ಬೆಂಗಳೂರು, ಜೂ. 25: ಇಂದಿನ ಯುವ ಜನತೆ ಸಾಮಾಜಿಕ ಕಳಕಳಿ ಮರೆಯುತ್ತಿದೆ. ತಾವಾಯ್ತು ತಮ್ಮ ಪಾಡಾಯ್ತ ಎನ್ನುವಂತೆ ಇದ್ದು ಬಿಡುತ್ತಾರೆ ಎನ್ನುವ ಮಾತು ಸಾಮಾನ್ಯವಾಗಿ ಅಲ್ಲಿ ಇಲ್ಲಿ ಕೇಳುತ್ತಿರುತ್ತೇವೆ. ಆದರೆ ಈ ಆರೋಪಗಳಿಗೆ ಅಪವಾದ ಎಂಬಂತೆ ಕಳೆದ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಬೆಂಗಳೂರಿನ ಗುರುನಂದನ್ ರಾವ್. ಎನ್‌ಜಿಒ ಒಂದನ್ನು ಹುಟ್ಟು ಹಾಕಿ, ತಮ್ಮದೇ ತಂಡ ಕಟ್ಟಿಕೊಂಡು ಸುಮಾರು ಒಂದೂವರೆ ದಶಕದಿಂದ ಕೆರೆಗಳ ಪುನಶ್ಚೇತನ, ಗಿಡ ನಾಟಿ, ನೆಟ್ಟ ಗಿಡದ ಆರೈಕೆ ಹೀಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಭಾಗವಾಗಲಿದ್ದಾರೆ. ಬೆಂಗಳೂರಿನಲ್ಲಿ ಹಸಿರು ಕ್ರಾಂತಿ ಮಾಡುತ್ತಿರುವ ಮೆಕ್ಯಾನಿಕಲ್ ಎಂಜಿನಿಯರ್, ಎಂಬಿಎ ಪದವೀಧರನ ಬೆರಗಿನ ಸ್ಟೋರಿ ಇಲ್ಲಿದೆ.
ಗುರುನಂದನ್ ತಮ್ಮ ಹ್ಯಾಂಡ್ಸ್‌ಆನ್ ಫೌಂಡೇಷನ್ ಮೂಲಕ ಇದುವರೆಗೆ ಬೆಂಗಳೂರಿನಾದ್ಯಂತ ಬರೋಬ್ಬರಿ 1.5 ಲಕ್ಷಕ್ಕೂಅಧಿಕ ಗಿಡ ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ ನೆಟ್ಟ ಗಿಡದ ಆರೈಕೆಯನ್ನು ಮಾಡಿದ್ದಾರೆ. ಜತೆಗೆ ಶಿಥಿಲಾವಸ್ಥೆಯಲ್ಲಿದ್ದ 34ಕ್ಕೂ ಅಧಿಕ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದಾರೆ.

ಜೂನ್ 27ರಂದು ನಿರ್ಮಾಣವಾಗಲಿದೆ ಇತಿಹಾಸ
ಗುರುನಂದನ್ ಪ್ರತಿ ಚಟುವಟಿಕೆಯನ್ನುಸರ್ಕಾರದ ಸಹಕಾರದಿಂದ ನಡೆಸುತ್ತಿರುವುದು ವಿಶೇಷ. ಪರಿಸರ ಸಂರಕ್ಷಣೆಯ ಭಾಗವಾಗಿ ಗುರುನಂದನ್ ಮತ್ತು ಅವರ ಹ್ಯಾಂಡ್ಸ್‌ಆನ್ ಫೌಂಡೇಷನ್‌ಗೆ ಜೂನ್ 27 ಮಹತ್ವದ ದಿನವಾಗಲಿದೆ. ಅಂದು 12 ಗಂಟೆಗಳಲ್ಲಿ ಬರೋಬ್ಬರಿ 15 ಲಕ್ಷ ಗಿಡ ನೆಡುವ ಮೂಲಕ ಬೆಂಗಳೂರು ಡೆವಲಪ್‌ಮೆಂಟ್ ಅಥಾರಟಿ (ಬಿಡಿಎ) ಇತಿಹಾಸ ಬರೆಯಲಿದೆ. ಗುರುನಂದನ್ ಮತ್ತು ಅವರ ಟೀಂ ಈ ಐತಿಹಾಸಿಕ ಸಾಧನೆಯ ಭಾಗವಾಗಲಿದ್ದಾರೆ. ಬೆಂಗಳೂರಿನ 3 ಬಿಡಿಎ ಲೇಔಟ್‌ನಲ್ಲಿ ಜೂನ್ 