10 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸಿ ಮಾದರಿ ಕೆಲಸ ಮಾಡಿದ ಆಸ್ಪತ್ರೆ
ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೊಸ್ಮಟ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್ ಸಂಸ್ಥೆಯು ಸಂಸ್ಥಾಪಕರ ದಿನವನ್ನು ವೈಭವದಿಂದ ಆಚರಿಸಿದ್ದು, ತಮ್ಮ ಗೌರವಾನ್ವಿತ ಸಂಸ್ಥಾಪಕ ಡಾ. ಥಾಮಸ್ ಚಾಂಡಿಯವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಜೊತೆಗೆ ಮಗ್ರಾತ್ ರಸ್ತೆಯಲ್ಲಿರುವ ಹೊಸ್ಮಟ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನ 4ನೇ ಮಹಡಿಯಲ್ಲಿ ಅತ್ಯಾಧುನಿಕ ಹೊಸ ಓಪಿಡಿ ವಿಭಾಗವನ್ನು ಉದ್ಘಾಟಿಸಿದೆ.
ಈ ಸಮಾರಂಭದಲ್ಲಿ ಬೆಂಗಳೂರು ಡಯಾಸಿಸ್ ನ ಆರ್ಚ್‌ಬಿಷಪ್ ಮೋಸ್ಟ್ ರೆವ್. ಡಾ. ಪೀಟರ್ ಮಚಾದೋ, ಶಾಂತಿನಗರ ಶಾಸಕ ಶ್ರೀ ಎನ್. ಎ. ಹ್ಯಾರಿಸ್ ಮತ್ತು ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತರಾದ ಶ್ರೀಮತಿ ನಿಶಾ ಮಿಲೆಟ್ ಭಾಗವಹಿಸಿದ್ದರು .
ಈ ಕಾರ್ಯಕ್ರಮದಲ್ಲಿ ಡಾ. ಚಾಂಡಿಯವರ ಅತ್ಯುನ್ನತ ಕಾರ್ಯಗಳನ್ನು ಸ್ಮರಿಸಲಾಯಿತು. ಆಸ್ಪತ್ರೆಯ “ಮೇಕ್ ಮಿ ವಾಕ್” ಯೋಜನೆಯ ಮೂಲಕ ಯುವ ಜನರ ಬದುಕು ಬದಲಿಸುವ ಕಾರ್ಯಗಳನ್ನು ಮುಂದುವರಿಸುವುದಾಗಿ ಸಾರಲಾಯಿತು. #ನಿಮ್ಮಜೀವನಮುಖ್ಯ ಎಂಬ ಹೊಸ್ಮಾಟ್ ನ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಈ ವರ್ಷ ದೈಹಿಕ ದೋಷಗಳಿಂದ ಬಳಲುತ್ತಿರುವ ಸವಲತ್ತು-ವಂಚಿತ 10 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವುದಾಗಿ ತಿಳಿಸಲಾಯಿತು.
ಅವರಲ್ಲಿ ಕೋಲಾರ್ ಗೋಲ್ಡ್ ಫೀಲ್ಡ್ಸ್ ನ 15 ವರ್ಷದ ಸಲ್ಮಾನ್ ಎಂಬ ಬಾಲಕ ಹಲವು ದೈಹಿಕ ನ್ಯೂನ್ಯತೆಗಳೊಂದಿಗೆ ಜನಿಸಿದ್ದ. ಅವನಿಗೆ ನಡೆಯುವುದೇ ಕಷ್ಟವಾಗಿತ್ತು. ಅವನ ತಂದೆತಾಯಿ ರೈತ ದಂಪತಿಗಳಾಗಿದ್ದು, ಮಗನ ಆರೋಗ್ಯದ ಭರವಸೆಯನ್ನು ಬಹುತೇಕ ಕಳೆದುಕೊಂಡಿದ್ದರು. ಆದರೆ ಹೊಸ್ಮಟ್ ಸಂಸ್ಥೆಯು ಸಕಾಲದಲ್ಲಿ ನೆರವಿಗೆ ಬಂದು ಅವನ ಕೈ ಮತ್ತು ಕಾಲುಗಳ ಮೇಲೆ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನಡೆಸಿತು. ಅದರ ಫಲವಾಗಿ ಇಂದು ಸಲ್ಮಾನ್ ಸ್ವತಂತ್ರವಾಗಿ ನಿಲ್ಲಬಲ್ಲ, ನಡೆಯಬಲ್ಲ. ಈ ಮೂಲ ಆಸ್ಪತ್ರೆಯು ಬಾಲಕನ ಬದುಕನ್ನೇ ಬದಲಿಸಿದೆ.
