ಬೆಂಗಳೂರು, ಜು.1: ಗೃಹ ಜ್ಯೋತಿ ಯೋಜನೆಯ (Gruha Jyothi Scheme) ಫಲಾನುಭವಿಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು. ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 2536 ಫಲಾನುಭವಿಗಳ ಮಾಹಿತಿ ಸಂಗ್ರಹ ಮಾಡಲಾಯಿತು. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆಗೆ ಬೆಸ್ಕಾಂ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿ ತೆರಳಿ ಮಾಹಿತಿ ಸಂಗ್ರಹಿಸಿ, ಸೇವಾ ಸಿಂಧು ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸಿದರು. ಮಾಹಿತಿ ಸಂಗ್ರಹ ಕಾರ್ಯವು ಇಂದಿನಿಂದ (ಜುಲೈ 1 ರಿಂದ) ಆಗಸ್ಟ್ 31, 2026ರವರೆಗೆ ನಡೆಯಲಿದೆ.
ಮಾಹಿತಿ ಸಂಗ್ರಹಿಸುವ ಮೊಬೈಲ್ ಆಪ್ ಜತೆಗೆ ಮುದ್ರಿತ ಘೋಷಣಾ ಪತ್ರವನ್ನು ಫಲಾನುಭವಿಗಳ ಸಮ್ಮುಖದಲ್ಲಿ ಎಸ್ಕಾಂ ಸಿಬ್ಬಂದಿ ಭರ್ತಿ ಮಾಡಿಕೊಂಡರು. ಫಲಾನುಭವಿಯ ವಿದ್ಯುತ್ ಖಾತೆ ಸಂಖ್ಯೆ, ಗೃಹ ಜ್ಯೋತಿ ನೋಂದಣಿ ಸಮಯದಲ್ಲಿ ನೀಡಿದ್ದ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ, ಫಲಾನುಭವಿಯ ಪಾಸ್ ಪೋರ್ಟ್ ಆಳತೆಯ ಭಾವಚಿತ್ರ, ವೋಟರ್ ಐಡಿ, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಬಾಡಿಗೆ / ಭೋಗ್ಯ (ಲೀಸ್) ಕರಾರು ಪತ್ರ (ಅನ್ವಯಿಸುಲ್ಲಿ ಮಾತ್ರ) ಹಾಗೂ ವರ್ಗದ ಮಾಹಿತಿಯನ್ನು ಮೊಬೈಲ್ ಆಪ್ ಹಾಗೂ ಮುದ್ರಿತ ಘೋಷಣಾ ಪತ್ರದಲ್ಲಿ ದಾಖಲಿಸುವ ಕಾರ್ಯ ನಡೆಸಲಾಯಿತು. ಬೆಸ್ಕಾಂ ಸಿಬ್ಭಂದಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲು ಫಲಾನುಭವಿಗಳಿಗೆ ಬೆಸ್ಕಾಂ ಮನವಿ ಮಾಡಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಮೇ 31, 2026ರವರೆಗೆ ಒಟ್ಟು 68.86 ಲಕ್ಷ ಗೃಹ ಜ್ಯೋತಿ ಫಲಾನುಭವಿಗಳಿದ್ದು, ಫಲಾನುಭವಿಗಳು ಗೃಹ ಜ್ಯೋತಿ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಮಾಹಿತಿ ಸಂಗ್ರಹ ಹಾಗೂ ಸಿಬ್ಬಂದಿ ಭೇಟಿ ಕುರಿತು ಈಗಾಗಲೇ ಎಸ್‌ಎಂಎಸ್ ಸಂದೇಶ ಕಳುಹಿಸಲಾಗಿದೆ.
ಕನ್ನಡಿಗರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ ಉದಯಪುರಕ್ಕೆ ನೇರ ವಿಮಾನ ಸೇವೆ ಆರಂಭಿಸಿದ 'ಆಕಾಸಾ ಏರ್'
ಫಲಾನುಭವಿಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ತೆರಳುವ ಬೆಸ್ಕಾಂನ ಮೀಟರ್ ರೀಡರ್ ಹಾಗೂ ಸಿಬ್ಬಂದಿ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ. ಮುದ್ರಿತ ಘೋಷಣಾ ಪತ್ರದಲ್ಲಿ ಫಲಾನುಭವಿಗಳ ಸಹಿಯನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಮಾಹಿತಿ ಪರಿಶೀಲನೆ ಸಮಯದಲ್ಲಿ ಫಲಾನುಭವಿ ಸ್ಥಳದಲ್ಲಿ ಲಭ್ಯ ವಿಲ್ಲದಿದ್ದರೆ ಫಲಾನುಭವಿಯ ಹತ್ತಿರದ ಸಂಬಂಧಿಯ ಸಹಿಯನ್ನು ಪಡೆಯಲು ಸಿಬ್ಬಂದಿಗೆ ಸೂಚಿಸಲಾಗಿದೆ. ಹಾಗೆಯೇ ಬೆಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಫಲಾನುಭವಿಗಳು ನೀಡಿರುವ ಮಾಹಿತಿಯು ಅಪೂರ್ಣವಾಗಿದ್ದರೆ ನೀಡಿರುವ ಮಾಹಿತಿಗಳನ್ನು ಮೊಬೈಲ್ ಆಪ್‌ನ ಡ್ರಾಫ್ಟ್‌ನಲ್ಲಿ ಉಳಿಸಿ, ಇನ್ನೊಮ್ಮೆ ಫಲಾನುಭವಿ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದೆ.