ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hassan IIT: ಹಾಸನ ಉದ್ದೇಶಿತ ಐಐಟಿ ಭೂ ಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಿದರು. 7 ಗ್ರಾಮಗಳ ಭೂಸಂತ್ರಸ್ತರ ಅಹವಾಲು ಆಲಿಸಿದ ಸಿಎಂ ಅವರು, ಕಾನೂನುಬದ್ಧ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಹಾಸನ ಜಿಲ್ಲೆಯ ರೈತರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಸಭೆ.

ಬೆಂಗಳೂರು: ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಿದರು. ಈ ವೇಳೆ ದೊಡ್ಡಹೊನ್ನೇನಹಳ್ಳಿ, ಕಾಚನಾಯಕನಹಳ್ಳಿ ಸೇರಿ 7 ಗ್ರಾಮಗಳ ಭೂಸಂತ್ರಸ್ತರ ಅಹವಾಲು ಆಲಿಸಿದ ಸಿಎಂ ಅವರು, ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿ, ಸಮಸ್ಯೆಗಳ ಶೀಘ್ರ ಹಾಗೂ ಕಾನೂನುಬದ್ಧ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಎಚ್.ಡಿ ದೇವೇಗೌಡ ಎಜುಕೇಷನ್ ಟ್ರಸ್ಟ್ ಮಾಡಲು ನಮ್ಮ ಭೂಮಿ ಕಬಳಿಕೆ ಮಾಡಲಾಗಿದೆ ಎಂದು ರೈತರು ದೂರಿದ್ದು, ಎಚ್.ಡಿ.ರೇವಣ್ಣ ಕುಮ್ಮಕ್ಕಿನಿಂದ ನಿವೇಶನವೂ ಇಲ್ಲ, ಪರಿಹಾರವೂ ಇಲ್ಲ. ಐಐಟಿಗೆ ಮೊದಲು 334 ಎಕರೆ ಅಂದ್ರು, ನಂತರ 1057 ಎಕರೆ ಅಂತಿದ್ದಾರೆ. ಐಐಟಿ ಧಾರವಾಡಕ್ಕೆ ಹೋಗಿದೆ, ಅದರ ಹೆಸರಲ್ಲಿ ಗೌಡರ ಕುಟುಂಬ ಭೂಕಬಳಿಸಲು ಸಂಚು ಹೂಡಿದೆ ಎಂದು ಆರೋಪಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, ನಾನು ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಮಾಡುವುದಿಲ್ಲ. ರೈತರ ಕೈಗೆ ಹೆಚ್ಚಿಗೆ ಹಣ ಬಂದರೆ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವವನು ನಾನು, ಸರ್ಕಾರ ರೈತರ ಪರವಾಗಿ ಇರುತ್ತದೆ ಎಂದು ಭರವಸೆ ನೀಡಿದರು.

ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ ಮಾರ್ಗ: ವಿ. ಸೋಮಣ್ಣ

ಪರಿಹಾರಧನ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ನ್ಯಾಯಾಲಯದ ಆದೇಶಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ತಮ್ಮ ಅಹವಾಲುಗಳನ್ನು ರೈತರು ಸಿಎಂ ಗಮನಕ್ಕೆ ತಂದರು. ಬೌಂಡರಿ ಹೊರಗೆ 160 ಎಕರೆ ಜಾಗದಲ್ಲಿ ಬಡಾವಣೆ ಮಾಡಿ ನಿವೇಶನ ಕೊಡಿ. ನಮ್ಮದೇನೂ ಅಭ್ಯಂತರ ಇಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದ ನಾವು ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೇವೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಚ್.ಡಿ. ರೇವಣ್ಣ ಅವರ ಕುಮ್ಮಕ್ಕಿನಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದ ಬಳಿಕ ರೈತರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದರೂ ಅದರ ಅನುಷ್ಠಾನವಾಗದೆ, ವಿವಿಧ ಹಂತಗಳಲ್ಲಿ ಆಡಳಿತಾತ್ಮಕ ಸಮಸ್ಯೆಗಳು ಮುಂದುವರಿದಿವೆ. ಇದರಿಂದ ನಮಗೆ ನ್ಯಾಯ ದೊರೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

DK Shivakumar

ಪರಿಹಾರ ಬರೀ ಪೇಪರ್ ಮೇಲೆ ಉಳಿದಿದೆ

ಪರಿಹಾರ ತಗೊಳ್ಳಿ ಅಂತ ವರ್ಷಕ್ಕೆ ಎರಡೂ ಬಾರಿ ನೋಟೀಸ್ ಕಳಿಸ್ತಾರೆ. ಅಲ್ಲಿಗೆ ಹೋದರೆ, ಹಾಸನಕ್ಕೆ ಹೋಗಿ, ಮೈಸೂರಿಗೆ ಹೋಗಿ ಅಂತ ಅಲೆದಾಡಿಸುತ್ತಿದ್ದಾರೆ. ಪರಿಹಾರ ಬರೀ ಪೇಪರ್ ಮೇಲೆ ಉಳಿದಿದೆ ಅಷ್ಟೇ. ರೇವಣ್ಣನವರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಸೈಟ್ ಕೊಡಿ ಅಂತ ಕೇಳಿದ್ರೆ ನಿವೇಶನ ಲಭ್ಯ ಇಲ್ಲ ಅಂತ ಹಿಂಬರಹ ಕೊಡ್ತಾರೆ. ಆದರೆ ಪರಿಹಾರ ದುಡ್ಡು ತಗೊಳ್ಳಿ ಅಂತ ನೋಟೀಸ್ ಕೊಟ್ಟು, ಅಲ್ಲಿಗೆ ಹೋದರೆ ಪರಿಹಾರ ಕೊಡದೇ ಅಲೆದಾಡಿಸುತಿದ್ದಾರೆ.

2007 ರಲ್ಲಿ ಎಕರೆಗೆ 15 ರಿಂದ 25 ಲಕ್ಷ ರೂ. ಪರಿಹಾರ ಫಿಕ್ಸ್ ಮಾಡವ್ರೆ. ಅಭಿವೃದ್ಧಿ ಪಡಿಸಿದ ಜಾಗವನ್ನು 50:50 ಕೊಟ್ರೆ ರೆಡಿ ಇದ್ದೀವಿ. ಕೇಸ್ ಹಾಕಿದ್ವಿ. ಸೈಟು, ದುಡ್ಡು ಎರಡೂ ಕೊಡ್ತೀವಿ ಅಂತ ವಾಪಸ್ ತೆಗೆಸಿದ್ರು. ಆದರೆ ಈಗ ನಿವೇಶನ ಲಭ್ಯ ಇಲ್ಲ ಅಂತ ಆಟ ಆಡಿಸ್ತಾ ಇದ್ದಾರೆ ಎಂದು ರೈತರು ಆರೋಪಿಸಿದರು.

ನಮ್ಮ ಜಮೀನು ನಮಗೆ ವಾಪಾಸ್ ಕೊಡಿಸಿ

ಭೂಸ್ವಾಧೀನ ಜಾಗದ ಪಕ್ಕದಲ್ಲೇ ಇರುವ ಜಮೀನುಗಳಲ್ಲಿ ರೇವಣ್ಣ ಸೇರಿ ಜೆಡಿಎಸ್ ಮುಖಂಡರು ಕೈಗಾರಿಕೆಗಳನ್ನು ಮಾಡಲು ಹೊರಟಿದ್ದಾರೆ. ಅಡಿಗೆ 7-8 ಸಾವಿರ ರೂ. ದರ ಇದೆ. ಎಕರೆಗೆ ಕೋಟ್ಯಂತರ ರೂಪಾಯಿ ಆಗ್ತದೆ. ಹೀಗಿರುವಾಗ ಎಕರೆಗೆ 25 ಲಕ್ಷ ರೂಪಾಯಿ ತಗೊಂಡು ಏನು ಮಾಡೋಣ. ನಮ್ಮ ಜಮೀನು ನಮಗೆ ವಾಪಾಸ್ ಕೊಡಿಸಿ ಎಂದು ರೈತರು ಆಗ್ರಹಿಸಿದರು.

ಈ ವೇಳೆ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯಿಸಿ, ಕೋರ್ಟ್ ನಿರ್ದೇಶನದ ಪ್ರಕಾರ 50:50 ಶೇರಿಂಗ್ ಕೊಡಬೇಕಿತ್ತು. ಆದರೆ ಕೊಟ್ಟಿಲ್ಲ. ನ್ಯಾಯಾಂಗದ ತೀರ್ಮಾನ ಉಲ್ಲಂಘನೆ ಆಗಿದೆ. ಆ ಜಾಗ ರಾಷ್ಟ್ರೀಯ ಹೆದ್ದಾರಿಗೆ (NH) ಹೊಂದಿಕೊಂಡಂತೆ ಇದೆ. ಆ ಜಾಗ ರೈತರಿಗೆ ಹೋಗ್ತದೆ ಅಂತ ಅದನ್ನು ದೋಚಲು ಹೋಗಿದ್ದಾರೆ. ಹಾಸನಕ್ಕೆ ಐಐಟಿ ತಂದರೆ 350 ಎಕರೆ ಕೊಡಿಸ್ತೀವಿ. ರೈತರ ಕೈಕಾಲು ಹಿಡಿತೀವಿ ಎಂದು ಹೇಳಿದರು.

ಈ ವೇಳೆ ಸಿಎಂ ಅವರು, ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿತ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದ್ದು, ಬಾಕಿ ಉಳಿದಿರುವ ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಹಾಸನದಲ್ಲಿ ಐಐಟಿ ಆಗುವುದಾದರೆ ನಾವು ಸ್ವಾಗತಿಸುತ್ತೇವೆ

ಹಾಸನದಲ್ಲಿ ಐಐಟಿ ಸ್ಥಾಪಿಸಲಾಗುವುದು ಎಂದು ನೆಪ ಹೇಳುತ್ತಾ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಭೂಮಿ ಕಳೆದುಕೊಂಡ ರೈತರು ಜೀವಭಯದಲ್ಲಿ ಇರುವ ವಾತಾವರಣವಿದೆ. ಹಾಸನದಲ್ಲಿ ಐಐಟಿ ಆಗುವುದಾದರೆ ನಾವು ಸ್ವಾಗತಿಸುತ್ತೇವೆ. ಐಐಟಿಗೆ ನಾವು ವಿರೋಧಿಸುವುದಿಲ್ಲ. ಆದರೆ ಐಐಟಿ ನೆಪದಲ್ಲಿ ರೈತರ ಬದುಕಿಗೆ ಬೆದರಿಕೆ ಒಡ್ಡುವುದನ್ನು ನಾವು ಇನ್ನೂ ಎಷ್ಟು ವರ್ಷ ಅನುಭವಿಸಬೇಕು ಎಂದು ಸಿಎಂ ಬಳಿ ನಿವೇದಿಸಿಕೊಂಡ ರೈತರು.

ನಮಗೆ ಪರಿಹಾರದ ಸೈಟೂ ಬೇಡ. ಪರಿಹಾರವೂ ಬೇಡ. ನಮ್ಮ ಜಮೀನು ನಮಗೆ ವಾಪಾಸ್‌ ಕೊಡಿಸಿಬಿಡಿ, ಡಿನೋಟಿಫೈ ಮಾಡಿ. ರೈತರನ್ನು ರೈತರ ವಿರುದ್ಧವೇ ಎತ್ತಿ ಕಟ್ಟಿ ನಮ್ಮನ್ನು ಒಡೆದು ಆಳುವ ಆಟವನ್ನು ಜೆಡಿಎಸ್‌ನವರಿಂದ ಆಡಿಸುತ್ತಿದ್ದಾರೆ. ಕ್ಲಾಸ್‌ ಒನ್‌ ಕಂಟ್ರಾಕ್ಟರ್‌ಗಳನ್ನು ಮುಂದೆ ಬಿಟ್ಟು ಅವರಿಂದ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಎಚ್‌.ಡಿ.ರೇವಣ್ಣ ಅವರೇ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಿರುಕುಳ ಕೊಡಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕು. ನಿಮ್ಮ ಅವಧಿಯಲ್ಲೇ ಸಮಸ್ಯೆ ಬಗೆಹರಿಸಿ ಎಂದು ರೈತರು ಗೋಳು ತೋಡಿಕೊಂಡರು.

ವಿದ್ಯುತ್ ನಿಗಮಗಳ ಖಾಸಗೀಕರಣ ಬೇಡ ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಭರವಸೆ

ರೈತರ ಮತ್ತು ಜಮೀನು ಕಳೆದುಕೊಂಡವರ ಅಹವಾಲುಗಳನ್ನು ಆಲಿಸಿ, ರೈತರ ಸಮ್ಮುಖದಲ್ಲೇ ಅಧಿಕಾರಿಗಳಿಂದ ನಕ್ಷೆ ಮತ್ತು ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ ಸಿಎಂ, ಅಧಿಕಾರಿಗಳು ನನಗೆ ವಾಸ್ತವ ಸಂಗತಿಗಳನ್ನು ವಿವರಿಸಿದ್ದಾರೆ. ಅವರ ಜತೆ ಮತ್ತೊಂದು ಸುತ್ತು ಚರ್ಚಿಸಿ ಪರಿಹಾರ ಮಾರ್ಗಗಳನ್ನು ಕಂಡುಹಿಡಿಯಲಾಗುವುದು ಎಂದು ಮುಖ್ಯಮಂತ್ರಿಗಳಿಂದ ಭರವಸೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಶಿವಲಿಂಗೇಗೌಡ, ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಹಾಗೂ ಯೋಜನೆ ವ್ಯಾಪ್ತಿಯ ಏಳು ಗ್ರಾಮಗಳ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.