ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ಗೌಡ ಕೊಲೆ ಪ್ರಕರಣದಲ್ಲಿ (Vinay Kulkarni) ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ 15ನೇ ಅಪರಾಧಿ ವಿನಯ್ ಕುಲಕರ್ಣಿ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ನಿಗದಿಪಡಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಮತ್ತು ನ್ಯಾಯಮೂರ್ತಿ ರಾಜೆಶ್ ರೈ. ಕೆ ಅವರಿದ್ದ ವಿಭಾಗೀಯ ಪೀಠ, ವಿಚಾರಣೆಯನ್ನು ಮುಂದೂಡಿತು.
ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಬಿಐ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬೇಕಾಗಿದ್ದು, ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ಇದೇ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಗುರಿಯಾಗಿರುವ ಪೊಲೀಸ್ ವೃತ್ತ ನಿರೀಕ್ಷಕ ಚನ್ನಕೇಶವ ಟಿಂಗರೀಕರ ಪರ ವಕೀಲರು, ಅರ್ಜಿದಾರರಿಗೆ 7 ವರ್ಷ ಶಿಕ್ಷೆ ವಿಧಿಸಿದ್ದು ಏಕ ಸದಸ್ಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಆದರೆ, ಏಕ ಸದಸ್ಯ ಪೀಠ, ಪ್ರಕರಣವನ್ನು ಇತರೆ ಆರೋಪಿಗಳ ಅರ್ಜಿದಾರರೊಂದಿಗೆ ಸೇರ್ಪಡೆ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಬೌದ್ಧ ಸನ್ಯಾಸಿ ಕೊಲೆ ಪ್ರಕರಣ ಭೇದಿಸಿದ ಧಾರವಾಡ ಪೊಲೀಸರು; ಮೂವರು ಆರೋಪಿಗಳ ಬಂಧನ
ಅಲ್ಲದೆ, ಅವರ ವಿರುದ್ಧ ಜಾಮೀನು ನೀಡಬಹುದಾದ ಅಪರಾಧಗಳು ಮಾತ್ರ ಇವೆ. ಆದ್ದರಿಂದ ಅವರು ಜೈಲು ಶಿಕ್ಷೆ ಅನುಭವಿಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಜಾಮೀನು ನೀಡಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ಟಿಂಗರೀಕರ್ ಅವರ ಅರ್ಜಿಯನ್ನು ಪ್ರತ್ಯೇಕಿಸಿ ವಿಚಾರಣೆ ನಡೆಸಬಹುದು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು.