ಬೆಂಗಳೂರು: ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಅದೇ ರೀತಿ ಮುಂದೆ ದೇಶಾದ್ಯಂತ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕರ್ನಾಟಕ ಮಾಡೆಲ್ ಎಂಬ ಅಪಕೀರ್ತಿಗೆ ಕಾರಣವಾಗುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಟಿಂಗ್ ಪ್ರಕರಣದಿಂದ ಪಕ್ಷದ ಮೇಲಾಗುತ್ತಿರುವ ಪರಿಣಾಮಗಳು, ವೈಯಕ್ತಿಕ ವರ್ಚಸ್ಸಿನ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ವಿವರವಾಗಿ ಚರ್ಚಿಸಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯ ಹೊರಬರಬೇಕು. ಈ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದರೆ ಅವರಿಗೆ ನ್ಯಾಯ ಸಿಗಬೇಕು. ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮಾಡೆಲ್ ಎಂಬ ಪದ ಬಳಕೆಯಾಗುವಂತೆ, ಮುಂದಿನ ದಿನಗಳಲ್ಲಿ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕರ್ನಾಟಕ ಮಾಡೆಲ್ ಎಂಬ ಅಪಕೀರ್ತಿ ಬರಬಹುದು. ಇದು ರಾಜ್ಯಕ್ಕೆ ದೊಡ್ಡ ಕಳಂಕ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಸೂಕ್ತ ತನಿಖೆ ನಡೆಸುವುದು ಅಗತ್ಯ ಎಂದು ಹೇಳಿದರು. ಇದರಿಂದ ಕರ್ನಾಟಕದ ಗೌರವಕ್ಕೆ ಧಕ್ಕೆಯಾಗಲಿದ್ದು, ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ನಿಲುವುಗಳ ಕುರಿತು ಜನರಲ್ಲಿ ಗೊಂದಲವಿದೆ ಎಂದ ರಾಜಣ್ಣ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಬಳಿಕ ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಹೇಳಿರುವುದು ಪಕ್ಷದ ಮೇಲೆ ದುಷ್ಪರಿಣಾಮ ಬೀರಲಿದೆ. 2028ರ ಚುನಾವಣೆಯ ನಾಯಕತ್ವದ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯವಿದೆ ಎಂದರು.
ವಕೀಲರ ರಕ್ಷಣಾ ಕಾಯ್ದೆ ಮತ್ತಷ್ಟು ಬಲಪಡಿಸಿ: ಗೃಹ ಸಚಿವರಿಗೆ ವಕೀಲರ ಸಂಘದಿಂದ ಮನವಿ
ಸ್ಟಿಂಗ್ ಆಪರೇಷನ್ ವಿಚಾರದ ಪರಿಣಾಮ ಪರಿಷತ್ ಚುನಾವಣೆಯ ಮೇಲೂ ಬೀರಿದೆ. ವಿದ್ಯಾವಂತ ಮತದಾರರು ಪ್ರತಿಯೊಂದು ವಿಚಾರವನ್ನೂ ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಅವರಿಗೆ ಅವಕಾಶವಿದೆ. ತುಮಕೂರು ಸೇರಿ 5 ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 35 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ನ 26 ಶಾಸಕರಿದ್ದರೂ ಸೋಲು ಅನುಭವಿಸಿರುವುದು ಪಕ್ಷಕ್ಕೆ ಮುಖಭಂಗವಾಗಿದೆ ಎಂದು ತಿಳಿಸಿದರು. ಹಾಗೆ ನೋಡಿದರೆ ಸೋಲಿನ ಜವಾಬ್ದಾರಿ ಹೊತ್ತು ನನ್ನನ್ನೂ ಸೇರಿ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡಬೇಕು. ನಾವು ಗೆಲ್ಲಲು ಆಗಿಲ್ಲ ಅಂದ್ರೆ 26 ಜನವೂ ಕೂಡ ನಾವು ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದಿದ್ದಾರೆ.