ಬೆಂಗಳೂರು: ರಾಜಧಾನಿಯ ನಿವಾಸಿಗಳು ಇನ್ಮುಂದೆ ತಮ್ಮ ವಾಹನಗಳನ್ನು ವಸತಿ ಹಾಗೂ ವಸತಿಯೇತರ ಪ್ರದೇಶದ ರಸ್ತೆಗಳಲ್ಲಿ ಪಾರ್ಕ್ ಮಾಡಲು (parking fees) ಭಾರಿ ಮೊತ್ತದ ಹಣ ತೆರಬೇಕಾಗಬಹುದು. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಪಾರ್ಕಿಂಗ್ ನೀತಿ (Bengaluru Parking Rules 2026) ಜಾರಿಗಾಗಿ ಕರಡು ಅಧಿಸೂಚನೆ ಪ್ರಕಟಿಸಿದೆ.
ಪ್ರಸ್ತಾವಿತ ಬೃಹತ್ ಬೆಂಗಳೂರು ಪ್ರದೇಶ (ಪಾರ್ಕಿಂಗ್) ನಿಯಮಗಳು, 2026 ರ ಪ್ರಕಾರ, ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಪರ್ಮಿಟ್ ಪಡೆಯಲು ಕಾರಿನ ಮಾದರಿಯನ್ನು ಆಧರಿಸಿ ವರ್ಷಕ್ಕೆ 15,000 ದಿಂದ 25,000 ರೂ.ವರೆಗೆ ವೆಚ್ಚವಾಗಬಹುದು. ರಸ್ತೆ ಬದಿಯ ಪಾರ್ಕಿಂಗ್‌ಗೆ ಹೋಲಿಸಿದರೆ ಆಫ್-ಸ್ಟ್ರೀಟ್ (ನಿಗದಿತ ಪಾರ್ಕಿಂಗ್ ಸಂಕೀರ್ಣಗಳು/ಸ್ಥಳಗಳು) ಪಾರ್ಕಿಂಗ್ ದರಗಳು ಅಗ್ಗವಾಗಿರಲಿವೆ.
ಇನ್ನು ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಆಫ್-ಸ್ಟ್ರೀಟ್ ಪಾರ್ಕಿಂಗ್ ಮಾಡುವವರಿಗೆ ಮಾಸಿಕ ದರದಲ್ಲಿ 50% ರಿಯಾಯಿತಿ ಸಿಗಲಿದೆ. ಯಾವ ವಾಹನಗಳಿಗೆ ಎಷ್ಟು ಪಾರ್ಕಿಂಗ್ ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.
ಆನ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು?
(ಪ್ರತಿ ಗಂಟೆಗೆ ಶುಲ್ಕ)
ಸಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 20 ರೂ., ಲಘುವಾಹನ– 60-40 ರೂ.
ಬಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 30 ರೂ., ಲಘುವಾಹನ – 60 ರೂ.
ಎ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 40 ರೂ., ಲಘುವಾಹನ – 80 ರೂ.
ಆಫ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ?
ಸಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 10 ರೂ., ಲಘುವಾಹನ – 20 ರೂ.
ಬಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 15 ರೂ., ಲಘುವಾಹನ– 30 ರೂ.
ಎ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 20 ರೂ., ಲಘುವಾಹನ– 40 ರೂ.
ಮಾಸಿಕ ಆಫ್ ಸ್ಟ್ರೀಟ್ ಪಾರ್ಕಿಂಗ್ ದರ ಎಷ್ಟು ? (ಮಾಸಿಕ ಪಾಸ್)
ಸಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 1,000 ರೂ., ಲಘುವಾಹನ 2000 ರೂ.
ಬಿ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 1,500 ರೂ., ಲಘುವಾಹನ – 3,000 ರೂ.
ಎ ಕ್ಯಾಟಗಿರಿ ರಸ್ತೆ: ದ್ವಿಚಕ್ರ ವಾಹನ – 2,000 ರೂ., ಲಘುವಾಹನ – 4,000 ರೂ.
ದೀರ್ಘಾವಧಿ ಪಾರ್ಕಿಂಗ್‌ಗೆ ನಿರ್ಬಂಧ:
ರಸ್ತೆಗಳಲ್ಲಿ ದೀರ್ಘಕಾಲ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು, 2 ಗಂಟೆಗಿಂತ ಹೆಚ್ಚು ಸಮಯ ಪಾರ್ಕ್ ಮಾಡಿದರೆ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಪಾರ್ಕಿಂಗ್ ಶುಲ್ಕದ ಕುರಿತು ನಗರಾಭಿವೃದ್ಧಿ ಇಲಾಖೆಯು ಆಗಸ್ಟ್ 11 ರಂದು ಈ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಗೆಜೆಟ್‌ನಲ್ಲಿ ಪ್ರಕಟಗೊಂಡ 30 ದಿನಗಳ ಒಳಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಬೆಂಗಳೂರಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರುವುದು, ಸಾರ್ವಜನಿಕ ಜಾಗ ಬಳಕೆಗೆ ಶುಲ್ಕ ವಿಧಿಸುವ ಹಾಗೂ ಜನರನ್ನು ಸುಸಜ್ಜಿತ ಆಫ್-ಸ್ಟ್ರೀಟ್ ಪಾರ್ಕಿಂಗ್ ಸಂಕೀರ್ಣಗಳನ್ನು ಬಳಸುವಂತೆ ಉತ್ತೇಜಿಸುವುದು ಈ ಹೊಸ ಪಾರ್ಕಿಂಗ್ ನೀತಿಯ ಉದ್ದೇಶವಾಗಿದೆ.