ದ.ರಾ. ಬೇಂದ್ರ ಅವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕರ್ನಾಟಕದ ವರಕವಿ ಎಂದು ಪ್ರಸಿದ್ಧರಾಗಿರುವ ಅವರ ಕವನ ಸಂಕಲನ ʼನಾಕುತಂತಿʼಗೆ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ 1973ರಲ್ಲಿ ಲಭಿಸಿತು. ಜತೆಗೆ ಅವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಬೇಂದ್ರೆ 1896ರ ಜನವರಿ 31ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ (ಅಂಬವ್ವ). ಬೇಂದ್ರೆ ಅವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಅವರ ಪ್ರಥಮ ಕಾವ್ಯ ಸಂಕಲನ ʼಕೃಷ್ಣ ಕುಮಾರಿʼ.
1932ರಲ್ಲಿ ಪ್ರಕಟಗೊಂಡ ಬೇಂದ್ರೆ ಅವರ ʼಗರಿʼ ಕವನ ಸಂಕಲನದಲ್ಲಿನ ʼನರಬಲಿʼ ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಅಸಾಮಾಧಾನಕ್ಕೆ ಕಾರಣವಾಗಿತ್ತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದ್ದರು. 'ಗಂಗಾವತರಣ' ನಾಟಕವು ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಈಗಾಗಲೇ ಗಮನ ಸೆಳೆದಿದೆ.