ಬೆಂಗಳೂರು, ನ.11: ನವದೆಹಲಿ ಸ್ಫೋಟ ಪ್ರಕರಣದ (Delhi Blast) ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್ ಹಾಗೂ ಬಸ್ ನಿಲ್ದಾಣಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಹಾಗೆಯೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಈ ಬಗ್ಗೆ ಪ್ರಯಾಣಿಕರಿಗೆ ಬಿಐಎಎಲ್ ಮಹತ್ವದ ಮಾಹಿತಿ ನೀಡಿದೆ.
ಈ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಪ್ರಕಟಣೆ ಹೊರಡಿಸಿದೆ. ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿರುವ ಕಾರಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ, ಸಾಕಷ್ಟು ಬೇಗ ಆಗಮಿಸಬೇಕೆಂದು ವಿನಂತಿಸುತ್ತೇವೆ. ಇದರಿಂದ, ಭದ್ರತಾ ತಪಾಸಣೆಗಳನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಲು ಸಾಕಷ್ಟು ಸಮಯ ದೊರೆತು, ನಿಮ್ಮಸುಗಮ ಪ್ರಯಾಣವು ಖಚಿತವಾಗುತ್ತದೆ.
ವಿಮಾನಗಳ ಕುರಿತಾದ ನಿಖರ ಮಾಹಿತಿ ಮತ್ತು ವಿವರಗಳಿಗಾಗಿ, ದಯವಿಟ್ಟು ತಾವು ಪ್ರಯಾಣಿಸಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ. ನಿಮ್ಮ ಪ್ರಯಾಣವನ್ನು ಸುಖಕರ ಹಾಗೂ ಸುರಕ್ಷಿತವಾಗಿರಿಸುವ ನಮ್ಮ ನಿರಂತರ ಪ್ರಯತ್ನಗಳಿಗೆ ನೀವು ನೀಡುತ್ತಿರುವ ಅಮೂಲ್ಯ ಸಹಕಾರಕ್ಕಾಗಿ ಧನ್ಯವಾದಗಳು ಎಂದು ಬಿಐಎಎಲ್ ತಿಳಿಸಿದೆ.
ಕೇಂದ್ರದ ಸೂಚನೆ ಮೇರೆಗೆ ಹೈ ಅಲರ್ಟ್
ದೆಹಲಿಯಲ್ಲಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಕೇಂದ್ರದ ಸೂಚನೆ ಮೇರೆಗೆ ಸೋಮವಾರ ತಡರಾತ್ರಿಯಿಂದಲೇ ಭದ್ರತೆ ಹೆಚ್ಚಿಸಿದ್ದು, ಏರ್‌ಪೋರ್ಟ್‌ಗೆ ಬರುವ ಮತ್ತು ಹೋಗುವ ವಾಹನಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ.
ಏರ್‌ಪೋರ್ಟ್ ಭದ್ರತೆಗೆ ಹೆಚ್ಚುವರಿ ಶಸ್ತ್ರ ಸಜ್ಜಿತ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್ಎಫ್) ನಿಯೋಜನೆ ಮಾಡಲಾಗಿದ್ದು, ಏರರಪೋರ್ಟ್ ಒಳ ಮತ್ತು ಹೊರ ಆವರಣದಲ್ಲಿ ಗಸ್ತು ಹೆಚ್ಚಳ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ | Delhi Blast: ಆಪರೇಷನ್ ಸಿಂದೂರ್ ಆನ್; ದೆಹಲಿ ಸ್ಫೋಟದ ಬೆನ್ನಲ್ಲೇ ಉಗ್ರರಿಗೆ ಖಡಕ್ ಸಂದೇಶ
ಇನ್ನು ಏರ್‌ಪೋರ್ಟ್‌ಗೆ ಬರುವ ಪ್ರಯಾಣಿಕರು ಸಿಬ್ಬಂದಿಯ ಚೆಕಿಂಗ್ ಮತ್ತು ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಪಾರ್ಕಿಂಗ್ ಏರಿಯಾ ಸೇರಿದಂತೆ ಎಲ್ಲೆಡೆ ಭದ್ರತಾ ಪಡೆಗಳು ಅಲರ್ಟ್ ಆಗಿವೆ. ಏರ್‌ಪೋರ್ಟ್ ಭದ್ರತಾ ಪಡೆಯ ಜತೆಗೆ ಪೊಲೀಸರಿಂದಲು ಭದ್ರತೆ ಕೈಗೊಳ್ಳಲಾಗಿದೆ.