27ರ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಈ ಗಿಡ ನಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಡಾ. ಶಿವರಾಮ ಕಾರಂತ ಲೇಔಟ್, ನಾಡಪ್ರಭು ಕೆಂಪೇಗೌಡ ಲೇಔಟ್ ಮತ್ತು ಬನಶಂಕರಿ 6ನೇ ಹಂತದ ಲೇಔಟ್‌ಗಳ ಸುಮಾರು 240 ಎಕ್ರೆಗೆ ಹಸಿರಿನ ಚಪ್ಪರ ಹೊದಿಸಲು ಬಿಡಿಎ ಮುಂದಾಗಿದೆ. ಆ ಮೂಲಕ ಗಾರ್ಡನ್ ಸಿಟಿ ಬೆಂಗಳೂರಿನ ಗತ ವೈಭವವನ್ನು ಮರಳಿ ತರುವುದು ಮತ್ತು ಬೆಂಗಳೂರಿಗೆ ಸ್ವಚ್ಛ ಆಮ್ಲಜನಕ ಒದಗಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಹಲವು ಎನ್‌ಜಿಒಗಳು, ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ.
ಜೂನ್ ಅಂತ್ಯದೊಳಗೆ "ಬೆಂಗಳೂರು-ಮುಂಬೈ" ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭ
ಹ್ಯಾಂಡ್ಸ್‌ಆನ್ ಫೌಂಡೇಷನ್ ಪಾತ್ರ
ಈ ಹಸಿರು ಯಜ್ಞದಲ್ಲಿ ಹ್ಯಾಂಡ್ಸ್‌ಆನ್ ಫೌಂಡೇಷನ್ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದೆ. 240 ಎಕ್ರೆಗಳ ಪೈಕಿ 100 ಎಕ್ರೆಯ ಜಬಾಬ್ದಾರಿಯನ್ನು ಹ್ಯಾಂಡ್ಸ್‌ಆನ್ ಫೌಂಡೇಷನ್ ವಹಿಸಿಕೊಂಡಿದೆ. ಇಲ್ಲಿ ಗಿಡ ನೆಡುವುದರ ಜತೆಗೆ ಮುಂದಿನ 3 ವರ್ಷಗಳ ಕಾಲ ಅದರ ಆರೈಕೆ ಮಾಡಲಿದೆ. ಈ ಬಗ್ಗೆ ಗುರುನಂದನ್ ವಿವರಿಸುವುದು ಹೀಗೆ: ʼʼಬಿಡಿಎಯವರು ಜೂನ್ 27ರಂದು ದಾಖಲೆ ಬರೆಯಲು ಮುಂದಾಗಿದ್ದಾರೆ. ಒಂದೇ ದಿನ ಅದರಲ್ಲೂ 12 ಗಂಟೆಗಳಲ್ಲಿ ಒಂದೇ ತಂಡದವರು ಬೇರೆ ಬೇರೆ ಜಾಗದಲ್ಲಿ 15 ಲಕ್ಷ ಗಿಡ ನೆಡುವ ಯೋಜನೆ ಹಮ್ಮಿಕೊಂಡಿದ್ದಾರೆ. ಆಕ್ಸಿಜನ್ ಪಾರ್ಕ್ ನಿರ್ಮಿಸುವ ಯೋಜನೆ ಇದು. ಸುಮಾರು 50-60 ಸಾವಿರ ಸ್ವಯಂ ಸೇವಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಮ್ಮ ಹ್ಯಾಂಡ್ಸ್‌ಆನ್ ಫೌಂಡೇಷನ್ ಈ ಪೈಕಿ 100 ಎಕ್ರೆಯ ಸಂಪೂರ್ನ ಜವಾಬ್ದಾರಿ ತೆಗೆದುಕೊಂಡಿದೆ. ನಮ್ಮ ಜತೆ 20-25 ಸಾವಿನ ಸ್ವಯಂ ಸೇವಕರು ಕೈ ಜೋಡಿಸಲಿದ್ದಾರೆʼʼ.

ಬಾಲ್ಯದಲ್ಲೇ ಆಸಕ್ತಿ
ಗುರುನಂದನ್ ಅವರಿಗೆ ಹಿಂದಿನಿಂದಲೂ ಪರಿಸರ, ಕಾಡು, ಹಸಿರು ಎಂದರೆ ಆಸಕ್ತಿ. ಅವರ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದವರು. ಹೀಗಾಗಿ ಪರಿಸರದೊಂದಿಗೆ ಒಡನಾಟ ಹೆಚ್ಚು. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಾದರೂ ಊರಿನೊಂದಿಗೆ ಗಾಢ ಸಂಪರ್ಕ ಇಟ್ಟುಕೊಂಡಿದ್ದಾರೆ. ಪ್ರತಿ ರಜೆಗೂ ಊರಿಗೆ ತೆರಳಿ ಅಲ್ಲಿನ ಕಾಡು, ಪರಿಸರದೊಂದಿಗೆ ಬೆರೆಯುತ್ತಿದ್ದರಿಂದ ಸಹಜವಾಗಿಯೇ ಅವರನ್ನು ಬೆಂಗಳೂರಿನ ಕಾಂಕ್ರೀಟ್ ಕಾಡಿಗಿಂತ, ಝಗಮಗಿಸುವ, ರಂಗು ರಂಗಿನ ಪ್ರಪಂಚಕ್ಕಿಂತ ಹಸಿರೇ ಗಾಢವಾಗಿ ಸೆಳೆಯಿತು. ಹೀಗಾಗಿ ಕೆರೆ ಪುನರುಜ್ಜೀವನ, ಗಿಡ ನಾಟಿಯಂತಹ ಚಟುವಟಿಕೆಯತ್ತ ಗಮನ ಹರಿಸಿದರು. ಎಂಜಿನಿಯರ್ ಪದವೀಧರ ಹಸಿರು, ಜಲ ಸೇನಾನಿಯಾದರು.
ಆಧುನಿಕ ಭಗೀರಥ
ವಿಶೇಷ ಎಂದರೆ ಗುರುನಂದನ್ ಗಿಡ ನೆಟ್ಟು ಬೆಳೆಸುವ ಜತೆಗೆ ಕೆರೆಗಳ ಪುನರುಜ್ಜೀವನದತ್ತಲೂ ಗಮನ ಹರಿಸಿದ್ದಾರೆ. ಹೇಳಿಕೇಳಿ ಬೆಂಗಳೂರು ಕೆರೆಗಳ ನಾಡು. ಆದರೆ ಈಗ ಒತ್ತುವರಿಯಿಂದಾಗಿ ಬಹುತೇಕ ಕೆರೆಗಳು ಕಣ್ಮರೆಯಾಗಿವೆ. ಅಳಿದುಳಿದವುಗಳಲ್ಲಿ ಹೂಳು ತುಂಬಿ, ತ್ಯಾಜ್ಯ, ಚರಂಡಿ ನೀರು ಸೇರಿ ಉಪಯೋಗಶೂನ್ಯವಾಗಿವೆ. ಇಂತಹ ಕೆರೆಗಳಲ್ಲಿ ಹುಡುಕಿ ಗುರುನಂದನ್ ತಮ್ಮ ತಂಡದ ಜತೆ ಅವು ಮತ್ತೆ ನಳನಳಿಸುವಂತೆ ಮಾಡಿದ್ದಾರೆ. ಬೆಂಗಳೂರು ಮಾತ್ರವಲ್ಲ ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಅವರು ಸುಮಾರು 34 ಕೆರೆಗಳಿಗೆ ಮರುಜೀವ ಕೊಟ್ಟಿದ್ದಾರೆ. ಇದರಿಂದ ಸ್ಥಳೀಯರಿಗೆ ಶಾಪವಾಗಿ ಕಾಡಿದ್ದ ನೀರಿನ ಕೊರತೆಯಿಂದ ವಿಮೋಚನೆ ಸಿಕ್ಕಿದೆ.
ವಾಟರ್ ವಾರಿಯರ್ ಆಫ್ ಕರ್ನಾಟಕ
ಗುರುನಂದನ್ ಅವರ ಕೊಡುಗೆಯನ್ನು ಗಮನಿಸಿ ಕೇಂದ್ರ ಸರ್ಕಾರ ಅವರಿಗೆ ವಾಟರ್ ವಾರಿಯರ್ ಆಫ್ ಕರ್ನಾಟಕ ಎಂದು ಗುರುತಿಸಿದೆ. ಸಣ್ಣ ಕುಂಟೆಗಳಿಂದ ಹಿಡಿದು ಬೃಹತ್ ಕೆರೆಗಳವರೆಗೆ ಗುರುನಂದನ್ ಯಶೋಗಾಥೆ ವಿಸ್ತರಿಸಿದೆ. ಅದರಲ್ಲೂ ನಂಜನಗೂಡಿನಲ್ಲಿ 1,080 ಎಕ್ರೆ ಕರೆಯನ್ನು ಗುರುನಂದನ್ ತಮ್ಮ ಹ್ಯಾಂಡ್ಸ್‌ಆನ್ ಫೌಂಡೇಷನ್ ಮೂಲಕ ದುರಸ್ತಿ ಮಾಡಿದ್ದಾರೆ. ʼʼಬೆಂಗಳೂರಿನ ಸುತ್ತಮುತ್ತ ಅನೇಕ ಕುಂಟೆ (ಚಿಕ್ಕ ಕೆರೆ)ಗಳಿವೆ. ಸರಿಯಾದ ನಿರ್ಹಣೆ ಇಲ್ಲದಿದ್ದರೆ, ಒಂದೆರಡು ಟ್ರಕ್‌ನಷ್ಟು ಇದರಲ್ಲಿ ಹೂಳು ತುಂಬಿದರೆ ಬಳಿಕ ಅವು ಮುಚ್ಚಿಹೋಗುತ್ತವೆ. ಹೀಗೆ ನಾವು ಸಾವಿರಾರು ಕುಂಟೆಗಳನ್ನು ಕಳೆದುಕೊಂಡಿದ್ದೇವೆ. ನೀರಿನ ಪೂರೈಕೆಗೆ ಮಾತ್ರವಲ್ಲ ನೆರೆ ಹಾವಳಿಯಿಂದ ತಪ್ಪಿಸಿಕೊಳ್ಳುವ ಉದ್ದೇಶಕ್ಕಾಗಿ ಪೂರ್ವಜರು ಇವನ್ನು ಮಾಡಿದ್ದರು. ಹೀಗಾಗಿ ನಾವು ಸಾಕಷ್ಟು ಕುಂಟೆಗಳನ್ನು ಅಭಿವೃದ್ದಿ ಮಾಡಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡರ ಬಳಿಕ ಯಾರಾದರೂ ಕೆರೆ ಮಾಡಿದ್ದಾರೆ ಎಂದರೆ ಅದು ಹ್ಯಾಂಡ್ಸ್‌ಆನ್ ಫೌಂಡೇಷನ್ ಸದಸ್ಯರು ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಹೃದಯ ಭಾಗದಲ್ಲಿ ಕೆರೆ ನಿರ್ಮಾಣ
ಗುರುನಂದನ್ ನೇತೃತ್ವದಲ್ಲಿ ಬೆಂಗಳೂರಿನ ಎಂ.ಜಿ. ರೋಡ್‌ನ ಟ್ರಿನಿಟ್ ಸರ್ಕಲ್‌ನ ಬಳಿ ಇರುವ ಆರ್ಮಿ ಕ್ಯಾಂಪಸ್‌ನ ಒಳಗಡೆ 2023ರಲ್ಲಿ 7 ಎಕ್ರೆಯಲ್ಲಿ ಹೊಸ ಕೆರೆ ನಿರ್ಮಿಸಲಾಗಿದೆ. ಇದು ಬೆಂಗಳೂರಿನ ಅತೀ ಎತ್ತರದ ಕೆರೆ ಎನಿಸಿಕೊಂಡಿದೆ. ಹಲಸೂರು ಕೆರೆಗಿಂತ ಸುಮಾರು 3 ಮೀಟರ್ ಎತ್ತರದಲ್ಲಿದೆ ಎನ್ನುವುದು ವಿಶೇಷ.
ನಾಲೆಡ್ಜ್ ಪಾರ್ಟ್‌ನರ್ಸ್
ಗುರುನಂದನ್ 2018ರಲ್ಲಿ ಹುಟ್ಟುಹಾಕಿದ ಹ್ಯಾಂಡ್ಸ್‌ಆನ್ ಫೌಂಡೇಷನ್‌ನಲ್ಲಿ 30 ಮಂದಿ ಸದಸ್ಯರಿದ್ದಾರೆ. ಜತೆಗೆ ನೂರಾರು ಸ್ವಯಂ ಸೇವಕರು ಕೈಜೋಡಿಸುತ್ತಾರೆ. ಜತೆಗೆ ನಾಲೆಡ್ಜ್ ಪಾರ್ಟ್‌ನರ್ಸ್ ಕೂಡ ಗಣನೀಯ ಕೊಡುಗೆ. ಅಂದರೆ ವಿಜ್ಞಾನಿಗಳು, ವಿದ್ಯಾರ್ಥಿಗಳು, ಪರಿಸರ ತಜ್ಞರು ಸೇರಿ ಹಲವರು ಯಾವ ರೀತಿ ಕೆರೆಗಳನ್ನು ಪುನರುಜ್ಜೀವನಗೊಳಿಸಬಹುದು, ಯಾವ ರೀತಿಯ ಗಿಡಗಳನ್ನು ನೆಡಬೇಕು ಮುಂತಾದ ವಿಚಾರಗಳಲ್ಲಿ ಸಲಹೆ ನೀಡುತ್ತಾರೆ. ಇವರನ್ನು ಗುರುನಂದನ್ ನಾಲೆಡ್ಜ್ ಪಾರ್ಟ್‌ನರ್ಸ್ ಎಂದು ಕರೆಯುತ್ತಾರೆ. ಬಳಿಕ ಅದನ್ನು ಎಂಜಿನಿಯರ್‌ಗಳ ಜತೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುತ್ತದೆ.
ʼʼನಮ್ಮ ಸಂಸ್ಥೆಯಲ್ಲಿ ಹಲವು ವಿಭಾಗಗಳಿವೆ. ಎಂಜಿನಿಯರಿಂಗ್, ಫಂಡ್ ರೈಸಿಂಗ್, ಪ್ರಾಜೆಕ್ಟ್ ಐಡಿಯೇಷನ್, ಇಂಪ್ಯಾಕ್ಟ್ ಸೆಕ್ಷನ್ ಹೀಗೆ. ನಾವು ಕಾರ್ಪೋರೇಟಿವ್ ಸಂಸ್ಥೆಗಳೊಂದಿಗೆ ಕೆಲಸ ಮಾಡುವಾಗ ಅವರಿಗೆ ವಿವರವಾದ ಪ್ರಪೋಸೆಲ್ ಕಳುಹಿಸಬೇಕಾಗುತ್ತದೆ. ಬ್ಯಾಕ್‌ಎಂಡಲ್ಲಿ ಸುಮಾರು ಜನ ಇದರ ಮೇಲೆ ಕೆಸ ಮಾಡುತ್ತಾರೆ. ಒಟ್ಟಿನಲ್ಲಿ ಇದು ವ್ಯವಸ್ಥಿತ ಸಂಸ್ಥೆಯ ಹಾಗೆ ಕೆಲಸ ಮಾಡುತ್ತದೆʼʼ ಎಂದು ಗುರುನಂದನ್ ಹೇಳುತ್ತಾರೆ.