ಬಳ್ಳಾರಿಯ 3 ವರ್ಷದ ಜಾನ್ವಿ ಎಂಬ ಹುಡುಗಿಗೆ ಕ್ಲಬ್‌ಫೂಟ್ ಸಮಸ್ಯೆಗೆ ಮೂರು ಶಸ್ತ್ರಚಿಕಿತ್ಸೆ ಗಳನ್ನು ನಡೆಸಲಾಗಿದ್ದರೂ ಸಮಸ್ಯೆ ಸರಿಹೋಗಿರಲಿಲ್ಲ. ಕೊನೆಗೆ ಹೊಸ್ಮಟ್ ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದು ಯಶಸ್ವಿಯಾಗಿ ಆಕೆ ಸುಲಲಿತವಾಗಿ ನಡೆಯುವುದು ಸಾಧ್ಯವಾಯಿತು. ಮಗಳು ಎಲ್ಲರಂತೆ ನಡೆಯುವುದೇ ಅಸಾಧ್ಯವೆಂದು ಭಾವಿಸಿದ್ದ ಅವಳ ದಿನಗೂಲಿ ಕೆಲಸಗಾರರಾದ ಪೋಷಕರಿಗೆ ಆಕೆ ಗುಣಮುಖಳಾಗಿದ್ದು ಅತ್ಯಂತ ಸಂತೋಷ ಮತ್ತು ಕೃತಜ್ಞತಾ ಭಾವ ಉಂಟು ಮಾಡಿದ ಕ್ಷಣವಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸ್ಮಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಅನೀಶಾ ಚಾಂಡಿ ಎಕಾರ್ಟ್ ಅವ ರು, “ನನ್ನ ತಂದೆಯವರು ರೋಗಕ್ಕೆ ಚಿಕಿತ್ಸೆ ಕೊಡುವುದಷ್ಟೇ ವೈದ್ಯಕೀಯ ಸೇವೆ ಅಲ್ಲ, ಬದಲಿಗೆ ಘನತೆಯನ್ನು ಮರಳಿ ಒದಗಿಸುವುದು ಎಂದು ನಂಬಿದ್ದರು. ‘ಮೇಕ್ ಮಿ ವಾಕ್’ ಯೋಜನೆಯ ಅಡಿಯಲ್ಲಿ ನಡೆಯುವ ಪ್ರತೀ ಶಸ್ತ್ರಚಿಕಿತ್ಸೆ, ನಾವು ಒದಗಿಸುವ ಆರೈಕೆ ಎಲ್ಲವೂ ಕೂಡ ಅವರು ಕಂಡ ಕನಸಿನ ಮುಂದುವರಿಕೆಯಾಗಿದೆ. ಹೀಗೆ ನಾವು ಘನವಾದ ಉದ್ದೇಶ ಹೊಂದಿದ್ದೇವೆ ಮತ್ತು ಅದಕ್ಕೆ ಪೂರಕವಾಗಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದೇವೆ. ಇದೀಗ ಹೊಸ ಓಪಿಡಿ ವಿಭಾಗ ಉದ್ಘಾಟಿಸಲಾಗಿದ್ದು, ಅತ್ಯುತ್ತಮ ಕಾಳಜಿ ತೋರುವ ನಮ್ಮ ಪ್ರಯಾಣದಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ರೋಗ ತಡೆಗಟ್ಟುವ ಚಿಕಿತ್ಸೆ ಮತ್ತು ಮನೆಯಲ್ಲಿಯೇ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಆರೋಗ್ಯ ಕಾಪಾಡಲು ನೆರವಾಗುವ ಮೂಲಕ ಜನರಿಗೆ ವೈದ್ಯಕೀಯ ಸೇವೆಯನ್ನು ಹೆಚ್ಚು ಸುಲಭವಾಗಿ ಒದಗಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ಬೆಂಗಳೂರು ಆರ್ಚ್‌ಬಿಷಪ್ ಮೋಸ್ಟ್ ರೆವ್. ಡಾ. ಪೀಟರ್ ಮಚಾದೋ ಅವರು ಡಾ. ಚಾಂಡಿ ಯವರನ್ನು ಪ್ರೀತಿಯಿಂದ ನೆನೆಯುತ್ತಾ ಮಾತನಾಡಿ, “ಡಾ. ಥಾಮಸ್ ಚಾಂಡಿಯವರು ಸಮಾಜಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ಮತ್ತು ಯಾವಾಗಲೂ ನೆನಪಿನಲ್ಲಿ ಇರುತ್ತಾರೆ. ಸುಮಾರು 200 ವೈದ್ಯರು ಸೇರಿದ್ದ ಸಭೆಯಲ್ಲಿ ಅವರು ಡಾಕ್ಟರ್ಸ್ ಅಸೋಸಿಯೇಷನ್ ನ ಸಂಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ನಾಯಕತ್ವ ಮತ್ತು ಅವರ ಕರುಣಾಮಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅವರು ಒಬ್ಬ ಅದ್ಭುತ ಆರ್ಥೋಪೆಡಿಕ್ ಸರ್ಜನ್ ಆಗಿದ್ದರು, ದೂರ ದರ್ಶಿ ನಾಯಕನಾಗಿದ್ದರು ಮತ್ತು ಮಾನವತಾವಾದಿಯಾಗಿದ್ದರು. ಅವರ ಸಕರಾತ್ಮಕ ನಿಲುವು ಅವರ ಮಕ್ಕಳು, ಅವರ ಸಂಸ್ಥೆಯ ವೈದ್ಯರು ಮತ್ತು ಅವರ ಪ್ರೀತಿಯ ಹೊಸ್ಮಾಟ್ ಆಸ್ಪತ್ರೆಯ ಮೂಲಕ ಜೀವಂತವಾಗಿದೆ” ಎಂದು ಹೇಳಿದರು.
ಶಾಂತಿನಗರ ಶಾಸಕರಾದ ಶ್ರೀ ಎನ್. ಎ. ಹ್ಯಾರಿಸ್ ಅವರು , “ಡಾ. ಚಾಂಡಿಯವರು ಕರುಣೆಯ ಆಧಾರದ ಮೇಲೆ ಸಂಸ್ಥೆಗಳನ್ನು ನಿರ್ಮಿಸಿದರೇ ಹೊರತು ಕಮರ್ಷಿಯಲ್ ವಿಚಾರದ ಕಡೆಗೆ ಗಮನ ಕೊಡಲಿಲ್ಲ. ಹೊಸ್ಮಟ್ ಆಸ್ಪತ್ರೆಯು ವೈದ್ಯಕೀಯೀಯ ಸೇವೆಯು ಮಾನವೀಯತೆಯ ಸೇವೆ ಎಂಬ ಅವರ ನಂಬಿಕೆಯನ್ನು ಪ್ರತಿಪಾದಿಸುತ್ತದೆ. ಅವರ ಪರಂಪರೆಯು ಅವರ ಮಕ್ಕಳು ಮತ್ತು ತಂಡದ ಮೂಲಕ ಮುಂದುವರಿಯುತ್ತದೆ. ಅವರನ್ನು ಕಳೆದುಕೊಳ್ಳುವ ಮೂಲಕ ನಾನು ಕೇವಲ ಒಬ್ಬ ಶ್ರೇಷ್ಠ ವೈದ್ಯರನ್ನು ಮಾತ್ರವಲ್ಲ, ಒಬ್ಬ ನಿಜವಾದ ಸ್ನೇಹಿತನನ್ನೂ ಕಳೆದುಕೊಂಡಿದ್ದೇನೆ” ಎಂದು ಹೇಳಿದರು.
