ಬೆಂಗಳೂರು: ವಿಯೆಟ್ನಾಂ ಮೂಲದ ವಿನ್ಗ್ರೂಪ್ ಸಂಸ್ಥೆಯ ಗ್ರೀನ್ ಎಸ್ಎಂ (Green SM EV cab service) ಆ್ಯಪ್ ಆಧಾರಿತ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಸಾರಿಗೆ ಇಲಾಖೆಯಿಂದ ಪರವಾನಗಿ ದೊರೆತಿದೆ. ಆದರೆ, ಕಡಿಮೆ ಪ್ರಯಾಣ ದರದ ಮೂಲಕ ಕ್ಯಾಬ್ ಸೇವೆ ನೀಡಲು ಮುಂದಾಗಿರುವ ವಿದೇಶಿ ಸಂಸ್ಥೆಗೆ ಲೈಸೆನ್ಸ್ ನೀಡಿರುವುದಕ್ಕೆ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಸೇರಿ ವಿವಿಧ ಟ್ಯಾಕ್ಸಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪರವಾನಗಿ ದೊರೆತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಪರ್ಧಾತ್ಮಕ ಕ್ಯಾಬ್ ಮಾರುಕಟ್ಟೆಗೆ ಗ್ರೀನ್ ಎಸ್ಎಂ ಪ್ರವೇಶಿಸಲು ಹಾದಿ ಸುಗಮವಾಗಿದೆ. ಆದರೆ, ತನ್ನದೇ ವಾಹನಗಳು ಹಾಗೂ ಚಾಲಕರನ್ನು ನೇಮಿಸಿಕೊಂಡು ಕಡಿಮೆ ದರದಲ್ಲಿ ಕ್ಯಾಬ್ ಸೇವೆ ಮುಂದಾಗಿರುವುದಕ್ಕೆ ಚಾಲಕರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಜಾಗತಿಕ ಕಂಪನಿಯ ಭಾರಿ ದರ ಸಮರರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾದರೂ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ವಾಹನ ಖರೀದಿಸಿರುವ ಸ್ಥಳೀಯ ಆಟೋ ಹಾಗೂ ಕ್ಯಾಬ್ ಚಾಲಕರ ಜೀವನೋಪಾಯಕ್ಕೆ ಕುತ್ತು ತರಲಿದೆ ಎಂಬುವುದು ಸ್ಥಳೀಯ ಚಾಲಕರ ಆತಂಕವಾಗಿದೆ.
ವಿದೇಶಿ ಕಂಪನಿಯ ಪ್ರವೇಶದಿಂದ ಸ್ಥಳೀಯ ಟ್ಯಾಕ್ಸಿ ಚಾಲಕರ ಆದಾಯ ಹಾಗೂ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಆತಂಕವನ್ನು ಚಾಲಕರ ಸಂಘಟನೆಗಳು ವ್ಯಕ್ತಪಡಿಸಿವೆ. ಹೀಗಾಗಿ ಸ್ಥಳೀಯ ಚಾಲಕರ ಹಿತಾಸಕ್ತಿ ರಕ್ಷಣೆ, ನ್ಯಾಯಸಮ್ಮತ ಸ್ಪರ್ಧೆ ಹಾಗೂ ಸಾರಿಗೆ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದು, ಗ್ರೀನ್ ಎಸ್ಎಂಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳು-2016ರ ಅಡಿಯಲ್ಲಿ ಗ್ರೀನ್ ಎಸ್ಎಂಗೆ ಪರವಾನಗಿ ನೀಡಲಾಗಿದ್ದು, ಈ ಪರವಾನಗಿ 2031ರ ಸೆಪ್ಟೆಂಬರ್ವರೆಗೆ ಮಾನ್ಯವಾಗಿರಲಿದೆ. ಆದರೆ, ಟ್ಯಾಕ್ಸಿ ಸಂಘಟನೆಗಳು ಪರವಾನಗಿ ನೀಡಿರುವ ಪ್ರಕ್ರಿಯೆಯನ್ನೇ ಪ್ರಶ್ನಿಸಿದ್ದು, ಅಗ್ರಿಗೇಟರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿವೆ.
ಏನಿದು ಗ್ರೀನ್ ಎಸ್ಎಂ?
ಗ್ರೀನ್ ಎಸ್ಎಂ (Green SM) ಎಂಬುದು ವಿಯೆಟ್ನಾಂ ಮೂಲದ ವಿನ್ಗ್ರೂಪ್ (Vingroup) ಸಂಸ್ಥೆಯ ಜಾಗತಿಕ ಎಲೆಕ್ಟ್ರಿಕ್ ವಾಹನ (EV) ಟ್ಯಾಕ್ಸಿ ಸೇವಾ ಕಂಪನಿಯಾಗಿದೆ. ಇದು ಸಂಪೂರ್ಣವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಮಾತ್ರ ಬಳಸಿ ಟ್ಯಾಕ್ಸಿ ಹಾಗೂ ಸಾರಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಕಂಪನಿಯು ಮುಖ್ಯವಾಗಿ ವಿಯೆಟ್ನಾಂನ ಪ್ರಸಿದ್ಧ ಆಟೋಮೊಬೈಲ್ ಬ್ರ್ಯಾಂಡ್ ಆದ 'ವಿನ್ಫಾಸ್ಟ್' (VinFast) ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಮತ್ತು ಮೋಟಾರ್ಸೈಕಲ್ಗಳನ್ನು ತನ್ನ ಸೇವೆಯಲ್ಲಿ ಬಳಸಿಕೊಳ್ಳುತ್ತದೆ.
2026ರ ಜೂನ್ನಲ್ಲಿ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಗ್ರೀನ್ ಎಸ್ಎಂ ಲಿಮೋ ಸೇವೆಯ ಮೂಲಕ ಭಾರತಕ್ಕೆ ಪ್ರವೇಶಿಸಿತ್ತು. ಬಳಿಕ ಹೈದರಾಬಾದ್ ಸೇರಿ ಇತರ ನಗರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ವಿನ್ಗ್ರೂಪ್ ಸಂಸ್ಥೆಯು ಕ್ಯಾಬ್ ಸೇವೆಗೆ ತನ್ನದೇ ʼವಿನ್ಫಾಸ್ಟ್ ಲಿಮೋ ಗ್ರೀನ್ʼ (VinFast Limo Green) ಕಾರುಗಳನ್ನು ಬಳಸಿಕೊಳ್ಳುತ್ತಿದೆ. ಇದು 7-ಸೀಟರ್, ಪೂರ್ಣ ವಿದ್ಯುತ್ ಚಾಲಿತ ಇವಿ ಎಂಪಿವಿ ಆಗಿದೆ. ಇದನ್ನು ಮುಖ್ಯವಾಗಿ ಟ್ಯಾಕ್ಸಿ ಹಾಗೂ ಫ್ಲೀಟ್ ಸೇವೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸಂಸ್ಥೆಯು ಪ್ರತಿ ಕಿಲೋಮೀಟರ್ಗೆ ಸುಮಾರು 8 ರೂಪಾಯಿ ದರದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿದೆ.