ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯೋಗದಿಂದ ಆರೋಗ್ಯಯುತ ಜೀವನ ಸಾಧ್ಯ: ಡಾ.ಸಿ.ಎನ್.ಮಂಜುನಾಥ್

ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ಆರೋಗ್ಯಕ್ಕಾಗಿ ಯೋಗ, ಆರೋಗ್ಯಕ್ಕಾಗಿ ಧ್ಯಾನ ಎಂದು ತಿಳಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು, ಯೋಗವೊಂದು ಉತ್ತಮ ಆರೋಗ್ಯದ ಕೈಪಿಡಿ ಎಂದು ಹೇಳಿದ್ದಾರೆ.

ಯೋಗದಿಂದ ಆರೋಗ್ಯಯುತ ಜೀವನ: ಡಾ. ಸಿ.ಎನ್.ಮಂಜುನಾಥ್

Profile Siddalinga Swamy May 20, 2025 10:22 PM

ಬೆಂಗಳೂರು: ಯೋಗವೊಂದು ಉತ್ತಮ ಆರೋಗ್ಯದ ಕೈಪಿಡಿ, ಯೋಗವನ್ನು ಅಳವಡಿಸಿಕೊಂಡರೆ ಆರೋಗ್ಯಯುತ ಜೀವನವನ್ನು ಕಾಣಬಹುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ (Dr CN Manjunath)‌ ಹೇಳಿದರು.‌ ಜೂನ್‌ನಲ್ಲಿ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಪೂರ್ವಭಾವಿಯಾಗಿ ಲೈಫ್ ಎಟರ್ನಲ್ ಟ್ರಸ್ಟ್‌ನ ಆಯೋಜನೆಯಲ್ಲಿ, ಸಹಜ ಯೋಗ ಸಂಸ್ಥೆಯು ಸಾರ್ವಜನಿಕರಲ್ಲಿ ಯೋಗ ಕುರಿತು ಜಾಗೃತಿ ಮೂಡಿಸಲು ಹಾಗೂ ಧ್ಯಾನದ ಮಹತ್ವ ತಿಳಿಸಿ ಕೊಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚರಿಸಲು ಸಿದ್ಧವಾಗಿರುವ ಮೊಬೈಲ್ ವಾಹನಕ್ಕೆ ಪದ್ಮನಾಭನಗರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಯೋಗ ಎನ್ನುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ. ಏಕೆಂದರೆ ಔಷಧ ಅಲ್ಲದ ಔಷಧಿಯ ಗುಂಪಿನ ಪಟ್ಟಿಯಲ್ಲಿ ಯೋಗ ಮತ್ತು ಧ್ಯಾನ ಸೇರುತ್ತದೆ. ಈ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಕಾಲಘಟ್ಟದಲ್ಲಿ ನಾವು ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಮ್ಮ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು. ಮನಸ್ಸು, ಮೆದುಳು ಹಾಗೂ ದೇಹವನ್ನು ಒಗ್ಗೂಡಿಸುವ ಗಂಗೋತ್ರಿಯೆಂದರೆ ಅದು ಯೋಗ. ಲೈಫ್ ಎಟರ್ನಲ್ ಟ್ರಸ್ಟ್‌ನ ಆಯೋಜನೆಯಲ್ಲಿ ಮಾತಾಜಿ ನಿರ್ಮಲಾದೇವಿಯವರ ಸಹಜ ಯೋಗ ಸಂಸ್ಥೆಯ ಸದಸ್ಯರು ಇಂದು ಯೋಗದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಬೈಲ್ ವ್ಯಾನ್ ಸೇವೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಹಳ್ಳಿ ಹಳ್ಳಿಗೆ ಮೊಬೈಲ್ ವ್ಯಾನ್ ಮೂಲಕ ತಲುಪಿ ಜನರಲ್ಲಿ ಯೋಗದಿಂದಾಗುವ ಲಾಭದ ಕುರಿತು ಪ್ರಚಾರ ಮಾಡಲು ಸಹಜ ಯೋಗ ಸಂಸ್ಥೆ ಪಣತೊಟ್ಟಿದೆ. ಒಂದು ಮಾತಿದೆ ʼಔಷಧದಲ್ಲಿ ಯಾವುದೇ ಸಂತೋಷವಿಲ್ಲ, ಆದರೆ ಸಂತೋಷವೇ ಔಷಧʼ ಎಂದು ಹೇಳಲಾಗುತ್ತದೆ. ಹಾಗಾಗಿ ನಾವು ನಮ್ಮ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇಂದು ಜೀವನಶೈಲಿಯ ಆಧಾರಿತ ಕಾಯಿಲೆಗಳಿಂದ ಭಾರತದಲ್ಲಿ ಶೇ.60ರಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಎಲ್ಲರೂ ಸಂತೃಪ್ತಿ, ಮನಃಶಾಂತಿಯನ್ನು ಹುಡುಕುತ್ತಿದ್ದಾರೆ. ಯೋಗದಿಂದ ಏಕಾಗ್ರತೆ ಸಿಗಲಿದೆ, ಹೃದಯದ ಬಡಿತ ಹಿಡಿತಕ್ಕೆ ಬರಲಿದೆ. ಹೃದಯದ ಬಡಿತ ನಿಯಂತ್ರಣದಲ್ಲಿದ್ದಷ್ಟು ಹೆಚ್ಚು ಕಾಲ ಬದುಕಬಹುದು. ಹಾಗಾಗಿ ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಪರಿಸರದಲ್ಲಿ ಒಂದು ಡಜನ್ ಔಷಧವಲ್ಲದ ಔಷಧಗಳಿವೆ. ಅವುಗಳೆಂದರೆ ಬಿಸಿಲಿನಲ್ಲಿ ಕಾಲ ಕಳೆಯುವುದು, ವ್ಯಾಯಾಮ, ಆಗಾಗ್ಗೆ ಉಪವಾಸ, ನಿದ್ದೆ, ನಗು, ಕೃತಜ್ಞತೆ, ಸ್ನೇಹ ಬಳಗವನ್ನು ಕಟ್ಟಿಕೊಳ್ಳುವಂತದ್ದು, ಇತರರೊಂದಿಗೆ ಮಾತುಕತೆ, ತರಕಾರಿ ಹಾಗೂ ಹಣ್ಣುಗಳ ಸೇವನೆ, ಯೋಗ, ಧ್ಯಾನ ಮತ್ತು ನಡಿಗೆ. ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ವನ್ನು ಕಂಡುಕೊಳ್ಳಬಹುದು. ಆರೋಗ್ಯಕ್ಕಾಗಿ ಯೋಗ, ಆರೋಗ್ಯಕ್ಕಾಗಿ ಧ್ಯಾನ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿದೆ ಬರೋಬ್ಬರಿ 2,964 ಹುದ್ದೆ

ಸಹಜ ಯೋಗ ಸಂಸ್ಥೆಯ ಸದಸ್ಯ ಗುರುಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಲೈಫ್ ಎಟರ್ನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಮನೋಜ್ ಕುಮಾರ್, ಸಹಜ ಯೋಗ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.