ಬೆಂಗಳೂರು: ಅನಾರೋಗ್ಯದಿಂದ ನಿಧನರಾದ ಅಜ್ಜಿ ಚೆನ್ನಮ್ಮ (Chennamma) ಅವರನ್ನು ನೆನೆದು ನಿಖಿಲ್ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಹೆಮ್ಮೆಯ ಅಜ್ಜಿ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಎಚ್.ಡಿ. ದೇವೇಗೌಡ ಸಾಹೇಬರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಲಾರದ ನಷ್ಟ ತಂದಿದೆ ಎಂದು ತಿಳಿಸಿದ್ದಾರೆ.
ಅಜ್ಜಿ ಕೇವಲ ನಮಗೆ ಅಜ್ಜಿಯಾಗಿರಲಿಲ್ಲ; ಇಡೀ ಕುಟುಂಬವನ್ನು ಒಟ್ಟಾಗಿ ಹಿಡಿದಿಟ್ಟಿದ್ದ ಗಟ್ಟಿ ನೆಲೆ ಅವರು. ನಮ್ಮ ಮನೆಯ ದೊಡ್ಡ ಆಧಾರಸ್ತಂಭ. ಮನೆಗೆ ಬಂದ ಯಾರೊಬ್ಬರನ್ನೂ ಅವರು ಹಸಿದ ಹೊಟ್ಟೆಯಲ್ಲಿ ಕಳುಹಿಸುತ್ತಿರಲಿಲ್ಲ; ಬಂದವರೆಲ್ಲರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದ ಅವರ ಆ ಕೈಗಳು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಸ್ವರೂಪವಾಗಿತ್ತು. ಅವರ ಆತಿಥ್ಯ, ಸರಳತೆ ಮತ್ತು ಮಮತೆಯ ಮಾತುಗಳು ನನ್ನ ಜೀವನದ ದೊಡ್ಡ ಸ್ಪೂರ್ತಿ. ಅವರು ಕಲಿಸಿದ ಬದುಕಿನ ಪಾಠಗಳು, ತೋರಿದ ಪ್ರೀತಿ ನನ್ನಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತದೆ.
ನಮ್ಮ ಇಡೀ ಕುಟುಂಬದ ದಾರಿದೀಪವಾಗಿದ್ದ ಅಜ್ಜಿಯ ಆತ್ಮಕ್ಕೆ ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ. ಅವರ ಅಗಲಿಕೆಯ ಈ ತೀವ್ರ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನಮ್ಮ ಇಡೀ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.