ಬೆಂಗಳೂರು, ಅ. 11: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಬೆಂಗಳೂರು ಕ್ಯಾಂಪಸ್ ವಿಶ್ವ ಮಾನಸಿಕ ಆರೋಗ್ಯ ದಿನದ (World Mental Health Day) ಅಂಗವಾಗಿ ಮಾರ್ಗ ಮೈಂಡ್ ಕೇರ್ ಸಹಯೋಗದಲ್ಲಿ ಜಾಗೃತಿ ನಡಿಗೆಯನ್ನು ಆಯೋಜಿಸಿತು. ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು, ಸಕಾಲದಲ್ಲಿ ಸೂಕ್ತ ನೆರವು ಪಡೆಯುವುದು ಹಾಗೂ ಮಾನಸಿಕ ಯೋಗಕ್ಷೇಮದ ಕುರಿತು ಮುಕ್ತ ಸಂವಾದವನ್ನು ಉತ್ತೇಜಿಸುವ ಮೂಲಕ ಮಾನಸಿಕ ಆರೋಗ್ಯ ಸಾಕ್ಷರತೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.
'ಆರೋಗ್ಯಕ್ಕಾಗಿ ನಡಿಗೆ: ಉತ್ತಮ ಮಾನಸಿಕ ಆರೋಗ್ಯದತ್ತ ಹೆಜ್ಜೆಗಳು' ಎಂಬ ಧ್ಯೇಯವಾಕ್ಯದಡಿ ನಡೆದ 5 ಕಿ.ಮೀ. ನಡಿಗೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದರು. ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಗುರುತಿಸುವಿಕೆ, ಸಕಾಲಿಕ ನೆರವು, ಮುಕ್ತ ಸಂವಾದ ಹಾಗೂ ಅಗತ್ಯವಿದ್ದಾಗ ನೆರವು ಪಡೆಯಲು ಅನುಕೂಲವಾಗುವಂತಹ ಬೆಂಬಲಪೂರ್ಣ ವಾತಾವರಣವನ್ನು ನಿರ್ಮಿಸುವುದರ ಮಹತ್ವವನ್ನು ಈ ನಡಿಗೆ ಸಾರಿತು.
ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಹೆಚ್ಚುತ್ತಿದೆ. 2026ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ನಡುವೆ ನಡೆಸಿದ ಅಧ್ಯಯನವು ಇದನ್ನು ಒತ್ತಿಹೇಳಿದೆ. ಸಮಾಲೋಚನಾ ಮಾಹಿತಿಯ ಪ್ರಕಾರ, ಆತಂಕ, ಕೌಟುಂಬಿಕ ಸಂಘರ್ಷ ಮತ್ತು ಶೈಕ್ಷಣಿಕ ಒತ್ತಡ ಪ್ರಮುಖ ಸಮಸ್ಯೆಗಳಾಗಿವೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಆರೈಕೆ ಒದಗಿಸುವ ಸಮನ್ವಯಿತ ವ್ಯವಸ್ಥೆಯ ಅಗತ್ಯವನ್ನು ಈ ಅಧ್ಯಯನದ ಫಲಿತಾಂಶಗಳು ದೃಢಪಡಿಸಿವೆ.
ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಜಾಗೃತಿ ನಡಿಗೆಗೆ ಚಾಲನೆ ನೀಡಿದರು. ಮಾಹೆ ಬೆಂಗಳೂರು ಕ್ಯಾಂಪಸ್‌ನ ಹೆಚ್ಚುವರಿ ಕುಲಸಚಿವ ಡಾ. ರಾಘವೇಂದ್ರ ಪ್ರಭು ಪಿ., ಮಾರ್ಗ ಮೈಂಡ್ ಕೇರ್ ಅಧ್ಯಕ್ಷೆ ಡಾ. ಜ್ಯೋತಿ ಎಸ್. ನಿರಜಾ, ಯಲಹಂಕದ ಬಿಎನ್‌ಸಿಸಿ ಕೆರೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಹಾಗೂ ಯಲಹಂಕ ಯುನೈಟೆಡ್ ಎನ್ವಿರಾನ್ಮೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಚಂದು ಸಿ.ಎನ್. ಉಪಸ್ಥಿತರಿದ್ದರು.
ಈ ಜಾಗೃತಿ ನಡಿಗೆಯು ನಿಯಮಿತ ದೈಹಿಕ ಚಟುವಟಿಕೆ ಮತ್ತು ಮಾನಸಿಕ ಯೋಗಕ್ಷೇಮದ ನಡುವಿನ ಸಂಬಂಧವನ್ನೂ ಒತ್ತಿಹೇಳಿತು. ಒತ್ತಡವನ್ನು ನಿರ್ವಹಿಸಿ, ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆಯನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವಂತೆ ಭಾಗವಹಿಸಿದವರಿಗೆ ಪ್ರೇರಣೆ ನೀಡಲಾಯಿತು. ವೃತ್ತಿಪರ ನೆರವು ಪಡೆಯುವುದು ದೌರ್ಬಲ್ಯವಲ್ಲ, ಬದಲಾಗಿ ಧೈರ್ಯದ ಸಂಕೇತ ಎಂದು ಆಯೋಜಕರು ಪುನರುಚ್ಚರಿಸಿದರು.
ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಎಸ್.ಆರ್. ವಿಶ್ವನಾಥ್, “ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಮಾಹೆ ಬೆಂಗಳೂರು ಕ್ಯಾಂಪಸ್ ಆಯೋಜಿಸಿರುವ ಈ ಜಾಗೃತಿ ನಡಿಗೆಯಂತಹ ಕಾರ್ಯಕ್ರಮಗಳು ಜನರನ್ನು ಒಗ್ಗೂಡಿಸುವುದರ ಜತೆಗೆ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಿ, ಮಾನಸಿಕ ಯೋಗಕ್ಷೇಮದ ಕುರಿತು ಅಗತ್ಯ ಜಾಗೃತಿ ಮೂಡಿಸುತ್ತವೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಕ್ತ ಸಂವಾದ ಮತ್ತು ಬಲವಾದ ಸಮುದಾಯ ಬೆಂಬಲ ಅತ್ಯಗತ್ಯ” ಎಂದು ಹೇಳಿದರು.
ಡಾ. ರಾಘವೇಂದ್ರ ಪ್ರಭು ಪಿ. ಮಾತನಾಡಿ, “ಮಾಹೆ ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ವಿದ್ಯಾರ್ಥಿಗಳ ಅರ್ಥಪೂರ್ಣ ಶೈಕ್ಷಣಿಕ ಹಾಗೂ ಕ್ಯಾಂಪಸ್ ಅನುಭವದ ಅವಿಭಾಜ್ಯ ಭಾಗವಾಗಿ ಪರಿಗಣಿಸುತ್ತೇವೆ. ವಿದ್ಯಾರ್ಥಿಗಳು, ಆರೋಗ್ಯ ಸೇವಾ ಪಾಲುದಾರರು ಮತ್ತು ಸಮುದಾಯದೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯದ ಕುರಿತು ಅರಿವು, ಸಹಾನುಭೂತಿ ಮತ್ತು ಅಗತ್ಯ ನೆರವಿನ ಲಭ್ಯತೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನವನ್ನು ಈ ಉಪಕ್ರಮ ಪ್ರತಿಬಿಂಬಿಸುತ್ತದೆ” ಎಂದು ತಿಳಿಸಿದರು.
ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದು: ಡಾ. ದೀನಮಂಜು ಶೆಟ್ಟಿ
ಡಾ. ಜ್ಯೋತಿ ನೀರಜಾ ಮಾತನಾಡಿ, “ಬೆಂಗಳೂರಿನ ಪ್ರಗತಿಯಲ್ಲಿ ಮಾನಸಿಕ ಆರೋಗ್ಯಕ್ಕೂ ಸಮಾನ ಪ್ರಾಮುಖ್ಯತೆ ನೀಡಬೇಕು. ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅಗತ್ಯವಿರುವವರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ನೆರವು ಸುಲಭವಾಗಿ ದೊರೆಯುವ ವ್ಯವಸ್ಥೆಯನ್ನು ರೂಪಿಸಬೇಕು. ಮಾನಸಿಕ ಆರೋಗ್ಯ ಸೇವೆಯು ಆಸ್ಪತ್ರೆಗಳು ಮತ್ತು ಜಾಗೃತಿ ದಿನಗಳಿಗೆ ಸೀಮಿತವಾಗದೆ, ಕುಟುಂಬಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಯಸ್ಥಳಗಳ ದೈನಂದಿನ ಆರೋಗ್ಯ ಕಾಳಜಿಯ ಭಾಗವಾಗಬೇಕು. ಈ ಸಮಗ್ರ ವ್ಯವಸ್ಥೆಯನ್ನು ಬಲಪಡಿಸಲು ಮಾರ್ಗ ಬದ್ಧವಾಗಿದೆ” ಎಂದರು.
ಅಲ್ಲಾಳಸಂದ್ರ ಕೆರೆ ಸುತ್ತ ಆಯೋಜಿಸಿದ್ದ ನಡಿಗೆಗೂ ಮುನ್ನ ದೈಹಿಕ ಅಭ್ಯಾಸ ನಡೆಸಲಾಯಿತು. ಮಾಹೆ ಬೆಂಗಳೂರು ಕ್ಯಾಂಪಸ್ ತನ್ನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಪಾಲುದಾರ ಸಂಸ್ಥೆಯಾದ ಮಾರ್ಗ ಮೈಂಡ್ ಕೇರ್ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ವಾಲಂಟಿಯರ್ ಸರ್ವೀಸಸ್ ಆರ್ಗನೈಸೇಶನ್, ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ಮಣಿಪಾಲ್ ಆಸ್ಪತ್ರೆಗಳು ಬೆಂಬಲ ನೀಡಿದವು.