ಬೆಂಗಳೂರು: ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಅಕ್ರಮ (bag purchase scam) ಪ್ರಕರಣಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS officer Rohini Sindhuri) ಅವರಿಗೆ ಸಂಕಷ್ಟ ಎದುರಾಗಿದೆ. ಹಗರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿ, ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ತನಿಖೆ ಕೋರಿ ಮೈಸೂರಿನ ವಕೀಲ ಎನ್.ಆರ್.ರವಿಚಂದ್ರೇಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಳ್ಳಬೇಕೆಂಬ ಅರ್ಜಿದಾರರ ಪೂರ್ವಾನುಮತಿ ಕೋರಿಕೆಯನ್ನು ನಿರಾಕರಿಸಿದ್ದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶವನ್ನು ರದ್ದುಗೊಳಿಸಿರುವ ಕೋರ್ಟ್, ಈ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ 4 ವಾರಗಳಲ್ಲಿ ನ್ಯಾಯದ ಹಿತದೃಷ್ಟಿಯಿಂದ ತನಿಖೆಗೆ ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ ಮುಡಾ ಹಗರಣ; ಹೈಕೋರ್ಟ್‌ನಿಂದ ತುರ್ತು ನೋಟಿಸ್
ಏನಿದು ಪ್ರಕರಣ?
ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್‌ಗಳನ್ನು ಖರೀದಿಸಲಾಗಿತ್ತು. ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಈ ಹಗರಣವನ್ನು ಬಯಲಿಗೆ ಎಳೆದಿದ್ದರು. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13ಗೆ ರೂಪಾಯಿಗೆ ಸಿಗುವ ಬ್ಯಾಗ್‌ಗಳನ್ನು ಜಿಲ್ಲಾಧಿಕಾರಿ 52 ರೂ. ನೀಡಿ ಖರೀದಿಸಿದ್ದರು. ಇದರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವಾಗಿದೆ ಎಂದು ಸಾ.ರಾ.ಮಹೇಶ್ ಆರೋಪ ಮಾಡಿದ್ದರು. ಕೈಮಗ್ಗ ಅಭಿವೃದ್ಧಿ ನಿಗಮವನ್ನು ಬಿಟ್ಟು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು. 14.71 ಲಕ್ಷ ಬ್ಯಾಗ್ ಗಳ ಖರೀದಿಯಲ್ಲಿ ಸುಮಾರು 14 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು.