ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLC Election: ಕಾಂಗ್ರೆಸ್‌ಗೆ ಹೋಗೋದಾದ್ರೆ ಈಗಲೇ ಹೋಗಿ; ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಎಚ್‌ಡಿಕೆ ಕಿಡಿ

HD Kumaraswamy: ನಮ್ಮ ಪಕ್ಷದಲ್ಲಿ ಭವಿಷ್ಯ ಇಲ್ಲ ಅಂತ ಮನಸ್ಸಿನಲ್ಲಿದ್ದರೆ, ನಾನು ತೊಂದರೆ ಕೊಡಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಹೋಗಬೇಕು ಎಂದರೆ ಧೈರ್ಯವಾಗಿ ನನಗೆ ಹೇಳಿ ಹೋಗಿ ಎಂದು ಅಡ್ಡ ಮತದಾನ ಮಾಡಿದವರ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಅಡ್ಡ ಮತದಾನ ಮಾಡಿರುವ ಸ್ವಪಕ್ಷದ ಶಾಸಕರ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೀವು ಕಾಂಗ್ರೆಸ್‌ಗೆ ಹೋಗೋದಾದ್ರೆ ಧೈರ್ಯವಾಗಿ ಈಗಲೇ ಹೋಗಿ. ಈ ರೀತಿ ನಡೆದುಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.

ನಗರದ ನಿವಾಸದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದ ಎಚ್‌ಡಿಕೆ ಅವರು,ನಾನು ಪರಿಷತ್ ಚುನಾವಣೆ ಗೆಲ್ಲುತ್ತೇನೆ ಎಂದು ಅಭ್ಯರ್ಥಿ ಹಾಕಿಲ್ಲ. ಇದು ಮುಂದಿನ ದಿನಗಳನ್ನು ಪರೀಕ್ಷೆ ಮಾಡಲು ಅಭ್ಯರ್ಥಿ ಹಾಕಿದ್ದೆ. ಈ ಬಗ್ಗೆ ಎರಡು ಸಭೆಗಳನ್ನು ಮಾಡಿದೆ. ಎಲ್ಲ ಶಾಸಕರು ಅಭ್ಯರ್ಥಿಯನ್ನು ಹಾಕಲೇಬೇಕು ಅಂತ ಹೇಳಿದ್ದರು. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಹಾಕಿದ್ದೆ. ಹಾಗಿದ್ದರೂ ಕೆಲವರು ಅಡ್ಡ ಮತದಾನ ಮಾಡಿದ್ದಾರೆ.

ನಮ್ಮ ಪಕ್ಷದಲ್ಲಿ ಭವಿಷ್ಯ ಇಲ್ಲ ಅಂತ ನಿಮ್ಮ ಮನಸ್ಸಿನಲ್ಲಿದ್ದರೆ, ನಾನು ತೊಂದರೆ ಕೊಡಲ್ಲ ಎಂದಿದ್ದೇನೆ. ಕಾಂಗ್ರೆಸ್‌ಗೆ ಹೋಗಬೇಕು ಎಂದರೆ ಧೈರ್ಯವಾಗಿ ನನಗೆ ಹೇಳಿ ಹೋಗಿ. ಆದರೆ ಈ ರೀತಿ ಮಾಡ್ಬೇಡಿ ಅನ್ನೋದನ್ನ ನೇರವಾಗಿ ಹೇಳಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡುವೆ

ಅಡ್ಡ ಮತದಾನ ಮಾಡಿದವರ ಪತ್ತೆಗೆ ಬಿಜೆಪಿ ಮೂರು ಜನ ಸದಸ್ಯರ ತಂಡ ಮಾಡಿದೆ. ಸಿ.ಟಿ. ರವಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ದೆಹಲಿಗೆ ಹೋದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ಇವೆಲ್ಲದರ ಮಾಹಿತಿ ಅವರಿಗೆ ಕೊಡುತ್ತೇನೆ.

ನಮ್ಮ ಶಾಸಕರು ಅಂತಿಮ ನಿರ್ಣಯ ಮಾಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಇದನ್ನು ಇನ್ನೂ ಎಳೆದುಕೊಂಡು ಹೋಗೋ ಅವಶ್ಯಕತೆ ಇಲ್ಲ. ನನ್ನ ಗುರಿ 2028ರ ಚುನಾವಣೆ ಕಡೆ ಇದೆ. ಈ ರಾಜ್ಯದಲ್ಲಿ ನಿಜವಾದ ಜನಪರ, ಜನತೆಯ ನಿರೀಕ್ಷೆಗಳಿಗೆ ಕೆಲಸ ಮಾಡುವ ಸರ್ಕಾರ ತರಬೇಕು. ಮುಖ್ಯಮಂತ್ರಿ ಸ್ಥಾನ ಅವೆಲ್ಲ ಆಮೇಲೆ. ಮೊದಲು ಇಲ್ಲಿ ಕೆಟ್ಟ ಸರ್ಕಾರ ಹೋಗಬೇಕು ಎಂದರು.

ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಬರಲ್ಲ

ವಿಧಾನ ಪರಿಷತ್ ಚುನಾವಣೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಎಂದು ವಿಶ್ಲೇಷಣೆಗಳಿವೆ. ಆದರೆ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಯಾವುದೇ ಬಿರುಕು ಬರಲ್ಲ. ಪರಿಷತ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕುವಾಗಲೂ ಬಿಜೆಪಿ ಜತೆ ಮಾತನಾಡಿದ್ದೇನೆ. ವಿಜಯೇಂದ್ರ, ಅಶೋಕ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತಾಡಿದೆ. ಅಭ್ಯರ್ಥಿ ಹಾಕುವ ಬಗ್ಗೆ ಎಲ್ಲರ ಸಹಮತ ಇತ್ತು ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಶಾಸಕರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಕಾರ್ಯಕರ್ತರು ಹಾಗೂ ಜನರು ಕೆಲಸ ಆಗಿಲ್ಲ ಅಂತ ಅಸಮಾಧಾನ ಇದೆ. ಇದು ಬರಿ ಜೆಡಿಎಸ್ ಹಾಗೂ ಬಿಜೆಪಿ ಪರಿಸ್ಥಿತಿಯಲ್ಲ, ಕಾಂಗ್ರೆಸ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ಕೆಲಸ ಆಗಿಲ್ಲ ಅನ್ನುವಂಥದ್ದು ಈ ಚುನಾವಣೆಯಲ್ಲಿ ಪರಿಣಾಮ ಬೀರಿದೆ. ಸರ್ಕಾರದಿಂದ ನಮಗೆ ಮತ ಕೊಟ್ಟರೆ 50 ಕೋಟಿ ರೂ. ಅನುದಾನ ಕೊಡುತ್ತೇವೆ ಎಂದು ಶಾಸಕರಿಗೆ ಹೇಳಿದ್ದಾರೆ. ಇದೆಲ್ಲ ಪರಿಷತ್‌ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಈ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ತಿಳಿಸಿದರು.