ಬೆಂಗಳೂರು, ಫೆ. 12: ಅವರು ರಾಜ್ಯ ಬಿಜೆಪಿಯ ಪ್ರಮುಖ ನಾಯಕ. ಕುರುಬ ಸಮುದಾಯದ ಪ್ರಭಾವಿ ಮುಖಂಡ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು. ಜತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದವರಲ್ಲಿ ಇವರೂ ಒಬ್ಬರು. ಇಂತಿಪ್ಪ ನಾಯಕನನ್ನು ಇದೀಗ ಸಿಐಡಿ ತಂಡ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದಿದೆ. ನಾವು ಈಗ ಹೇಳ ಹೊರಟಿರುವುದು ಬೆಂಗಳೂರಿನ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು (Byrathi Basavaraj) ಬಗ್ಗೆ. ಅವರ ಪತನದ ಬಗ್ಗೆ.
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜು ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ (ಫೆಬ್ರವರಿ 12) ಸಿಐಡಿ ತಂಡ ಬಂಧಿಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾಗೊಳ್ಳುತ್ತಿದ್ದಂತೆ ಅವರು ಸಿಐಡಿ ಮುಂದೆ ಶರಣಾಗಲು ನಿರ್ಧರಿಸಿದ್ದರು. ಅದರಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಹಮದಾಬಾದ್ನಿಂದ ಬಂದು ಇಳಿದು ಹೊರ ಬರುತ್ತಿದ್ದಂತೆ ದೇವನಹಳ್ಳಿಯಲ್ಲಿಸಿಐಡಿ ತಂಡ ವಶಕ್ಕೆ ಪಡೆದುಕೊಂಡಿತು.
ಬೈರತಿ ಬಸವರಾಜು ಹಿನ್ನೆಲೆ
62 ವರ್ಷದ ಬೈರತಿ ಬಸರಾಜು ಬಿಎ ಪದವೀಧರ. ಒಂದು ಉಪ ಚುನಾವಣೆ ಸೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾದರು.
ಯಡಿಯೂರಪ್ಪ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೈರತಿ ಬಸರಾಜು ಬಳಿಕ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿಯೂ ಸಚಿವರಾಗಿ ಮುಂದುವರಿದರು. 2023ರ ಚುನಾವಣೆಯಲ್ಲಿ ಕೆ.ಆರ್. ಪುರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ; ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಏನಿದು ಪ್ರಕರಣ?
ಶಾಸಕರಾಗಿ ಆಯ್ಕೆಯಾದ ಬೈರತಿ ಬಸವರಾಜು ಅವರಿಗೆ 2025ರ ಜುಲೈನಲ್ಲಿ ನಡೆದ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆ ಪ್ರಕರಣ ಥಳುಕು ಹಾಕಿಕೊಂಡಿದೆ. ಹಲಸೂರು ಕೆರೆ ಸಮೀಪ 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್‌ನ ಕೊಲೆ ಆಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎನ್ನಲಾಗಿದೆ. ಕೊಲೆ ಆರೋಪದ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೊಲೆಯಾದ ಶಿವಪ್ರಕಾಶ್‌ನ ತಾಯಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬೈರತಿ 5ನೇ ಆರೋಪಿ.
ವಿಚಾರಣೆ ವೇಳೆ ತಮಗೆ ಪ್ರಥಮ ಆರೋಪಿ ಜಗದೀಶ್ ಗೊತ್ತೇ ಇಲ್ಲ ಎಂದು ಬೈರತಿ ವಾದಿಸಿದ್ದರು. ಬಳಿಕ ಈ ವಾದ ಸುಳ್ಳು ಎನ್ನುವುದು ಸಾಬೀತಾಗಿತ್ತು. ಸದ್ಯ ಪೊಲೀಸರು ಭೈರತಿ ಬಸವರಾಜು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಬಹುತೇಕ ಶುಕ್ರವಾರ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.