ಒಲಿಂಪಿಯನ್ ಶ್ರೀಮತಿ ನೀಶಾ ಮಿಲೆಟ್ ಅವರು ವೈಯಕ್ತಿಕ ನೆನಪನ್ನು ಹಂಚಿಕೊಳ್ಳುತ್ತಾ, “ಬಹುತೇಕ ಆಸ್ಪತ್ರೆಗಳು ನನ್ನ ಭುಜಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಸೂಚಿಸಿದ್ದವು. ಆದರೆ ಡಾ. ಚಾಂಡಿಯವರು ಕೇವಲ ಫಿಸಿಯೋಥೆರಪಿಯನ್ನು ಶಿಫಾರಸು ಮಾಡಿದರು ಮತ್ತು ಅದು ಮಾಯಾಜಾಲದಂತೆ ಕೆಲಸ ಮಾಡಿತು. ಅವರು ಕ್ರೀಡಾಪಟುಗಳ ಅಗತ್ಯಗಳನ್ನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದರು. ಅವರು ಪರಿಣತಿ ಜೊತೆಗೆ ಸಹಾನುಭೂತಿ ಹೊಂದಿದ ವೈದ್ಯರಾಗಿದ್ದರು” ಎಂದರು.
ಈ ಆಚರಣೆಯ ಭಾಗವಾಗಿ ಬಿಬಿಎಂಪಿ ಜೊತೆಗಿನ ಸಹಯೋಗದಲ್ಲಿ ಮಗ್ರಾತ್ ರಸ್ತೆ, ವಿವೇಕನಗರ ಮತ್ತು ವಿಕ್ಟೋರಿಯಾ ಲೇಔಟ್‌ನಲ್ಲಿ ಒಂದು ವಾರಗಳ ಕಾಲ ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಲಾಯಿತು. ಈ ಮೂಲಕ ಡಾ. ಚಾಂಡಿಯವರ ಆರೋಗ್ಯಕರ, ಸ್ವಚ್ಛ ಸಮಾಜ ನಿರ್ಮಿಸುವ ಕನಸಿಗೆ ಗೌರವ ಸಲ್ಲಿಸಲಾಯಿತು.
ಹೊಸ್ಮಟ್ ಆಸ್ಪತ್ರೆಯು ಈಗ ಒಂದು ಮಲ್ಟಿಸ್ಪೆಷಾಲಿಟಿ ಸಂಸ್ಥೆಯಾಗಿ ಬೆಳೆದಿದ್ದು, ಆರ್ಥೋಪೆಡಿಕ್ಸ್ ನಿಂದ ರೋಗ ತಡೆಗಟ್ಟುವ ಚಿಕಿತ್ಸೆ ಮತ್ತು ವೃದ್ಧರಿಗೆ ಮನೆಯಲ್ಲಿ ವೈದ್ಯಕೀಯ ಸೇವಾ ಸೌಲಭ್ಯ ಒದಗಿಸುವವರೆಗೆ ಅಭಿವೃದ್ಧಿ ಹೊಂದಿದ್ದು, ತನ್ನ ಸಂಸ್ಥಾಪಕರ ತತ್ವಗಳ ಪಾಲನೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