ಬೆಂಗಳೂರು, ಮಾ. 9: ಬೆಂಗಳೂರಿಗರೇ ಗಮನಿಸಿ. ನಾಳೆಯಿಂದ ನಿಮಗೆ ಹೋಟೆಲ್ ಊಟ ಸಿಗುವುದಿಲ್ಲ. ಹೌದು, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸರಬರಾಜು ನಿಂತಿರುವುದರಿಂದ ಮಾರ್ಚ್ 10ರಿಂದ ಬೆಂಗಳೂರಿನಲ್ಲಿ ಹೋಟೆಲ್‌ಗಳು ಬಂದ್ ಆಗಲಿವೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ (Bangalore Hotels Association) ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಇನ್ನೂ ಮುಂದುವರಿಸಿದರುವುದರಿಂದ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಮಾಹಿತಿ ನೀಡಿದ್ದಾರೆ. ʼʼಕಳೆದ ನಾಲ್ಕೈದು ದಿನಗಳಿಂದ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಕಂಡುಬಂದಿದ್ದು, ಮಾರ್ಚ್ 7ರಿಂದ 19 ಕೆ.ಜಿ. ಸಿಲಿಂಡರ್‌ಗಳ ಭರ್ತಿ ಸ್ಥಗಿತಗೊಂಡಿದೆ. ತೈಲ ಕಂಪನಿಗಳು ಸ್ಟಾಕ್ ಇದೆ ಎಂದು ಹೇಳುತ್ತಿದ್ದರೂ, ಡಿಸ್ಟ್ರಿಬ್ಯೂಟರ್‌ಗಳು ಪೂರೈಕೆ ಮಾಡುತ್ತಿಲ್ಲ. ಕನಿಷ್ಠ ಶೇ. 70ರಷ್ಟು ಗ್ಯಾಸ್ ಸಿಗದಿದ್ದರೆ ಹೋಟೆಲ್‌ಗಳನ್ನು ಮುಚ್ಚಬೇಕಾಗುತ್ತದೆʼʼ ಎಂದು ತಿಳಿಸಿದ್ದಾರೆ.
ಮಾರ್ಚ್ 10ರ ಮಧ್ಯಾಹ್ನದ ವೇಳೆಗೆ ಗ್ಯಾಸ್ ಇಲ್ಲದಿದ್ದರೆ ಹಲವು ಹೋಟೆಲ್‌ಗಳು ಬಂದ್ ಆಗುವ ಪರಿಸ್ಥಿತಿ ಎದುರಾಗಿದೆ. ಅಡುಗೆ ಮಾಡಲು ಗ್ಯಾಸ್ ಅನಿವಾರ್ಯವಾಗಿರುವುದರಿಂದ, ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಆಗ್ರಹಿಸಿದೆ.
ಬೆಂಗಳೂರು ಹೋಟೆಲ್‌ಗಳ ಸಂಘದ ಪ್ರಕಟಣೆ:
ಬೆಂಗಳೂರು ಹೋಟೆಲ್‌ಗಳ ಸಂಘ ಹೇಳಿದ್ದೇನು?
ಬೆಂಗಳೂರು ಹೋಟೆಲ್‌ಗಳ ಸಂಘ ಪ್ರಕಟಣೆ ಹೊರಡಿಸಿ, ʼʼಇಂದಿನಿಂದ (ಮಾರ್ಚ್ 9) ವಾಣಿಜ್ಯ ಬಳಕೆಯ ಗ್ಯಾಸದದ ಸಿಲಿಂಡರ್ ಸರಬರಾಜು ನಿಲ್ಲಿಸಲಾಗಿದೆ. ಹೋಟೆಲ್ ಉದ್ಯಮ ಅವಶ್ಯ ಸೇವೆಯ ಅಡಿಯಲ್ಲಿ ಬರುವುದರಿಂದ ಉದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತಿತರರಿಗೆ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗಲಿದೆ. ಇದರ ಜತೆಗೆ ಗ್ಯಾಸ್ ಸರಬರಾಜು ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ನಮ್ಮ ಹೋಟೆಲ್ ಉದ್ಯಮವೂ ಸಂಕಷ್ಟ ಎದುರಿಸಬೇಕಾಗುತ್ತದೆʼʼ ಎಂದಿದೆ.
ʼʼತೈಲ ಕಂಪನಿಗಳು 70 ದಿನಳವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ತಿಳಿಸಿದ್ದವು. ಹೀಗಿದ್ದರೂ ಏಕಾಏಕಿ ಸರಬರಾಜು ನಿಲ್ಲಿಸಿರುವುದು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಆದ್ದರಿಂದ ಸಂಬಂಧಪಟ್ಟ ಕೇಂದ್ರ ಸಚಿವರು ಈ ವಿಚಾರದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೂಗೊಳ್ಳಬೇಕುʼʼ ಎಂದು ಆಗ್ರಹಿಸಿದೆ. ʼʼಗ್ಯಾಸ್ ಸರಬರಾಜು ನಿಂತಿರುವುದರಿಂದ ನಾಳೆಯಿಂದ ಹೋಟೆಲ್ ಬಂದ್ ಆಗಲಿದೆʼʼ ಎಂದು ತಿಳಿಸಿದೆ.
ಮನೆಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ 60 ರೂ., ವಾಣಿಜ್ಯ ಸಿಲಿಂಡರ್ 115 ರೂ. ಹೆಚ್ಚಳ
ಇತ್ತೀಚೆಗಷ್ಟೇ ಏರಿಕೆಯಾಗಿದ್ ಬೆಲೆ
ಮಾರ್ಚ್ 7ರಂದು ದೇಶಾದ್ಯಂತ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿತ್ತು. ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಮೇಲೆ 60 ರು. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಮೇಲೆ 115 ರು. ಹೆಚ್ಚಳ ಮಾಡಲಾಗಿತ್ತು. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗೃಹಿಣಿಯರು ಹಾಗೂ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಏಪ್ರಿಲ್ 2025ರ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ. ಈ ಮಧ್ಯೆ ಹೋಟೆಲ್ ಬಂದ್ ಆಗುವ ಮೂಲಕ ಮತ್ತೊಂದು ಶಾಕ್ ಎದುರಾಗಿದೆ.