ʼʼನಾವು ಸುಮಾರು 40ರಷ್ಟು ಕಾರ್ಪೋರೇಟ್ ಸಂಸ್ಥೆಗಳ ಜತೆ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಬ್ಯಾಂಕಿಂಗ್, ಮ್ಯಾನುಫ್ಯಾಕ್ಚರ್, ಸಾಫ್ಟ್‌ವೇರ್, ಬಿವರೇಜ್ ಹೀಗೆ ಬೇರೆ ಬೇರೆ ಸೆಕ್ಟರ್‌ನ ಕಂಪನಿಗಳಿವೆ. ಕಾರ್ಪೋರೇಟ್ ಕಂಪನಿಗಳು ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (CSR)ಗೆ ಶೇಕಡಾ 2ರಷ್ಟು ಅನುದಾನ ನೀಡಬೇಕು ಎನ್ನುವ ನಿಯಮ ಇದೆ. ಹೀಗಾಗಿ ಕಂಪನಿಗಳು ವಿಶ್ವಾಸಾರ್ಹ ಸಂಸ್ಥೆಗಳತ್ತ ಗಮನ ಹರಿಸುತ್ತವೆ. ಅವರ ಜತೆ ನಾವೂ ಬೆಳೆಯುವ ಅವಕಾಶ ಸಿಗುತ್ತದೆ. ಅವರದ್ದೆಲ್ಲ ಉತ್ತಮ ಸಹಕಾರ ಸಿಗುತ್ತಿದೆ. ಇದರ ಜತೆಗೆ ಸುಮಾರು 15 ಸಾವಿರ ಸ್ವಯಂ ಸೇವಕರ ಕೈ ಜೋಡಿಸುತ್ತಾರೆʼʼ ಎಂದು ವಿವರಿಸುತ್ತಾರೆ.
ಕಾರ್ಯ ನಿರ್ವಹಣೆ ಹೇಗೆ?
ಹ್ಯಾಂಡ್ಸ್‌ಆನ್ ಫೌಂಡೇಷನ್ ಸರ್ಕಾರದ ಜತೆಗೆ ಕೆಲಸ ನಿರ್ವಹಿಸುತ್ತದೆ. ಪ್ರತಿಯೊಂದು ಚಟುವಟಿಕೆಯೂ ಬಹಳ ವ್ಯವಸ್ಥಿತವಾಗಿ ನಡೆಸಲಾಗುತ್ತದೆ ಎನ್ನುವುದು ಇದರ ಮತ್ತೊಂದು ವೈಶಿಷ್ಟ್ಯ. ಐಎಎಸ್ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಬೇರೆ ಬೇರೆ ಡಿಪಾರ್ಟ್‌ಮೆಂಟ್‌ನವರ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರ ಜತೆ ಸೇರಿ ಕಾರ್ಯ ನಿರ್ವಹಿಸಲಾಗುತ್ತಿದೆ. ಸರ್ಕಾರಕ್ಕೆ ಅಗತ್ಯವಾದ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ. ಇನ್ನು ಯಾವುದೇ ಒಂದು ಕೆಲಸ ಕೈಗೆತ್ತಿಕೊಳ್ಳುವ ಮುನ್ನ ಅದರ ಸಂಪೂರ್ಣ ಅಧ್ಯಯನ ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ. ಉದಾಹರಣೆಗೆ ಕೆರೆಯೊಂದರ ಅಭಿವವೃದ್ದಿ ಮಾಡಬೇಕು ಎಂದಾಗ ಮೊದಲಿಗೆ ಕೆರೆಯ ಸಂಪೂರ್ಣ ವಿವರ ಕಲೆ ಹಾಕಲಾಗುತ್ತದೆ. ಅದರ ಸಮಸ್ಯೆಯ ಮೂಲವನ್ನು ಹುಡುಕಲಾಗುತ್ತದೆ. ಸೈಟ್ ವಿಸಿಟ್ ಮಾಡಿ ಸ್ಥಳೀಯರ, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುತ್ತದೆ.
ಬಳಿಕ ಡಿಪಿಆರ್ (Detail Poject Report) ತಯಾರಿಸಲಾಗುತ್ತದೆ. ಇದು ಸಂಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ. ನಂತರ ಯೋಜನೆಗೆ ಅಗತ್ಯವಾದ ಅನುದಾನ ಸಂಗ್ರಹಿಸಲಾಗುತ್ತದೆ. ಬಳಿಕ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ.
ಹೊರ ರಾಜ್ಯದಲ್ಲೂ ಬೇಡಿಕೆ
ಗುರುನಂದನ್ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸಿ ನೀರಿನ ಕೊರತೆ ನೀಗಿದ್ದಾರೆ. ಈ ವಿಶೇಷ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ. ʼʼನಾನು ವಾಟರ್ ವಾರಿಯರ್ ಆಗಿರುವುದರಿಂದ ಕೇಂದ್ರದ ಜಲಶಕ್ತಿ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲವೊಮ್ಮೆ ಕಂಪನಿಗಳು ಬೇರೆ ರಾಜ್ಯಗಳಲ್ಲೂ ಇರುತ್ತವೆ. ಆಗ ಕಂಪನಿಯವರು ಅಲ್ಲೂ ಯಾವುದಾದರೂ ಪ್ರಾಜೆಕ್ಟ್ ಮಾಡಬಹುದಲ್ಲ ಎಂದು ಸಲಹೆ ನೀಡುತ್ತಾರೆ. ಬಳಿಕ ಆಯಾ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅಂತಹ ಸಾಧ್ಯತೆಗಳನ್ನು ಚರ್ಚಿಸುತ್ತೇವೆ. ಕೆಲವೊಮ್ಮೆ ಗ್ರಾಮಸ್ಥರೇ ನಮ್ಮ ಬಳಿ ಮನವಿ ಮಾಡುತ್ತಾರೆ. ಬಳಿಕ ನಾವು ಅಧಿಕಾರಿಗಳನ್ನು ಸಂಪರ್ಕಿಸಿ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಮುಂದುವರಿಯುತ್ತೇವೆʼʼ.
ಯುರೋಪ್ ಈಗ ಮತ್ತಷ್ಟು ಹತ್ತಿರ: ಬೆಂಗಳೂರು-ಜ್ಯೂರಿಕ್ ನೇರ ವಿಮಾನ ಅಕ್ಟೋಬರ್‌ನಿಂದ ಆರಂಭ
ಸಾರ್ಥಕ ಕ್ಷಣ
ಗುರುನಂದನ್ ಮತ್ತು ತಂಡ ರಾಜ್ಯದಲ್ಲಿ ಬೆಂಗಳೂರು ಜತೆಗೆ ಮೈಸೂರು ಮತ್ತು ಕೊಪ್ಪಳದಲ್ಲಿ ಕೆರೆ ನಿರ್ಮಿಸಿದೆ. ಇನ್ನು ಮಹಾರಾಷ್ಟ್ರದ ಬೊರಿಚಿಬಾರಿ ಎನ್ನುವ ಕುಗ್ರಾಮದ ನೀರಿನ ಸಮಸ್ಯೆ ಬಗೆಹರಿಸಿದೆ. ಗುಜರಾತ್ ಗಡಿಯಲ್ಲಿರುವ ಈ ಗ್ರಾಮದಲ್ಲಿ ಪ್ರತಿವರ್ಷ ಧಾರಾಕಾರ ಮಳೆ ಸುರಿಯುತ್ತದೆ. ಆದರೆ ಸುರಿದ ನೀರು ಸಂಗ್ರಹಗೊಳ್ಳದೆ ಬೇಸಗೆಯಲ್ಲಿ ಸಮಸ್ಯೆಯಾಗುತ್ತದೆ. ನೀರಿಗಾಗಿ ಪ್ರತಿದಿನ 2-3 ಕಿಲೋ ಮೀಟರ್ ಅಲೆಯಬೇಕಾಗುತ್ತದೆ. ಈ ಸಮಸ್ಯೆಯನ್ನು ಹ್ಯಾಂಡ್ಸ್‌ಆನ್ ಫೌಂಡೇಷನ್ ನೀಗಿದೆ. ಬರೋಬ್ಬರಿ 50 ಲಕ್ಷ ಲೀಟರ್ ನೀರು ಸಾಮರ್ಥ್ಯದ 2 ದೊಡ್ಡ ಟ್ಯಾಂಕ್ ನಿರ್ಮಿಸಿದೆ. ಈ ಮೂಲಕ ದಶಕಗಳ ನೀರಿನ ಕೊರತೆಗೆ ಬ್ರೇಕ್ ಬಿದ್ದಿದೆ. ಆಂಧ್ರ ಪ್ರದೇಶದ ಚಿಕ್ಕ ಹಳ್ಳಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅಲ್ಲಿನ 18 ಎಕ್ರೆಯಲ್ಲಿ ಚಾಚಿಕೊಂಡಿರುವ ಬೃಹತ್ ಕೆರೆಯಲ್ಲಿ ನೀರು ನಿಲ್ಲುತ್ತಿರಲಿಲ್ಲ. ಅದನ್ನೂ ದುರಸ್ತಿ ಪಡಿಸಲಾಗಿದೆ. ಸಮಸ್ಯೆ ಬಗೆಹರಿದಾಗ ಸ್ಥಳೀಯರ ಮೊಗದಲ್ಲಿ ಮೂಡುವ ನೆಮ್ಮದಿಯ ನಗುವನ್ನು ನೋಡುವುದೇ ಸಾರ್ಥಕ ಕ್ಷಣ ಎಂದು ಬಣ್ಣಿಸುತ್ತಾರೆ ಗುರುನಂದನ್. ಅವರ ಈ ಕಾರ್ಯಕ್ಕೆ ಮನೆಯವರು ಸಂಪೂರ್ಣ ಸಹಕಾರ, ಉತ್ತೇಜನ ನೀಡುತ್ತಿದ್ದಾರೆ.

ಏನಿದು ಸಿಎಸ್‌ಆರ್ ನಿಧಿ?
ಕಂಪನಿಗಳ ಕಾಯ್ದೆ-2013ರ 135ನೇ ಸೆಕ್ಷನ್ ಪ್ರಕಾರ 500 ಕೋಡಿ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳು ಅಥವಾ 1,000 ಕೋಟಿ ರುಪಾಯಿ ವಹಿವಾಟು ನಡೆಸುವ ಅಥವಾ ವರ್ಷದಲ್ಲಿ 5 ಕೋಟಿ ರುಪಾಯಿ ನಿವ್ವಳ ಲಾಭ ಮಾಡಿದ ಕಂಪನಿಗಳು ತಮ್ಮ 3 ವರ್ಷಗಳ ಸರಾಸರಿ ಲಾಭಾಂಶದಲ್ಲಿ ಕನಿಷ್ಠ ಶೇಕಡಾ 2ರಷ್ಟು ಮೊತ್ತವನ್ನು ಸಿಎಸ್‌ಆರ್ ನಿಧಿಗೆ ನೀಡುವುದು ಕಡ್ಡಾಯ.
![]()
ಪ್ರಕೃತಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೆಶದಿಂದ ನಾವು ಹ್ಯಾಂಡ್ಸ್‌ಆನ್ ಫೌಂಡೇಷನ್ ಆರಂಭಿಸಿದೆವು. ಬರೀ ಮಾತಾಡುತ್ತ ಕೂತರೆ ಯಾವುದೇ ಪ್ರಯೋಜನವಿಲ್ಲ. ಕೈ ಹಚ್ಚಿ ಕೆಲಸ ಮಾಡಬೇಕು ಎನ್ನುವುದೇ ನಮ್ಮ ಆಶಯ. ಜಲ ಸಂರಕ್ಷಣೆ ಜತೆಗೆ ಬೆಂಗಳೂರಿಗೆ ಹಸಿರುವ ವೈಭವ ಮರಳಿ ತರುವುದು ನಮ್ಮ ಮುಖ್ಯ ಉದ್ದೇಶ.
ಗುರುನಂದನ್, ಹ್ಯಾಂಡ್ಸ್‌ಆನ್ ಫೌಂಡೇಷನ್ ಸಂಸ್ಥಾಪಕ