ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂಚರಿಸಿದ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ಹೊರವಲಯದ ಕನಕಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಆರ್ಟ್ ಆಫ್ ಲಿವಿಂಗ್‌ನ 47ನೇ ವಾರ್ಷಿಕೋತ್ಸವ ಹಾಗೂ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆಯ ಪ್ರಯುಕ್ತ ಪ್ರಧಾನಿ ಮೋದಿ ಅವರು ಕನಕಪುರ ರಸ್ತೆಯಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮ ಮುಗಿಸಿ ಅವರು ತೆರಳುವ ವೇಳೆ ಕಗ್ಗಲಿಪುರದ ತಾತಗುಣಿ ಬಳಿ ರಸ್ತೆ ಬದಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಇದೇ ಮಾರ್ಗವಾಗಿ ಪ್ರಧಾನಿಗಳು ಸಂಚರಿಸಿದ್ದರಿಂದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಆರ್ಟ್ ಆಫ್ ಲಿವಿಂಗ್‌ನಿಂದ ಪ್ರಧಾನಿ ಮೋದಿ ಅವರು ಹೈದರಾಬಾದ್‌ಗೆ ತೆರಳಬೇಕಿತ್ತು. ಆದರೆ ಮಾರ್ಗ ಮಧ್ಯೆ ಸ್ಪೋಟಕ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆಗಾಗಿ ಅವರ ಹೈದರಾಬಾದ್ ಪ್ರಯಾಣ ಸ್ವಲ್ಪ ಸಮಯ ವಿಳಂಬವಾಯಿತು. ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಧಾವಿಸಿ ಇಂಚಿಂಚೂ ಪರಿಶೀಲನೆ ನಡೆಸಿದೆ.
"ಬೆಂಗಳೂರಲ್ಲಿ ಕೇಸರಿಯ ಸೂರ್ಯ ಉದಯಿಸಿದ್ದಾನೆ" ; ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ
ಒಬ್ಬ ವ್ಯಕ್ತಿ ಪೊಲೀಸ್ ವಶಕ್ಕೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಮನಗರ ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಶಂಕಾಸ್ಪದವಾಗಿ ಓಡಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಅಜ್ಞಾತ ಸ್ಥಳದಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದ್ದು, ಜಿಲೆಟಿನ್ ಕಡ್ಡಿಗಳು ಅಲ್ಲಿಗೆ ಬಂದಿದ್ದು ಹೇಗೆ? ಇದರ ಹಿಂದೆ ಏನಾದರೂ ಸಂಚಿದೆಯೇ? ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದು, ಭದ್ರತೆಯಲ್ಲಿ ಆದ ಲೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.